ಭಾಗ ೧
ರೈಲ್ವೇ ಸ್ಟೇಷನ್ ಆಚೆ ಇದ್ದ ಮುನಿಸಿಪಲ್ ಷಾಪಿಂಗ್ ಕಾಂಪ್ಲೆಕ್ಸ್ ನ ಸಣ್ಣ ಖೋಲಿಯಲ್ಲಿ ಮೂರು ಮಕ್ಕಳೊಂದಿಗೆ ಕೇರಂ ಆಡುತ್ತಾ ಕುಳಿತ ಬಶೀರ್ ಭಾಯ್ ಗೆ ಇದ್ದಕ್ಕಿದ್ದ ಹಾಗೆ ಬಂದ ಈ ಕರೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಆರು ವರ್ಷದ ಪುತ್ತ ಹುಡುಗನೊಬ್ಬ ಬಂದು "ಭಾಯ್ ಹಸಮುಖ್ ಕಾಕಾ ಕರೀತಾ ಇದ್ದಾರೆ ಬರಬೇಕಂತೆ" ಎಂದಾಗ ಬಶೀರ್ ತಲೆಯೆತ್ತಿದ್ದ. ಆಟ ಮುಂದುವರೆಸುತ್ತಲೇ ಕೇಳಿದ: "ಎಲ್ಲಿ?" ಹುಡುಗ: "ಇಲ್ಲೇ ಪಾರ್ಕಿಂಗ್ ಹತ್ರ ಇದ್ದಾರೆ. ನಿಮ್ಮ ಜೊತೆ ಮಾತಾಡಬೇಕಂತೆ." ಎಂದ. "ಐದು ನಿಮಿಷ ಆಟ ಮುಗಿಸಿ ಬರ್ತೇನಂತ ಹೇಳು".
ಮಕ್ಕಳ ಜೊತೆ ಆಡುವಾಗ ಡಿಸ್ಟರ್ಬ್ ಆಗುವುದು ಬಶೀರ್ ಗೆ ಇಷ್ಟವಿಲ್ಲ. ಕೇರಂನ ಕಾಯಿಗಳನ್ನು ಹೊಡೆಯುತ್ತಲೇ ಅವನ ತಲೆ ಯೋಚನೆ ಮಾಡತೊಡಗಿತು.... ಈಗೇನಿರಬಹುದು? ಇದು ಯಾವ ಹೊಸ ಉಸಾಬರಿ? ಎರಡು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗಿನಿಂದಲೂ ಈ ಹಸ್‍ಮುಖ್ ಜೊತೆಗೆ ಪ್ರತಿನಿತ್ಯದ ವ್ಯವಹಾರ ನಡೆದಿದೆ. ಅವನ ದಂಧೆಗೆ ತಾನು ಕಂಟಕಪ್ರಾಯವಲ್ಲ ಅಂತ ಅವನಿಗೆ ನಿಜಕ್ಕೂ ಮನವರಿಕೆಯಾಗಿಲ್ಲ ಅನ್ನಿಸುತ್ತೆ. ಇಂದಿನ ಮುಸೀಬತ್‍ನ ಕಥೆ ಹೇಗೋ ಎಂದು ಯೋಚಿಸುತ್ತಲೇ ಆಟ ಮುಗಿಸಿದ.
ಸ್ಟೇಷನ್ ಸುತ್ತಮುತ್ತಲಿನ ಜನಕ್ಕೆ ಬಶೀರ್ ಯಾವಾಗಲೂ ಆಟಪಾಟ ಆಡಿಕೊಂಡು ಮಕ್ಕಳ ಜೊತೆ ಓಡಾಡಿಕೊಂಡು ಇರುತ್ತಾನೆ ಎಂದಷ್ಟೇ ಗೊತ್ತು. ಇಲ್ಲಿಗೆ ಬಂದ ಒಂದು ವರ್ಷದೊಳಗಾಗಿ ಅವನು ಸ್ಟೇಷನ್ ಬದಿಯಲ್ಲಿರುವ ಮುನಿಸಿಪಾಲ್ಟಿಯ ಷಾಪಿಂಗ್ ಕಾಂಪ್ಲೆಕ್ಸ್ ನ ಒಂದು ಕೋಣೆಯನ್ನು ಹಿಡಿದು ಅದರಲ್ಲಿ ಒಂದಿಷ್ಟು ಷತರಂಜಿ ಬಿಚಾಯಿಸಿ, ಮಕ್ಕಳ ಮನರಂಜನೆಗೆಂದು ಕೇರಂ ಬೋರ್ಡು, ಟಿವಿ, ವಿಡಿಯೋ, ಕೆಲ ಪತ್ರಿಕೆಗಳು ಇತ್ಯಾದಿಗಳನ್ನು ಇಟ್ಟಿದ್ದ. ಅಲ್ಲಿನ ಸವಲತ್ತುಗಳನ್ನು ಉಪಯೋಗಿಸಲು ಕೆಲವು ನಿಯಮಗಳನ್ನು ಬರೆದು ಒಂದು ದೊಡ್ಡ ಬೋರ್ಡನ್ನು ಕೋಣೆಯೊಳಗೆ ನೇತುಬಿಟ್ಟಿದ್ದ. ಬೋರ್ಡಿನಲ್ಲಿ ಬರೆದ ನಿಯಮಾನುಸಾರ ಮಕ್ಕಳಿಗಾಗಿ ಉಪಯೋಗಿಸಲೆಂದು ಮುನಿಸಿಪಾಲಿಟಿ ಈ ಕೋಣೆಯನ್ನು ಯಾವ ಪಗಡಿಯೂ ಇಲ್ಲದೇ ವರ್ಷಕ್ಕೆ ಕೇವಲ ಒಂದು ರೂಪಾಯಿ ಬಾಡಿಗೆಗೆ ಇವನಿಗೆ ಅಲಾಟ್ ಮಾಡಿತ್ತು.
ಈ ಊರಿಗೆ ಬಂದ ಹೊಸತರಲ್ಲಿ ಬಶೀರ್ ಸಂಜೆಯ ವೇಳೆ ಮಕ್ಕಳನ್ನೆಲ್ಲ ಕಲೆಹಾಕಿ ಸ್ಟೇಷನ್ ಆಚೆಗಿನ ಮೈದಾನದಲ್ಲಿ ಆರ್.ಎಸ್.ಎಸ್. ಶಾಖೆಯೋಪಾದಿಯಲ್ಲಿ ಒಂದೆರಡು ಆಟಗಳನ್ನು ಆಡುವುದು, ಆನಂತರ ಅವರಿಗೆ ಅಕ್ಷರಾಭ್ಯಾಸ ಮಾಡಿಸುವುದು, ಮಾಡುತ್ತಿದ್ದ. ಹೀಗೆ ಮಾಡುತ್ತಿದ್ದ ಕಾಲದಲ್ಲಿಯೇ ಅವನು ಹಸ್‍ಮುಖ್‍ನ ಕೆಂಗಣ್ಣಿಗೆ ಒಳಗಾಗಿ ಅವನ ಜೊತೆಗಿನ ಮೊದಲ ಭೇಟಿ ಘಟಿಸಿತ್ತು. ನಂತರ ಬಿಲ್ಡಿಂಗಿನ ಅಲಾಟ್‍ಮೆಂಟ್ ಆದಾಗಿನಿಂದಲಂತೂ ಅವನೊಂದಿಗಿನ ಭೇಟಿ ಹೆಚ್ಚೂ ಕಮ್ಮಿ ವಾರಕ್ಕೊಮ್ಮೆಯಾದರೂ ಆಗುತ್ತಲೇ ಇತ್ತು.
ಮೊದಲಬಾರಿಗೆ ಹಸ್‍ಮುಖ್‍ನಿಂದ ಕರೆ ಬಂದಾಗ ಬಶೀರ್ ತುಸು ಹೆದರಿದ್ದ. ತನ್ನ ಬಳಿ ಆಟಕ್ಕೆ ಬರುತ್ತಿದ್ದ ಹುಡುಗನೊಬ್ಬ ಬಂದು "ನಮ್ಮ ಕಾಕಾ ನಿಮ್ಮನ್ನು ಕಾಣಬೇಕಂತೆ, ಹೇಳಿ ಕಳಿಸಿದ್ದಾರೆ" ಅಂತ ಹೇಳಿದಾಗ ಇವನಿಗೆ ಯಾಕೆಂದು ತಿಳಿಯಲಿಲ್ಲ. ಆದರೆ ಆ ಭೇಟಿಯಲ್ಲಿ ಹಸ್‍ಮುಖ್ ಹೇಳಿದ್ದು ಒಂದೇ ಮಾತು. ಈ ಹುಡುಗರು ನಮ್ಮವರು, ಈ ಇಲಾಖೆ ನನ್ನದು, ನನ್ನ ತಂಟೆಗೆ ಬಂದರೆ ನಿನಗೆ ಒಳ್ಳೆಯದಾಗುವುದಿಲ್ಲ. ಆನಂತರ ಬಶೀರ್‌ಗೆ ತನ್ನ ಬಳಿ ಬರುತ್ತಿದ್ದ ಹುಡುಗರೆಲ್ಲಾ ಹಸ್‍ಮುಖ್ ನಡೆಸುತ್ತಿದ್ದ ಒಂದು ವ್ಯವಸ್ಥಿತ ಚಟುವಟಿಕೆಯ ಭಾಗ ಎಂಬ ಹೆಚ್ಚಿನ ವಿಷಯ ತಿಳಿದುಬಂತು. ರೈಲ್ವೇ ಇಲಾಖೆಯ ಯಂತ್ರಾಂಗ ವಿಫಲವಾದದ್ದರ ದ್ಯೋತಕವಾಗಿ ಮಕ್ಕಳ ಈ ಖಾಸಗೀ ಉದ್ಯಮ ಉದ್ಭವಿಸಿ ಅವ್ರುಗಳೆಲ್ಲಾ ಒಂದು ಬ್ರಷ್ ಹಿಡಿದು ರೈಲನ್ನು ಸಾಫುಮಾಡುವ ಕಾರ್ಯಕ್ರಮ ಕೈಗೊಂಡು, ಪ್ರಯಾಣಿಕರಿಂದ ತಮ್ಮ ಫೀಜು ವಸೂಲು ಮಾಡುತ್ತಿದ್ದರು. ಇವರ ಕಾಯಕಕ್ಕೆ ಕುತ್ತು ಬಾರದಂತೆ ಹಸ್‍ಮುಖ್ ಮಕ್ಕಳ ಸಂಪಾದನೆಯ ಒಂದು ದೊಡ್ಡ ಭಾಗವನ್ನು ಪಡೆದು ಅದರಲ್ಲಿನ ಪುಟ್ಟ ಪುಟ್ಟ ಭಾಗಗಳನ್ನು ಸರಕಾರಿ ಯಂತ್ರಾಂಗಕ್ಕೆ ತೆರೆಗೆ ಕೊಡುವ ಒಂದು ವಿಲಕ್ಷಣ "employment guarantee scheme" ನಡೆಸುವ ವ್ಯವಸ್ಥೆ ಮಾಡಿದ್ದ.
ಆದರೆ ಹಸ್‌ಮುಖ್‍ನ ಕರೆಗಳು ವಾರಕ್ಕೊಮ್ಮೆ ಬರಲಾರಂಭಿಸಿದಾಗ, ಇವೆಲ್ಲವೂ ಬಶೀರ್‌ಗೆ ವಿಚಿತ್ರ ಆಶ್ಚರ್ಯ ಉಂಟುಮಾಡುವ ವಿಚಾರಗಳಾದವು. ಯಾಕೆಂದರೆ ತನ್ನ ಮಟ್ಟಿಗೆ ಅವನು ಯಾರೊಂದಿಗೂ ಪೈಪೋಟಿಗಾಗಿಯಾಗಲೀ, ಪ್ರಪಂಚವನ್ನು ಬದಲಿಸಬೇಕೆಂದಾಗಲೀ, ಹಸ್‍ಮುಖ್‍ಗೆ ಸವಾಲಾಗಿ ನಿಲ್ಲಬೇಕೆಂದಾಗಲೀ ಈ ಕೆಲಸ ಪ್ರಾರಂಭಿಸಿದವನಲ್ಲ. ತಾನೊಬ್ಬ ನೇರ ಹಾಗೂ ಖಾಸಗೀ ವ್ಯಕ್ತಿ. ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಕನಸುಗಾರನಂತೂ ತನಲ್ಲವೇ ಅಲ್ಲ. ಮದುವೆ, ಮಕ್ಕಳು ಇಲ್ಲದ ಬಶೀರನ ಜೀವನದಲ್ಲಿ ಒಂದೇ ಸರಳ ಉದ್ದೇಶವಿತ್ತು. ಅದೆಂದರೆ, ಬಾಲ್ಯದಲ್ಲಿಯೇ ಸಂಪಾದಿಸುವ ಭಾರ ಹೊತ್ತುನಿಂತ ಪುಟ್ಟ ಮಕ್ಕಳ ಜೀವನವನ್ನು ಇನ್ನಷ್ಟು ಸಹ್ಯ ಮಾಡುವುದು. ಸದ್ದ ಒತ್ತಡದಲ್ಲಿರಬಹುದಾದ ಬೀದಿ ಮಕ್ಕಳಿಗೆ ಒಂದಿಷ್ಟು ಮನರಂಜನೆಯ ಜೊತೆಗೆ ಮನೋವಿಕಾಸವನ್ನು ಒದಗಿಸುವುದಷ್ಟೇ ಅವನ ಉದ್ದೇಶವಾಗಿತ್ತು. ಎಲ್ಲ ಜನರೂ ತಮ್ಮ ತಮ್ಮ ಮಕ್ಕಳಿಗಾಗಿ ಸಂಪಾದಿಸುತ್ತಿರುವ ಈ ಕಾಲದಲ್ಲಿ ಮದುವೆ, ಮಕ್ಕಳು ಇಲ್ಲದ ತಾನು ರಸ್ತೆಯಲ್ಲಿ ಓಡಾಡಿಕೊಂಡಿರುವ ಬೀದಿ ಮಕ್ಕಳಿಗಾಗಿ ದುಡಿದರೆ ಅವರನ್ನು ಇನ್ನಷ್ಟು ಸಭ್ಯರನ್ನಾಗಿ ಮಾಡಿದರೆ ಅಷ್ಟೇ ಸಾಕಾಗಿತ್ತು.
ಈ ನಿಟ್ಟಿನಲ್ಲಿ ಮೊದಲಿಗೆ ಅವರಿಗೆ ಅಕ್ಷರಾಭ್ಯಾಸ ಮಾಡೆಸಬೇಕೆನ್ನುವ ಕಾರ್ಯಕ್ರಮವನ್ನು ಅವನು ಹಮ್ಮಿಕೊಂಡಿದ್ದ. ಆದ್ರೆ ಬಹುಬೇಗನೆ ಹಸ್‌ಮುಖ್‍ನೊಂದಿಗಿನ ಮೊದಲ ಭೇಟಿಯ ತುರಂತ್ ಈ ಕಾರ್ಯವನ್ನು ಕೈ ಬಿಟ್ಟಿದ್ದ. ಹೀಗಾಗಿ ಹಸ್‍ಮುಖ್‍ಗೆ ತನ್ನ ಧಮಕಿ ಕೆಲಸ ಮಾಡಿ ತಾನೊಂದು ಪಟ್ಟು ಗೆದ್ದಂತನ್ನಿಸಿತ್ತು.
ಆದರೆ ಬಶೀರ್ ಈ ಕಾರ್ಯಕ್ರಮ ಕೈಬಿಡಲು ಕಾರಣ ಬೇರೆಯದೇ ಇತ್ತು. ಅವನಲ್ಲಿ ಬರುತ್ತಿದ್ದ ಹುಡುಗರು ಹೆಚ್ಚಾಗಿ ರೈಲಿನಲ್ಲಿ ಓಡಾಡುತ್ತಾ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದವರು. ಹೀಗಾಗಿ ಬಶೀರನ ವಿದ್ಯಾರ್ಥಿವೃಂದ ಪ್ರತಿದಿನವೂ ಭಿನ್ನವಾಗುತ್ತಿತ್ತಾದ್ದರಿಂದ ತಾನು ಏನನ್ನೂ ಸಾಧಿಸಿದಂತಾಗಲಿಲ್ಲ. ಜೊತೆಗೆ ಅವರಿಗೆ ಅಕ್ಷರಾಭ್ಯಾಸ ಮಾಡಿಸಿದರೂ ಮಕ್ಕಳು ಆ ಕೆಲಸ ಬಿಡುವ ಲಕ್ಷಣಗಳು ಕಾಣಲಿಲ್ಲ. ಅದಕ್ಕೆ ಕಾರಣ ಸರಳವಿತ್ತು. ಮಕ್ಕಳಿಗೆ ಈಗಿನ ಕಾಯಕದಿಂದ ಯಾವ ಹೂಡಿಕೆಯೂ ಇಲ್ಲದೇ ಸುಲಭವಾಗಿ ಪ್ರತಿದಿನ ೫೦-೬೦ ರೂಪಾಯಿಗಳ ಸಂಪಾದನೆಯಾಗಿಬಿಡುತ್ತಿತ್ತು. ಇಷ್ಟು ಆದಾಯ ಇದ್ದಾಗ ಅವರಿಗೆ ಬೇರಾವ ನೌಕರಿಯೂ ಆಕರ್ಷಕವೆನಿಸುತ್ತಿರಲಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಸಾಲದ್ದಕ್ಕೆ ಮಕ್ಕಳನ್ನು ಹಸ್‍ಮುಖ್‍ನ ಮುಷ್ಟಿಯಿಂದ ಬಿಡಿಸುವುದು ತನ್ನ ಕಾಯಕ ಅಲ್ಲವೆಂದು ಬಶೀರ್ ನಂಬಿದ್ದ. ಅವರಾಗಿಯೇ ಈ ಕೆಲಸ ಬಿಟ್ಟು ಬೇರೇನಾದರೂ ಮಾಡಬಯಸಿದರೆ ಅದು ಬೇರೆಯ ವಿಷಯ ಎಂದುಕೊಂಡಿದ್ದ ಬಶೀರ್ ಹೀಗೆ ತನ್ನ ವಿರುದ್ಧ ಸವರ ಸಾರಿದ್ದ ಹಸ್‍ಮುಖ್‍ನನ್ನು ಕಂಡು ಸೋಜಿಗವೆನ್ನಿಸಿತ್ತು. ತನ್ನ ಚಟುವಟಿಕೆಗಳನ್ನು ನಿಯಂತ್ರಿಸುವ ಬಯಕೆ ಹಸ್‌ಮುಖ್‍ಗೆ ಏಕಿದೆಯೆಂದು ಅರ್ಥವಾಗಲಿಲ್ಲ. ಆದರೂ ತಮ್ಮಿಬ್ಬರ ಈ ಜಟಾಪಟಿಯಿಂದ ಮಕ್ಕಳಿಗೇನೂ ತೊಂದರೆ ಆಗಬಾರದೆಂಬ ಆತಂಕ ಅವನನ್ನು ಕಾಡುತ್ತಲೇ ಇತ್ತು.
ಬಶೀರ್ ಈ ಕೆಲಸವನ್ನು ಕೇವಲ ತನ್ನ ಖುಷಿಗಾಗಿ ಮಾಡುತ್ತಿದ್ದ ಎಂಬುದನ್ನು ಕೆಲವರು ನಂಬಲು ತಯಾರಿರಲಿಲ್ಲ. ಜೀವನದಲ್ಲಿ ಇದೂ ಒಂದು ಉದ್ದೇಶವಾಗಲು ಸಾಧ್ಯವೇ? ಎಂದು ಜನ ಪ್ರಶ್ನಿಸುತ್ತಿದ್ದರು. ಇನ್ನೂ ಕೆಲವರು "ಮಕ್ಕಳಿಗೆ ವಿದ್ಯೆ ಕೊಡುವ ಯೋಜನೆ ಹಾಕಿಕೋ, ಬರೇ ಮನರಂಜನೆ ಕೊಡುವುದರಿಂದ ಪ್ರಯೋಜನವೇನು? ಮಕ್ಕಳನ್ನು ದುಷ್ಟ ತಲೆಹಿಡುಕರಿಂದ ಬಿಡಿಸು, ನಿನಗೆ ಫಂಡಿಂಗ್ ಕೊಡಿಸುತ್ತೇವೆ, ಎಂದೆಲ್ಲಾ ಪುಕ್ಕಟೆ ಸಲಹೆ ಕೊಟ್ಟರೂ, ಬಶೀರ್ ’ಬೇಡ’ ಎಂದಷ್ಟೇ ಹೇಳುವವನು. ಒಮ್ಮೆ ನಯಾ ಪಡಕಾರ್ ಪತ್ರಿಕೆಯ ವರದಿಗಾರನೊಬ್ಬ ತನ್ನ ಬಗ್ಗೆ ಬರೆಯಬೇಕೆಂದು ಬಂದಾಗ, ಬಶೀರ್ "ದಿನವೂ ಆಫೀಸಿಗೆ ಹೋಗಿ ಟಿ.ಎ. ಬಿಲ್ ಪಾಸ್ ಮಾಡುವ ಮುನೀಮನ ಬಗ್ಗೆ ಯಾಕೆ ಬರೆಯೋದಿಲ್ಲ? ಅವನು ಪ್ರತೀ ವಾರ ಯಾವ ಸಿನಿಮಾ ನೋಡುತ್ತಾನೆ ಅಂತ ಯಾಕೆ ಬರೆಯೋದಿಲ್ಲ? ನನ್ನ ಮಟ್ಟಿಗೆ ನಾನು ಜೀವಿಸುವ ರೀತಿಗೂ ಅವನಿಗೂ ಫರಕ್ಕೇ ಇಲ್ಲ. ಇಬ್ಬರೂ ನಮ್ಮ ನಮ್ಮ ಕೆಲಸ ಮಾಡಿಕೊಂಡು ನಮತಿಷ್ಟ ಬಂದ ಹಾಗೆ ಇದ್ದೀವಿ! ನನ್ನ ಕೆಲಸ ಅವನದಕ್ಕಿಂತ ಅಲಗ್ ಅಂತಲಾಗಲೀ, ಬೆಹತರ್ ಅಂತಲಾಗಲೀ ನನಗನ್ನಿಸುವುದಿಲ್ಲ" ಎಂದು ಅವನನ್ನು ಬೈದು ಓಡಿಸಿಬಿಟ್ಟಿದ್ದ. ಹೀಗಾಗಿ, ಬಶೀರ್ ಬಗ್ಗೆಯಾಗಲೀ ಅವನ ಕೆಲಸದ ಬಗ್ಗೆಯಾಗಲೀ ಬೀದಿಯ ಮಕ್ಕಳಿಗೆ ಬಿಟ್ಟರೆ ಬೇರಾರಿಗೂ ಹೆಚ್ಚು ತಿಳಿದಿರಲಿಲ್ಲ. ಅವನಿಗೆ ಬೇಕಿದ್ದದ್ದೂ ಇದೇ.
ಅಂದು ಹಸ್‍ಮುಖ್ ಅವನನ್ನು ಕರೆದಾಗ ಮತ್ತೆ ಇದೆಂಥಾ ಮುಸೀಬತ್ ಅಡರಿಕೊಂಡಿತೆಂದು ಯೋಚಿಸುತ್ತಲೇ ಬಶೀರ್ ಅವನನ್ನು ನೋಡಲು ಹೊರಟ. ಇವನನ್ನು ಕಂಡ ಕೂಡಲೇ ಹಸ್‍ಮುಖ್ ಮಾತು ಪ್ರಾರಂಭಿಸಿದ:
"ಬಶೀರ್ ಭಾಯಿ, ಈ ಸಂಜೆ ನಿನ್ನ ರೂಮನ್ನ ಖುಲ್ಲಾ ಇಡು. ಬರೋಡಾದಲ್ಲಿನ ನಮ್ಮ ಮಕ್ಕಳ ಅಡ್ಡಾಕ್ಕೆ ಸ್ವಲ್ಪ ತೊಂದರೆ ಆಗಿದೆ, ಅವರು ಬಂದು ನಿನ್ನ ರೂಮಲ್ಲೇ ಮಲಗುತ್ತಾರೆ. ಈ ಬಗ್ಗೆ ಆರ್.ಪಿ.ಎಫ್‌ನ ಚೌಧರಿಯ ಜೊತೆ ಈಗಾಗಲೇ ಬಾತ್‍ಚೀತ್ ಆಗಿದೆ. ಒಂದೆರಡು ದಿನ ಮಕ್ಕಳು ಇಲ್ಲೇ ಇರುತ್ತಾರೆ."
ಇದನ್ನು ಕೇಳಿ ಬಶೀರ್‍ಗೆ ಮೈಯೆಲ್ಲಾ ಉರಿಯಿತು. ಹಸ್‌ಮುಖ್ ಹೇಳುವಂತೆ ಕೇಳುವ ಕಟಪುತಲಿ ತಾನೇನೂ ಆಗಿರಲಿಲ್ಲ. ಈ ವಿಷಯ ಅವನಿಗೆ ಮನವರಿಕೆಯಾಗುವಂತೆ ಸ್ಪಷ್ಟ ಹೇಳಿಯೇ ಬಿಡಬೇಕು ಎಂದುಕೊಂಡ. ಆದರೆ ಅವನೊಂದಿಗೆ ವಾದ ಬೆಳೆಸುವುದು ಇಷ್ಟವಿಲ್ಲದೆ, "ಇಲ್ಲ ನಮ್ಮ ನಿಯಮಾನುಸಾರ ಹಾಗೂ ಮುನಿಸಿಪಾಲಿಟಿಯ ಜೊತೆಗಿರುವ ಒಪ್ಪಂದಾನುಸಾರ ಎಂಟು ಘಂಟೆಗೆ ಖೋಲಿಗೆ ಬೀಗ ಹಾಕಲೇಬೇಕಾಗಿದೆ. ಆದ್ದರಿಂದ ಸಾಧ್ಯವೇ ಇಲ್ಲ." ಎಂದಷ್ಟೇ ಹೇಳಿದ.
ಹಸ್‍ಮುಖ್ ಒಳಗೊಳಗೇ ಕುದಿಯಲಾರಭಿಸಿದ... "ಇದರ ಪರಿಣಾಮ ಒಳ್ಳೇದಾಗೊಲ್ಲ, ನಾನು ಹೇಳ್ತಾ ಇದ್ದೇನೆ...’ ಅವನು ಮಾತು ಮುಂದುವರೆಸುವಷ್ಟರಲ್ಲಿ ಬಶೀರ್ ಏನೂ ಮಾತನಾಡದೆಯೇ ತಲೆ ಅಡ್ಡ ಅಲ್ಲಾಡಿಸುತ್ತಾ ಎದ್ದು ಹೋದ.
ಭಾಗ ಎರಡು
ಪ್ರಯಾಣವೆಂದರೆ ಎಲ್ಲ ಭಾರತೀಯ ನಾರಿಯರಂತೆ ಸೋನಲ್‌ಗೂ ಒಂದು ಮಹಾಯಜ್ಞ. ಪ್ರಯಾಣಿಸುವುದು ಸೋನಲ್ ಮತ್ತು ಅವಳ ಸಣ್ಣ ಕೂಸೇ ಆದರೂ, ಅವಳ ಸುತ್ತಲೂ ಲಗೇಜಿನ ಮರಿಗಳು ಕಾಲಿಗೆ ಅಡರಿಕೊಂಡು ಇರುತ್ತಿದ್ದುವು. ಒಂದು ದೊಡ್ಡ ತಗಡಿನ ಟ್ರಂಕು, ಗುಂಡೇ ಸಿಗದ ಗುಜರಾತಿನಲ್ಲಿ ಮೆಕ್‌ಡವೆಲ್ಸ್ ನ ರಟ್ಟಿನ ಪೆಟ್ಟಿಗೆ ಹಾಗೂ ಅದರೊಳಗೆ ಸಣ್ಣಪುಟ್ಟ ಆಟಿಕೆಗಳದೇ ಮಾಯಾಲೋಕ. ತಿಂಡಿ ಊಟಗಳು ತುಂಬಿಕೊಂಡಿರುವ ನಾಲ್ಕಂತಸ್ತಿನ ಕ್ಯಾರಿಯರ್. ತೊಟ್ಟಿಲಿಲದೇ ಮಲಗದ ಮಗುವನ್ನು ಮಲಗಿಸಲು ಸಾಂಖೇಡಾ ತೊಟ್ಟಿಲ ಪುಟ್ಟ ಕಂಬಗಳು ಹಾಗೂ ನಡುವ ಕಟ್ಟಲು ಬಟ್ಟೆ, ಮಗುವಿನ ಡೈಪರ್ ಹಾಗೂ ಇತರಬಟ್ಟೆಗಳು ತುಂಬಿದ ಒಂದು ಸ್ಕೈಬ್ಯಾಗು, ಪ್ರಯಾಣದ ಬಟ್ಟೆ, ಸಾಬೂನು, ನೀರು, ಹಣ್ಣು, ಎಂದು ಒಂದು ಪ್ಲಾಸ್ಟಿಕ್ ಬುಟ್ಟಿ, ಸೋನಲ್‌ಳ ಮೇಕಪ್ ವಸ್ತುಗಳನ್ನು ಒಳಗೊಂಡ ಸ್ಯಾಂಸನೈಟ್ ಬ್ಯೂಟಿಬ್ಯಾಗು, ಚಿಲ್ಲರೆ ವಸ್ತುಗಳನ್ನೊಳಗೊಂಡ ಒಂದು ಡ್ಯೂಟಿ ಫ್ರೀ ಪ್ಲಾಸ್ಟಿಕ್ ಚೀಲ.. ಹೀಗೆ ಅನೇಕ ಶತಮಾನಗಳಲ್ಲಿ ಏಕಕಾಲಕ್ಕೆ ಬದುಕುವ ಭಾರತವನ್ನು ಕಾಣಲು ಸೋನಲ್‌ಳ ಲಗೇಜು ನೋಡಿದ್ದರೆ ಸಾಕಿತ್ತು.
ಸೋನಲ್ ರಾಜ್‌ಕೋಟಿಗೆ ಹೊರಡುವಾಗಲೆಲ ಅಮೃತಭಾಯಿಗೆ ಎರಡು ದಿನಗಳ ಮೊದಲಿನಿಂದಲೇ ಹೊಟ್ಟೆಯಲ್ಲಿ ಚಿಟ್ಟೆ ಹಾರಾಡುವುದು ಸಹಜ. ಹೇಗಾದರೂ ಮಾಡಿ ಮಗುವನ್ನು, ಲಗೇಜನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವಳನ್ನೂ ರೈಲಿಗೆ ಹತ್ತಿಸಿಬಿಟ್ಟರೆ ಅವನಿಗೆ ಅಲ್ಲಿಂದ ಮುಂದಕ್ಕೆ ಶಾಂತಿ, ಬಿಡುಗಡೆ. ಎರಡೇ ನಿಮಿಷ ನಿಲ್ಲುವ ಸೂಪರ್‌ಫಾಸ್ಟ್ ರೈಲಿನಲ್ಲಿ ಹತ್ತಿಸುವುದೇ ಒಂದು ವಿಶೇಷ ಚಟುವಟಿಕೆ. ಇಲ್ಲಿಂದ ರಿಜರ್ವ್ ಮಾಡಿಸಿ ಕಳಿಸೋಣವೆಂದೆ ಎಷ್ಟೋ ಬಾರಿ ಪ್ರಯತ್ನಿಸಿದ್ದುಂಟು. ಆದರೆ ರೈಲು ನಿಲ್ದಾಣದೆದುರು ಒಂದು ಸ್ಟೂಲಷ್ಟೇ ಹಿಡಿಯುವ ಕತ್ತಲ ಖೋಲಿಯಲ್ಲಿ ಕುಳಿತ ಏಜೆಂಟ್ ಮಧೂಭಾಯಿಯಿಂದ ಹಿಡಿದು ರಿಜರ್ವೇಷನ್ ಕೌಂಟರಿನ ಕಾಕಾನವರೆಗೂ ಎಲ್ಲರೂ "ದುಡ್ಡು ಯಾಕೆ ಬರ್‌ಬಾದ್ ಮಾಡ್ತೀಯ? ಇಲ್ಲಿಂದ ರಾಜ್‍ಕೋಟ್ ಗೆ ಯಾರಾದರೂ ರಿಜರ್ವ್ ಮಾಡಿಸುವುದುಂಟಾ? ಬೇಕಾದ ಡಬ್ಬಿಯಲ್ಲಿ ಹೋಗಿ ಕುಳಿತುಕೊಳ್ಳುವುದಕ್ಕೆ ಬದಲು ನಿನಗ್ಯಾಕಿದ್ದೀತು ಮಗಜ್‌ಮಾರಿ?’ ಎಂದು ಬೈಯ್ಯುವವರೇ. ಹೀಗೆ ಸುಮ್ಮಸುಮ್ಮನೇ ರಿಜರ್ವೇಷನ್‌ಗೆಂದು ಹತ್ತಿಪ್ಪತ್ತು ರೂಪಾಯಿ ಪೋಲು ಮಾಡುವ ಗಿರಾಕಿಯನ್ನು ಅವರು ನೋಡಿದ್ದೇ ಇಲ್ಲ.
ಹೀಗಾಗಿ ಅಮೃತ್‌ಭಾಯಿಗೆ ರೈಲು ನಿಂತ ಎರಡು ನಿಮಿಷಗಳೊಳಗಾಗಿ ಎಷ್ಟೆಲ್ಲಾ ಮಾಡಬೇಕಾಗಿ ಬರುತ್ತಿತ್ತು. ತನ್ನ ಎಕ್ಸ್ ರೇ ಕಣ್ಣುಗಳನ್ನು ಬಿಟ್ಟು ಮುಂದೆ ಹಾದುಹೋಗುವ ಎಲ್ಲ ಡಬ್ಬಿಗಳಲ್ಲೂ ಒಮ್ಮೆ ಹಣಕಬೇಕು. ಎಷ್ಟು ಅತ್ತಿತ್ತ ನೋಡಿ ಖಾಲಿ ಸೀಟಿರುವ ಡಬ್ಬಿಯನ್ನು ಕಂಡರೂ ಕಡೆಗೆ ಎದುರಿಗೆ ನಿಂತ ಡಬ್ಬಿಗೆ ಲಗೇಜಿನ ಸಮೇತ ಸೋನಲ್‌ಳನ್ನು ತುರುಕಬೇಕು. ಆನಂತರ ಪಾಪ ಅಬಳ ಪಾಡೇನಾಯಿತೋ ಎಂದು ಹೆದರುವಷ್ಟರಲ್ಲಿಯೇ ರೈಲು ಹೊರಡುವುದು. ಅವಳಿಗೆ ಕೈಬೀಸಿ ಅವಳನ್ನು ಕಣ್ಣಲ್ಲಿ ತುಂಬಿಕೊಳ್ಳುವಷ್ಟರಲ್ಲಿಯೇ ರೈಲು ದೂರದಿಗಂತದಲ್ಲೊಂದು ಚುಕ್ಕೆಯಾಗಿ ಮರೆಯಾಗಿಬಿಡುತ್ತಿತ್ತು. ಈ ಎಲ್ಲ ಝಂಜಟ್‍ಗೆ ಬದಲಾಗಿ ಅವಳನ್ನು ಎ.ಸಿ.ಡಬ್ಬದಲ್ಲಿ ಹತ್ತಿಸಿಬಿಟ್ಟರೆ - ಒಂದು ರೀತಿ ಸೀಟು ಸಿಕ್ಕ ಖಾತ್ರಿಯಾದರೂ ಇರುತ್ತದೆಂದು ಅಮೃತಭಾಯಿ ನಂಬಿದ್ದ.
ಈ ಮಾತನ್ನು ಮಧೂಭಾಯಿ ಅಥವಾ ಕಾಕಾ ಕೇಳಿದರೆ ಕಣ್ಣು ಹೊರಹಾಕಿ, ಕೂದಲು ಕಿತ್ತು, ತಲೆ ಚಚ್ಚಿಕೊಳ್ಳುತ್ತಾರೆ. ರಾಜ್‍ಕೋಟ್‍ಗೆ ಆಗುವ ಎ.ಸಿ.ಡಬ್ಬಿಯ ಖರ್ಚನ್ನು ಬಚಾಯಿಸಿ ಅದಕ್ಕೆ ತಿಂಗಳಿಗೆರಡು ಪೈಸೆ ಬಡ್ಡಿ ಕಟ್ಟಿ ನಲವತ್ತು ವರುಷಗಳ ನಂತರ ಆ ಹಣದಲ್ಲಿ ಎಂಥ ಸುಂದರ ಶಾಪಿಂಗ್ ಕಾಂಪ್ಲೆಕ್ಸಿನ ಮಾಲೀಕನಾಗಬಹುದು ಎನ್ನುವುದನ್ನು ಲೆಕ್ಕಹಾಕಿ ತೋರಿಸಿದ್ದಾರೆ. ಹೀಗೆಲ್ಲಾ ಅವರು ತನ್ನ ತಲೆ ತುಂಬುತ್ತಾರೆ ಎಂದು ಅಮೃತ್‌ಭಾಯ್‌ಗೆ ಗೊತ್ತಿದ್ದರೂ, ದುಡ್ಡಿಗಿಂತ ಮನಶ್ಶಾಂತಿಯೇ ಹಿರಿದು ಎಂಬ ಭಾವನೆಯಲ್ಲಿ ಹಣ ಪೋಲು ಮಾಡುತ್ತಿದ್ದ. ನಿಗದಿತ ಸ್ಥಳದಲ್ಲಿ ಬಂದು ನಿಲ್ಲುವ ಎ.ಸಿ. ಡಬ್ಬಿಗೆ ಹತ್ತಲು ಸೋನಲ್‍ಗೆ ಪ್ರತಿಬಾರಿಯೂ ಟಿಕೆಟ್ ಖರೀದಿಸಿ, ಮನಶ್ಶಾಂತಿಯನ್ನು ಬಚಾಯಿಸಿಕೊಂಡಿದ್ದ.
ಎ.ಸಿ.ಡಬ್ಬಿಯಲ್ಲಿ ಸೀಟಿನ ಸಮಸ್ಯೆ ಇರಲಾರದೆನ್ನಿಸಿದರೂ ಬೇರೊಂದು ಸಮಸ್ಯೆ ಖಂಡಿತವಾಗಿ ಉದ್ಭವಿಸುತ್ತಿತ್ತು. ಎ.ಸಿ.ಯ ಎರಡೆರಡು ಬಾಗಿಲುಗಳನ್ನು ದಾಟಿ ಲಗೇಜು ಜೋಡಿಸಬೇಕು. ಸೀಟು ಸಿಕ್ಕಿದೆಯೋ ಇಲ್ಲವೋ ವಿಚಾರಿಸಬೇಕು.. ಹಾಗೂ ಹೊರಬಂದು ಕಪ್ಪು ಗಾಜಿನಲ್ಲಿ ಸೋನಲ್‌ಗೇ ಎಂದುಕೊಂಡು ಪ್ರಯಾಣಮಾಡುತ್ತಿರುವ ಸಮಸ್ತ ಹೆಂಗಸರಿಗೂ ’ಟಾಟಾ’ ಹೇಳಬೇಕು. [ಹೀಗೆ ಟಾಟಾ ಹೇಳುವಾಗ ಟಾಟಾ ಕಂಪನಿಯವರು ತಮ್ಮ ಹೆಸರು ಬಳಸಿದ್ದಕ್ಕೆ ೫% ರಾಯಲ್ಟಿ ಕೇಳುವುದಿಲ್ಲ ಎನ್ನುವುದೇ ಅಮೃತಭಾಯಿಗೆ ಖುಷಿಯವಿಷಯವಾಗಿತ್ತು.]
ಪ್ರತಿ ಆರು ತಿಂಗಳ ಅಂತರದಲ್ಲಿ ಲಗಾತಾರ್ ಐದು ವರ್ಷಗಳಿಂದ ನಡೆದುಬಂದ ಈ ರಿವಾಜಿನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾಗಿದ್ದುವಾದರೂ, ಈಗ ಎಲ್ಲವೂ ಒಂದು ಹದಕ್ಕೆ ಬಂದಹಾಗಿತ್ತು. ಆದರೂ ರೈಲು ಹೊರಡುವವರೆಗೂ ಚಿಟ್ಟೆಗಳ ಹಾರಾಟ ತಪ್ಪಿದ್ದಲ್ಲ!
ಗಿಜಿಗುಟ್ಟುವ ರೈಲು ನಿಲ್ದಾಣಕ್ಕೆ ಸೋನಲ್ ಮತ್ತು ಅಮೃತಭಾಯಿ ಈ ಬಾರಿಯೂ ಬಂದರು. ಸೋನಲ್‌ಳನ್ನು ರೈಲು ಹತ್ತಿಸಿದ [ರೈಲು ಹತ್ತಿಸುವುದಕ್ಕೆ ಇರಬಹುದಾದ ಭಿನ್ನ ಅರ್ಥಗಳನ್ನು ಊಹಿಸದೇ, ಕೇವಲ ಊರಿಗೆ ಹೋಗುವ ತಯಾರಿಯಲ್ಲಿ ಭೌತಿಕವಾಗಿ ಸೋನಲ್ ಪ್ಲಾಟ್‍ಫಾರಂನಿಂದ ರೈಲಿನ ಡಬ್ಬಿಗೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯನ್ನು ಮಾತ್ರ ಊಹಿಸಿಕೊಳ್ಳಬೇಕೆಂದು ಮನವಿ] ನಂತರ ಅಮೃತಭಾಯಿಗೆ - ವಿರುದ್ಧ ದಿಕ್ಕಿನಲ್ಲಿ - ಸೂರತ್‌ಗೆ ಹೋಗುವುದಿತ್ತು. ಅಂದು, ಅಂದರೆ ನವಂಬರ್ ೨೫ ರಂದು ಎರಡೂವರೆ ಮಧ್ಯಾಹ್ನ ತಾನು ಧಂಧೆಯ ವಿಚಾರವಾಗಿ ಹರಿಣ್ ಸಾಥಿಯನ್ನು ಭೇಟಿಯಾಗುವುದಿತ್ತು. ದಕ್ಷಿಣದ ಕಡೆಯಿಂದ ಬರುವ ಒಂದಾನೊಂದು ಸೂಪರ್‌ಫಾಸ್ಟ್ ರೈಲಿಗಾಗಿ ಅವರಿಬ್ಬರೂ ಸಣ್ಣು ಹುಡುಗ ಪ್ರೀತುಲ್ ಸಮೇತವಾಗಿ ಕಾಯುತ್ತಿದ್ದರು. ಸೋನಲ್ ಮುಂಜಾನೆ ೮.೩೦ರ ರೈಲು ಹತ್ತಿದರೆ, ತಾನು ೯.೩೦ರ ಇಂಟರ್‌ಸಿಟಿಯಲ್ಲಿ ಸೂರತ್‌ಗೆ ಹೋಗಬಹುದಿತ್ತು. ಎರಡನೆಯ ಪ್ಲಾಟ್‌ಫಾರ್ಮಿನಲ್ಲಿ ನಿಂತ ಸೋನಲ್ ತನ್ನ ಟೆನ್ಷನ್‌ನಲ್ಲಿದ್ದರೆ ಅಮೃತಭಾಯಿಗೆ ತನ್ನದೇ ಭಿನ್ನ ಟೆನ್ಷನ್‌ಗಳಿದ್ದುವು.
ಆಗಾಗ ಸಾಮಾನು ಎಣಿಸುವುದು, ಏನಾದರೂ ಅನೌನ್ಸ್ ಮೆಂಟ್ ಬಂದರೆ ಕಿವಿಗೊಟ್ಟು ಕೇಳುವುದು, ಅತ್ತ ಇತ್ತ ನೋಡುವುದು ಮಾಡುತ್ತಾ ಪತಿಪತ್ನಿಯರೀರ್ವರೂ ನಿಂತಿದ್ದರು. ಪುಟ್ಟ ಕಂದ ಪ್ರೀತುಲ್‌ನನ್ನು ಹೊರಲಾರದೇ ಆಟಿಕೆಗಳಿದ್ದ ಮೆಕ್‌ಡವಲ್ ಪೆಟ್ಟಿಗೆಯ ಮೇಲೆ ಕೂಡಿಸಿ ಇಬ್ಬರೂ ತಮ್ಮಲ್ಲೇ ಮಾತಾಡಲು ಪ್ರಾರಂಭಿಸಿದರು. ಸುಮಾರು ಹೊತ್ತು ಕಾದನಂತರ, ೫೦ ನಿಮಿಷ ತಡವಾಗಿ ರೈಲು ಬಂತು. ರೈಲು ಬಂದ ಗಡಿಬಿಡಿಯಲ್ಲಿ ಇಬ್ಬರಿಗೂ ಕ್ಷಣಿಕ ಹೃದಯಾಘಾತ ಕಾದಿತ್ತು; ಪ್ರತಿಬಾರಿಯೂ ಇಂಜಿನ್‌ನಿಂದ ಮೂರನೆಯ ಡಬ್ಬವಾಗಿ ಬರುವ ಎ.ಸಿ. ಡಬ್ಬಿ ಇಂದು ರೈಲಿನ ಬಾಲವಾಗಿತ್ತು. ತಕ್ಷಣವೇ ಅಮೃತಭಾಯಿ ಎಚ್ಚರಗೊಂಡ: ಪಕ್ಕದಲ್ಲಿದ್ದ ಕೂಲಿಯವನನ್ನು ಕರೆದು ಟ್ರಾಲಿಯ ಮೇಲೆ ಸಾಮಾನು ಏರಿಸಿದ. ಅದೇ ಕ್ಷಣಕ್ಕೆ ಸೋನಲ್‌ಳನ್ನೂ ಕರೆದು ಓಡಿದ. ಕಡೆಗೆ ಎ.ಸಿ. ಡಬ್ಭಿಯ ಬಳಿ ಬಂದು ಎಲ್ಲ ಸಾಮಾನುಗಳನ್ನೂ ಬಾಗಿಲ ಬದಿಗೆ ಏರಿಸುವಷ್ಟರಲ್ಲಿ ರೈಲಿನ ವಿಸಿಲ್ ಬಂತು. ಸಾಮಾನು ಏರಿಸಲು ಡಬ್ಬಿಯೊಳಕ್ಕೆ ಹತ್ತಿದ್ದ ಅಮೃತಭಾಯಿ ಧಡಬಡಿಸಿ ಇಳಿದ. ಇಳಿದವನೇ ಸೋನಲ್‌ಳ ಕೈ ಹಿಸುಕಿ ಟಾಟಾ ಮಾಡಿದ. ರೈಲಿನ ಜೊತೆಗೆ ಓಡುತ್ತಲೇ ’ಊರಿಗೆ ಸೇರಿದಾಕ್ಷಣ್ ಫೋನ್ ಮಾಡು... ನಿನ್ನ ಆರೋಗ್ಯ ನೋಡಿಕೋ... ಆದಷ್ಟುಬೇಗ ವಾಪಸ್ಸಾಗು...’ ಎಂದು ಹೇಳಿದ. ಅಷ್ಟರಲ್ಲಿ ರೈಲು ವೇಗ ಹಿಡಿಯಿತು. ಕೈ ಬೀಸುತ್ತಾ ಕಣ್ಮರೆಯಾದ ಹೆಂಡತಿಯನ್ನು ಕಣ್ಣಲ್ಲಿ ತುಂಬಿಕೊಂಡು ರೈಲು ದಿಗಂತದಲ್ಲಿ ಮರೆಯಾಗುವವರೆಗೂ ಅಲ್ಲೇ ನಿಂತಿದ್ದು ನಂತರ ಓವರ್‌ಬ್ರಿಜ್‌ನ ಕಡೆಗೆ ಹೆಜ್ಜೆ ಹಾಕಿದ.
ಓವರ್‌ಬ್ರಿಜ್‍ನ ಮೆಟ್ಟಿಲು ಹತ್ತುತ್ತಿದ್ದಂತೆ ಅಮೃತಭಾಯಿಗೆ ಒಂದು ಅನುಮಾನ ಬಂತು. ಅಲ್ಲ, ರೈಲು ಹತ್ತುವಾಗ ಪುಟ್ಟ ಮಗು ಪ್ರೀತುಲ್‍ಗೆ ಟಾಟಾ ಹೇಳಿದ ನೆನಪಾಗುತ್ತಿಲ್ಲವೇ! ಪ್ರೀತುಲ್ ಸೋನಲ್‌ಳ ಕಂಕುಳಲ್ಲಿ ಇದ್ದನೇ ಇಲ್ಲವೇ? ಹಠಾತ್ ಈ ಅನುಮಾನ ಕಾಡಿದಾಗ ಅವನಿಗೆ ವಿಚಿತ್ರ ಭಯ ಆವರಿಸಿತು. ಮದುವೆಯಾದ ಐದು ವರ್ಷಗಳ ನಂತರವೂ ಹೆಂಡತಿಯಲ್ಲಿ ಇಷ್ಟು ಮಗ್ನನಾಗಿರುವುದು - ಅವಳನ್ನು ಪ್ರೀತಿಸುವ ಸಂಕೇತವೆನ್ನಿಸಿ ಒಂದು ವಿಲಕ್ಷಣ ಖುಷಿಯೂ ಉಂಟಾಯಿತು. ಎಷ್ಟಾದರೂ ಪ್ರೀತಿಸಿ, ಬಯಸಿ ಮದುವೆಯಾದವಳು.. ಅವಳೆದುರು ಬೇರೇನು ತಾನೇ ನೆನಪಾಗಲು ಸಾಧ್ಯ? ಹೀಗೆಲ್ಲಾ ಅನ್ನಿಸಿದಾಗ ಖುಷಿಯಿಂದ ಅಮೃತಭಾಯಿ ಪುಳಕಿತಗೊಂಡ. ಅರ್ಧ ಮೆಟ್ಟಿಲು ಏರುವಷ್ಟರಲ್ಲಿ ಕೂಲಿಯವನು ಅಟ್ಟಿಸಿಬಂದು ದುಡ್ಡುಕೊಟ್ಟಿಲ್ಲವೆಂದು ವಾಚಾಮಗೋಚರ ಬೈದ; "ಅರೇ ಮೋಟಾ, ಮಾಫ್ ಕರಜೋ, ಹುಂ ಭೂಲೀಗಯೋ..." ಎನ್ನುತ್ತಲೇ ಅಮೃತಭಾಯಿ ಅವನು ಕೇಳಿದಷ್ಟು ದುಡ್ಡು ಕೊಟ್ಟು ಓವರ್‌ಬ್ರಿಜ್‍ನ ಎಲ್ಲ ಮೆಟ್ಟಿಲುಗಳನ್ನೂ ಏರಿದ.
ಆದರೂ ಕೂಸನ್ನು ಕಂಡ ನೆನಪಾಗಲಿಲ್ಲ ಎಂಬ ಭಯ ಅವನನ್ನು ಕಾಡಿಯೇ ಕಾಡಿತು. ಯಾಕಾದರೂ ಸರಿ, ಪ್ಲಾಟ್‌ಫಾರ್ಮಿನ ಮೇಲೆ ಒಮ್ಮೆ ನೋಡುವುದು ಒಳ್ಳೆಯದೆನ್ನಿಸಿ ಮತ್ತೆ ಮೆಟ್ಟಲಿಳಿದು ಬಂದು ಅತ್ತಿತ್ತ ನಡೆದ. ಪ್ಲಾಟ್‌ಫಾರ್ಮಿನ ಅರ್ಧದಾರಿ ಕ್ರಮಿಸುವಷ್ಟರಲ್ಲಿ ಎದುರಿನ ಪ್ಲಾಟ್‌ಫಾರ್ಮಿಗೆ ಸೂರತ್ ಗಾಡಿ ಬಂತು. ಅದನ್ನು ಕಂಡವನೇ ಗಡಿಬಿಡಿಯಿಂದ ಓವರ್‌ಬ್ರಿಜ್ ಏರಿ ರೈಲಿನೆಡೆಗೆ ಓಡಿದ. ಈ ರೈಲು ತಪ್ಪಿದರೆ ಇನೂಂದೂವರೆ ಘಂಟೆ ಇಲ್ಲಿಯೇ ಇರಬೇಕಿತ್ತು.
ಭಾಗ ಮೂರು.
ಮೂರು ದಿನಗಳ ಹಿಂದೆ ಹಸ್‍ಮುಖ್‍ಭಾಯಿಗೆ ತನ್ನ ಕೋಣೆಯನ್ನು ಕೊಡುವುದಿಲ್ಲ ಎಂದು ಹೇಳಿದಾಗಿನಿಂದ ಮಕ್ಕಳು ಬಶೀರನ ಬಳಿ ಬರುವುದನ್ನು ನಿಲ್ಲಿಸಿದ್ದರು. ಅಕಸ್ಮಾತ್ ಈ ಕಡೆಗೆ ಬಂದ ಮಕ್ಕಳೂ ಅವನ ಜೊತೆ ದೇಶಾವರಿ ಮಾತನಾಡಿ ಯಾವ ಆಟವನ್ನೂ ಆಡದೇ ಹೊರಟುಬಿಡುತ್ತಿದ್ದರು. ಹಸ್‍ಮುಖ್‍ನ ಧಮ್ಕಿ ತನಗೆ ದೈಹಿಕವಾಗಿ ಘಾತ ಉಂಟುಮಾಡಬಹುದೆಂದು ಹೆದರಿದ್ದ ಬಶೀರನಿಗೆ ಇದು ಅನಿರೀಕ್ಷಿತವಾಗಿತ್ತು. ಮಕ್ಕಳ ಕಲ್ಯಾಣಕ್ಕೆ ಕೆಲಸ ಮಾಡುವ ಯೂನಿಸೆಫ್, ಕ್ರೈ, ದೀಪಾಲಯಗಳಂತಹ ಮಿಕ್ಕ ಸಂಸ್ಥೆಗಳಂತೆ ತನಗೂ ಸಾಕಷ್ಟು ಪ್ರಚಾರ ಸಿಕ್ಕಿದ್ದರೆ ಇಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲವೇನೋ ಅಂತ ಬಶೀರನಿಗೆ ಅನ್ನಿಸಿತು. ಹಾಗೆ ತನಗೆ ಹೆಸರಿದ್ದಿದ್ದರೆ, ತನ್ನನ್ನು ಮುಟ್ಟುವ ಮೊದಲು ಹಸ್‍ಮುಖ್ ನಾಲ್ಕಾರು ಬಾರಿ ಯೋಚಿಸುತ್ತಿದ್ದ. ’ಒಳ್ಳೆಯ ಕೆಲಸ ಮಾಡಿದರಷ್ಟೇ ಸಾಲದು; ಒಳ್ಳೆಯ ಕೆಲಸ ಮಾಡುತ್ತಿರುವಂತೆ ಕಾಣಲೂ ಬೇಕು’ ಅನ್ನುವ ಮಾತಿನರ್ಥ ಬಶೀರನಿಗೆ ಈಗೀಗ ಹೊಳೆಯಲಾರಂಭಿಸಿತು. ಹಸ್‌ಮುಖ್‍ನ ಆಟದಲ್ಲಿ ತಾನು ಸಣ್ಣ ಖಿಲಾಡಿಯಿರಬಹುದು. ಹಸ್‌ಮುಖ್‌ನಂಥವರನ್ನು ಎದುರಿಸದಿದ್ದರೆ ಮಕ್ಕಳ ಬದುಕಿನಲ್ಲಿ ಯಾವ ಮೂಲಭೂತ ಬದಲಾವಣೆಗಳನ್ನೂ ತಂದಂತಾಗುವುದಿಲ್ಲ. ಇಂಥಕೆಲಸದಿಂದ ಪ್ರಯೋಜನವಾದರೂ ಏನು? ಎಂಬಂಥ ಪ್ರಶ್ನೆಗಳು ಬಶೀರನನ್ನು ಕಾಡಲಾಗಿ ಅವನು ನಯಾ ಪಡಕಾರ್ ಪತ್ರಿಕೆಯ ವರದಿಗಾರನಿಗೆ ಫೋನ್ ಮಾಡಲು ನಿರ್ಧರಿಸಿದ. ಆಗ ಮಧ್ಯಾಹ್ನ ಸುಮಾರು ೧೨.೦೦ ಘಂಟೆ ಸಮಯ.
ಬಶೀರ್ ಹೀಗೆ ಯೋಚಿಸುತ್ತಿದ್ದಾಗಲೇ ಮೂರು ಮಕ್ಕಳು ಒಂದು ಸಣ್ಣ ಕೂಸನ್ನು ಹೊರಲಾರದೇ ಹೊತ್ತು ತನ್ನತ್ತ ಬರುತ್ತಿರುವುದು ಕಂಡಿತು. ಕೂಸು ಜೋರಾಗಿ ಅಳುತ್ತಿತ್ತು. ಮಕ್ಕಳು ಬಶೀರ್ ಬಳಿಗೆ ಬಂದವರೇ - ’ಭಾಯ್, ಈ ಬಾಬಾ ನಮಗೆ ಪ್ಲಾಟ್‍ಫಾರ್ಮಿನ ಮೇಲೆ ಸಿಕ್ಕಿತು. ಏನು ಮಾಡೋದೋ ತಿಳೀತಾಯಿಲ್ಲ. ಹಸ್‍ಮುಖ್ ಕಾಕಾನಿಗೆ ಒಪ್ಪಿಸೋಕ್ಕೆ ಖಂಡಿತವಾಗಿಯೂ ಮನಸ್ಸಾಗುತ್ತಿಲ್ಲ. ಪೋಲೀಸರ ಹತ್ತಿರ ಹೋದರೆ ನಮ್ಮ ಗತಿಯೇನಾಗುತ್ತೆ ಅನ್ನುವುದು ನಿಮಗೆ ಗೊತ್ತೇ ಇದೆ. ಹೀಗಾಗಿ ನಿಮಗೆ ಒಪ್ಪಿಸುತ್ತಿದ್ದೇವೆ. ದಯವಿಟ್ಟು ಕಾಕಾನ ಕೈ ಸೇರದಂತೆ, ನೋಡಿಕೊಳ್ಳಿ’ ಎಂದು ಹೇಳಿ ಮಗುವನ್ನು ಬಿಟ್ಟು ಹೊರಟುಹೋದರು.
ಏನುಮಾಡಬೇಕೋ ತೋರದೇ ಬಶೀರ್ ಒಂದು ಕ್ಷಣದ ಮಟ್ಟಿಗೆ ಕಂಬವಾದ. ಇಷ್ಟು ಪುಟ್ಟ ಮಗುವನ್ನು ತಾನೆಂದೂ ಹ್ಯಾಂಡಲ್ ಮಾಡಿಲ್ಲ. ಮಗುವಿನ್ನ ಬಟ್ಟೆ ನೋಡಿದರೆ ಮಿಕ್ಕ ಬೀದಿ ಮಕ್ಕಳಂತಿರಲಿಲ್ಲ. ಹೀಗಾಗಿ ಯಾರೋ ಬೇಕೆಂದೇ ಬಿಟ್ಟುಹೋಗಿದ್ದಾರೆ ಎಂದು ಹೇಳುವಂತಿರಲಿಲ್ಲ. ಬದಲಿಗೆ ಯಾರೋ ಮಗುವನ್ನು ಕಳೆದುಕೊಂಡಿರಬೇಕು. ಒಂದು ರೀತಿಯಿಂದ ಮಗೆ ಹಸ್‌ಮುಖ್‍ನ ಬಳಿ ಹೋಗದೇ ತನ್ನ ಬಳಿಗೆ ಬಂದದ್ದೇ ಒಳ್ಳೆಯದಾಯಿತು ಅನ್ನಿಸಿದರೂ ಈಗ ಮಗುವಿನ ಜೊತೆಗೆ ಮಾಡುವುದು ಏನು ಅನ್ನುವುದು ಅವನಿಗೆ ತಿಳಿಯಲಿಲ್ಲ.
ಈ ಪರಿಸ್ಥಿತಿಯಲ್ಲಿ ಅದನ್ನು ಪೋಲೀಸರಿಗೆ ಒಪ್ಪಿಸುವುದೇ ಉತ್ತಮವನ್ನಿಸಿ, ಮಗುವನ್ನು ಎತ್ತಿಕೊಂಡ. ಬೇರೊಂದು ಜೀವಿಯನ್ನು ತನ್ನ ದೇಹದ ಇಷ್ಟು ಸಮೀಪ ತಂದು ತಬ್ಬಿಕೊಂಡದ್ದು ಈಚಿನ ಸಮಯದಲ್ಲಿ ಇದೇ ಮೊದಲು ಎನ್ನಿಸುವಷ್ಟರಲ್ಲಿ ಮಗು ಬಶೀರನ ಕತ್ತಿನ ಸುತ್ತ ಕೈಬಳಸಿ ಅಳಲಾರಂಭಿಸಿತು. ಮಗುವಿಗೆ ಸಮಾಧಾನ ಮಾಡಲೆತ್ನಿಸುತ್ತ ಬಶೀರ್, ನಿಧಾನವಾಗಿ ಮಗುವಿನ ಜೊತೆಗೆ ಆಡಲಾರಂಭಿಸಿದ.
ಒಂದು ಕ್ಷಣದ ಮಟ್ಟಿಗೆ ಬಶೀರನಿಗೆ ಇದು ಹಸ್‍ಮುಖ್‍ನ ಪಿತೂರಿಯಿರಬಹುದೇ ಎನ್ನುವ ಅನುಮಾನವೂ ಬಂತು. ಈ ಯುದ್ಧದಲ್ಲಿ ಪಾಪದ ಮಕ್ಕಳನ್ನು ಉಪಯೋಗಿಸಿರಬಹುದಾದ ಅವನ ದುಷ್ಟತನದ ಬಗ್ಗೆ ಹೇಸಿಗೆಯೂ ಉಂಟಾಯಿತು. ಆದರೆ, ಅಕಸ್ಮಾತ್, ಮಕ್ಕಳು ಹಸ್‍ಮುಖ್‍ನ ಪ್ರಮೇಯವಿಲ್ಲದೆಯೇ ತನ್ನ ಬಳಿಗೆ ಬಂದಿದ್ದರೆ? ಯಾವುದಕ್ಕೂ ಸರಿ, ಈ ಮಗುವನ್ನು ಠಾಣೆಗೆ ಬಿಟ್ಟು ಬರುವುದು ಒಳ್ಳೆಯದೆನ್ನಿಸಿ ಕೋಣೆಯ ಬೀಗ ಹಾಕುವಷ್ಟರಲ್ಲಿ ದೂರದಿಂದ ಬರುತ್ತಿದ್ದ ಆರ್.ಪಿ.ಎಫ್‌ನ ಎಸ್.ಐ. ಚೌಧುರಿ ಹಾಗೂ ಅವನ ಹಿಂದ ಐದಡಿ ದೂರದಲ್ಲಿ ಬರುತ್ತಿದ್ದ ಹಸ್‍ಮುಖ್ ಕಾಣಿಸಿದಂತಾಗಿ ಬಶೀರ್ ಮಗುವನ್ನೂ ಹೊತ್ತು ವಿರುದ್ಧದಿಕ್ಕಿನಲ್ಲಿ ಓಡತೊಡಗಿದ. ಎಲ್ಲ ವಿಧದಿಂದಲೂ ಮಗುವನ್ನು ರೈಲ್ವೇ ಪೋಲೀಸರಿಗೆ ಬದಲು ಸ್ಥಳೀಯ ಠಾಣೆಗೆ ಒಪ್ಪಿಸುವುದು ಒಳ್ಳೆಯದು ಎಂದು ಯೋಚಿಸುತ್ತಿರುವಾಗಲೇ ಚೌಧುರಿ ಇವನನ್ನು ಅಟ್ಟಿಸಿಕೊಂಡು ಬರಲಾರಂಭಿಸಿದ. ಓಡುತ್ತಿದ್ದ ಬಷೀರ್‌ಗೂ ಚೌಧುರಿಗೂ ಅಂತರ ಕಡಿಮೆಯಾಗುತ್ತಿದ್ದಂತೆ, ಬಶೀರ್ ಸುಸ್ತಾಗಿ ನಿಂತುಬಿಟ್ಟ
೧೯೯೭.
Noise and Clutter
6 years ago
No comments:
Post a Comment