June 14, 2008

ಹೋಗುವುದೆಲ್ಲಿಗೆ?

ಪೋಲೀಸ್ ಠಾಣೆಯಲ್ಲಿ ಕಂಡ ಆ ಮಗು ವಿಶುವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ತಕ್ಷಣಕ್ಕೆ ಅದು ಹೆಣ್ಣೋ ಗಂಡೋ ತಿಳಿಯಲಿಲ್ಲವಾದರೂ, ಸಮಯ ಸರಿದಂತೆ, ಈ ರೌದ್ರ ವಾತಾವರಣ ಉದ್ಭವವಾದದ್ದೇ ಅದು ಹೆಣ್ಣಾಗಿದ್ದರಿಂದ ಎಂದು ನಂತರ ತಿಳಿಯಿತು. ಜೀವನ ವಿಶು ಅಂದುಕೊಂಡಷ್ಟು ಸರಳವಾಗಿದ್ದಿದ್ದರೆ, ಈ ಎಲ್ಲಕ್ಕೂ ತನ್ನ ಬಳಿ ತತ್‌ಕ್ಷಣ ಒದಗಿಸಬಹುದಾದ ದಿಢೀರ್ ಉತ್ತರಗಳಿದ್ದುವು. ಆದರೆ ದುರಾದೃಷ್ಟವಶಾತ್ ಜೀವನ ಅಷ್ಟು ಸರಳವಾಗಿರಲಿಲ್ಲ. ಒಂದು ವಿಧವಾಗಿ ಅದೂ ಒಳ್ಳೆಯದೇ ಅನ್ನಿ. ಹೀಗೆ ದಿಢೀರ್ ನಿರ್ಧಾರಗಳನ್ನು ಕೈಗೊಂಡು ಆರಾಮವಾಗಿ ಆ ಬಗ್ಗೆ ಪಶ್ಚಾತ್ತಾಪ ಪಡುವ ಪ್ರಕ್ರಿಯೆಯನ್ನಾದರೂ ತಪ್ಪಿಸಬಹುದು.

ಸುಮಾರು ಎರಡು ಮೂರು ವರ್ಷಗಳಿಂದ ಈ ವಿಚಾರ ಅವರ ತಲೆಯಲ್ಲಿ ಸುಳಿದಾಡುತ್ತಿತ್ತು. ಮದುವೆಯಾಗಿ ಆರೇಳು ವರ್ಷಗಳು ಕಳೆದರೂ ನಯನಾ ಬಸುರಾಗದೇ ಇದ್ದಾಗ ಎಷ್ಟೋ ಬಾರಿ ಈ ಬಗ್ಗೆ ಅವರುಗಳು ಆಲೋಚಿಸಿದ್ದುಂಟು. ಮೊದಮೊದಲಿಗೆ ಅವರುಗಳು ಮಗುವೇ ಬೇಡವೆಂದು ಅಂದುಕೊಂಡದ್ದು ನಿಜ. ನಂತರ ಯಾಕೋ ಆಗಲಿಲ್ಲ.
ಬಹಳಷ್ಟು ಮಂದಿ ಡಾಕ್ಟರ ಬಳಿ ತೋರಿಸಿಕೊಳ್ಳಿ ಎಂದು ಉಚಿತ ಸಲಹೆ ಕೊಟ್ಟರಾದರೂ ಇವರುಗಳು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಎಷ್ಟೋ ಅನಾಥ ಮಕ್ಕಳು ಬೀದಿ ಬೀದಿ ಸುತ್ತುತ್ತಿರುವಾಗ ಅವುಗಳಲ್ಲಿ ಒಂದನ್ನು ತಮ್ಮದಾಗಿಸಿಕೊಳ್ಳುವ ವಿಚಾರವಿದ್ದದ್ದರಿಂದ ಅವರು ಹೀಗೆ ಮಾಡಿರಲಿಕ್ಕೂ ಸಾಕು. ಆದರೆ ಈಗ ಇಬ್ಬರೂ ನಲವತ್ತರ ಹೊಸ್ತಿಲಲ್ಲಿ ನಿಂತಿದ್ದರಿಂದ, ಈ ವಿಷಯವಾಗಿ ಯಾವುದಾದರೊಂದು ನಿರ್ಧಾರವನ್ನ ತುರ್ತಾಗಿ ತೆಗೆದುಕೊಳ್ಳಬೇಕಿತ್ತು. ಸುಮಾರು ದಿನಗಳಿಂದ ಇದನ್ನು ಇಬ್ಬರೂ ಚರ್ಚಿಸುತ್ತಿದ್ದರಾದರೂ ಈ ಬಗ್ಗೆ ಯಾವೊಂದು ನಿಲುವನ್ನ ತೆಗೆದುಕೊಳ್ಳುವ ಧೈರ್ಯವನ್ನ ಮಾತ್ರ ಇಬ್ಬರೂ ಮಾಡಿರಲಿಲ್ಲ. ಇದಕ್ಕೆ ಕಾರಣವಿಲ್ಲದಿರಲಿಲ್ಲ. ಯಾಕೆಂದರೆ, ಯಾವುದಾದರೊಂದು ನಿರ್ಧಾರ ತಗೆದುಕೊಂಡ ಮರುಕ್ಷಣವೇ ಅನುಮಾನವೆಂಬ ಪಿಶಾಚಿ ಅವರಿಬ್ಬರನ್ನೂ ಆವರಿಸಿ ಕಬಳಿಸಿಬಿಡುತ್ತಿತ್ತು.

ಬಹುಶಃ ಅವರಿಬ್ಬರಿಗೆ ಇಬ್ಬರೇ ಇದ್ದು ಅಭ್ಯಾಸವಾದದ್ದರಿಂದ ಬೇರೊಂದು ಜೀವ ಈ ಹಂತದಲ್ಲಿ ತಮ್ಮ ನಡುವೆ ಸೇರಿಕೊಳ್ಳುವುದು ಸ್ವಲ್ಪ ಕಷ್ಟವನ್ನಿಸಿರಬಹುದು. ಆಗ ಜೀವನದ ಗತಿಯೇ ಬದಲಾಗಿ ಬಿಡುತ್ತಿತ್ತಲ್ಲ? ಆದರೆ, ಮಗು ಎಷ್ಟಾದರೂ ಮಗು ತಾನೇ ಎಂಬಂಧ ವಿಚಾರ ಬಂದು, ಯಾವ ನಿರ್ಧಾರಕ್ಕೂ ಬರಲಾರದೇ ಇಬ್ಬರೂ ಒದ್ದಾಡಿಹೋಗಿದ್ದರು. ಈಗ ಸ್ಟೇಷನ್ನಿನಲ್ಲಿ ಈ ಮುದ್ದಾದ ಮಗುವನ್ನು ಕಂಡಾಗ ವಿಶುವಿಗೆ ತಡೆಯಲಾಗಲಿಲ್ಲ. ಜಗತ್ತಿನರಿವು ಇಲ್ಲದೇ ತನ್ನ ಭವಷ್ಯದ ಬಗ್ಗೆ ಏನೊಂದೂ ಕಾಳಜಿಯಿಲ್ಲದೇ, ಹಾಯಾಗಿ ಮಲಗಿದ್ದ ಈ ಮಗುವನ್ನ ಕಂಡರೆ ಯಾರಿಗಾದರೂ ಎತ್ತಿಕೊಳ್ಳಬೇಕೆನ್ನಿಸುವುದು ಸಹಜ. ವಿಶುವಿಗೂ ಹುಟ್ಟಿ ಒಂದೆರಡೇ ದಿನಗಳಾಗಿದ್ದ ಈ ಪುಟ್ಟ ಮಗುವನ್ನು ತನ್ನ ಕೈತುಂಬಾ ತುಂಬಿಸಿಕೊಳ್ಳಬೇಕೆನ್ನಿಸಿದ್ದು ಸಹಜವೇ ಆಗಿತ್ತು.
ಆದರೆ ಈಗ ಠಾಣೆಯಲ್ಲಿ ಮಾತನಾಡುವ ಧೈರ್ಯ ವಿಶುವಿಗೆ ಬರಲಿಲ್ಲ. ಎಷ್ಟಾದರೂ ತನ್ನ ಪಾತ್ರ ಅಲ್ಲಿನ ಆಗುಹೋಗುಗಳನ್ನು ನೋಡುವುದಕ್ಕಷ್ಟೇ ಸೀಮಿತವಾಗಿತ್ತು.

ಠಾಣೆಯ ವಾತಾವರಣ ಉಸಿರುಗಟ್ಟಿಸುತ್ತಿತ್ತು. ಅಲ್ಲಿನ ಬೆಳಕು ತೀರಾ ಮಂದವಾಗಿತ್ತು ಹಾಗೂ ಭಯದ ವಾತಾವರಣ ಇಡೀ ಜಾಗವನ್ನ ಆಕ್ರಮಿಸಿಬಿಟ್ಟಿತ್ತು. ಬಹುಶಃ, ಪೋಲೀಸು ವರ್ದಿಯ ಶಕ್ತಿ ವಿಶುವನ್ನು ಕುಗ್ಗಿಸಿರಲಿಕ್ಕೆ ಸಾಕು. ಮನೆಯಲ್ಲಿ ಕಳ್ಳತನ ಆಗಿ, ಠಾಣೆಗೆ ಪ್ರತಿವಾರ, ತಾನು ಎಡೆಬಿಡದೆ ಬರಲು ಪ್ರಾರಂಭಿಸಿದಾಗಿನಿಂದಲೂ ವಿಶುವಿಗೆ ಈ ಅನುಭವವಾಗಿತ್ತು.
ವಿಶು ಮತ್ತು ನಯನಾ ಇಬ್ಬರೂ ಕೆಲಸ ಮಾಡುತ್ತಿದ್ದರಾದ್ದರಿಂದ ಮನೆಗೆ ಯಾವಾಗಲೂ ಬೀಗವೇ ಭೂಷಣವಾಗಿರುತ್ತಿತ್ತು. ಆದರೆ, ಆಶ್ಚರ್ಯವಶಾತ್ ಕಳ್ಳತನ ಭಾನುವಾರದಂದು, ತಾವಿಬ್ಬರೂ ಬಂಧುಗಳ ಮನೆಯ ಮದುವೆಗೆಂದು ಹೋಗಿದ್ದಾಗ ಆಯಿತು! ಅವರುಗಳು ಮನೆಗೆ ಬಂದು ನೋಡಿದಾಗ, ಬೀಗವೇ ಕಾಣಲಿಲ್ಲ. ಒಳಬಂದು ನೋಡಿದರೆ ಮನೆಯ ಟಿ.ವಿ, ವಿಸಿ‌ಆರ್, ಮತ್ತು ಮ್ಯೂಸಿಕ್ ಸಿಸ್ಟಂ ಜತೆಗೆ ಹಲವು ಸೀಡಿಗಳು, ಕೆಸೆಟ್ಟುಗಳು - ಎಲ್ಲವೂ ಕಳುವಾಗಿತ್ತು. ಅದನ್ನು ಕಂಡು ಇಬ್ಬರಿಗೂ ಆಘಾತವಾದದ್ದು ನಿಜ.

ವಾರಂವಾರ ಬರುತ್ತಿದ್ದುದರಿಂದ ಠಾಣೆಯ ಪರಿಸರ ವಿಶುವಿಗೆ ಹೊಸತಾಗಿರಲಿಲ್ಲವಾದರೂ, ಪ್ರತಿಬಾರಿಯೂ ವಿಶುವಿಗೆ ಹೊಸತೇನಾದರೂ ಅನುಭವವಂತೂ ಆಗುತ್ತಿತ್ತು.
ಠಾಣೆದಾರ ಕೃಷ್ಣ ಯಾದವ್‌ನ ದೃಷ್ಟಿಯ ಕೃಪಾಕಟಾಕ್ಷಕ್ಕಾಗಿ ಕಾಯುತ್ತಿರುವಾಗ ಅಲ್ಲೇ ಒಂದು ಕಥೆ ಪದರ ಪದರವಾಗಿ ಬಿಚ್ಚಿಕೊಳ್ಳುತ್ತಾ ಹೋಯಿತು. ಅಲ್ಲಿನ ಮಾತುಕತೆ ಮುಂದುವರೆದಂತೆ - ಎಲ್ಲರ ಹಾಗೆ ತಾನೂ ಆ ವಾದವಿವಾದಗಳಲ್ಲಿ ಮುಳುಗಬೇಕೆಂದು ವಿಶುವಿಗೆ ಅನ್ನಿಸಿದರೂ, ಹಾಗೆ ಮಾಡಲಾಗಲಿಲ್ಲ. ತನ್ನ ಸುತ್ತಮುತ್ತ ಇದ್ದ ಕೊಳಗೇರಿಯ ವ್ಯಕ್ತಿಗಳ ನಡುವೆ ತಾನೊಬ್ಬನೇ ಸಂಭಾವಿತನಂತನ್ನಿಸಿ - ಈ ವಾತುಕತೆಗಳಲ್ಲಿ ತನಗೆ ಏನೂ ಪಾತ್ರವಿಲ್ಲವಂದು ವಿಶು ನಿರ್ಧರಿಸಿಬಿಟ್ಟ.

ವಿಶು ಸ್ಟೇಷನ್ ಪ್ರವೇಶಿಸುತ್ತಿದ್ದಂತೆ, ಅಲ್ಲಿ ಮಗುವಿನ ವಿಷಯವಾಗಿ ಜೋರಾಗಿ ವಾದವಿವಾದ ನಡೆಯುತ್ತಿದ್ದುದನ್ನು ಕಂಡ. ಅಲ್ಲಿನ ಮಂದ ಬೆಳಕಿಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುವಂತೆ ಮಾತುಕತೆಯ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೂ ವಿಶುವಿಗೆ ಸಮಯ ಹಿಡಿಯಿತು. ಕಂಗಳು, ಬೆಳಕಿಗೆ ಹೊಂದಿಕೊಳ್ಳುತ್ತಿದ್ದಂತೆ, ದುಪ್ಪಟಿಯ ಮೇಲೆ ಮಲಗಿಸಿದ್ದ ಪುಟ್ಟ ಮಗುವನ್ನು ಅವನು ಕಂಡ. ಠಾಣೆದಾರನ ಸುತ್ತಮುತ್ತ ಕೆಲ ಜನ ನಿಂತಿರುವುದೂ ಅವನಿಗೆ ಕಾಣಿಸಿತು. ಅವರೆಲ್ಲ ಸಮೀಪದ ಕೊಳೆಗೇರಿಯಿಂದ ಬಂದಿದ್ದರಂತೆ. ಎಲ್ಲರೂ ಎತ್ತರದ ಧ್ವನಿಯಲ್ಲಿ ಹೊಡೆದುಕೊಳ್ಳುತ್ತಿದ್ದುದರಿಂದ ಅವರುಗಳ ಮಾತಿನ ವಿಷಯ ಅರ್ಥಮಾಡಿಕೊಳ್ಳುವುದು ಕಷ್ಟವಿತ್ತು. ಆದರೆ, ಅಲ್ಲಿನ ವಾತಾವರಣಕ್ಕೆ, ಬೆಳಕಿಗೆ ಹೊಂದಿಕೊಳ್ಳುತ್ತಿದ್ದಂತೆ, ವಿಶುವಿಗೆ ಅಲ್ಲಿನ ಚರ್ಚೆಯ ಎಳೆಗಳೂ ದೊರೆಯಲಾರಂಭವಾಯಿತು.

ವಿಶುವಿಗೆ ಸ್ವಲ್ಪಕಾಲದಿಂದ ಕೃಷ್ಣ ಯಾದವ್‌ನ ಪರಿಚಯವಿತ್ತು. ತಮ್ಮ ಮನೆಯಲ್ಲಿ ಕಳ್ಳತನವಾದ ದಿನ ಆತ ಠಾಣೆದಾರನಾಗಿರಲಿಲ್ಲವಾದರೂ ಆ ನಂತರ ಆತ ಚೆನ್ನಾಗಿಯೇ ಪರಿಚಯವಾಗಿದ್ದ. ತಮ್ಮ ಮನೆಯಲ್ಲಿ ಕಳ್ಳತನವಾದಾಗ ಠಾಣೆದಾರನಾಗಿದ್ದದ್ದು ಕೃಷ್ಣಾರೆಡ್ಡಿಯೆಂಬ ವ್ಯಕ್ತಿ. ವಿಶುವಿಗೆ ಕಳ್ಳತನವಾದ ದಿನ ಇನ್ನೂ ಚೆನ್ನಾಗಿ ನೆನಪಿದೆ. ಅಂದು ತಮಗೆ ವಿಷಯ ತಿಳಿದಾಕ್ಷಣ - ಒಳ್ಳೆಯ ಪ್ರಜೆಯ ಹಾಗೆ, ಕೂಡಲೇ ಠಾಣೆಗೆ ಹೋಗಿ ಎಫ್.ಐ.ಆರ್. ದಾಖಲು ಮಾಡಿದ್ದ. ಕಳುವಾದ ಸಕಲ ವಸ್ತುಗಳ ವಿವರಗಳನ್ನೂ ಅದರಲ್ಲಿ ಬರೆದು ಕೊಟ್ಟಿದ್ದ. ಆದರೆ ಕಳ್ಳತನವಾದ ಒಂದು ವಾರದೊಳಗಾಗಿಯೇ, ಕೃಷ್ಣಾರೆಡ್ಡಿಗೆ ಕಂಟ್ರೋಲ್ ರೂಮಿಗೆ ವರ್ಗ ಮಾಡಿಬಿಟ್ಟಿದ್ದರು. ಅಂದು ಠಾಣೆಯಿಡೀ ಶೋಕದಲ್ಲಿ ಮುಳುಗಿದ್ದಂತಿತ್ತು. "ಇಂಥ "ಎಪಿಸೆಂಟ್ ಆಪೀಸರ್‍ಸ್‌ನ” ಠಾಣೆಯಿಂದ ವರ್ಗ ಮಾಡಲು ಆ ಕಟುಕರಿಗೆ ಮನಸ್ಸಾದರೂ ಹೇಗೆ ಬಂತು? ಎಷ್ಟಾದರೂ, ವಿಶುವಿನ ಕೇಸನ್ನು ಚಿಟಿಕೆ ಬಡಿಯುವುದರಲ್ಲಿ ಬಗೆಹರಿಸುವ ಛಾತಿ ಇದ್ದ ಏಕೈಕ ಆಪೀಸರನ್ನ ಕಂಟ್ರೋಲ್ ರೂಮಿನಲ್ಲಿ ಕೂತು ವಾಕಿಟಾಕಿಯಲ್ಲಿ ನಡೆಯೋ ಮಾತುಕತೆ ಕೇಳೆಂದು ಹೇಳಿದರೆ ಅನ್ಯಾಯವಲ್ಲದೇ ಮತ್ತೇನು? ಸಾಲದ್ದಕ್ಕೆ ಇಂಥ ಪೋಸ್ಟಿಂಗ್ ಸಿಗಬಾರದೆಂದು ಮೊದಲೇ ಮೇಲಿನಧಿಕಾರಿಗಳನ್ನು ನೋಡಿಕೊಂಡು ತಯಾರಾಗಿದ್ದರೂ ಹೀಗೆ ಮಾಡಿದ್ದಾರಲ್ಲಾ ಬೇಯಿಮಾನಿಗಳು!!"ಹೀಗಲ್ಲಾ ಕೃಷ್ಣಾರೆಡ್ಡಿ ಮರುಗಿದ್ದರೂ ಅದರಿಂದ ವಿಶುವಿನ ಕೇಸಿಗೇನೂ ಪುಡಿಗಾಸಿನ ಸಹಾಯವಾಗಿರಲಿಲ್ಲ.

ಈಗ ಈ ಘಟನೆಯಾಗಿ ಆರು ತಿಂಗಳುಗಳು ಕಳೆಯುತ್ತಾ ಬಂದಿರಲು, ಈ ಬಗ್ಗೆ ಚಟಾಕಿ ಹಾರಸಿ ನಗುವ ಮನಸ್ಥಿತಿಗೆ ವಿಶು ನಯನಾ ಇಬ್ಬರೂ ತಲುಪಿಬಿಟ್ಟಿದ್ದರು. ಆಶ್ಚರ್ಯದ ವಿಷಯವೆಂದರೆ, ಅಂದಿನ ಕಳ್ಳ ಬರೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾತ್ರ ಒಂದು ಚಾದರ, ದಿಂಬಿನ ಚೀಲದಲ್ಲಿ ಸುತ್ತಿ ಒಯ್ದಿದ್ದ(ಳು). ಅವರುಗಳು ಅಂದು ಹೊರಟಿದ್ದ ಮದುವೆಗೆಂದು ನಯನಾ ಬ್ಯಾಂಕಿನ ಲಾಕರ್‌ನಿಂದ (ಅಲ್ಲಿ ಆ ಕ್ಷಣಕ್ಕೆ ಯಾವ ಒಡವೆಗಳನ್ನು ಮದುವೆಗೆ ಧರಿಸಬೇಕೆಂದು ನಿರ್ಧರಿಸಲಾಗದ್ದರಿಂದ) ಸಕಲ ಒಡವೆಗಳನ್ನೂ ತಂದುಕೊಂಡಿದ್ದಳು. ಸುಮಾರಷ್ಟು ಒಡವೆಗಳು ಕಪಾಟಿನಲ್ಲಿ ಬೀಗವೂ ಇಲ್ಲದೇ ಹಾಗೇ ಬಿದ್ದುಕೊಂಡಿದ್ದುವು. ಕಳ್ಳರಿಗೆ ಆ ಬಗ್ಗೆ ಯಾವೊಂದೂ ಆಸಕ್ತಿಯುಂಟಾಗಲಿಲ್ಲವೆಂಬುದು ವಿಶುವಿಗೆ ಮಹತ್ವದ ವಿಷಯ ಎನ್ನಿಸಿತ್ತು. ಆಫೀಸಿನಲ್ಲಿ ಮೂಲಶಕ್ತಿ, ಸ್ಪೆಷಲೈಸೇಷನ್ ವಿಷಯದ ಚರ್ಚೆ ಬಂದಾಗಲೆಲ್ಲಾ, ತಪ್ಪದೇ ಅವನು ಈ ವಿಷಯವನ್ನ ಹೇಳುತ್ತಿದ್ದ.

ಹೊಸ ಠಾಣೆದಾರ ಕೃಷ್ಣಯಾದವ್ ಯುವಕ, ಹಾಗೂ ಒಳ್ಳೆಯ ಮೂಡಿನಲ್ಲಿದ್ದಾಗ ಸ್ನೇಹಜೀವಿ. ಕಳುವಾದ ದಿನ ಮಹಜರ್, ಬೆರಳಚ್ಚು ಸೇಕರಣೆ, ನಾಯಿಗಳ ಶೋಧ ಹಾಗೂ ಇತರೆ ಕಾರ್ಯಕಲಾಪಗಳೆಲ್ಲ ನಡೆಯುವವರೆಗೂ ತಾವಿಬ್ಬರೂ ಶಾಂತಿಯಿಂದ ಹೊರಗೆ ಕಾದಿದ್ದ ವಿಷಯ ಕೇಳಿ ಇಬ್ಬರನ್ನೂ ಬಹಳ ಮೆಚ್ಚಿಕೊಂಡಿದ್ದ. ತನ್ನ ಫಿರ್ಯಾದಿನಲ್ಲಿ ವಿಶು ಕೂಡಾ ಕಳುವಾದ ವಸ್ತುಗಳ ಗುರ್ತುಗಳು, ಅವುಗಳ ನಂಬರುಗಳು ಎಲ್ಲವನ್ನೂ ತನ್ನ ಬಳಿಯಿದ್ದ ರಸೀದು, ವಾರಂಟಿ ಚೀಟಿಗಳ ಆಧಾರದ ಮೇಲೆ ಶಿಸ್ತಿನಿಂದ ಬರೆದು ಕೊಟ್ಟಿದ್ದ. ಈ ಘಟನೆ ನಡೆದಾಗಿನಿಂದಲೂ ಪ್ರತಿ ಶನಿವಾರ ಠಾಣೆಗೆ ಹಾಜರಿ ಹಾಕಿ ಕೇಸಿನ ಸ್ಧಿತಿಗತಿಯನ್ನ ವಿಚಾರಿಸಿ ಬರುತ್ತಿದ್ದ. ಈ ಆರು ತಿಂಗಳುಗಳಲ್ಲಿ ಕಳೆದುಕೊಂಡ ಪ್ರತಿ ವಸ್ತುವಿನ ಜಾಗದಲ್ಲಿ ಈಚಿನ ಮಾಡೆಲ್‌ನ ಹೊಸ ಪರಿಕರಗಳನ್ನು ತಂದುಕೊಂಡಿದ್ದರಾದರೂ, ವಾರಕ್ಕೊಮ್ಮೆ ಠಾಣೆಗೆ ಹೋಗುವ ರಿವಾಜನ್ನು ಮಾತ್ರ ವಿಶುವಿಗೆ ತಪ್ಪಿಸಲಾಗಲಿಲ್ಲ. ಅದು ಈಗ ಪ್ರತಿ ಶನಿವಾರದ ಚಟದಂತಾಗಿಬಿಟ್ಟಿತ್ತು.

ಠಾಣೆಯಲ್ಲಿ ಇಬ್ಬರು ಮೂವರು ಕೃಷ್ಣ ಯಾದವ್ ಜತೆ ವಾದವಿವಾದ ಮಾಡುತ್ತಾ ನಿಂತಿದ್ದರು. ಅವರ ಮಧ್ಯೆ ಒಬ್ಬ ಹೆಂಗಸೂ ಇದ್ದಳು. ಸಮುದ್ರದಲ್ಲಿ ಮಗುವನ್ನ ತೇಲಿಬಿಟ್ಟು ಕುಂತಿಯ ಹಾಗೆ ಹೊರಟುಬಿಡುತ್ತಿದ್ದ ಆಕೆಯನ್ನ ರಾತ್ರೆಯ ಬೀಟ್ ಕಾನ್ಸ್‌ಟೇಬಲ್ ಆಕೆಯನ್ನ ಹಿಡಿದಿದ್ದ. ಈಗ ಆ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಸರಿತಿದ್ದುವ ವಿಚಾರವನ್ನ ಎಲ್ಲರೂ ಚರ್ಚಿಸುತ್ತಿದ್ದರು. ಆ ಹೆಣ್ಣು ಮಗುವನ್ನ ನೀರಿಗೆ ಹಾಗಿ ಹೋಗಲೆತ್ನಸಿದ್ದನ್ನು ಅಲ್ಲಗಳೆಯಲಿಲ್ಲ. ಬದಲಿಗೆ ಗಂಡ ಕುಡುಕನಾಗಿದ್ದುದರಿಂದ ತನಗೆ ಬೇರೆ ಮಾರ್ಗವಿರಲಿಲ್ಲವೆಂದು ಸಮಜಾಯಿಷಿ ಹೇಳಿಕೊಳ್ಳಲು ಯತ್ನಿಸುತ್ತಿದ್ದಳು. ಕುಡುಕ ಗಂಡ ಮಗು ಬೆಳೆದಂತೆ ಅದನ್ನ ಹೊಡೆದು, ಬಡಿದು ಸೂಳೆಗಾರಿಕೆಗೆ ತಳ್ಳುವುದರಲ್ಲಿ ಅನುಮಾನವಿದ್ದಿರಲಿಲ್ಲವಾದ್ದರಿಂದ - ಮಗುವಿಗೆ ಅಂಥ ಕರಾಳ ಭವಿಷ್ಯ ನೀಡುವುದಕ್ಕಿಂತ - ಈಗಲೇ ಮಗುವನ್ನ ಮುಗಿಸಿ ನೋವನ್ನ ಕಮ್ಮಿ ಮಾಡುವುದೇ ತನ್ನ ಉದ್ದೇಶವಾಗಿತ್ತೆಂದು ಆಕೆ ಹೇಳುತ್ತಿದ್ದಳು.

ಅವರುಗಳ ಮಾತು ಕೇಳಿ ವಿಶುವಿಗೆ ಅಪಘಾತವಾದದ್ದು ನಿಜ. ಆದರೆ ಕೃಷ್ಣಯಾದವ್‌ಗೆ ಇದ್ಯಾವುದೂ ತಟ್ಟಿದಂತಿರಲಿಲ್ಲ. ಕೃಷ್ಣಯಾದವ್‌ನನ್ನೊಳಗೊಂಡು ಎಲ್ಲರೂ ಕೆಟ್ಟ ಭಾಷೆಯ ಕೆಟ್ಟ ಬೈಗುಳಗಳನ್ನು ಉಪಯೋಗಿಸುತ್ತಾ (ಪೋಲೀಸ್ ಅಧಿಕಾರಿಯಾದ ಮೇಲೆ ಖೈದಿಗಳ ಭಾಷಯನ್ನೇ ಮಾತಾಡಬೇಕಾಗುತ್ತೆ, ಅಂತ ಒಮ್ಮೆ ಕೃಷ್ಣಯಾದವ್ ಹೇಳಿದ್ದು ವಿಶುವಿಗೆ ನೆನಪಿತ್ತು) ಅವರುಗಳು ಸಂಭಾಷಣೆಯನ್ನ ಮುಂದುವರೆಸಿದ್ದರು. ಮಾತು ಮುಂದುವರೆಸುವ ಮುನ್ನ ಕೃಷ್ಣಯಾದವ್ ಯಾರದಾದರೂ ಕಪಾಳಕ್ಕೆ ಬಾರಿಸಿಯೇ ಮುಂದುವರೆಯುತ್ತಿದ್ದುದು. ಹೀಗಾಗಿ, ಮೊದಲು ಆ ಹೆಂಗಸಿನ ಕಪಾಳಕ್ಕೆ ಹಾಕಿ ಮಾತು ಮುಂದುವರೆಸಿದ - "ಮಕ್ಕಳನ್ನು ಸಾಯಿಸೋದೇ ಆದರೆ ಯಾಕೆ ಹುಟ್ಟಿಸ್ತೀರಿ?" ಕೃಷ್ಣಯಾದವ್ ಕೂಗಾಡಿದ. ಆಹೆಂಗಸೂ ಮಾತಿನಲ್ಲಿ ಕಡಿಮೆಯೇನೂ ಇರಲಿಲ್ಲ. "ಯಾಕೇಂದ್ರೆ ನನ್ನ ಮೈಯ್ಯಿ ನನ್ನ ಕೈಯಲ್ಲಿಲ್ಲ. ಅದೂ ಅಲ್ದೇ ಗಂಡುಮಗು ಆಗಬೈದೂಂತ ಅಂದ್ಕಂಡಿದ್ದೆ.” ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ಎರಡು ಮಾತುಗಳನ್ನ ಅವಳು ಹೇಳಿದ್ದಳು."ಸಾಲದ್ಕೆ ಈ ಸೂಳೆಮಗನ ನರಳ್ನಾಗೆ ಬಳೆದ್ರೆ ಅದರ ಕೈಲಿ ಖಂಡಿತ ಸೂಳೆಗರಿಕೆ ಮಾಡಿಸ್ತಾನೆ. ಅದಕ್ಕೆ ಬದಲು ಅವಳು ಈಗಲೇ ಸಾಯೋದು ವಾಸಿ."

ಈಗ ಅವಳ ಕಪಾಳಕ್ಕೆ ಬಾರಿಸುವ ಸರದಿ ಅವಳ ಗಂಡನದ್ದಾಯ್ತು. "ನನ್ನನ್ನ ಸೂಳೇಮಗ ಅನ್ನೋಷ್ಟು ಕೊಬ್ಬು ಬಂತೇನೇ ಲೌಡಿ. ಸರ್ ನಾ ಹೇಳ್ತೀವ್ನಿ ಈ ಮಗು ನನ್ನದಲ್ವೇ ಅಲ್ಲ. ಇವ್ಳು ಯಾರ್‍ಯಾರ ಜತೆ ಮನೀಕ್ಕಂಬಂದವ್ಳೋ ಯಾರಿಗ್ ಗೊತ್ತು? ಅದ್ಕೇ ಮಗೂನ ಸಾಯಿಸ್ಲಿಕ್ ಒಂಟವ್ಳೆ. ಮಗು ಎಣ್ಣಾದ್ರೇನು ನಾನು ಸಾಕಿ, ಬೆಳಸ್ತೀನಿ." ಗಂಡ ಘರ್ಜಿಸಿದ. ಈಗ ಅವನ ಕಪಾಳಕ್ಕೆ ಬಾರಿಸುವ ಸರದಿ ಕೃಷ್ಣಯಾದವ್‌ನದ್ದಾಯಿತು. "ಮುಚ್ಚೋ ಮಗನೇ - ಯಾವಾಗ ನೂಡಿದ್ರೂ ಕುಡಕೊಂಡು ಯಾವಳ ಜತೆ ಮಲಗಿದ್ದೀಯೋ ತಿಳೀದೇ ಬಿದ್ದಿರ್ತೀಯ, ಹಣ್‌ಮಗೂನ ಸಾಕ್ತೀಯಾ? ಮುಚ್ಕಂಡು ಮನೆಕಡೆ ಹೋಗು, ನಾವು ಈ ಮಗೂನ ಯಾವುದಾದರೂ ಅನಾಥಾಶ್ರಮಕ್ಕೆ ಕಳಿಸ್ತೀವಿ. ಅಲ್ಲಾದರೆ ವಾತಾವರಣ ನಿಮ್ಮ ಕೊಳೆಗೇರಿಗಿಂತ್ಲೂ ಚೆನ್ನಾಗಿರುತ್ತೆ. ಸರಿಯಾಗಿ ಬೆಳೆದಾದ್ರೂ ಬೆಳೆಯುತ್ತೆ ಮಗು."

ಠಾಣೆಗೆ ಬರಲು ಆರಂಭಿಸಿದಾಗಿನಿಂದಲೂ ವಿಶು ಇಂಥ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದ್ದ. ಆದರೂ ಇಂದಿನ ಘಟನೆ ಮಾತ್ರ ಅನೇಕ ವಿಧಗಳಿಂದ ವಿಶಿಷ್ಟವಾಗಿತ್ತು. ಕೃಷ್ಣಯಾದವ್ ಖುದ್ದಾಗಿ ಜನರನ್ನ ಹೊಡೆದು ಬಡಿದು ಮಾಡುವುದನ್ನು ಅವನೆಂದೂ ಕಂಡಿರಲಿಲ್ಲ. ಠಾಣೆಗಳಲ್ಲಿ ಇಂಥ ಘಟನೆಗಳು ಇನ್ನೂ ಯಾಕೆ ಘಟಿಸುತ್ತಲೇ ಇರುತ್ತವೆ ಎಂಬುದಕ್ಕೆ ವಿಶುವಿನ ಬಳಿ ಉತ್ತರವಿರಲಿಲ್ಲ. ಇಂಥ ಸಂದರ್ಭಗಳನ್ನ ಇನ್ನಷ್ಟು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಮಾರ್ಗವೇ ಇರಲಿಲ್ಲವೇನು? ಕೃಷ್ಣಯಾದವ್ ಈ ಸಂದರ್ಭದಲ್ಲಿ ವಿಷಯವನ್ನ ಪೂರ್ತಿ ಅರ್ಥ ಮಾಡಿಕೊಳ್ಳದೆಯೇ ಮುಂದುವರೆಯುತ್ತಿದ್ದಾನೆಂದು ವಿಶುವಿಗನ್ನಿಸಿತು. ಅವರುಗಳ ಚರ್ಚೆಯ ಮಧ್ಯೆ ತಾನೂ ಸೇರಿ ಪರಿಸ್ಥಿತಿಯ ಉದ್ರಿಕ್ತತೆಯನ್ನ ಕಡಿಮೆ ಮಾಡಬಹುದು ಅಂತಲೂ ಅನ್ನಿಸಿತು. ಒಂದು ಕ್ಷಣದ ಮಟ್ಟಿಗೆ ವಿಶು ತನ್ನ ಕುರ್ಚಿಯಿಂದ ಎದ್ದುನಿಂತು, ಆ ಮಗುವನ್ನ ತಾನು ಕೊಂಡೊಯ್ಯಲು ತಯಾರಾಗಿದ್ದೇನೆಂದು ಹೇಳುವವನೇ ಇದ್ದ. ಇದರಿಂದ ಚರ್ಚೆ ದಿಕ್ಕಾದರೂ ಬದಲಾಗಬಹುದಿತ್ತು. ಜೊತೆಗೆ ಇಂಥ ಸಮಯದ ತುರ್ತು ನಿರ್ಧಾರಗಳು ಎಷ್ಚೋ ಬಾರಿ ಚಿಂತನ ಮಂಥನ ಮಾಡಿ ತಗೆದುಕೊಂಡ ನಿರ್ಧಾರಗಳಿಗಿಂತ ಒಳ್ಳಯದ್ದಾಗಿರುತ್ತಿದ್ದುವು. ಹೀಗಾಗಿ ಒಂದು ಮಗುವನ್ನು ತಂದುಕೊಳ್ಳುವ ತಮ್ಮ ಯೋಜನೆ ಮಂದಕ್ಕೆಹಾಕದೇ ತಕ್ಷಣ ಕಾರ್ಯರೂಪಕ್ಕೆ ತರುವ ಸಾಧ್ಯತೆಯಿತ್ತು. ಆದರೆ ತಾನೀಗ ಮಧ್ಯ ತಲೆತೂರಿಸುವುದರಿಂದ ವಾತಾವರಣ ತಣ್ಣಗಾಗುವ ಖಾತ್ರಿಯೇನೂ ಇರಲಿಲ್ಲ. ಹಾಗೂ ವಿಷಯ ಅಷ್ಟು ಸರಳವೂ ಆಗಿರಲಿಲ್ಲ.

ವಿಶು ಕಳೆದಾರು ತಿಂಗಳುಗಳಲ್ಲಿ ಕಂಡಿದ್ದ ಕೃಷ್ಣಯಾದವ್‌ನ ವರ್ತನೆಗೂ ಇಂದು ಕಾಣುತ್ತಿರುವ ಅವನ ವರ್ತನೆಗೂ ತಾಳೆಹಾಕಿ ನೋಡುವ ಪ್ರಯತ್ನ ಮಾಡಿದ. ಅಜಗಜಾಂತರದ ವ್ಯತ್ಯಾಸವಿತ್ತು. ಕೆಲಸದ ಒತ್ತಡವಿಲ್ಲದಿದ್ದಾಗ ಯಾದವ್ ಖುಷಿಯಿಂದ ನಗೆಚಟಾಕಿ ಹಾರಿಸಿಕೊಂಡು ಜಾಲಿಯಾಗಿರುತ್ತಿದ್ದ. ಆದರೆ ಅವನಿದ್ದ ಕಲಸದಲ್ಲಿ ಒತ್ತಡವಿಲ್ಲದ ಕ್ಷಣಗಳೇ ಕಡಿಮೆ. ಆದರೂ (ವಿಶುವಿನಭಿಪ್ರಾಯದಲ್ಲಿ) ಇಂಥ ರಾಕ್ಷಸ ಪ್ರವರ್ತನೆಯನ್ನ ಎಂದು ಕೃಷ್ಣಯಾದವ್‌ನಲ್ಲಿ ಕಂಡಿರಲಿಲ್ಲ.


ತಾನು ಪ್ರತಿ ಶನಿವಾರ ಠಾಣೆಗೆಬರಲಾರಂಭಿಸಿದ ಮೊದಲ ದಿನಗಳಲ್ಲಿ ಠಾಣೆಯವರಿಗೆ ಇದು ವಿಚಿತ್ರ ಅನ್ನಿಸಿತ್ತು. ಯಾಕೆ ಈತ ಇಷ್ಟು ಬೇಗಬೇಗ ಠಾಣೆಗೆ ಹಾಜರಿ ಹಾಕುತ್ತಿದ್ದಾನೆಂದು ಕೆಲವರು ಕಕ್ಕಾಬಿಕ್ಕಿ ಆಗಿದ್ದರು. ಆದರೆ ಒಂದೆರಡು ತಿಂಗಳುಗಳಲ್ಲಿ ಎಲ್ಲರಿಗೂ ಇದು ಎಷ್ಟು ಅಭ್ಯಾಸವಾಗಿಬಿಟ್ಟಿತ್ತೆಂದರೆ, ವಿಶು ಅಕಸ್ಮಾತ್ ಬರದಿದ್ದರೆ ಯೋಚನೆ ಮಾಡುವ ಸ್ಥಿತಿಗೆ ತಲುಪಿಬಿಟ್ಟಿದ್ದರು. ಹೀಗೆ ಚೆನ್ನಾಗಿ ಅಭ್ಯಾಸವಾದ ಕೆಲ ದಿನಗಳ ನಂತರ ಕೃಷ್ಣಯಾದವ್ ವಿಶುವಿಗೆ ಹೇಳಿಯೂ ಇದ್ದ: "ನಿಮ್ಮ ಕೇಸಿನಲ್ಲಿರುವ ತೊಂದರೆಯೆಂದರೆ ನೀವು ಎಫ್‌ಐ‌ಆರ್‌ನಲ್ಲಿ ವಿಪರೀತ ವಿವರಗಳನ್ನು ಕೊಟ್ಟುಬಿಟ್ಟಿದ್ದೀರಿ." ವಿಶುವಿಗೆ ಆಶ್ಚರ್ಯವಾಯಿತು! "ಯಾಕೆ, ನನ್ನ ವಸ್ತುಗಳನ್ನ ಗುರುತಿಸೊಕ್ಕೆ ಅನುಕೂಲವಾಗಬಹುದೂಂತ ನಾನು...." ಕೃಷ್ಣಯಾದವ್ ವಾಕ್ಯ ಮುಗಿಸಲು ಅವಕಾಶ ಕೊಡದೇ ಮಾತನಾಡಿದ: "ನೀವು ಅಷ್ಟು ಸ್ಪಷ್ಟವಾಗಿ ಎಲ್ಲವನ್ನೂ ಬರೆಯದೇ ಇದ್ದಿದ್ದರೆ, ನಾವುಗಳು ಬೇರಾವುದಾರೂ ಬ್ರಾಂಡಿನ ವಸ್ತುಗಳನ್ನು ಕೊಡುವ ಅವಕಾಶವಿತ್ತು. ನಮ್ಮ ಗೋದಾಮಿನಲ್ಲಿ ಎಷ್ಟೋ unclaimed ವಸ್ತುಗಳು ಇದ್ದೇ ಇರ್ತಾವೆ, ಅವುಗಳಲ್ಲಿ ಯಾವುದಾದರೂಂದನ್ನು ಎತ್ತಿ ಕೊಟ್ಟುಬಿಡುತ್ತಿದ್ದೆವು ಅಷ್ಟೇ. ಎಷ್ಟಾದರೂ ಪ್ರತಿನಿತ್ಯ ಏನಾದರೊಂದನ್ನ ಜಪ್ತು ಮಾಡುತ್ತಲೇ ಇರುತ್ತೀವಲ್ಲಾ."

ಈ ಕೇಸಿನ ವಿಷಯದಲ್ಲಿ ಕೃಷ್ಣಯಾದವ್ ಯಾವ ರೀತಿ ಮುಂದುವರೆಯಬಹುದಂಬ ಕುತೂಹಲ ವಿಶುವಿಗಿತ್ತು. ಎಷ್ಟಾದರೂ ಒಂದು ಪುಟ್ಟ ಕೂಸಿಗೆ ಸಂಬಂಧಿಸಿದ ಕೇಸು ಇದಾಗಿತ್ತು. ಇದನ್ನು ಬಗೆಹರಿಸುವುದು ಟಿ.ವಿ. ಮ್ಯೂಸಿಕ್ ಸಿಸ್ಟಂಗಳ ಕೇಸುಗಳನ್ನು ಪರಿಹರಿಸುವಷ್ಟು ಸರಳವೇನೂ ಆಗಿರಲಿಲ್ಲವಲ್ಲ. ಮಗುವಿನ ತಂದೆತಾಯಿಗಳನ್ನ ಹೇಗೇ ಗದರಿದರೂ ಅವನು ಈಗ ಈ ಮಗುವಿಗೊಂದು ದಾರಿಯನ್ನು ಕಾಣಿಸಬೇಕಿತ್ತು. ಆದರೆ ಈ ವಿಷಯದಲ್ಲಿ ಕೃಷ್ಣಯಾದವ್‌ಗೆ ಯಾವ ಯೋಚನಯೂ ಇದ್ದಂತಿರಲಿಲ್ಲ.

ಆ ಸಮಯಕ್ಕೆ ಸರಿಯಾಗಿ ಮಗು ಜೋರಾಗಿ ಗೋಳಾಡಲು ಪ್ರಾರಂಭಿಸಿತು. ಮಗುವಿನ ತಾಯಿ ಕೂಡಲೇ ಅಲ್ಲಿಂದ ಹಿಂದಕ್ಕೆ ಹೆಜ್ಜೆಹಾಕಿ, ಮಗುವನ್ನ ಎತ್ತಿಕೊಂಡಳು. ಒಂದು ಮೂಲೆಗೆ ಹೋಗಿ ಏನೂ ನಡೆದೇಯಿಲ್ಲವೇನೋ ಎಂಬಂತೆ ಕೂತು ಕೂಸಿಗೆ ಎದೆಹಾಲು ಕುಡಿಸಲು ಪ್ರಾರಂಭಿಸಿದಳು. ಕೃಷ್ಣಯಾದವ್ ಅವಳ ಗಂಡನನ್ನ ಕರೆದು ಕನ್ನೆಗೆ ಮತ್ತೊಂದು ಬಾರಿಸಿ ಕೂಡಲೇ ಮನೆಗೆ ಹೋಗಲು ಹೇಳಿದ. ಆ ಗಂಡಸೂ ಸುಮ್ಮನೆ ಕಾಫಿ ಕುಡಿದು ಹೋಗಲು ಠಾಣೆಗೆ ಬಂದಿದ್ದವನ ಹಾಗೆ, ನಗುನಗುತ್ತಾ ಹೊರಟುಬಿಟ್ಟ. ಅದೇ ಉಸಿರಿನಲ್ಲಿ ಕೃಷ್ಣಯಾದವ್ ಆ ಹೆಂಗಸಿನ ಮೇಲೂ ಕೂಗಾಡಿದ - "ಆ ಮಗುವನ್ನ ಮತ್ತೆ ಎಲ್ಲಾದರೂ ಬಿಡೋ ಸುದ್ದಿ ಕೇಳಿದರೆ, ಕಂಬಿ ಎಣಿಸೋಹಾಗೆ ಮಾಡ್ತೀನಿ. ನೆಟ್ಟಗೆ ಮರ್ಯಾದೆಯಾಗಿದ್ದೆಯೋ ಸರಿ, ಇಲ್ಲದಿದ್ದರೆ ನಾನೇನು ಮಾಡ್ತಿನೋ ನನಗೇ ಗೊತ್ತಿಲ್ಲ." ಕೃಷ್ಣಯಾದವ್ ಹೊಡೆದುಕೊಳ್ಳುತ್ತಲೇ ಇದ್ದ. ಆದರೆ ಆ ಹೆಂಗಸು ಮಗುವಿಗೆ ಹಾಲುಣಿಸುವುದಕ್ಕೆ ಪ್ರಾರಂಭಿಸಿದ ಕೂಡಲೆ ಮೋಕ್ಷ ಪ್ರಾಪ್ತವಾದವಳಂತೆ, ಜಗತ್ತಿನರಿವೇ ಇಲ್ಲದೇ ಇದ್ದಳು.

ವಿಶುವಿಗೆ ಏನೊಂದೂ ಸ್ಪಷ್ಟುವಾಗಿ ಅರ್ಥವಾಗಲಿಲ್ಲ. ಜತಗೆ ಕೃಷ್ಣಯಾದವ್ ಪ್ರವರ್ತನೆ ಅವನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಈ ಜನರನ್ನು ಇನ್ನಷ್ಟು ಮಾನವೀಯವಾಗಿ ಕಾಣಬೇಕಿತ್ತು ಅಂತ ಅವನ ಅಭಿಪ್ರಾಯವಾಗಿತ್ತು. ವಿಶು ತನ್ನ ತಳಮಳವನ್ನ ತಡೆಯಲಾಗದೇ ಎದ್ದುಹೋಗಿ ಯಾದವ್‌ಗೆ ತನಗನ್ನಿಸಿದ್ದನ್ನ ಹೇಳಿಯೇ ಹೇಳಿದ "ಈ ಕಥೆಯ ಅಂತ್ಯವಿಲ್ಲೇ ಆಗುತ್ತೇಂತ ನಿಮ್ಮ ಅಭಿಪ್ರಾಯವಿದ್ದೀತು. ಆದರೆ ಆ ಮಗು ಸುರಕ್ಷಿತವಾಗಿದೇಂತ ನಿಮಗೆ ಯಾವ ಖಾತ್ರಿಯೂ ಇರಲಿಕ್ಕೆ ಸಾಧ್ಯವಿಲ್ಲ. ಇದಕ್ಕೆ ಬೇರೇನೂ ಮಾರ್ಗವಿಲ್ಲವೇ?"

ಕೃಷ್ಣಯಾದವ್ ಏನೂ ನಡೆದೇಯಿಲ್ಲವೆಂಬವನಂತೆ ಉತ್ತರಿಸಿದ. "ನಿಮಗೆ ಈ ಜನ ಗೊತ್ತಿಲ್ಲ. ಆ ಹಂಗಸು ಹೇಗೂ ಆ ಮಗುವಿನ ಪ್ರಾಣ ತೆಗೆಯುತ್ತಿದ್ದವಳಲ್ಲ. ಇದು ಅವರುಗಳ ಬದುಕುವ ರೀತಿ. ಇವೆಲ್ಲಾ ನನ್ನನ್ನ ವಿಚಲಿತಗೊಳಿಸಿದರೆ ನಾನು ಪೋಲೀಸು ನೌಕರಿ ಮಾಡುವುದೇ ಸಾಧ್ಯವಿಲ್ಲ. ನಾನು ಇಂಥ ಕೇಸನ್ನ ವಾರಕ್ಕೊಮ್ಮೆ ನೋಡ್ತಾಯಿರ್ತೀನಿ- ಮಕ್ಕಳಿಗೆ ಕಿರುಕುಳ ಕೊಡೋದು, ಹೆಂಡತೀರನ್ನ ಬಡಿಯೋದು, ಕೈ ಮುರಿಯೊದು, ಏನೆಲ್ಲಾ.. ಇವರುಗಳು ಈ ರೀತಿಯ ಬದುಕನ್ನ ಅಭ್ಯಾಸಬಲದಿಂದ ಬದುಕುತ್ತಾರೆ. ಆ ಹೆಂಗಸು ಮಗುವನ್ನ ಯಾರಿಗಾದರೂ ಕೊಟ್ಟುಬಿಡುತ್ತಾಳೇಂತ ನಿಮಗನ್ನಿಸುತ್ತಾ? ಬೇಕಿದ್ದರೆ ಪ್ರಯತ್ನಿಸಿ ನೋಡಿ. ನನ್ನ ಉತ್ತರ - ಇಲ್ಲ - ಎಂದಿಗೂ ಆಕೆ ಆ ಮಗುವನ್ನ ಬಿಟ್ಟು ಕೊಡುವುದಿಲ್ಲ."

"ಆದರೆ ಈ ವಿಷಯದಲ್ಲಿ ನೀವಂದುಕೊಂಡದ್ದು ತಪ್ಪಾದರೆ?"

"ಸಾಧ್ಯತೆಗಳು ಕಡಿಮೆ. ನೀವೂ ನಮ್ಮ ವೃತ್ತಿಗೆ ಬಂದರೆ ಶಿಲೆಯಾಗುತ್ತಾ ಹೋಗುತ್ತೀರಿ. ನಾವು ಬೆಳಗಿನ ಸುಪ್ರಭಾತ ಹೇಳೋದೇ 'ಅನುಮಾನ' ಅನ್ನೋ ಪದದಿಂದ ಅಲ್ಲಿಂದ ಮುಂದಕ್ಕೆ ನಾವು ಅನುಮಾನದಲ್ಲೇ ದಿನಕಳೆಯುತ್ತೇವೆ. ಜನ ಸುಮ್ಮಸುಮ್ಮನೆ ನಮ್ಮ ಹತ್ತಿರ ಬರ್ತಾರೇಂತ ಅಂದುಕೊಂಡಿದ್ದೀರಾ? ಈಗ ನಿಮ್ಮ ಕೇಸೇ ತೆಗೊಳ್ಳಿ - ನೀವ್ಯಾಕೆ ಇಲ್ಲಿ ವಾರಂವಾರ ಬರ್ತೀರೀ ಅನ್ನೋದನ್ನೂ ನಾವು ಅನುಮಾನದಿಂದ ನೋಡಬೇಕಾಗುತ್ತೆ. ಅಂದಹಾಗೆ, ನಿಮ್ಮ ಕೇಸನ್ನ ಸ್ವಲ್ಪ ದಿನಗಳಲ್ಲೇ ಮುಚ್ಚಿಹಾಕುತ್ತಿದ್ದೇವೆ. ನೀವು ಶನಿವಾರಗಳಂದು ಮಾಡಲು ಬೇರೇನಾದರೂ ನೋಡಿಕೊಳ್ಳೋದು ಒಳ್ಳೇದು." ಅಂದು ಕೃಷ್ಣಯಾದವ್ ಒಳ್ಳೆಯ ಮೂಡಿನಲ್ಲಿರಲಿಲ್ಲವೆಂಬುದಂತೂ ಸ್ಪಷ್ಟವಾಗಿತ್ತು. ಜತೆಗೆ ವಿಶುವಿಗೂ ಈ ಎಲ್ಲವನ್ನು ಕಂಡು ಸ್ವಲ್ಪ ಭಯವೇ ಆಯಿತು. ತನಗೆ ತನ್ನ ಕಳೆದುಹೋದ ವಸ್ತುಗಳನ್ನ ಪಡೆಯೋದು ಮುಖ್ಯವಾಗಿರಲಿಲ್ಲವಂಬುದು ನಿಜವಾದರೂ, ಇದು ತನ್ನ ಜೀವನವಿಧಾನ ಆಗಿಬಿಟ್ಟಿತ್ತೆಂದು - ಇದಕ್ಕಿಂದ ಭಿನ್ನವಾದ ಅಜೆಂಡಾ ಬೇರೇನೂ ಇಲ್ಲವೆಂದು ನಂಬುವಂತೆ ಪ್ರವರ್ತಿಸುವುದು ಹೇಗೆ? ಈಗ ಶನಿವಾರಗಳಂದು ಮುಂಜಾನೆ ಸಮಯ ಕಳೆಯಲು ಬೇರೇನಾದರೂ ಕಾಯಕ ಹುಡುಕಬೇಕಿತ್ತು.

ಈ ಕಥೆ ಇಲ್ಲಿಗೇ ಮಗಿದಿಲ್ಲವೆಂಬ ಅನುಮಾನ ವಿಶುವನ್ನ ಕಾಡಿತು. ಆದರೆ ವಿಶುವಿಗೆ ಅರ್ಥವಾಗದ್ದೆಂದರೆ ಕೃಷ್ಣಯಾದವ್ ಗಂಭೀರವಾದ ಅಧಿಕಾರಿಯಿಂದ ಒಡ್ಡುತನದ ಠಾಣೆದಾರನಾಗಿ ಪರಿವರ್ತನೆಗೊಂಡು ಕೋಪ ಪ್ರದರ್ಶನ ಮಾಡುತ್ತಿರುವುದೇಕೆ ಎಂಬುದು. ಕೃಷ್ಣಯಾದವ್ ಇದರಿಂದ ತನ್ನ ಕೈ ತೊಳದುಕೊಂಡು ಶುಭ್ರವಾಗಬೇಕೆಂಬ ಆತುರ ತೋರಿದರೂ, ಈ ಕೇಸಿನಲ್ಲಿ ಕಣ್ಣಿಗೆ ಕಾಣದ್ದು ಇನ್ನೂ ಏನೋ ಇದೆ ಅಂತ ವಿಶುವಿಗನ್ನಿಸಿತು. ಇದರ ಬಗ್ಗೆ ತಾನೇನಾದರೂ ಮಾಡಬಹುದೆಂದು ವಿಶುವಿಗನ್ನಿಸಿತು. ತನ್ನ ಬೇರೊಂದು ಸಮಸ್ಯೆಗೆ ಇದು ಉತ್ತರವನ್ನ ಕೊಟ್ಟರೂ ಕೊಡಬಹುದು - ಮಗು. ಆದರೆ ಅದೆಲ್ಲಾ ಅಷ್ಟು ಸರಳವೇ? ನಯನಾ ಏನನ್ನಬಹುದು?

ವಿಶು ಠಾಣೆಯಿಂದ ಆಚೆಗೆ ಹಜ್ಜೆಯಿಡುತ್ತಿದ್ದಂತೆ ಆ ಹಂಗಸೂ ಮಗುವನ್ನೆತ್ತಿಕೊಂಡು ಎದ್ದಳು. "ಆ ಮಗುವಿನ ವಿಷಯದಲ್ಲಿ ಮತ್ತೇನಾದರೂ ಸುದ್ದಿಕೇಳಿಬಂದರೆ ಆ ಮಗೂನ ಅನಾಥಾಶ್ರಮಕ್ಕೆ ಕಳಿಸಿ ನಿನ್ನನ್ನ ಚೆನ್ನಾಗಿ ಒದ್ದು ಒಳಗೆ ಹಾಕ್ತೀನಿ - ತಿಳೀತಾ? ಹಾಗೇನೇ ಆ ಕುಡುಕನ್ನೂ ಹದ್ದುಬಸ್ತಿನಲ್ಲಿಡು - ಇಲ್ದೇಯಿದ್ರೆ ಏನಾಗುತ್ತೊ ನನಗೇ ಗೊತ್ತಿಲ್ಲ." ಒಳಗಿನಿಂದ ಕೃಷ್ಣಯಾದವ್ ಕೂಗಿದ. ಸ್ವಲ್ಪ ದೂರದಿಂದ ವಿಶು ಆ ಹೆಂಗಸನ್ನು ಹಿಂಬಾಲಿಸತೊಡಗಿದ. ಆಕೆಯ ಮನೆ ಎಲ್ಲಿ ಮತ್ತು ಆಕೆಯನ್ನ ಸಂಪರ್ಕಿಸಬೇಕಾದರೆ ಹೇಗೆ ಎಂಬುದನ್ನ ಅವನು ತಿಳಿದುಕೊಳ್ಳಬೇಕಾಗಿತ್ತು. ಆದರೆ ಆಕೆಯ ಬಳಿಗೆ ನೇರವಾಗಿ ಹೋಗಿ ಯಾವದನ್ನೂ ಮಾತಾಡುವ ಧೈರ್ಯಮಾತ್ರ ಅವನಲ್ಲಿರಲಿಲ್ಲ. ಮುಂದಕ್ಕೆ ಹಜ್ಜೆ ಹಾಕುತ್ತಿದ್ದಂತೆ ಜನ ಸಮಾಜದ ಬೇರೆ ಬೇರೆ ಸ್ಥರಗಳ ಜನತೆಯೊಂದಿಗೆ ವ್ಯವಹರಿಸುವಾಗ ಭಿನ್ನವಾಗಿ ಪ್ರವರ್ತಿಸುವುದು ಏಕೆಂದು ಯೋಚಿಸುತ್ತಿದ್ದ. ಒಂದು ಸ್ಥರದಲ್ಲಿ ಮಗುವನ್ನ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಬಳೆಸಬೇಕಾದ ಆ ಹೆಣ್ಣಿನ ಬಗ್ಗೆ ಅವನಿಗೆ ಅನುಕಂಪವಿತ್ತು. ಅವಳಿಗೆ ತನ್ನಿಂದ ಏನೂ ಸಹಾಯವಾಗಲಾರದೆಂಬ ವಾಸ್ತವದ ವಿಷಾದವೂ ಅವನನ್ನು ಕಾಡುತ್ತಿತ್ತು. ಆದರೆ ಕೃಷ್ಣಯಾದವ್ ಅವಳಿಗೆ ಕಪಾಳಮೋಕ್ಷ ಮಾಡುವುದನ್ನಾಗಲೀ, ಅವಳ ಮಗುವಿನ ಬಗ್ಗೆ ಯಾವುದಾದರೊಂದು ನಿಲುವನ್ನು ತೆಗೆದುಕೊಳ್ಳುವುದಾಗಲೀ ಸಾಧ್ಯವಾಗದೇ ಒದ್ದಾಡಿ ಹೋದ. ಕೆಲ ಕ್ಷಣಗಳ ಮಟ್ಟಿಗೆ ಮಗುವನ್ನ ಮುಗಿಸಿಬಿಡುವ, ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳೆಲ್ಲ ದಿನನಿತ್ಯದ ಪೊಳ್ಳು ಮಾತುಗಳು ಎಂದ ಕೃಷ್ಣಯಾದವ್‌ನ ಅಭಿಪ್ರಾಯವನ್ನು ಕೂಡಾ ನಂಬಬಹುದೇನೋ ಅನ್ನಿಸಿತು.

ವಿಶು ಅವಳನ್ನು ಹಿಂಬಾಲಿಸುತ್ತಾ ನಡೆದ. ಸ್ವಲ್ಪ ದೂರ ಹೋದ ನಂತರ ಆಕೆ ಒಂದು ಸಣ್ಣ ಗಲ್ಲಿಯಲ್ಲಿ ನುಸುಳಿ ತೆರೆದಿದ್ದ ಒಂದು ಬಾಗಿಲಲ್ಲಿ ಮಾಯವಾಗಿಬಿಟ್ಟಳು. ಅವಳ ಮತ್ತವಳ ಗಂಡನ ಜತೆ ಮಾತನಾಡಿ ಈ ಎಲ್ಲ ವಿಷಯಗಳ ತಳಪಾಯಕ್ಕೆ ಹೋಗಿ ಅರ್ಥಮಾಡಿಕೊಳ್ಳಬೇಕೆಂಬ ಕಾತರವನ್ನ ವಿಶುವಿಗೆ ತಡೆಯಲಾಗಲಿಲ್ಲ. ಅವನು ಮುಂದೆ ಹೋಗಿ ಬಾಗಿಲನ್ನು ತಟ್ಟಿಯೇ ತಟ್ಟಿದ. ಗಂಡ ಬಾಗಿಲು ತೆರೆದು ಹುಬ್ಬುಹಾರಿಸಿದ. ವಿಶು ಮಗುವಿನ ವಿಷಯ ಕೇಳಬೇಕೆಂದು ಬಾಯಿ ತೆರೆಯುವವನೇ ಇದ್ದ....

ಒಳಗಡೆ ಕಂಡ ಟಿ.ವಿ.ಯನ್ನ ನೋಡಿ ಅವಾಕ್ಕಾದ. ಇದು ತಮ್ಮ ಮನಯಿಂದ ನಾಪತ್ತೆಯಾಗಿದ್ದ ಟಿ.ವಿ. ಎಂಬುದರಲ್ಲಿ ಸಂದೇಹವೇ ಇರಲಿಲ್ಲ. ತಮ್ಮ ಟಿ.ವಿ.ಗಿದ್ದ ಎಲ್ಲ ಗುರುತುಗಳೂ ಅದರ ಮೇಲಿದ್ದುವು - ಮುಖ್ಯವಾಗಿ ಒಂದು ಬದಿಯಲ್ಲಿ ಅಂಟಿಸಿದ್ದ ಅಮುಲ್ ಬೆಣ್ಣೆಯ ಸ್ಟಿಕರ್ ಷೋರೂಮಿನಿಂದ ಮನೆಗೆ ತರುವಾಗ ಆಗಿದ್ದ ದೊಡ್ಡ ಗುರುತು ಎಲ್ಲವೂ ಅದರ ಮೇಲಿದ್ದದ್ದರಿಂದ ಅನುಮಾನಕ್ಕೆ ಆಸ್ಪದವೇ ಇರಲಿಲ್ಲ. ವಿಶು ಸುತ್ತಮುತ್ತ ನೋಡಿದ. ಬೇರೇನೂ ಅನುಮಾನಾಸ್ಪದ ವಸ್ತುಗಳು ಕಾಣಿಸಲಿಲ್ಲ.

‘ಏನು? ಏನುಬೇಕಿತ್ತು?" ಆತ ಗಟ್ಟಿಯಾಗಿ ಕೇಳಿದ. ವಿಶುವಿಗೆ ತಕ್ಷಣಕ್ಕೆ ಏನು ಮಾಡಬೇಕೋ ತಿಳಿಯಲಿಲ್ಲ. ಮಗುವಿನ ವಿಷಯ ಕೇಳಲು ಬಂದವನಿಗೆ ಇದು ನಿರೀಕ್ಷಿತವಾಗಿರಲಿಲ್ಲ. ಬಾಯಿಂದ ಮಗುವಿನ ಮಾತು ಬರದೇ ಮನದಲ್ಲಿ ಬೃಹದಾಕಾರವಾಗಿ ನಿಂತಿದ್ದ ಟಿ.ವಿ.ಯ ವಿಷಯ ಹೊರಬಂದದ್ದು ಅವನಿಗೇ ಆಶ್ಚರ್ಯವಾಗಿತ್ತು. ಟಿ.ವಿ.ಯ ದಿಕ್ಕಿನಲ್ಲಿ ಬೆರಳುಮಾಡಿ - "ಆ ಟಿ.ವಿ....."ಎಂದಷ್ಟೇ ಕಿರುಲಿದ.

"ಅದನ್ನ ಮಾರಾಟ ಮಾಡೋದಿಲ್ಲ. ಅದು ನಾವೇ ನೋಡೋಕ್ಕೆ ಇಟ್ಕಂಡಿರೋದು ಕಾಣಿಸೊಲ್ವ? ಆದರೆ ಬೇಕಿದ್ರೆ ಅದ್ಭುತವಾದ ಒಂದು ಸಿ.ಡಿ.ಪ್ಲೇಯರ್ ಇದೆ. ಐದು ಸಾವಿರ.. ಬೇಕಿದ್ದರೆ ಹೇಳಿ..."

ವಿಶು ಸರಿಯೆಂದು ತಲೆಯಾಡಿಸುತ್ತಿದ್ದಂತೆ ಆತ ಒಳಹೊಕ್ಕು ಸಿ.ಡಿ.ಸಿಸ್ಟಮನ್ನ ಎತ್ತಿಕೊಂಡು ಬಂದ. ಅದನ್ನ
ನೋಡಿ ವಿಶು ಮತ್ತಷ್ಟು ಅವಾಕ್ಕಾದ - ಈಗಂತೂ ಅನುಮಾನವೇ ಇರಲಿಲ್ಲ. ಈ ಮಾಲು ತಮ್ಮದೇ ಆಗಿತ್ತು. ವಿಶು ತಡೆಯಲಾಗದೇ ಕೇಳಿಯೇಬಿಟ್ಟ - "ಇವಲ್ಲಾ ನಿನಗೆ ಎಲ್ಲಿ ಸಿಕ್ಕಿತು?" "ನಿಮಗೆ ಆ ವಿವರಗಳಲ್ಲಾ ಯಾಕೆ? ಈ ಮಾಲು ಬೇಕಾದ್ರೆ ಹೇಳಿ. ಕಡೇದಾಗಿ ೪೫೦೦ ಕ್ಕೆ ಕೊಡ್ತೀನಿ. ಹೇಳಿ...."

ವಿಶು ಅವನತ್ತ ನೋಡಿ, ಸ್ವಲ್ಪ ಹೊತ್ತಿನ ನಂತರ ಬರುವುದಾಗಿ ಹೇಳಿದ. ಮನೆಗೆ ಹೋಗಬೇಕೋ ಅಥವಾ ಠಾಣೆಯ ಕಡೆಗೆ ಹೋಗಬೇಕೋ ತೋಚದೇ ಪಾದಗಳನ್ನ ಎಳೆದುಕೊಳ್ಳುತ್ತಾ ವಿಶು ಆ ಕೊಳೆಗೇರಿಯಿಂದ ಹೊರಕ್ಕೆ ಬಂದ. ಅವನನ್ನು ಆ ಗಂಡು ಬೆನ್ನಟ್ಟಿ ಬಂದ - "ಸರ್ ನನ್ನ ಹತ್ತಿರ ಇಷ್ಟೇ ಅಲ್ಲ - ಇನ್ನೂ ತುಂಬಾ ಮಾಲಿದೆ - ವಿ.ಸಿ.ಆರ್, ಸಿ.ಡಿಗಳು, ಬೇರೆ ಬೇರೆ ಎಲೆಕ್ಟ್ರಾನಿಕ್ ಸಾಮಾನುಗಳಿವೆ. ಒಂದ್ಸರ್ತಿ ಬಂದು ನೋಡಿ. ಖಂಡಿತವಾಗಿ ಒಳ್ಳೇ ಬೆಲೆಗೆ ಎಲ್ಲಾನೂ ಕೊಡ್ತೀನಿ..........."

No comments: