June 13, 2008

ಅಂತರಂಗ


ಮೂರು ಪೀಸ್ ಕನ್ನಡಿಯ ಮುಂದೆ ಅವನು ತನ್ನದೇ ಮುಖವನ್ನು ನೋಡುತ್ತಾ ಕುಳಿತಿದ್ದ. ಪ್ರಪಂಚ ಬಹಳ ಮುಂದುವರೆದಿದೆ ಎಂದು ಅವನಿಗೆ ಆಗಲೇ ಅನ್ನಿಸಿದ್ದು. ನಲವತ್ತಾರು ವರುಷಗಳ ವಯಸ್ಸಿನ ಅವನ ಮುಖವನ್ನು ಇಪ್ಪತ್ತರ ಕಾಲೇಜು ಯುವಕನ ಮುಖವನ್ನಾಗಿ ಪರಿವರ್ತಿಸುತ್ತಿದ್ದ ರೀತಿ ಅವನಿಗೆ ಆಶ್ಚರ್ಯವಾಯಿತು. ಅವನ ನರೆತ ಕೂದಲನ್ನು ನೀಟಾಗಿ ಬಾಚಿ ಅನಗತ್ಯವಾದ ಕೂದಲುಗಳನ್ನು ಕತ್ತರಿಸಿ, ಹೇರ್ ಡೈ ಸುರಿದು, ಬ್ಲೋಯರ್‌ನಿಂದ ಗಾಳಿಯನ್ನು ಊದುವುದರಲ್ಲಿ ಕೇಶಾಲಂಕಾರಿ ಮಗ್ನನಾಗಿದ್ದ. ಅವನ ಹೆಸರು ಬಾಬು ಇರಬೇಕು. ಈ ಹೆಸರುಗಳೂ ಸರಿಯಾಗಿ ನೆನಪಿರುವುದಿಲ್ಲ. ಚಿತ್ರ ಬಿಡುಗಡೆಯಾದಾಗ ಅವನ ಹೆಸರು ಮಧ್ಯದಲ್ಲೆಲ್ಲೋ ಒಂದು ದೊಡ್ಡ ಟೈಟಲ್ ಕಾರ್ಡಿನಲ್ಲಿ ಪುಟ್ಟದಾಗಿ ಕಾಣಿಸಿಕೊಳ್ಳುತ್ತದೆ. ಇದೇ ತಮಾಷೆ ಎಂದು ಅವನಿಗನ್ನಿಸಿತು. ತನ್ನ ಕೀರ್ತಿಗಾಗಿ ಕೆಲಸ ಮಾಡುವವರು ಎಷ್ಟು ಮಂದಿ! ತನ್ನನ್ನು ಯುವಕನನ್ನಾಗಿ ಮಾಡಿ, ತನ್ನ ಕಿಮ್ಮತ್ತನ್ನು ಹೆಚ್ಚಿಸುವ ಕೇಶಾಲಂಕಾರಿಯ ಕೀರ್ತಿ ಹೆಚ್ಚುವುದೂ ಅವನು ಚಿತ್ರನಟ ಉತ್ತಮ್ ಕುಮಾರ್ ಅವರ ಕೇಶಾಲಂಕಾರಿ ಅನ್ನುವ ಮಾತಿನಿಂದ!!

"ಸಾರ್.. ಷಾಟ್ ರೆಡಿ.. ಬರಬೇಕಂತೆ"

ಪಕ್ಕದಲ್ಲಿ ಇರಿಸಿದ್ದ ಫೈಲಿನಿಂದ ಮತ್ತೊಮ್ಮೆ ತನ್ನ ಸಂಭಾಷಣೆಯನ್ನು ಉತ್ತಮ್ ನೋಡಿಕೊಂಡ. ಅದೇ ಕಿತ್ತು ಹೋದ ಹಳೆಯ ಡೈಲಾಗು "ಶಾಂತಾ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಮ್ಮ ಪ್ರೀತಿಗೆ ಈ ಆಕಾಶವೇ ಸಾಕ್ಷಿ. ಇಲ್ಲಿನ ಗಿಡಮರಗಳೇ ಸಾಕ್ಷಿ... ಯಾರು ಅಡ್ಡಬಂದರೂ ನಾನು ನಿನ್ನನ್ನೇ ಮದುವೆಯಾಗುತ್ತೇನೆ" ಇಂಥದೇ ಸಂಭಾಷಣೆಗಳನ್ನು ಅವನು ಎಷ್ಟುಬಾರಿ ಹರಿಯಬಿಟ್ಟಿಲ್ಲ. ಈಗ ಷಾಟ್ ಕೊಟ್ಟಮೇಲೆ ಮತ್ತೆ ಡಬ್ಬಿಂಗಿನಲ್ಲೂ ಇದನ್ನೇ ಹೇಳಬೇಕು.. ಸುಮ್ಮನೆ ಸಂಭಾಷಣೆ ಬರೆಯುವವನಿಗೆ ನೂರಾರು ರೂಪಾಯಿ ಸುರಿಯುತ್ತಾರೆ. ನಾಯಕಿಯ ಹೆಸರು ಹೇಳಿದರೆ ತಾನೇ ಈ ಮಾತುಗಳನ್ನು ಹೇಳಬಹುದಿತ್ತು ಅಂತ ಉತ್ತಮನಿಗೆ ಅನ್ನಿಸಿತು. ಇವೆಲ್ಲಾ ತುಂಬಾ ಕೃತಕವೆಂದೂ ಅನ್ನಿಸಿತು.

ಉತ್ತಮನಿಗೆ ಎಷ್ಟೋ ಬಾರಿ ಆಶ್ಚರ್ಯವಾಗಿದೆ. ಸಾಮಾನ್ಯ ಜನರು ನಿಜ ಜೀವನದಲ್ಲಿ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ? ಸಿನೇಮಾದಲ್ಲಿ ಒಂದು ಷಾಟ್ ತೆಗೆಯಲು ಎಷ್ಟೆಲ್ಲಾ ತಯಾರಿ ನಡೆಯುತ್ತದೆ! ಸಂಭಾಷಣೆ ಬರೆವವನ ಹೋಟೆಲ್ ಖರ್ಚನ್ನು ಹೊತ್ತು, ಗುಂಡು ಹಾಕಿಸಿ, ಹಣ ಕೊಟ್ಟು ಸಂಭಾಷಣೆ ಬರೆಸುತ್ತಾರೆ. ಹೀರೋ ಹಿಂದೆ ದುಂಬಾಲು ಬಿದ್ದು ಕಾಲ್ ಷೀಟ್ ಪಡೆಯುತ್ತಾರೆ... ಕಚ್ಚಾ ಫಿಲಂ ಎಂದು ಒದ್ದಾಡುತ್ತಾರೆ. ಹಿನ್ನೆಲೆಯಲ್ಲಿ ಪಿಟೀಲನ್ನು ವೈಂಯ್ ಎನ್ನಿಸುತ್ತಾರೆ. ಡಬ್ಬಿಂಗ್, ಮಿಕ್ಸಿಂಗ್, ಧ್ವನಿಗ್ರಹಣ, ಸಂಕಲನ, ಹೀಗೆ ಏನೆಲ್ಲಾ ಇದೆ. ಒಂದು ಹುಡುಗ - ಹುಡುಗಿಯನ್ನು ಪ್ರೀತಿಸುವುದು ಇಷ್ಟು ದುಬಾರಿಯೇ? ಇಷ್ಟಾಗಿ ಸಂಭಾಷಣೆ ಹೇಳುವ ಸಮಯದಲ್ಲಿ ಎದುರಿನ ಕ್ಯಾಮರಾದ ಕಣ್ಣನ್ನು ನೋಡಿ ಆ ಮಾತನ್ನು ಹೇಳಬೇಕಾಗುತ್ತದೆ. ಅದೇ ಸಿನೇಮಾದ ನಾಯಕಿ ಇನ್ಯಾವುದೋ ಚಿತ್ರಕ್ಕಾಗಿ ಬೇರೆಯೇ ಸಂಭಾಷಣೆಯನ್ನು ಬೇರೆಯೇ ಊರಿನಲ್ಲಿ ಹೇಳುತ್ತಿರಬಹುದು.. ಒಂದು ಫ್ಯಾಂಟಸಿ ಆದ ಚಿತ್ರದಲ್ಲೇ ಪ್ರೇಮಿಸುವುದು ಇಷ್ಟು ಕಷ್ಟವಾಗಿರುವಾಗ, ನಿಜ ಜೀವನದಲ್ಲಿ ಸಿನೆಮಾದ ನಾಯಕನಿಗಿರುವ ಯಾವ ಅರ್ಹತೆಯೂ ಇಲ್ಲದ, ಕ್ಲಾಸಿಗೆ ಮೊದಲನೇ ರ್‍ಯಾಂಕ್ ಬರದಿರುವ, ಕುದುರೆಯ ಬೆನ್ನ ಮೇಲೆ ಜಟಕಾ ಸವಾರಿ ಮಾಡಿದಾಗ ಮಾತ್ರ ತನ್ನ ದೇಹದ ಭಾರವನ್ನು ಹೇರುವ, ಈಜುಕೊಳವನ್ನು ಜೀವನದಲ್ಲೇ ನೋಡದ ಕೀಳರಿಮೆಯ ಸಾಮಾನ್ಯನೊಬ್ಬ ಹುಡುಗಿಗೆ "ನಾನು ನಿನ್ನ ಪ್ರೀತಿಸುವೆ" ಎಂದು ಹೇಗೆ ಹೇಳುತ್ತಾನೆಂಬುದರ ಬಗ್ಗೆ ಉತ್ತಮನಿಗೆ ಕುತೂಹಲವಿತ್ತು. ಶ್ರೀಸಾಮಾನ್ಯನ ಕನಸುಗಳೂ ಒಬ್ಬ ಹುಡುಗಿಯನ್ನು ಮದುವೆಯಾಗಿ ಒಂದು ಸಣ್ಣ ಮನೆಯಲ್ಲಿ ಸುಖವಾಗಿ ಜೀವಿಸುವ ಮಟ್ಟಕ್ಕೆ ಸೀಮಿತವಾಗಿರಬಹುದೇನೋ. ಆ ಹೆಣ್ಣಿನ ಆಲೋಚನೆಯಲ್ಲಿ ತನ್ನ ಗಂಡ ಹಾಡುವುದಾಗಲೀ, ಊಟಿ, ಕಾಶ್ಮೀರ, ಸಿಂಗಾಪುರಗಳನ್ನು ಊಹಿಸಿಕೊಳ್ಳುವುದಾಗಲೀ ಸಾಧ್ಯವೇ? ಈ ರೀತಿಯಾದಂತಹ ಕಲ್ಪನಾತೀತ ಕಲ್ಪನಾ ಲೋಕಕ್ಕೆ ಉತ್ತಮ್ ಆಗಾಗ ಹೋಗುವುದುಂಟು.

"ಸರ್ ಬರಬೇಕಂತೆ. ಷಾಟ್ ರೆಡಿ. ನಿಮಗೋಸ್ಕರವೇ ಕಾಯುತ್ತಿದ್ದಾರೆ"

"ಓಹ್ ಸಾರಿ, ಇದೋ ಬಂದೆ, ರೆಡಿ"

ಉತ್ತಮ ಫ್ಲೋರಿಗೆ ಹೋಗಿ ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಒಂದು ಬಳ್ಳಿಯನ್ನು ಹಿಡಿದು ನಿಂತ. ನಿರ್ದೇಶಕರು ಅವನ ಬಳಿಗೆ ಬಂದು ರೈಲಿಂಗಿನ ಮೇಲೆ ಕ್ಯಾಮರಾ ಚಲಿಸುವ ರೀತಿಯನ್ನೂ, ಈ ಷಾಟಿಗೆ ವ್ಯಕ್ತಪಡಿಸಬೇಕಾದ ಭಾವನೆಗಳನ್ನು ವಿವರಿಸಿದರು. ಅವನು ಒಳಗೊಳಗೇ ನಕ್ಕ. ಈ ಕೆಲಸವನ್ನು ತಾನು ಅನೇಕ ಬಾರಿ ಮಾಡಿದ್ದ. ಸರಿ ಹೇಳುವುದು ಅವರ ಧರ್ಮ, ಹೇಳುತ್ತಾರೆ. ಅವರ ಖುಷಿಗಾಗಿ ನಾನೂ ಕೇಳುತ್ತೇನೆ. ನಟನಾಗಿ ಅವರು ಹೇಳುವುದನ್ನು ಕೇಳುವುದು ತನ್ನ ಧರ್ಮ. "ರೆಡಿ" ಎಂದು ಗಟ್ಟಿ ಧ್ವನಿಯೊಂದು ಕೂಗುತ್ತಿದ್ದಂತೆ ಯಾರೋ "ಲೈಟ್ಸ್" ಎಂದು ಅರಚಿದರು. ಉತ್ತಮನ ಮುಖದ ಮೇಲೆ ಉರಿಯುವ ಬೆಳಕು ಬಿತ್ತು. ಅವನು ಒಳಗೇ ಬೆವರಿದ. ಒಬ್ಬ ಪುಟ್ಟ ಹುಡುಗ ಯಾಂತ್ರಿಕವಾಗಿ ಕ್ಲಾಪರ್ ಹಿಡಿದಿದ್ದ. ಅದರಲ್ಲಿ "ಮಹಾಲಕ್ಷ್ಮೀ ಪ್ರೊಡಕ್ಷನ್ಸ್, ಶುಭವಿವಾಹ, ಸೀನ್ ೧೫, ಷಾಟ್ ೨, ಟೇಕ್ ೧" ಎಂದು ಬರೆಯಲಾಗಿತ್ತು. ಉತ್ತಮನ ಮುಖದ ಮುಂದೆ ತಂದು ಅದನ್ನು ಫಟ್ ಎಂದು ಬಾರಿಸಿದ. ಎಲ್ಲಿಂದಲೋ "ರೋಲ್ ಕ್ಯಾಮರಾ" ಎನ್ನುವ ಗಡುಸು ಧ್ವನಿಯ ಆದೇಶ ಬಂತು. ನಂತರ "ಆಕ್ಷಣ್" ಎಂದು ಅರಚಿದರು. ಈ ಎಲ್ಲ ಗಲಾಟೆಯ ನಡುವೆ ಭಾವನೆಗಳನ್ನು ಮೈ-ಮುಖದ ಮೇಲೆ ತಂದುಕೊಂಡು ತಕ್ಷಣಕ್ಕೆ ಒದರಬೇಕು. ನಾಟಕಗಳೇ ವಾಸಿ.. ಪಾತ್ರದ ಮೂಡಿಗೆ ಹೋಗಲು ಒಂದಿಷ್ಟು ಸಮಯಾವಕಾಶವಾದರೂ ಇರುತ್ತದೆ. ಇಲ್ಲಿ ಹಾಗಲ್ಲ. ಉತ್ತಮ ಕ್ಯಾಮರಾದತ್ತ ತಿರುಗಿದ. ಈಗ ಅವನು ಇಪ್ಪತ್ತರ ಕಾಲೇಜು ವಿದ್ಯಾರ್ಥಿ-ಯುವಕ. ಅವನು ತನ್ನ ಸಂಭಾಷಣೆಯನ್ನು ಒಪ್ಪಿಸಿದ: "ಶಾಂತಾ, ನಾನು ನಿನ್ನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಇದಕ್ಕೆ ಈ ಪಾರ್ಕಿನ ಗಿಡಮರಗಳೇ ಸಾಕ್ಷಿ. ನಾವು ಮದುವೆಯಾಗೋಣ. ಈ ಪ್ರಪಂಚದಲ್ಲಿ ಯಾವ ಶಕ್ತಿಗೂ ನಮ್ಮ ಮದುವೆ ತಡೆಯಲು ಸಾಧ್ಯವಿಲ್ಲ. ಖಂಡಿತ ಸಾಧ್ಯವಿಲ್ಲ."

"ಕಟ್"

"ಸರ್ ಡೈಲಾಗನ್ನು ಬದಲಾಯಿಸಿಬಿಟ್ಟಿರಲ್ಲಾ.. ಎಫೆಕ್ಟೇನೋ ಹಾಗೆ ಇದೆ ಅನ್ನಿಸುತ್ತದೆ. ಇನ್ನೊಂದು ಟೇಕ್ ತೆಗೊಂಡ್ರೆ ವಾಸಿಯೇನೋ ಅನ್ನಿಸುತ್ತೆ. ಜಸ್ಟ್ ವನ್ ಮೋರ್"

"ಸರಿ ನಾನು ರೆಡಿ"

ಮತ್ತೊಮ್ಮೆ ಷಾಟ್ ತೆಗೆಯುವ ಪ್ರಕ್ರಿಯೆಯ ಪುನರಾವರ್ತನೆಯಾಯಿತು. ಈ ಬಾರಿ ನಿರ್ದೇಶಕರು ಸಂಪ್ರೀತರಾಗಿ "ಒ.ಕೆ" ಎಂದರು. ಯಾವುದನ್ನೂ ಒಂದೇ ಬಾರಿಗೆ ಒಪ್ಪುವ ಜಾಯಮಾನ ಇವರಿಗೆ ಇದ್ದಂತಿರಲಿಲ್ಲ. ಉತ್ತಮನಿಗೆ ಮೊದಲಿನ ಷಾಟೇ ಚೆನ್ನಾಗಿತ್ತು ಅನ್ನಿಸಿತು. ಆದರೂ ಈ ಷಾಟಿನಲ್ಲಿ ನಟಿಸುವಂತಹ, ಭಾವನೆಗಳನ್ನು ಉದ್ದೀಪಿಸುವಂತಹ ಗಹನ ವಿಚಾರವೂ ಉತ್ತಮನಿಗೆ ಕಾಣಲಿಲ್ಲ. ಹಲವಾರು ವರ್ಷಗಳಿಂದ ಇದನ್ನೇ ಮಾಡುತ್ತಿದ್ದಾನೆ. ಹ್ಯಾಕ್ನೀಡ್ ಅಂತ ಯಾರೋ ಇದನ್ನು ವಿವರಿಸಿದ್ದಾರಂತೆ. ಇದೂ ಏಕತಾನತೆಯ ಪರಮಾವಧಿಯಲ್ಲದೇ ಮತ್ತೇನು?

ಷಾಟಿನ ನಂತರ ಬಂದು ಕುರ್ಚಿಯ ಮೇಲೆ ಕುಳಿತ. ಮೂರು ಘಂಟೆಯ ಮೇಕಪ್ ತಯಾರಿಗೆ ಆದ ಇಂದಿನ ಕೆಲಸ ಇದಾಗಿತ್ತು. ಸಾವಿರಾರು ರೂಪಾಯಿಗಳನ್ನು ತೆಗೆದುಕೊಂಡ ನಂತರ ಮಾಡುವ ಕೆಲಸ ಇಷ್ಟೇಯೇ. ನಿರ್ದೇಶಕರೂ ಬಂದು ಉತ್ತಮನ ಪಕ್ಕದಲ್ಲಿ ಕುಳಿತರು. ಉತ್ತಮನೇ ಮಾತಿಗಿಳಿದ...

"ಅಲ್ಲ ಸರ್ ಈ ಸೀನಿನಲ್ಲಿ ನಾಯಕಿಯೂ ಇದ್ದು ಅವಳನ್ನು ತಬ್ಬಿಕೊಂಡು ಈ ಸಂಭಾಷಣೆ ಡೆಲಿವರ್ ಮಾಡಿದ್ದರೆ ಇನ್ನೂ ಒಳ್ಳೇ ಎಫೆಕ್ಟ್ ಬರುತ್ತಿತ್ತಲ್ಲ... ಫ್ರೇಮ್‌ನಲ್ಲಿ ಒಬ್ಬನನ್ನೇ ಇಟ್ಟು ಪ್ರೀತಿಯ ಸೀನ್ ತೆಗೆಯೋದು ನಂಗ್ಯಾಕೋ ಸಹಜ ಅನ್ನಿಸುತ್ತಿಲ್ಲ."

"ನೀವು ಹೇಳುವುದೂ ಸರಿ ಉತ್ತಮ್, ಆದರೆ ಡೇಟ್ಸ್ ಸೂಟ್ ಆಗ್ತಾ ಇಲ್ಲವಲ್ಲ. ಅದಕ್ಕೇ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಯಿತು. ಈಗ ತಾನೇ ನಿಮ್ಮಿಬ್ಬರ ಜೋಡಿಯ ಸಿನೇಮಾ ಹಿಟ್ ಆಗಿದೆ. ಏಪ್ರಿಲ್ ಮೊದಲ ವಾರದಲ್ಲೇ ರಿಲೀಸ್ ಮಾಡಿದರೆ ಇದೂ ಒಳ್ಳೆಯ ಸಕ್ಸಸ್ ಆಗುವ ಸಾಧ್ಯತೆ ಇದೆ. ರಿಲೀಸ್ ಡೆಡ್‌ಲೈನ್ ಇರುವುದರಿಂದ ಬೇಗಬೇಗ ಕೆಲಸ ಮುಗಿಸುತ್ತಿದ್ದೀವಿ. ನಿಮಗ್ಯಾಕೆ ಇಷ್ಟು ಚಿಂತೆ. ಪಿಕ್ಚರ್ ನೋಡಿ, ಒಳ್ಳೇ ಎಫೆಕ್ಟ್ ಬರುತ್ತದೆ. ನಮ್ಮ ಎಡಿಟರ್ರೂ ಏನೂ ಸಾಮಾನ್ಯದವನಲ್ಲ.. ಅಲ್ಲವೇ?"

ನಿರ್ದೇಶಕರ ಮಾತಿಗೆ ಅವನು ಹೂಂಗುಟಿದ. ಅಷ್ಟರಲ್ಲಿ ರಾಮಣ್ಣ ಬಂದ. ರಾಮಣ್ಣ ಉತ್ತಮನ ಕಾರ್ಯದರ್ಶಿ. "ಸರ್ ಮಧ್ಯಾಹ್ನದ ಶೂಟಿಂಗ್ ಕ್ಯಾನ್ಸಲ್ ಆಗಿದೆಯಂತೆ" ಎಂದಾಗ ಉತ್ತಮನಿಗೆ ಖುಷಿಯಾಯಿತು. ಮದ್ಯಾಹ್ನದ ಹೊತ್ತು ಮನೆಗೆ ಹೋಗಿ ಎಷ್ಟು ದಿನಗಳಾದುವು? ಲೆಕ್ಕವೇ ಇಲ್ಲ. ಊರಿನಲ್ಲಿರುವುದೇ ಅಪರೂಪವಾಗಿರುವಾಗ ಮನೆ ಎಲ್ಲಿಂದ ಬಂತು? ಆರಾಮವಾಗಿ ನಾಲ್ಕಾರು ಘಂಟೆ ಮನೆಯಲ್ಲಿರಬಹುದು. ಭುವನಾ ಇರಬಹುದೇ ಅಥವಾ ಅವಳೂ ಯಾವುದಾದರೂ ಶೂಟಿಂಗಿಗೆ ಹೋಗಿರಬಹುದೇ? ಇದ್ದರೆ ಬಹಳ ದಿನಗಳ ನಂತರ ಅವಳೊಂದಿಗೆ ಆರಾಮವಾಗಿ ಹರಟೆ ಕೊಚ್ಚಿದಂತಾಗುತ್ತದೆ. ಇಲ್ಲದಿದ್ದರೂ ಒಳ್ಳೆಯದೇ. ಏಕಾಂತದಲ್ಲಿ ಮಧ್ಯಾಹ್ನಗಳನ್ನು ಕಳೆದು ಎಷ್ಟು ದಿನಗಳಾದವು! ಪಂಕಜ್ ಉಧಾಸ್‌ನ ಗಜಲುಗಳನ್ನು ಕೇಳುತ್ತಾ ಮಲಗಬಹುದು. ಮಧ್ಯಾಹ್ನದ ನಿದ್ದೆ. ಅದು ಒಂದು ಮರೀಚಿಕೆಯೇ ಆಗಿದೆ ಅಂದುಕೊಂಡ.

ಡ್ರೈವರನ್ನು ಸಂಜೆ ಆರಕ್ಕೆ ಮನೆಯ ಬಳಿ ಬರಲು ಹೇಳಿ ಕಳಿಸಿದ. ಉತ್ತಮ ಕಾರು ಚಲಾಯಿಸಿ ಬಹಳವೇ ದಿನಗಳಾಗಿದ್ದುವು. ಈಚೀಚೆಗೆ ರಾಜೀವ್ ಗಾಂಧಿಯೂ ತಮ್ಮ ಜೀಪನ್ನು ತಾವೇ ಚಲಾಯಿಸುತ್ತಾರಂತೆ. ತನಗೂ ಆ ದಿನ ಕಾರು ಚಲಾಯಿಸಬೇಕು ಅನ್ನಿಸಿತು. ಡ್ರೈವ್ ಮಾಡುತ್ತಾ ಮನೆಯ ಕಡೆಗೆ ಹೊರಟ.

ಇಷ್ಟಲ್ಲ ಪೀಠಿಕೆ ಹಾಕಿದರೂ ಉತ್ತಮನ ಸರಿಯಾದ ಪರಿಚಯವಾಗಿಲ್ಲ ಅನ್ನಿಸಿದರೆ, ಅದಕ್ಕೆ ಹೆಚ್ಚಿನ ಸಮಜಾಯಿಷಿ ಬೇಕಿಲ್ಲ. ಉತ್ತಮ್ ಚತುರ್ವೇದಿ ಅನ್ನುವ ಹೆಸರೇ ಅವನಿಗೆ ಪರಿಚಯಪತ್ರ. ಈ ಹೆಸರೇ ಎಷ್ಟೋ ಬಾಗಿಲುಗಳನ್ನು ಸಹಜವಾಗಿ ತೆರೆದಿಡುತ್ತದೆ. ಅವನ ಜೀವನ ಎಲ್ಲರಿಗೂ ಚೆನ್ನಾಗಿ ತಿಳಿದದ್ದೇ. ಎಷ್ಟು ಚೆನ್ನಾಗಿ ಜನರಿಗೆ ಗೊತ್ತೆಂದರೆ ಕೆಲವು ಬಾರಿ ಅವನಿಗೇ ತಿಳಿಯದ ’ಸತ್ಯ’ಗಳು ಅನೇಕ ಜನರಿಗೆ ತಿಳಿದಿರುತ್ತದೆ. ಅವನ ಬಾಹ್ಯಸ್ವರೂಪದ ಹಲವು ಮುಖಗಳನ್ನು ಜನರು ಈಗಾಗಲೇ ನೋಡಿದ್ದಾರೆ. ಅವನಿಗೆ ಯಾವ ರಂಗಿನ ಬಟ್ಟೆ ಇಷ್ಟ, ಯಾವ ಹುಡುಗಿಯರೊಂದಿಗೆ ಅವನ ಚಕ್ಕರ್ ನಡೆಯುತ್ತಿದೆ. ಅವನು ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾನೆ. ಮುಂದೆ ಬರಲಿರುವ ಚಿತ್ರಗಳು ಯಾವುದು? ಹೀಗೆ ಅವನಿಗೇ ತಿಳಿಯದ ಎಷ್ಟೋ ವಿಷಯಗಳು ಜನರಿಗೆ ತಿಳಿದಿರುತ್ತದೆ. ಈಚೆಗೆ ಅವನು ಸುಧಾ ಅನ್ನುವ ಹೊಸನಟಿಯೊಂದಿಗೆ ಪ್ರಣಯ ಪ್ರಾರಂಭಿಸಿದ್ದಾನೆಂದು ಹೊಸ ಗುಲ್ಲು. ಈ ಲೇಖನಗಳನ್ನು ಓದಿದರೆ ಒಮ್ಮೊಮ್ಮೆ ಉತ್ತಮನೇ ಅದನ್ನು ನಂಬಿಬಿಡಬಹುದೆನ್ನುವ ಭಯ ಅವನನ್ನು ಕಾಡುವುದುಂಟು.

ಕಾರು ಎಡಕ್ಕೆ ತಿರುಗಿಸಬೇಕೆನ್ನುವಷ್ಟರಲ್ಲಿ ರಸ್ತೆಯ ಸಿಗ್ನಲ್ ಕೆಂಪುಬಣ್ಣ ತೋರಿಸಿತು. ಗಕ್ಕೆಂದು ಬ್ರೇಕ್ ಒತ್ತಿದ. ಆ ದಿನ ಯಾಕೋ ಅವನ ಮನಸ್ಸು ಯಾವುದೋ ಯೋಚನಾಲಹರಿಯಲ್ಲಿ ಕರಗಿ ಹೋಗಿತ್ತು. ಈಚೀಚೆಗೆ ತಿಳಿದ ಹೊಸ ವಿಷಯ. ತನಗೆ ಈ ವರೆಗೆ ಬಂದಿರುವ ಪ್ರಶಸ್ತಿಗಳ, ನೂರು ದಿನ ಓಡಿದ ಅವನ ಚಿತ್ರಗಳ ವಿವರಗಳು ತನಗೂ ತನ್ನ ಕಾರ್ಯದರ್ಶಿಗೂ ತಿಳಿಯದ ಕೆಲವಿವರಗಳು ಅಭಿಮಾನಿ ಸಂಘಗಳಿಗೆ ಗೊತ್ತು! ಈಚೆಗೆ ಇಂಥಹ ಒಂದು ಪಟ್ಟಿಯನ್ನು ಅವರುಗಳು ತಂದುಕೊಟ್ಟರು! ಇದನ್ನು ಅವನು ಕಟ್ಟುಹಾಕಿಸಿ ತನ್ನ ವಿಶಾಲಮನೆಯ ಒಂದು ಕೋಣೆಯಲ್ಲಿ ನೇತುಹಾಕಿದ್ದ. ಈ ವಿಷಯ ಕೇಳಿದರೆ ಅಭಿಮಾನಿ ಸಂಘದವರು ಖುಷಿಪಟ್ಟಾರು. ಹೀಗೆ ಅವನದ್ದು ಒಂದು ಥರದಲ್ಲಿ ಬೆತ್ತಲೆ ಬದುಕು. ದೇಹದಿಂದ ಹಿಡಿದು ಅವನ ಜೀವನದಲ್ಲಿನ ಎಲ್ಲಾ ಅಂಶಗಳೂ ಬೆತ್ತಲೆಯೇ. ಬೆತ್ತಲೆಯಾಗದ್ದು ತನ್ನ ಮನಸ್ಸು ಮಾತ್ರ ಎಂದು ಉತ್ತಮ ಎಷ್ಟೋ ಬಾರಿ ಅಂದುಕೊಂಡಿದ್ದಾನೆ. ತನ್ನ ಮನಸ್ಸನ್ನು ಯಾರೂ ಈ ವರೆಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಅವನಿಗನ್ನಿಸುತ್ತದೆ. ಬಹುಶಃ ಅವನ ಹೆಂಡತಿ ಭುವನಾಳಿಗೂ ಅದು ಸರಿಯಾಗಿ ಅರ್ಥವಾಗಿಲ್ಲವೇನೋ ಅನ್ನುವ ಅನುಮಾನವೂ ಉತ್ತಮನಿಗಿದೆ.

ಹಿಂದಿನಿಂದ ಹಾರ್ನ್ ಶಬ್ದವಾದಾಗ ಅವನು ತನ್ನ ಅನ್ಯಮನಸ್ಕತೆಯಿಂದ ಎಚ್ಚೆತ್ತುಕೊಂಡ. ಹಸಿರು ಸಿಗ್ನಲ್ ಬಂದಿದೆಯೆಂದು ಗೊತ್ತಾದಾಗ ನಿಧಾನವಾಗಿ ಕ್ಲಚ್ಚಿನ ಮೇಲಿನ ಕಾಲನ್ನು ತೆಗೆದು ಆಕ್ಸಿಲರೇಟರ್ ಒತ್ತಿದ. ಕಾರಿನಲ್ಲಿ ಹೋಗವಾಗ ಅವನಿಗೆ ಈಚೆಗೆ ಯಾವುದೋ ಪತ್ರಿಕೆಯಲ್ಲಿ ಕಂಡ ವ್ಯಂಗ್ಯಲೇಖನದ ನೆನಪಾಯಿತು. ಖ್ಯಾತನಾಮರ ದಿನಚರಿ ಎಂಬ ಆ ಲೇಖನದಲ್ಲಿ ಉತ್ತಮನ ದಿನಚರಿಯೂ ಕಾಣಿಸಿಕೊಂಡಿತ್ತು. ಆ ಲೇಖಕನ ಪ್ರಕಾರ ಉತ್ತಮನ ದಿನಚರಿ ಇಂತಿತ್ತು:

"ಬೆಳಿಗ್ಗೆ ಏಳಕ್ಕೆ ಏಳುವುದು. ದೇವರ ಪೂಜೆ, ಗಾಯತ್ರಿ ಮಂತ್ರ ಪಠಣ, ನಂತರ ದೇವರಿಗೆ ಊದುಬತ್ತಿ ಹಚ್ಚಿ ಬಾಯಲ್ಲಿ ಸಿಗರೇಟು ಹಚ್ಚುವುದು. ಪಂಕಜ್ ಉಧಾಸ್‌ನ ಕೆಸೆಟ್ಟು ಕೇಳುತ್ತಾ ಕೋಳಿಮೊಟ್ಟೆ ತಿನ್ನುವುದು. ಸೆಟ್‌ಗೆ ಬಂದು ನಾಲ್ಕು ಷಾಟುಗಳಲ್ಲಿ ನಟಿಸುವುದು ಎರಡು ಗುಡಿಸಲು ಸೆಟ್ ಉರುಳಿಸಿ ಜೋ ಜೊತೆಗೆ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ, ಚೀನಾ ಕ್ರಾಂತಿ, ರಷ್ಯಾ ಕ್ರಾಂತಿ, ಭಾರತೀಯ ಬಡಜನರ ಬಗ್ಗೆ ಸುದೀರ್ಘ ಚರ್ಚೆ. ಸಂಜೆ ಸುಧಾಳೊಂದಿಗೆ ಗುಂಡುಪಾರ್ಟಿಗೆ ಹೋಗಿ ಶ್ರೀರಾಮಚರಿತ ಮಾನಸದ ಬಗ್ಗೆ ವ್ಯಾಖ್ಯಾನ. ರಾತ್ರಿ ದೇವರ ಪೂಜೆ. ಉದರ ಪೂಜೆಯು ನಂತರ ಬೇರೆಲ್ಲೋ ನಟಿಸುತ್ತಿರುವ ಹೆಂಡತಿಯ ಚಿಂತೆಯಲ್ಲಿ ನಿದ್ದೆ ಮಾಡುವುದು.."

ಹೊರಗಿನವರಿಗೆ ವ್ಯಂಗ್ಯವಾಗಿ ಕಂಡರೂ ಇದರಲ್ಲಿ ವಾಸ್ತವ ಇಲ್ಲದಿರಲಿಲ್ಲ. ಖ್ಯಾತನಾಮರ ಬದುಕುಗಳು ಹೀಗೆ ಸಾರ್ವಜನಿಕ ಲೇವಡಿಗೆ ಒಳಗಾಗಬೇಕಾದ್ದೂ ಅನಿವಾರ್ಯವೇ. ಒಮ್ಮೊಮ್ಮೆ ಅವನಿಗೆ "ದಯವಿಟ್ಟು ಈ ಎಲ್ಲದರಿಂದ ಮುಕ್ತಿ ಕೊಡಿ" ಎಂದು ಕೂಗಿ ಕೇಳೋಣವೆನ್ನಿಸುತ್ತದೆ.

ಅವನು ನಿಧಾನವಾಗಿ ಕಾರನ್ನು ಕಾಂಪೌಂಡಿನೊಳಕ್ಕೆ ತಂದು ನಿಲ್ಲಿಸುತ್ತಾನೆ. ಮನೆಗೆ ಬಂದಾಗ ಭುವನಾ ಇರುವುದಿಲ್ಲ. ಅವನ ಖಾಸಾ ಹೆಂಡತಿ ಭುವನಾ.. ಈಗ ಯಾರ ತೋಳುಗಳಲ್ಲಿ ಸೀತೆಯಾಗಿಯೋ, ಸಾವಿತ್ರಿಯಾಗಿಯೋ ಬಂಧಿತಳಾಗಿರಬಹುದು. ಅವಳೊಂದಿಗೆ ಮನ ಬಿಚ್ಚಿ ಮಾನನಾಡಿ ಎಷ್ಟು ದಿನಗಳಾದವು. ಪರಸ್ಪರ ನೋಡುವ ಪ್ರಕ್ರಿಯೆ ಬಹಳಂಶ ದಿನವೂ ನಡೆಯುತ್ತದಾದರೂ, ನಿಜಾಕ್ಕೂ ಗಂಡ ಹೆಂಡಿರಂತೆ ವರ್ತಿಸುತ್ತಿದ್ದಾರೆಯೇ ಎಂದು ಅವನು ಯೋಚಿಸುವುದುಂಟು. ಮದುವೆಯಾದಾಗಿನಿಂದಲಂತೂ ಇದು ಅವರಿಗೆ ನಿಜಕ್ಕೂ ಸಾಧ್ಯವಾಗಿಲ್ಲ ಎಂದು ಅವನಿಗೆ ಆಗಾಗ ಅನ್ನಿಸುವುದುಂಟು. ಮದುವೆಗೆ ಮುಂಚೆಯೂ ಅವಳ ಜೊತೆ ಏಕಾಂತದ ಕ್ಷಣಗಳು ಹೆಚ್ಚಾಗಿ ಸಿಕ್ಕಿಯೇ ಇಲ್ಲ. ಈಗಲೂ ಅವನಿಗೆ ಅವಳ ಕೈಹಿಡಿದು ಈ ಪ್ರಪಂಚದ ದಿಗಂತದಾಚೆ ನಡೆದು ಹೋಗಬೇಕನ್ನಿಸುತ್ತದೆ. ಅವಳ ಕೈ ಹಿಡಿದು ಕೆ.ಆರ್.ಎಸ್‌ನ ಕಾರಂಜಿಗಳ ಮಧ್ಯೆ ಸ್ವಚ್ಛಂದವಾಗಿ ತಿರುಗಾಡಬೇಕೆನ್ನಿಸುತ್ತದೆ. ಮನೆಯ ಪಕ್ಕದ ಗಲ್ಲಿಯಲ್ಲಿರುವ ಕಾಕಾ ಹೋಟೇಲಿನಲ್ಲಿ ಚಹಾ ಕುಡಿದು ಬನ್ ತಿನ್ನಬೇಕು ಅನ್ನಿಸುತ್ತದೆ. ಯಾವುದೋ ಚಿತ್ರದ ಚಿತ್ರೀಕರಣದಲ್ಲಿ ಕಾಕಾ ಹೋಟೇಲಿನ ಸೆಟ್ ಹಾಕಿದ್ದರು. ಅಲ್ಲಿ ಚಹಾ ಕುಡಿದು ಹೊಡೆದಾಡಿದ್ದೂ ಉಂಟು. ಆದರೆ ನಂಬಿ: ಈ ವರೆಗೂ ಅವನು ನಿಜವಾಗಿ ಕಾಕಾ ಹೋಟೇಲಿನಲ್ಲಿ ಚಹಾದ ರುಚಿ ಕಂಡಿಲ್ಲ.

ಭುವನಾಳನ್ನು ಮದುವೆಯಾದ ರೀತಿ ನೆನಪುಮಾಡಿಕೊಂಡಾಗ ಅವನಿಗೆ ಈಗಲೂ ನಗು ಬರುತ್ತದೆ. ಆಗ ಇಬ್ಬರಿಗೂ ಯೌವನದ ಹುರುಪು. ಯಾವುದೋ ಚಿತ್ರಕ್ಕಾಗಿ ಇಬ್ಬರೂ ನಟಿಸುತ್ತಿದ್ದರು. ಆಗ ತನ್ನ ಪಾತ್ರದ ಸಂಭಾಷಣೆಯನ್ನು ಪಾತ್ರದಲ್ಲೇ ತಲ್ಲೀನನಾಗಿ ಹೇಳಿದ್ದ: "ಭುವನಾ, ನಾನು ನಿನ್ನನ್ನು ಪ್ರೀತಿಸುತ್ತೇನೆ" ಅಂದಿದ್ದ. ಹುಚ್ಚು ಹುಡುಗಿ. ಅದೇ ಅವಳ ಮೊದಲ ಚಿತ್ರ. ಅವನು ಹೇಳಿದ್ದನ್ನು ನಿಜವೆಂದೇ ನಂಬಿ ನಿಜಕ್ಕೂ ಅವನ ಹಿಂದೆ ಬಿದ್ದಳು. ನಂತರ ಇಬ್ಬರೂ ಮದುವೆಯಾದರು. ಆದರೂ... ನಿಜಕ್ಕೂ ಅವಳಲ್ಲಿ ಅವನಿಗೆ ನಿಜವಾದ ಪ್ರೀತಿಯಿದೆಯೇ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಈಗೇನಾದರೂ ಅವನು ಅವಳಲ್ಲಿ ಈ ವಾಕ್ಯವನ್ನು ಹೇಳಿದರೆ "ಯಾವ ಸಿನೇಮಾದ ಸಂಭಾಷಣೆ ಅಭ್ಯಾಸ ಮಾಡುತ್ತಿದ್ದೀಯಾ?" ಎಂದು ಗಂಭೀರವಾಗಿ ಕೇಳಿದರೂ ಕೇಳಿಯಾಳು. ನಿಜವಾದ ಪ್ರೀತಿಯನ್ನು ಹೇಗೆ ಅಭಿವ್ಯಕ್ತಿಸಬೇಕೆಂದು ಅವನಿಗೇ ತಿಳಿಯದಾಗಿದೆ.

ಈ ರಂಗಿನ ಬದುಕೇ ಹಾಗೆ - ತುಂಬಾ ಕೃತಕ. ಎಷ್ಟೋ ಬಾರಿ ಸೆಟ್ ಹಾಕಲು ಆಗುವ ಖರ್ಚಿನ ಬಗ್ಗೆ ಅವನು ನಿರ್ದೇಶಕರಲ್ಲಿ ಮಾತನಾಡಿದ್ದಾನೆ. ಈ ಕೊಳಗೇರಿಯ ಸೆಟ್ ಹಾಕಿ ಅದನ್ನು ಬುಲ್‌ಡೋಜರಿನಲ್ಲಿ ಕೆಡವುದಕ್ಕೆ ಆಗುವ ಖರ್ಚಿನಲ್ಲಿ ಒಂದು ಜನತಾ ಮನೆಗಳ ಕಾಲೊನಿಯನ್ನು ನಿರ್ಮಿಸಬಹುದು ಅಂತಲೂ ಆಗಾಗ ಹೇಳಿದ್ದುಂಟು. ಆಗ ನಿರ್ದೇಶಕ ಜೋ ಏನಂದಿದ್ದ? "ಏನು ಉತ್ತಮ್, ಕಮ್ಯುನಿಸ್ಟ್ ಥರ ಮಾತಾಡುತ್ತಿದ್ದೀರಿ? ಹಾಗೇನಾದರೂ ಮಾಡಿದರೆ ನಿಮಗೆ ಇಲ್ಲಿ ಕೆಲಸ ಯಾರು ಕೊಡುತ್ತಿದ್ದರು. ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕ್ಕೊಳ್ಳಬೇಕಾಗುತ್ತಿತ್ತು. ಅಷ್ಟೇ. ನೀವು ಜೀವನದಲ್ಲಿ ಈಗ ಒಂದು ಮಜಲನ್ನು ತಲುಪಿದ್ದೀರಿ. ಈಗ ಹೀಗೆಲ್ಲಾ ಮಾತನಾಡಬಹುದು. ಇಪ್ಪತ್ತಾರು ವರ್ಷಗಳ ಹಿಂದೆ ಛಾನ್ಸ್ ಗಾಗಿ ಪರಿತಪಿಸುತ್ತಿದ್ದಾಗ ಇಂಥ ಯೋಚನೆಗಳು ಬರುತ್ತಿರಲಿಲ್ಲ ಅಲ್ಲವೇ. ಹೊಟ್ಟೆ ತುಂಬಿದಾಗ ಯಾವಾಗಲೂ ಅಷ್ಟೇ. ಆ ಹೊಟ್ಟೆಯನ್ನು ತುಂಬಿಸಿದ ಬಡವರ ಯೋಚನೆ ತಾನಾಗಿಯೇ ಬರುತ್ತದೆ."

ಇರಬಹುದು. ಜೋ ಹೇಳಿದ್ದರಲ್ಲಿ ಸತ್ಯಾಂಶವಿರಬಹುದು. ಇಪ್ಪತ್ತೆರಡು ವರ್ಷಗಳ ಹಿಂದೆ - ಆಗ ಅವನಿನ್ನೂ ಸ್ಥಿರವಾದ ನಟನಾಗಿರಲಿಲ್ಲ - ಆಗ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾಗ, ತನ್ನ ಜೀವನದ ಮೌಲ್ಯಗಳು ಏನಿದ್ದವು? ಆಗಿನ ಸಮಯದಲ್ಲಿ ಆತ್ಮವಂಚನೆ ಮಾಡಿಕೊಂಡು ಜೀವಿಸಲಾರೆ, ಮೂಢನಂಬಿಕೆಗಳನ್ನು ಪೋಷಿಸಲಾರೆ ಎಂದೆಲ್ಲಾ ಹೇಳಿಕೊಂಡು ಓಡಾಡುತ್ತಿದ್ದ ಆಗ ಇದೇ ಜೋ ಬಂದಿದ್ದರು. ಯಾವುದೋ ನಿರ್ದೇಶಕರಿಗಾಗಿ ಭಕ್ತ ಸಿದ್ಧರಾಮ ಎಂಬ ಪೌರಾಣಿಕ ಚಿತ್ರವನ್ನು ತಯಾರಿಸಬೇಕೆಂದು ಅವರ ಯೋಜನೆಯಾಗಿತ್ತು. ಆಗ ಅವನು ಕೇಳಿದ್ದ:

"ಜೋ ನೀವೇ ನಂಬದ ಸಿದ್ಧಾಂತ, ಮೂಢನಂಬಿಕೆಗಳ ಬಗ್ಗೆ ಅದೂ ಹಿಂದೂ ಪೌರಾಣಿಕ ಚಿತ್ರ ಮಾಡಹೊರಟಿದ್ದೀರಲ್ಲಾ? ಈ ಸಿನೆಮಾದ ಬಗ್ಗೆ ನಿಮಗೆ ಕಮಿಟ್‍ಮೆಂಟ್ ಇದೆಯೇ?"

"ಉತ್ತಮ್ ನೀವು ಹೇಳುವುದು ಸರಿ. ಆದರೆ ನನ್ನ ನಂಬಿಕೆಗಳು ಸಂಪೂರ್ಣ ಬೇರೆ. ಈಗ ನಾನು ಮಾಡುತ್ತಿರುವ ಚಿತ್ರದ ಯಾವ ಅಂಶದಲ್ಲೂ ನನಗೆ ನಂಬಿಕೆಯಿಲ್ಲ. ಚಿತ್ರಮಾಧ್ಯಮಕ್ಕೆ ಕಮಿಟ್‌ಮೆಂಟ್ ಎಂದೆಲ್ಲಾ ನಾನು ಹೇಳಿಕೊಂದು ಓಡಾಡಬಹುದು. ಆದರೆ ನಿಜ ಏನೂಂತ ಅಂದರೆ ಈ ದಿನ ಮಾರಾಟವಾಗುವುದೇ ಇದು. ಆದ್ದರಿಂದ ಮಾಡಬೇಕು. ನಾವುಗಳು ಹೆಸರು ಮಾಡಿಕೊಳ್ಳುವ ತನಕ ಯಾರೂ ನಮ್ಮ ಮೇಲೆ ದುಡ್ಡು ಹಾಕುವುದಿಲ್ಲ. ಈ ಸತ್ಯವನ್ನು ನಾನು ಒಪ್ಪಿದ್ದೀನಿ. ಈ ಚಿತ್ರಕ್ಕೆ ಮಾಸ್ ಅಪೀಲ್ ಇದೆ. ನೀವು ಇದರಲ್ಲಿ ಕೆಲಸ ಮಾಡಿದರೆ ನಿಮಗೂ ಒಂದು ಬ್ರೇಕ್ ಸಿಗಬಹುದು. ನೋಡಿ."

"ಇಲ್ಲ ಜೋ ಬೇಡ. ಈ ಸ್ಕ್ರಿಪ್ಟ್ ನೋಡಿ. ಎಲ್ಲಾ ಮೂಢ ಭಕ್ತಿಯ ಅತಿರೇಕ. ಯಾರೋ ದೇವರು ಭಿಕ್ಷುಕನ ರೂಪದಲ್ಲಿ ಬಂದು ತನ್ನ ಮಗುವನ್ನೇ ಬಲಿತೆಗೆದುಕೊಳ್ಳುವ ಪ್ರಸ್ತಾಪಮಾಡಿದರೆ ಈ ಸಿದ್ದರಾಮ ಕೂಡಲೇ ಅದಕ್ಕೆ ಒಪ್ಪುತ್ತಾನೆ. ಓದಿ ವಿದ್ಯಾವಂತರಾಗಿರುವ ನಾವು ಈ ದೃಷ್ಟಿಕೋನಕ್ಕೆ ನಮ್ಮ ಹೆಸರನ್ನು ನೀಡಬೇಕೇ? ನನಗೆ ಈ ಚಿತ್ರದಲ್ಲಿರುವ ಪಾತ್ರ ಇಷ್ಟವೇ ಇಲ್ಲ. ಇಂಥ ಹುಚ್ಚುತನ ಕಲ್ಪನಾತೀತವಾಗಿದೆ. ಇದರ ಪ್ರಭಾವ ಹೇಗಿರಬಹುದು ಯೋಚಿಸಿದ್ದೀರಾ? ಈ ಶತಮಾನದಲ್ಲೂ ಇಂಥ ನಂಬಿಕೆಗಳನ್ನು ಪೋಷಿಸುವಂಥ ಚಿತ್ರಗಳನ್ನು ನಾವು ಮಾಡಬೇಕಾ.. ಬೇಡ, ನೋ.."

"ಇಲ್ಲ ಉತ್ತಮ್ ಇಂಥ ಪಾತ್ರಕ್ಕೆ ಯಾರನ್ನ ಕೇಳಿದರೂ ಸುಲಭವಾಗಿ ಒಪ್ಪಿಕೋತಾರೆ. ನಾನು ನಿಮ್ಮನ್ನೇ ಯಾಕೆ ಕೇಳುತ್ತಾ ಇರುವುದೆಂದರೆ ನಿಮಗೆ ಇದರ ಜೊತೆಗೆ ಮತ್ತೊಂದು ಅವಕಾಶ ಸಿಕ್ಕಬಹುದು. ಜೊತೆಗೆ ಒಂದು ಬ್ರೇಕ್ ಕೂಡಾ. ಇದು ಸಕ್ಸಸ್ ಆದರೆ ಅದೇ ನಿರ್ಮಾಪಕ ಮತ್ತೊಂದು ಚಿತ್ರ ಮಾಡೋದಕ್ಕೆ ತಯಾರಿದ್ದಾನೆ. ಅದಕ್ಕೇ ಸ್ಕ್ರಿಪ್ಟ್ ಕೂಡಾ ರೆಡಿಯಿದೆ. ನೀವು ಅದರಲ್ಲೂ ನಟಿಸಬಹುದು. ನಾವುಗಳು ಹೊಸಬರು. ಒಂದು ನೆಲೆ ನಿಂತರೆ ಆಮೇಲೆ ನಮಗಿಷ್ಟ ಬಂದಹಾಗೆ ಚಿತ್ರಗಳನ್ನು ಮಾಡಬಹುದು."

ಹೀಗೆ ಚಿತ್ರರಂಗದಲ್ಲಿ ರಾಜಿ ಮಾಡಿಕೊಳ್ಳುವುದನ್ನು ಇಪ್ಪತ್ತೆರಡು ವರುಷಗಳ ಹಿಂದೆ ಉತ್ತಮ್ ಪ್ರಾರಂಭಿಸಿದ. ಅಂದಿನಿಂದಲೂ ಅವನದು ರಾಜಿಯ ಬದುಕೇ ಆಗಿದೆ. ಭಕ್ತ ಸಿದ್ದರಾಮ ನೂರು ದಿನ ಓಡಿತು. ಶತದಿನೋತ್ಸವದ ಸಂತೋಷಕೂಟದಲ್ಲಿ ಅವನು ಮಾಡಿದ್ದ ಭಾಷಣವೇನು? ಅದೂ ರಾಜಿಯೇ. "ಎಲ್ಲಾ ಆ ದೇವರ ಕೃಪೆ, ಇಂಥ ಭಕ್ತಿಯ ಪಾತ್ರ ಮಾಡಿದ್ದರಿಂದಲೇ ನನ್ನ ಜೀವನದಲ್ಲಿ ಇಂಥಾ ತಿರುವು ಬಂತು" ಎಂದೆಲ್ಲಾ ಭಾಷಣ ಬಿಗಿದಿದ್ದ. ಜೋ ಕೂಡಾ ಹಾಗೇ ಮಾತನಾಡಿದ್ದ. ಇಬ್ಬರೂ ಅಂದಿನ ಮಟ್ಟಿಗೆ ದೊಡ್ಡ ಭಕ್ತರಾದದ್ದು ಇಂದಿಗೂ ಆ ಇಮೇಜಿನಿಂದ ಹೊರಬರಲಾಗಿರಲಿಲ್ಲ! ಆಗ ಅದೇ ನಿರ್ಮಾಪಕರು ಜೋ ತಯಾರಿಸಿದ್ದ ಎರಡನೇ ಸ್ಕ್ರಿಪ್ಟಿಗೆ ಹಣ ಹಾಕಲು ಸಾಧ್ಯವಿಲ್ಲ ಎಂದುಬಿಟ್ಟರಂತೆ. ಅತೀ ನೈಜ ಎನ್ನಿಸುವ ಕಥಾಹಂದರದ ಸ್ಕ್ರಿಪ್ಟ್ ಅವರ ಬಳಿಗೆ ಒಯ್ದಾಗ ಅವರು ಹೇಳಿದ್ದು ಈ ಮಾತುಗಳು:

"ನೋಡಿ ಯಾವುದು ಮಾರಾಟವಾಗುತ್ತೇಂತ ಭಕ್ತ ಸಿದ್ದರಾಮದಿಂದ ನಿರೂಪಿತವಾಗಿದೆ. ನಿಮಾಗೂ ಅಂಥ ಇಮೇಜ್ ಬಂದಿದೆ. ಉತ್ತಮ್ ಗೂ ಸಹ. ನೀವಿಬ್ಬರೂ ಸೇರಿ ಮತ್ತೊಂದು ಇಂಥದೇ ಸಿನೇಮಾ ಮಾಡಿ. ಸ್ಕ್ರಿಪ್ಟ್ ಬೇಕಿದ್ದರೆ ಚನ್ನರಾಯಪಟ್ನ ಶ್ರೀಧರಮೂರ್ತಿಯವರ ಕೈಯಲ್ಲಿ ಬರೆಸೋಣ. ಒಟ್ಟಿನಲ್ಲಿ ಹಾಕಿದ ಹಣ ವ್ಯರ್ಥವಾಗಬಾರದು ನೋಡಿ."

ಮತ್ತೊಂದು ಚಿತ್ರವೂ ಹಾಗೆಯೇ ಆಯಿತು. ಒಂದಂಶದ ಬ್ಲಾಕ್‍ಮೇಲ್ ಪ್ರಾರಂಭವಾಯಿತು ಎನ್ನಬಹುದು. ತಾನು ಖಂಡಿತ ಈ ಚಿತ್ರದಲ್ಲಿ ಪಾತ್ರ ಮಾಡುವುದಿಲ್ಲ ಎಂದು ಉತ್ತಮ್ ಪಟ್ಟುಹಿಡಿದು ಕೂತ. ಜೋ ಬಂದು ಪೇಪರಿನವರ ಬೆದರಿಕೆ ಹಾಕಿದರು. ಅವರೆಲ್ಲಾ ಸೇರಿ ಮೊದಲೇ ಒಪ್ಪಿಕೊಂಡ ಚಿತ್ರಕ್ಕೆ ಉತ್ತಮ್ ಕೈಕೊಟ್ಟಿದ್ದಾರೆ ಎಂದು ಪಬ್ಲಿಸಿಟಿ ಕೊಟ್ಟರೆ ಏನು ಮಾಡುತ್ತೀರ ಎಂಬ ಪ್ರಶ್ನೆಯನ್ನು ಜೋ ಕೇಳಿದರು. ಆಗ ಉತ್ತಮ್ ಗೆ ಅದು ಅಸ್ತಿತ್ವದ ಪ್ರಶ್ನೆಯಾಗಿತ್ತು. ಉತ್ತಮ್ ಚತುರ್ವೇದಿ ನಿರ್ಮಾಪಕರೊಂದಿಗೆ ಸಹಕರಿಸುವುದಿಲ್ಲ ಎಂಬ ಇಮೇಜ್ ಬಂದರೆ ಇರುತ್ತಿದ್ದ ಅವಕಾಶಗಳೂ ಹಾಳಾಗಿ ಹೋಗುತ್ತಿದ್ದವು. ಅನಿವಾರ್ಯವಾಗಿ ಅವನ ಆ ಪಾತ್ರವನ್ನು ಒಪ್ಪಿಕೊಂಡೆನೆಂದು ಹೇಳಿದ್ದ.

ಅಲ್ಲಿಂದ ಮುಂದಕ್ಕೆ ಅವನು ರಾಜಿಯಾಗುತ್ತಲೇ ಬರುತ್ತಿದ್ದಾನೆ. ಎಷ್ಟರ ಮಟ್ಟಿಗೆಂದರೆ ಈಗ ಒಮ್ಮೊಮ್ಮೆ ಅವನ ಬಗ್ಗೆ ಅವನಿಗೇ ಅನುಮಾನಗಳು ಬರುತ್ತವಂತೆ. ಅವನು ಆಸ್ತಿಕನೇ ನಾಸ್ತಿಕನೇ ಎನ್ನುವುದು ಅವನಿಗೇ ತಿಳಿದಿಲ್ಲ. ಎಲ್ಲಿ ಹೋದರೂ "ಎಲ್ಲಾ ಆ ರಾಘವೇಂದ್ರ ಪ್ರಭುಗಳ ಕೃಪೆ" ಅನ್ನುವ ಮಾತು ಈಗ ಅವನ ಭಾಷೆಯಲ್ಲಿ ಸಹಜವಾಗಿಬಿಟ್ಟಿದೆ. ಷಾಟಿಗೆ ಮೊದಲು ಕ್ಯಾಮರಾಕ್ಕೆ ಮಂಗಳಾರತಿ ಎತ್ತದೆ ತೆಂಗಿನಕಾಯಿ ಒಡೆಯದಿದ್ದರೆ ನಟಿಸಲು ಅವನಿಗೇ ಕಿರಿಕಿರಿಯಾಗುತ್ತದೆ. ಈ ದ್ವಂದ್ವ ಅವನನ್ನು ಹುಚ್ಚನನ್ನಾಗಿಸುತ್ತಿದೆ. ಆಚಿನ ಜಗತ್ತಿನಲ್ಲಿ ಅವನು ಎಷ್ಟೇ ಕೃತಕತೆಯಿಂದ ಏನು ಮಾತನಾಡಿದರೂ ಜನ ನಂಬುತ್ತಾರೆ! ಅವನು ನಿಜವಾದ ಭಾವನೆಯಿಂದ ಹೃದಯಾಂತರಾಳದಿಂದ ಏನನ್ನಾದರೂ ಹೇಳಿದರೆ ಅವನ ಸ್ವಂತ ಹೆಂಡತಿಯೇ ನಂಬುವುದಿಲ್ಲ. ಅವಳೂ ಈ ನಟನೆ ಎಷ್ಟು ಒಗ್ಗಿಹೋಗಿದ್ದಾಳೆಂದರೆ ಅವರಿಬ್ಬರೂ ಒಬ್ಬರ ಮುಂದೊಬ್ಬರು ಯಾವಾಗ ನಟಿಸುತ್ತಿದ್ದಾರೆ ಯಾವಾಗ ಸಹಜವಾಗಿದ್ದಾರೆ ಅನ್ನುವುದು ಅವರಿಗೇ ತಿಳಿದಿಲ್ಲ!

ಮೊನ್ನೆ ಮೊನ್ನೆ ನಡೆದ ಸಂಗತಿ. ಯಾವುದೋ ಚಿತ್ರದ ಒಂದು ಸನ್ನಿವೇಶದಲ್ಲಿ ಉತ್ತಮ್ ನಟಿಸುತ್ತಿದ್ದ. ಸಹನಟಿ - ಮತ್ತು ತನ್ನ ಹಾಲಿ ಪ್ರೇಯಸಿ ಎಂದು ಹೇಳಲ್ಪಟ್ಟ ಸುಧಾಳಿಗೆ ಈ ಚಿತ್ರದಲ್ಲೂ ಪ್ರೇಯಸಿಯ ಪಾತ್ರವಿತ್ತು. ನಾಯಕ ಹಂಡತಿಯನ್ನು ಬಿಟ್ಟು ಕೆಲಸದ ಮೇಲೆ ಊರಿಂದ ಹೊರಗೆ ಹೋಗುತ್ತಾನೆ. ಆ ಪರವೂರಿನಲ್ಲಿ ಸ್ನೇಹಿತೆಯಾಗಿ, ನಂತರ ಪ್ರೇಯಸಿಯಾಗುವ ಪಾತ್ರ ಸುಧಾಳದ್ದು. ಚಿತ್ರೀಕರಣದಲ್ಲಿ ಸಂಪೂರ್ಣ ತಲ್ಲೀನನಾಗಿ ಎಂದಿನಂತೆ ಉತ್ತಮ್ ನಟಿಸಿದ್ದ. ಆ ಸಿನೇಮಾದಲ್ಲಿ ಅವರಿಬ್ಬರ ನಡುವೆ ಸಾಕಷ್ಟು ಬಿಸಿ ಬಿಸಿ ದೃಶ್ಯಗಳಿದ್ದುವು. ಹೀಗಾಗಿ ಅವಳಿಗೆ ನಿಕಟವಾಗಿರುವ ಸಾಕಷ್ಟು ಅವಕಾಶ ಉತ್ತಮ್‍ಗೆ ಸಹಜವಾಗಿಯೇ ಪ್ರಾಪ್ತವಾಗಿತ್ತು. ಚಿತ್ರೀಕರಣದ ನಂತರವೂ ಸುಧಾ ಅವನ ಹಿಂದೆ ಮುಂದೆ ಓಡಾಡತೊಡಗಿದ್ದಳು ಅನ್ನುವುದು ನಿಜ. ಚಿತ್ರದ ಸಂಭಾಷಣೆಯನ್ನು ತಲ್ಲೀನವಾಗಿ ಉಚ್ಚರಿಸುತ್ತಾ ಆ ಹುಡುಗಿ ಆ ಪಾತ್ರವನ್ನೇ ನಂಬಿಬಿಟ್ಟಳೋ ಹೇಗೆ? ನಟನೆಗಿರುವ ಪರಿಮಿತಿ ಎಲ್ಲಿ ನಿಲ್ಲುತ್ತದೆ. ಮೊದಲಬಾರಿಗೆ ಆ ಪರಿಮಿತಿಯನು ಗಮನಿಸದ ಉತ್ತಮ್ ಸಹನಟಿಯನ್ನು ಮದುವೆಯಾಗಿಬಿಟ್ಟಿದ್ದ. ಈಗ?... ಪತ್ರಿಕೆಗಳು ಬರೆಯುತ್ತಿರುವ ವಿಚಾರಕ್ಕೂ ತನ್ನ ಮನದಲ್ಲಿ ಇರುವ ಆಲೋಚನೆಗಳಿಗೂ ಒಂದೇ ದಿಕ್ಕಿನಲ್ಲಿ ಸಾಗುತ್ತಿದೆಯಾ ಅನ್ನುವ ಭಯ ಅವನನ್ನು ಕಾಡಿತು. ಈ ಗುಸುಗುಸುವನ್ನು ಜನರು ನಂಬಿದರೆ ಅಡ್ಡಿಯಿಲ್ಲ. ಆದರೆ ಸುದ್ದಿಯೇ ಸತ್ಯವಾಗುವಂತೆ ತಾನೂ ನಂಬಿದರೆ ಹೇಗೆ? ಅಥವಾ ಎಲ್ಲವೂ ಊಹಾಪೋಹವೋ.. ಈ ವಿಷಯದಲ್ಲಿ ಸುಧಾಳ ಮನದಲ್ಲೇನಿದೆ ಅನ್ನುವುದನ್ನು ತಾನು ತಪ್ಪಾಗಿ ಊಹಿಸುತ್ತಿದ್ದಾನೆಯೇ.. ಈ ಎಲ್ಲ ವಿಕೃತಿಗಳು ಉತ್ತಮನನ್ನು ಕಾಡತೊಡಗಿದುವು.

ಈ ಎಲ್ಲ ಗೊಂದಲಗಳು ಅವನಿಗೆ ಎಷ್ಟು ಹೆಚ್ಚಾಗಿವೆ ಅಂದರೆ ಅವನಲ್ಲಿನ ಜ್ವಾಲಾಮುಖಿ ಲಾವಾರಸವಾಗಿ ಯಾವಾಗ ಸ್ಪೋಟಗೊಳ್ಳಬಹುದೆಂದು ಉತ್ತಮ್‍ಗೆ ತಿಳಿಯಲಿಲ್ಲ. ಅವನು ಯಾವಾಗ ತಾನಾಗಿದ್ದಾನೆ, ಯಾವಾಗ ನಟಿಸುತ್ತಿದ್ದಾನೆ ಅನ್ನುವ ದ್ವಂದ್ವದ ನಡುವೆ ತನ್ನನ್ನು ಕಂಡುಕೊಳ್ಳುವ ಅಸಫಲ ಪ್ರಯತ್ನಮಾಡುತ್ತಿದ್ದ. ದಿನಕ್ಕೆ ಮೂರು ಷಿಫ್ಟುಗಳಲ್ಲಿ ದುಡಿಯುವುದರ ಕೆಲವಾರು ಅಪಾಯಗಳಲ್ಲಿ ಇದೂ ಒಂದಾಗಿರಬಹುದು.

ಇತ್ತೀಚೆಗೆ ಸಿನೆಮಾ ಪತ್ರಿಕೆಗಳಲ್ಲಿ ಬಂದ ದೊಡ್ಡ ತಲೆಬರಹದ ಲೇಖನವನ್ನು ಎಲ್ಲರೂ ಗಮನಿಸಿದ್ದರು. "ಖ್ಯಾತ ಚಿತ್ರನಟ ಉತ್ತಮ್ ಚತುರ್ವೇದಿಯ ಆತ್ಮಹತ್ಯಾ ಪ್ರಯತ್ನ".. ಆದರೆ ನಿಜ ಹೇಳಬೇಕೆಂದರೆ ಅವನಿಗೆ ಸಾಯಬೇಕೆಂದೇನೂ ಇರಲಿಲ್ಲ. ಅಂದು ತಾನು ನಟಿಸಿದ ಚಿತ್ರದಲ್ಲಿ ನಾಯಕ ಮಾನಸಿಕ ಒತ್ತಡ ತಡೆಯಲಾರದೇ ನಿದ್ರೆ ಗುಳಿಗೆಗಳನ್ನು ತೆಗೆದುಕೊಂಡು ಮಲಗುತ್ತಾನೆ. ಆದರೆ ಉತ್ತಮ್ ಎಷ್ಟು ಸುಸ್ತಾಗಿದ್ದನೆಂದರೆ ತನಗಾಗಿ ಇಟ್ಟುಕೊಂಡಿದ್ದ ನಿದ್ರೆಗುಳಿಗೆಗಳನ್ನು ಯಾವುದೋ ಗುಂಗಿನಲ್ಲಿ ನುಂಗಿಬಿಟ್ಟಿದ್ದ. ಪಾಪ, ಅವನನ್ನು ಗಮನಿಸಿದ್ದ ರಾಮಣ್ಣ ಅವನನ್ನು ಆಸ್ಪತ್ರೆಗೆ ಸೇರಿಸಿದ. ಪತ್ರಕರ್ತರಿಗೆ ಅದೇ ಒಂದು ದೊಡ್ಡ ಸುದ್ದಿಯಾಗಿತ್ತು.

ಹೀಗೇ ಹಳೇ ನೆನಪುಗಳನ್ನು ಮೆಲುಕುಹಾಕುತ್ತಾ ಮಲಗಿದ್ದಾಗ ಅವನ ಹೆಂಡತಿ ಭುವನಾ ಬರುತ್ತಾಳೆ. ಬಾಗಿಲಿನ ಬೆಲ್ ಸದ್ದಾದಾಗ ಆಳು ಹೋಗಿ ಬಾಗಿಲನ್ನು ತೆಗೆಯುತ್ತಾನೆ. ಬಾಗಿಲಿನ ಸದ್ದನ್ನು ಕೇಳುತ್ತಾ ಉತ್ತಮ್ ಕೋಣೆಯಲ್ಲಿದ್ದಾನೆ. ಆಕೆ ಒಳಕ್ಕೆ ಬಂದು ಇವನನ್ನು ಕಂಡು ಆಶ್ಚರ್ಯಗೊಳ್ಳುತ್ತಾಳೆ. ಸಂಜೆಯೆಲ್ಲಾ ಅವರು ಕುಳಿತು ಬಹಳ ಹೊತ್ತು ಹೃದಯಬಿಚ್ಚೆ ಮಾತಾಡಬಹುದು ಅಂತ ಉತ್ತಮ್‌ಗೆ ಅನ್ನಿಸುತ್ತದೆ. ಅವನು ಭಾವುಕನಾಗಿ ಅವನ ಜೀವನದಬಗ್ಗೆ ಈಗ ಆಗುತ್ತಿರುವ ಮಾನಸಿಕ ಒತ್ತಡದ ಬಗ್ಗೆ, ಮನಸ್ಸು ಸಾವಿರಾರು ಹೋಳುಗಳಾಗಿ ಚೂರಾಗುತ್ತಿರುವ ಬಗ್ಗೆ, ತಾನು ಯಾವಾಗ ಸಹಜವಾಗಿರುತ್ತಾನೆ- ಯಾವಾಗ ನಟಿಸುತ್ತಾನೆ ತಿಳಿಯದ ಬಗ್ಗೆ ಹೀಗೆ ಅವನು ಬಿಚ್ಚಿಕೊಳ್ಳುತ್ತಾ ಹೋಗುತ್ತಾನೆ.

ಇಷ್ಟನ್ನೂ ಶಾಂತವಾಗಿ ತುಟಿಪಿಟಕ್ಕನ್ನದೆ ಕೇಳಿದ ನಂತರ ಭುವನಾ ನಿರ್ಲಿಪ್ತವಾಗಿ ಕೇಳುತ್ತಾಳೆ:

"ಯಾಕೆ ಯಾವತ್ತೂ ಇಲ್ಲದ್ದು ಈ ದಿನ ಇಷ್ಟೊಂದು ಮಾತಾಡುತ್ತಾ ಇದ್ದೀಯ ಉತ್ತಮ್. ಆ ರಂಡೆ ಸುಧಾಳ ಸಹವಾಸಾಂತ ಕಾಣುತ್ತೆ. ವಿಚ್ಛೇದನ ಬೇಕಿದ್ದರೆ ನೇರವಾಗಿ ಕೇಳು. ಅದಕ್ಕೆ ಇಷ್ಟೊಂದು ಪೀಠಿಕೆ ಯಾಕೆ?"

ಇವಳಿಗೆ ವಿವರಿಸಿ ಹೇಳುವುದು ಹೇಗೆ? ಅವನ ಪ್ರಾಮಾಣಿಕತೆಯನ್ನೇ ಭುವನಾ ಪ್ರಶ್ನಿಸುತ್ತಿದ್ದಾಳೆ. ಅವಳಿಗೆ ಎಷ್ಟು ವಿವರಿಸಿದರೂ ಈ ತತ್ವಶಾಸ್ತ್ರದ ಮಾತುಗಳನ್ನು ನಂಬುವ ಪರಿಸ್ಥಿತಿಯಲ್ಲಿ ಅವಳಿಲ್ಲ. ಪಾಪ ಅವಳು ನಂಬುವುದಾದರೂ ಹೇಗೆ? ಇತ್ತೀಚೆಗೆ ತಾನು ಸುಧಾಳೊಂದಿಗೆ ಚಕ್ಕರ್ ಚಲಾಯಿಸುತ್ತೆರುವುದಾಗಿ ಗುಲ್ಲೋ ಗುಲ್ಲು. ಉತ್ತಮನಿಗೆ ತಲೆ ಸಿಡಿದಂತಾಗುತ್ತದೆ. ಭುವನಾಳಿಗೆ ಅವನು ಹೇಳುತ್ತಾನೆ - "ನಾನು ಸ್ವಲ್ಪ ಹೊತ್ತು ಆರಾಮ ಮಾಡುತ್ತೇನೆ. ಡಿಸ್ಟರ್ಬ್ ಮಾಡಬೇಡ"

ಕೋಣೆಗೆ ಬಂದಾಗ ನಿದ್ರೆ ಗುಳಿಗೆಗಳ ಡಬ್ಬ ಕಾಣುತ್ತದೆ. ಎರಡು ಗುಳಿಗೆಗಳನ್ನು ಗಂಟಲಿನಲ್ಲಿಳಿಸಿ ನೀರು ಕುಡಿಯುತ್ತಾನೆ. ಈ ಒಂಟಿ ಜೀವನದಲ್ಲಿ ನಿದ್ರಾದೇವಿಯ ಕೃಪೆಯೂ ಮಾತ್ರೆಗಳಲ್ಲದೇ ಅವನ ಮೇಲೆ ಬೀಳುತ್ತಿಲ್ಲ. ಈ ವಿಚಾರ ಮನಸ್ಸಿಗೆ ಹೊಳೆದಾಗ ಕಣ್ಣಲ್ಲಿ ಗ್ಲಿಸರಿನ್ ರಹಿತ ಕಣ್ಣೀರು ಬರುತ್ತದೆ. ದೇಹವನ್ನು ಹಾಸಿಗೆಯ ಮೇಲೆ ಊರಬೇಕನ್ನುವಷ್ಟರಲ್ಲಿ ಬಾಗಿಲ ಸದ್ದಾಗುತ್ತದೆ. ಸಮಯ ಸಂಜೆ ಆರಾಗಿದೆ. ಡ್ರೈವರ್ ಅವನನ್ನು ಕೊಂಡೊಯ್ಯಲು ಬಂದಿದ್ದಾನೆ. ಹಾಗೆಯೇ ನಿಧಾನವಾಗಿ ಮುಖತೊಳೆದು ಬಂದ ನಿದ್ರೆಯನ್ನು ತಡೆಯುವುದುದು ಹೀಗೆ ಎಂದು ಯೋಚಿಸುತ್ತಲೇ ಮತ್ತೊಂದು ಚಿತ್ರದ ನಟನೆಗಾಗಿ ತಯಾರಾಗಿ ಉತ್ತಮ್ ಹೊರಡುತ್ತಾನೆ.

೧೯೮೭.

No comments: