skip to main |
skip to sidebar
ಅಸಂಗತ
ಇದ್ದಕ್ಕಿದ್ದಂತೆ ಕಥೆಗಾರನ ಕೋಣೆ ಪ್ರವೇಶಿಸಿದ ಅವನು ಕೇಳಿದ -
"ಕತೆ ಬರೆಯುತ್ತೀಯಾ?"
"ಹುಂ"
"ಯಾಕೆ?"
"ಖಡ್ಗವಾಗಲಿ ಕಾವ್ಯ ಅಂದ ಹಾಗೆಯೇ.. ಸಮಾಜದ ಬಗ್ಗೆ ಟಿಪ್ಪಣಿ ಮಾಡಲು, ಸಾಧ್ಯವಾದರೆ ಸಮಾಜದ ಬದಲಾವಣೆಗೆ.. ಕ್ರಾಂತಿ.."
ಅವನು ಅಟ್ಟಹಾಸದ ನಗು ನಕ್ಕ
"ದಿನಕ್ಕೆರಡುಬಾರಿ ಊಟ ಮಾಡುತ್ತೀಯಾ?’
"ಹುಂ"
"ಏನು?’
"ಮೂರು ರೊಟ್ಟಿ, ಒಂದಿಷ್ಟು ಅನ್ನ, ಹುಳಿ, ಪಲ್ಯ, ಮೊಸರು.."
"ದೀನ ದಲಿತರ ಬಗ್ಗೆ ಬರೆಯುತ್ತೀಯಾ? ಶೋಷಣೆ, ಬಂಡಾಯ ಇತ್ಯಾದ ಪದಗಳನ್ನು ಉಪಯೋಗಿಸುತ್ತೀಯಾ?"
"ಜೀವನದ ಬಗ್ಗೆ ಬರೆಯುತ್ತೇನೆ. ಅಂದ ಮೇಲೆ ಸಹಜವಾಗಿ ಈ ಎಲ್ಲವುಗಳ ಬಗ್ಗೆಯೂ. ಇವೆಲ್ಲಾ ಜೀವನದ ಭಾಗಗಳೂ ಸತ್ಯಗಳೂ ಆಗಿವೆ, ಹೀಗಾಗಿ ಇವುಗಳ ಬಗೆಗೆ ಬರೆದೇ ಬರೆಯುತ್ತೇನೆ"
"ಯಾರು ಓದುತ್ತಾರೆ ನಿನ್ನ ಕಥೆ? ನಾನಂತೂ ಓದೋಲ್ಲ."
"ಅಗತ್ಯವಿಲ್ಲ. ಓದುವವರು ಓದುತ್ತಾರೆ. ನನಗೆ ನನ್ನದೇ ಓದುಗವಲಯ ಇದೆ. ನಿನ್ನಂತಹವರು ಓದಲೇಬೇಕೆಂದು ನಾನೇನೂ ಬಲವಂತ ಮಾಡುತ್ತಿಲ್ಲವಲ್ಲ..."
"ಓದುಗ ವಲಯ ಏನು ಪ್ರಭಾವಲಯದ ಹಾಗೋ? ಓದಬೇಕಾದವರು ಓದುತ್ತಾರಾ?"
"......"
ಆ ದಿನ ಅವನು ತನ್ನ ಹಳೆಯ ಚಪ್ಪಲಿಯನ್ನು ಜರ್ರೆಂದು ಎಳೆಯುತ್ತಾ ಹೊರಟುಬಿಟ್ಟ. ಅವನು ಕಥೆಗಾರನನ್ನು ಅಷ್ಟಕ್ಕೇ ಬಿಟ್ಟಿದ್ದರೆ ಅವನ ಬಗ್ಗೆ ಅಲೋಚಿಸಿ ಹೆಚ್ಚೆಂದರೆ ಒಂದು ಕಥೆ ಬರೆದು ಸುಮ್ಮನಾಗಿಬಿಡುತ್ತಿದ್ದ. ಆದರೆ ಕೆಲದಿನಗಳ ನಂತರ ಅವನು ಮತ್ತೆ ಬಂದ. ನೇರ ಕಥೆಗಾರನ ಕೋಣೆಗೆ ನುಗ್ಗಿ ಪಕ್ಕದ ಗಲ್ಲಿಯ ಹೋಟೇಲಿನ ಒಂದು ಪ್ಲೇಟ್ ಮೀಲ್ ಚೀಟಿಯನ್ನು ಮೇಜಿನ ಮೇಲೆ ಎಸೆದ.
"ನಿನ್ನ ಕಥೆಯೊಂದನ್ನು ಕೊಂಡುಕೊಳ್ಳಬೇಕು"
"ನಾನು ಕಥೆಗಳನ್ನು ಮಾರಿ ಜೀವನ ಮಾಡುವುದಿಲ್ಲ. ನನಗಾಗಿ ಯೂನಿವರ್ಸಿಟೀಲಿ ಬೇರೊಂದು ನೌಕರಿಯಿದೆ"
"ಬೆಲೆ ಕಡಿಮೆ ಆಯಿತಾ? ನೂರು ರೂಪಾಯಿ ಕೊಟ್ಟರೆ ಕಥೆ ಮಾರುತ್ತೀಯಾ?"
"ನಿನಗೆ ನನ್ನ ಕಥೆಗಳು ಯಾಕೆ ಬೇಕು? ಹೇಗಿದ್ದರೂ ನೀನು ಓದುವವನಲ್ಲವಲ್ಲ?"
"ನನಗೆ ಖಡ್ಗಕ್ಕಿಂತ ಹರಿತವಾದ ವಸ್ತು ಬೇಕು. ನಿನ್ನ ಕಥೆಗಳಲ್ಲಿ ಸಿಗಬಹುದೂಂತ ಬಂದೆ."
"ಯಾಕೆ?"
"ಆತ್ಮಹತ್ಯೆ ಮಾಡಿಕೊಳ್ಳೋಕ್ಕೆ. ಅಥವಾ ನಿನ್ನನ್ನ ಕೊಲ್ಲುವುದಕ್ಕೆ."
"ಯಾವ ತರಹದ ಕಥೆ ಬೇಕು? ರೊಮ್ಯಾಂಟಿಕ್, ಬಂಡಾಯ, ಪತ್ತೇದಾರಿ, ದಲಿತ.. ಅಥವಾ ನವ್ಯೋತ್ತರ ಎಕ್ಸಿಸ್ಟೆಂಷಿಯಲಿಸ್ಟ್ ಪತ್ತೇದಾರಿ.... ನಿನಗೆ ಯಾವುದು ಇಷ್ಟ?"
"ನಿನ್ನ ಅತ್ಯುತ್ತಮ ಕಥೆ ಕೊಡು. ನಾನು ನಿನ್ನನ್ನು ಮತ್ತೆ ಪೀಡಿಸುವುದಿಲ್ಲ."
"ಅತ್ಯತ್ತಮ ಕಥೆ? ಅದನ್ನು ನಾನಿನ್ನೂ ಬರೆದಿಲ್ಲ."
"ಹಾಗಾದರೆ ಮುಂದಿನ ವಾರ ಬರುತ್ತೇನೆ. ತಯಾರಿಸಿ ಇಟ್ಟಿರು. ಸದ್ಯಕ್ಕೆ ಇದನ್ನ ಅಡ್ವಾನ್ಸ್ ಅಂತ ಇಟ್ಟುಕೊಂಡಿರು. ಮುಂದಿನ ವಾರ ಮತ್ತೊಂದು ಊಟದ ಚೀಟಿ ಕೊಡುತ್ತೇನೆ."
ಅವನು ನಡೆದು ಹೋಗುತ್ತಿದ್ದಾಗ ಅವನ ಹೆಗಲಿಗೆ ಜೋತಾಡುತ್ತಿದ್ದ ಮಾಸಿದ ಹರಕಲು ಚೀಲ ಕಥೆಗಾರನಿಗೆ ಕಾಣಿಸಿತು. ಅವನು ಕೊಟ್ಟ ಊಟದ ಚೀಟಿಯನ್ನು ನೋಡಿದ. ಆ ದಿನ ರಾತ್ರೆ ಅದೇ ಚೀಟಿ ಉಪಯೋಗಿಸಿ ಊಟಮಾಡಿದ. ಇವನಿಗೆ ತನ್ನ ಕಥೆ ಯಾಕೆಬೇಕು ಅನ್ನುವುದು ಮಾತ್ರ ಕಥೆಗಾರನಿಗೆ ಗೊತ್ತಾಗಲಿಲ್ಲ. ಯಾವುದಾದರೂ ಪತ್ರಿಕೆಗೆ ಕಳಿಸಿ ಹಣ ಸಂಪಾದಿಸುತ್ತಾನೋ? ಅಥವಾ... ಏನೋ ಬಡವ ಬದುಕಿಕೊಳ್ಳಲಿ ಅನ್ನಿಸಿತು. ರಾತ್ರೆ ಸಿಗರೇಟ್ ಬೆಳಗಿಸಿ ಕಥೆ ಬರೆಯತೊಡಗಿದ. ಅವನನ್ನು ನೋಡಿ ಅವನದೇ ವಿಷಯದ ಬಗ್ಗೆ ಒಂದು ಗಂಭೀರ ಕಥೆಯನ್ನು ಹೆಣೆದ. ಚೆನ್ನಾಗಿದೆ ಅನ್ನಿಸಿತು. ತನ್ನ ಉತ್ತಮ ಕಥೆಗಳಲ್ಲಿ ಒಂದು ಅಂತಲೂ ಅನ್ನಿಸಿತು. ಆದರೆ ಅವನು ತನ್ನ ಕಥೆಯನ್ನು ಯಾಕೆ ಖರೀದಿಸುತ್ತಿದ್ದಾನೆ ಅನ್ನುವುದ ಮಾತ್ರ ಕಥೆಗಾರನಿಗೆ ಸ್ಪಷ್ಟವಾಗಲೇ ಇಲ್ಲ.
ಒಂದು ವಾರದ ವರೆಗೂ ಕಾದ. ಅವನು ಬರಲೇ ಇಲ್ಲ. ಆ ದಿನ ಅವನು ಜೋತಾಡಿಸಿಕೊಂಡು ಹೋದ ಹರಕಲು ಚೀಲ ಮಾತ್ರ ಗಡಿಯಾರದ ಪೆಂಡ್ಯುಲಂನಂತೆ ಕಥೆಗಾರನ ಸ್ಮೃತಿಯಲ್ಲಿ ಅಲ್ಲಾಡುತ್ತಿತ್ತು. ಎರಡು ವಾರಗಳಾದರೂ ಅವನು ಬರಲೇ ಇಲ್ಲ. ಇನ್ನು ಅವನು ಬರುವುದಿಲ್ಲವೆಂದು ನಿರ್ಧರಿಸಿ ನಿರಾಳವಾಗಿ ನಿಟ್ಟುಸಿರು ಬಿಟ್ಟ. ಸುಮಾರು ಒಂದು ತಿಂಗಳ ನಂತರ ಹೀಗೇ ರಸ್ತೆಯಲ್ಲಿ ಹೋಗುತ್ತಿದ್ದಾಗ ಬಸ್ ಅಪಘಾತದಲ್ಲಿ ಹತನಾಗಿದ್ದವನ ಶವ ಕಥೆಗಾರನಿಗೆ ಕಂಡಿತು. ಅದೇ ಹರಕಲು ಚಪ್ಪಲಿಗಳು, ಅವನ ಹೆಗಲಿನಲ್ಲಿ ಹಿಂದೆ ಜೋತಾಡುತ್ತಿದ್ದ ಹರಕಲು ಚೀಲ, ಎರಡೂ ರಕ್ತದ ಮಡುವಿನ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ತನ್ನ ಗಿರಾಕಿಯೇ ಇರಬೇಕು. ಊಟವಿಲ್ಲದೇ ನಿಶ್ಶಕ್ತಿಯಿಂದ ಇಲ್ಲಿ ಕುಸಿದಿರಬಹುದು. ಈಗ ಕಲಾಕ್ಷೇತ್ರದ ಪಕ್ಕದಲ್ಲಿರುವ ಅಪಘಾತಗಳ ಪಟ್ಟಿಯ ಫಲಕದಲ್ಲಿ ಅವನೂ ಒಂದು ಸಂಖ್ಯೆಯಾಗಿ ಸೇರುತ್ತಾನೆ. ಪಾಪ ಬಡವ, ಸತ್ತ - ಎಂದುಕೊಳ್ಳುತ್ತಾ ಮನೆಗೆ ಬಂದ.
ಅವನಿಗಾಗಿ ಬರೆದಿದ್ದ ಕಥೆ ಮೇಜಿನ ಮೇಲಿತ್ತು. ಮತ್ತೊಮ್ಮೆ ಓದಿದ. ಜನಪ್ರಿಯ ಪತ್ರಿಕೆಯೊಂದರ ಸಂಪಾದಕರಿಗೆ ಪತ್ರ ಬರೆದು ಕತೆಗೆ ಲಗತ್ತಿಸಿದ. ಲಕೋಟೆಯೊಳಗೆ ಸೇರಿಸಿ ವಿಳಾಸ ಬರೆಯಬೇಕೆಂದಿರುವಾಗ ಅವನು ಮತ್ತೆ ಪ್ರತ್ಯಕ್ಷನಾದ. ಹೆಗಲಿಗೆ ಚೀಲವಿರಲಿಲ್ಲ. ಕಾಲಿಗೆ ಚಪ್ಪಲಿಯಿರಲಿಲ್ಲ. ಕಮಟುವಾಸನೆಯ ಕೊಳಕು ಅಂಗಿ ಧರಿಸಿದ್ದ. ಗಡ್ಡ ತೆಗೆದು ಒಂದು ತಿಂಗಳಾದಂತಿತ್ತು. ಕಂಗಳಲ್ಲಿ ಪಿಸುರು ಒಸರುತ್ತಿತ್ತು. ಅವನು ಬಂದೊಡನೆ ಕಥೆಗಾರ ಕಥೆಯನ್ನು ಲಕೋಟೆಯಿಂದ ತೆಗೆದು ಅವನತ್ತ ದೂಡಿದ.
"ನನಗೆ ಮಾರಿದ ಕಥೆಯನ್ನು ಮತ್ತೊಮ್ಮೆ ಮಾರಾಟ ಮಾಡುತ್ತಾ ಇದ್ದೀಯಾ?"
"ಈ ದಿನ ಒಂದು ಅಪಘಾತ ನೋಡಿದೆ..."
"ನಾನೂ ನೋಡಿದೆ. ಸತ್ತದ್ದು ನಾನಲ್ಲ. ನನ್ನಂತಹವ ಮತ್ತೊಬ್ಬ" ಜೇಬಿನಿಂದ ಒಂದಿಷ್ಟು ಪ್ಲೇಟ್ ಮೀಲಿನ ಕೂಪನ್ ತೋರಿಸುತ್ತಾ ಹೇಳಿದ: "ನನಗಿನ್ನೂ ಕಾಲವಿದೆ". ನಿಧಾನವಾಗಿ ಪುಟಗಳನ್ನು ತಿರುವಿಹಾಕಿ ಕಥೆಯ ಮೇಲೆ ಕಣ್ಣಾಡಿಸಿದ.
"ಈ ಕಥೆ ಬಹಳ ಉದ್ದವಾಯಿತು. ಅನಾವಶ್ಯಕವಾಗಿ ಅಸಂಬದ್ಧ ಪ್ರಲಪ ಮಾಡಿದ್ದೀಯ. ನನಗೆ ಬೇರೆ ಕಥೆ ಬೇಕು"
ಅವನ ಮಾತುಗಳನ್ನು ಕೇಳಿ ಕಥೆಗಾರನಿಗೆ ರೇಗಿತು.
"ನಿನಗೆ ಯಾಕೆ ಕತೆ ಬೇಕು, ಎಂಥ ಕತೆ ಬೇಕು ಏನೂ ಹೇಳದಿದ್ದರೆ ನಾನು ಬರೆಯೋದಾದರೂ ಹೇಗೆ? ಅದೂ ಅಲ್ಲದೇ ನಿನಗೆ ನಾನು ಕತೆ ಕೊಡಲೇಬೇಕೂ ಅನ್ನೋದೇನು? ನಾನು ಕಥೆ ಕೊಡೋದಿಲ್ಲ. ಹೋಗು."
"ನೋಡು, ಇದು ವ್ಯಾಪಾರ. ಸುಮ್ಮನೆ ಕೂಗಾಡಬೇಡ. ಆಗಲೇ ನನ್ನ ಹತ್ತಿರ ಅಡ್ವಾನ್ಸ್ ತೆಗೆದುಕೊಂಡಿದ್ದೀಯ. ಈಗ ಮತ್ತೆ ಪ್ರಯತ್ನ ಮಾಡು."
"ನಿನ್ನ ಐದು ರೂಪಾಯಿ ವಾಪಸ್ ತೆಗೋ.. ನೀನು ಏನೂ ಹೇಳದಿದ್ದರೆ ನನಗೆ ಕಥೆ ಬರೆಯುವುದಕ್ಕೆ ಸಾಧ್ಯವಿಲ್ಲ."
"ಈ ದಿನ ಬಸ್ ಅಪಘಾತದಲ್ಲಿ ಸತ್ತವನ ಪ್ರಾಣ ವಾಪಸ್ ಕೊಡು. ಆವತ್ತು ನೀನು ತಿಂದದ್ದು ಅವನ ಪಾಲಿನ ಊಟವನ್ನೇ. ಅವನು ಉಪವಾಸ ಬಿದ್ದಿದ್ದ, ಹಾಗೆಯೇ ಸತ್ತ. ಆ ದಿನದ ಸಮಯ ವಾಪಸ್ ಕೊಡು. ಇಲ್ಲದಿದ್ದರೆ ನೀನು ನನ್ನ ಋಣ ತೀರಿಸು. ಕಥೆ ಕೊಡು"
"ಇದೊಳ್ಳೇ ತರಲೆಯಾಯ್ತು. ನಾನು ನಿನಗೆ ಕಥೆ ಕೊಡೋದಿಲ್ಲವಯ್ಯಾ.. ಏನು ಬೇಕಾದರೂ ಮಾಡಿಕೋ.. ನೀನು ಬಡವ ಅಂತ ಕರುಣೆಯಿಂದ ಒಂದು ನೂರು ರೂಪಾಯಿ ಕೊಡುತ್ತೀನಿ. ಈ ಕಲಿಗಾಲದಲ್ಲಿ ಅದನ್ನೇ ಧಾರಾಳ ಅಂತ ತಿಳಿದು ಜಾಗ ಖಾಲಿ ಮಾಡು."
ಅವನು ವಿಚಲಿತನಾಗಲಿಲ್ಲ. ಚಲಿಸಲೂ ಇಲ್ಲ. ವಿಚಿತ್ರವಾಗಿ ನಕ್ಕ. ಹಲ್ಲುಗಳ ಮಧ್ಯೆ ಸೇರಿಕೊಂಡಿದ್ದ ಕೊಳೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಾಯಿಂದ ದುರ್ನಾತ ಬಂತು. ನಿಧಾನವಾಗಿ ಹತ್ತಿರ ಬಂದು ಹೇಳಿದ -
"ಮುಂದಿನ ವಾರ ಬರ್ತೀನಿ. ಕಥೆ ತಯಾರಿಸಿ ಇಟ್ಟಿರು."
ಅವನಿಗೆ ತಾನು ಯಾಕೆ ಅಡಿಯಾಳಾಗಿದ್ದಾನೆ? ಅವನನ್ನು ಕಂಡರೆ ಯಾಕಿಷ್ಟು ಭಯ? ಮೊದಲೇ ಹುಚ್ಚನ ಹಾಗಿದ್ದಾನೆ. ಮೇಲಾಗಿ ಕಥೆ ಕೊಂಡುಕೊಳ್ಳಲು ಬರುತ್ತಿದ್ದಾನೆ. ತಾನೂ ಮೂರ್ಖನಂತೆ ಅವನಿಗೆ ಕಥೆಯನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದಾನೆ. ಕಥೆಗಾರನಿಗೆ ನಗಬೇಕೆನ್ನಿಸಿತು. ಆದರೆ ನಗಲಾಗಲಿಲ್ಲ. ಅವನನ್ನು ಮರೆತುಬಿಡೋಣವೆಂದುಕೊಂಡೆ. ಎದ್ದು ನಿಂತಾಗ ಮೇಜಿನ ಮೇಲಿದ್ದ ಊಟದ ಕೂಪನ್ ಕಾಣಿಸಿತು. ಆ ರಾತ್ರಿಯೂ ಕಥೆಗಾರನಿಗೆ ಪಕ್ಕದ ಗಲ್ಲಿಯ ಹೋಟೇಲಿನ ಊಟ ಪ್ರಾಪ್ತವಾಯಿತು.
ಹೋಟೇಲಿನಲ್ಲಿ ಕುಳಿತಿದ್ದಾಗ ಕಥೆಗಾರನಿಗೆ ಅವನ ಕೈಯಲ್ಲಿದ್ದ ಕೂಪನ್‌ಗಳ ನೆನಪಾಯಿತು. ಅವನು ಇಲ್ಲಿಗೆ ಊಟಕ್ಕೆ ಬರಬಹುದು ಅನ್ನಿಸಿತು. ಕಾದು ನೋಡಬೇಕೆಂಬ ಆಸೆಯಿಂದ ಬಹಳ ಹೊತ್ತು ಆ ಹೊಟೇಲಿನಲ್ಲಿಯೇ ಕುಳಿತಿದ್ದ. ಹೊಟೇಲಿನ ಬಾಗಿಲು ಮುಚ್ಚುವವರೆಗೂ ಅಲ್ಲಿಯೇ ಕಾದಿದ್ದ. ಅವನು ಬರಲೇ ಇಲ್ಲ. ಕೌಂಟರಿನ ಬಳಿ ಹೋಗಿ ಅವನ ವಿಷಯ ಕೇಳಿದ.
"ಆ ಮನುಷ್ಯ ಒಪ್ಪತ್ತು ಮಾತ್ರ ಊಟ ಮಾಡುತ್ತಾನೆ. ಈ ದಿನ ಮಧ್ಯಾಹ್ನ ಬಂದಿದ್ದ. ಆದ್ದರಿಂದ ಈಗ ಬಂದಿಲ್ಲ. ಊಟದ ಒಪ್ಪತ್ತು ಮಧ್ಯಾಹ್ನವೋ ರಾತ್ರೆಯೋ ಅನ್ನುವುದು ಮಾತ್ರ ಖಾತ್ರಿಯಿಲ್ಲ." ಕೌಂಟರಿನವ ಹೇಳಿದ.
ಕಥೆಗಾರ ನಿರಾಸೆಯಂದ ಮನೆಗೆ ಬಂದ. ಬಂದ ನಂತರ ಏನೋ ಕಾಡತೊಡಗಿತು. ಅವನನ್ನು ಮೆಚ್ಚಿಸುವಂತಹ ಒಂದು ಕಥೆ ಬರೆಯಲೇ ಬೇಕೆನ್ನಿಸಿತು. ತನ್ನ ದೃಷ್ಟಿಯಲ್ಲಲ್ಲದಿದ್ದರೂ ಅವನ ದೃಷ್ಟಿಯಲ್ಲಾದರೂ ಒಂದು ಉತ್ತಮ ಕತೆ ಬರೆಯಲೇಬೇಕೆಂಬ ಸೆಳೆತ ವಿಪರೀತವಾಗಿ ಕಾಡಿತು. ಏನು ಬರೆಯಬೇಕೋ ತಿಳಿಯಲೇ ಇಲ್ಲ. ಈಗಾಗಲೇ ತಾನು ಅವನಿಗೆ ಎರಡು ಊಟ ಋಣ ಬಿದ್ದಿದ್ದೇನೆಂಬ ನೆನಪೂ ಕಾಡಿತು. ಅವನ ವಿಷಯದಲ್ಲಿ ಇಷ್ಟೊಂದು ತಲೆ ಕೆಡಿಸಿಕೊಳ್ಳುವುದು ಏಕೆಂದು ಸುಮ್ಮನಾದ.
ರಾತ್ರೆ ಹನ್ನೆರಡೂವರೆಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಮತ್ತೊಮ್ಮೆ ಕಾಗದಕ್ಕೆ ಲೇಖನಿ ಹಚ್ಚಿದ. ಈ ಬಾರಿ ಇನ್ನೂ ಸ್ವಲ್ಪ ಸಣ್ಣ ಕಥೆಬರೆದು ನಿಲ್ಲಿಸಿದ. ಅನಾವಶ್ಯಕ ವರ್ಣನೆಗಳನ್ನೆಲ್ಲಾ ತೆಗೆದುಹಾಕಿ ನೇರ ತನ್ನ ಆಲೋಚನೆಗಳನ್ನು ಕಾಗದದ ಮೇಲೆ ಭಟ್ಟಿ ಇಳಿಸಿದ. ಕಥೆಯ ಕರಡು ಮುಗಿಸುವ ವೇಳೆಗೆ ರಾತ್ರೆ ಎರಡೂವರೆ ಆಗಿತ್ತು. ಮತ್ತೊಮ್ಮೆ ಓದಿ ನೋಡಿದ. ಖುಷಿಯಾಯಿತು. ಇದನ್ನು ಯಾವುದಾದರೂ ಪತ್ರಿಕೆಗ ಕಳಿಸಿದರೆ ತಕ್ಷಣ ಪ್ರಕಟವಾಗಬಹುದು ಅನ್ನಿಸಿತು. ಆದರೆ ಅಷ್ಟರಲ್ಲಿ ಊಟದ ಕೂಪನ್ನಿನ ನೆನಪು ಬಂದದ್ದರಿಂದ ಲಕೋಟೆಯಲ್ಲಿ ಕಥೆಯನ್ನು ಸೇರಿಸಿ ಹಾಗೇ ಇಟ್ಟ. ಈ ಬಾರಿ ಅವನು ಬಂದರೆ ಅವನಿಗೆ ಇದನ್ನು ನೀಡಿ ಅವನ ಕಾಟ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಲೇ ಮಲಗಿದ.
ಅವನು ಸುಮಾರು ಎರಡು ತಿಂಗಳುಗಳ ಕಾಲ ಬರಲೇ ಇಲ್ಲ. ಅವನು ಬರುವುದೇ ಇಲ್ಲವೇನೋ ಅನ್ನಿಸಿತು. ಈ ಬಾರಿಯೂ ಕಥೆಯನ್ನು ಯಾವುದಾದರೂ ಪತ್ರಿಕೆಗೆ ಕಳಿಸೋಣವೆಂಬ ತೀವ್ರತೆ ಕಾಡಿತು. ಆದರೂ ಅವನ ನೆನಪಾದಾಗಳೆಲ್ಲಾ ಭಯವಾಗುತ್ತಿತ್ತು. ಅವನು ಯಾವಾಗ ಪ್ರತ್ಯಕ್ಷನಾಗುತ್ತಾನೋ ತಿಳಿಯದು.
ಎರಡು ತಿಂಗಳುಗಳ ನಂತರ ಅವನು ಬಂದ. ಅವನನ್ನು ಗುರುತು ಹಿಡಿಯಲಾಗದಷ್ಟು ಬದಲಾಗಿದ್ದ. ಗಡ್ಡ ಇನ್ನೂ ದಟ್ಟವಾಗಿ ಬೆಳೆದು ನಿಂತಿತ್ತು. ದೇಹ ಸಂಪೂರ್ಣವಾಗಿ ಕ್ಷೀಣಿಸಿ ಹೋಗಿತ್ತು. ಅವನು ಈಗಲೋ ಆಗಲೋ ಸಾಯಬಹುದೆನ್ನಿಸಿತ್ತು. ಅಷ್ಟು ನಿಶ್ಶಕ್ತನಾಗಿದ್ದ. ಬಂದವನೇ ಎದುರಿಗಿದ್ದ ಕುರ್ಚಿಯಲ್ಲಿ ಕುಸಿದ.
"ಎಲ್ಲಿ ನನ್ನ ಕಥೆ?"
"ತೆಗೋ ನಿನಗಾಗಿ ವಿಶೇಷವಾಗಿ ತಯಾರಿಸಿದ್ದೇನೆ"
"ಈ ಬಾರಿ ಪತ್ರಿಕೆಯವರಿಗೆ ಕಳಿಸಲಿಲ್ಲವಾ?"
"ಇಲ್ಲ. ಆದರೆ ನಿನಗೆ ಕತೆ ಯಾಕೆ ಬೇಕೂ ಅನ್ನೋದು ಮಾತ್ರ ನನಗೆ ಅರ್ಥವಾಗುತ್ತಿಲ್ಲ. ನೀನು ಬಯಸುತ್ತಿರುವುದಾದರೂ ಏನು?"
"ನಿನ್ನ ಸಾವು!!"
"...."
ನಿಧಾನವಾಗಿ ಕಥೆ ಓದಿದ. ಈ ಬಾರಿ ಸಂಪೂರ್ಣವಾಗಿ ಕಥೆ ಓದಿ -
"ಕಥೆ ಚೆನ್ನಾಗಿಲ್ಲ. ಇಷ್ಟೆಲ್ಲಾ ಬರೆದಿರೋದು ಅನಾವಶ್ಯಕ ಅನ್ನಿಸುತ್ತೆ".
"ನೋಡು, ನೀನು ಯಾಕೆ ನನಗೆ ಈ ರೀತಿಯಾಗಿ ಚಿತ್ರಹಿಂಸೆ ಕೊಡುತ್ತಾ ಇದ್ದೀಯೋ ಅರ್ಥವಾಗುತ್ತಿಲ್ಲ. ನಿನಗೇನು ಬೇಕು? ಕಥೆಯೇ ಬೇಕಾ? ಹಣ ಬೇಕಾ? ನೌಕರಿ ಬೇಕಾ? ನೀನೇನು ಪದವೀಧರ ನಿರುದ್ಯೋಗಿಯಾ? ಯಾರು? ಒಂದೂ ತಿಳೀತಾ ಇಲ್ಲ."
ಅವನು ಜೋರಾಗಿ ನಕ್ಕ.
"ನಾನು ಯಾರು? ಚೆನ್ನಾಗಿದೆ ನಿನ್ನ ಪ್ರಶ್ನೆ. ನನ್ನನ್ನೇ ಅರ್ಥಮಾಡಿಕೊಳ್ಳದಿರೋನು ನೀನೇನು ಕಥೆ ಬರೀತೀಯೋ ಮಾರಾಯ.. ನನ್ನ ಹೆಸರು ಜಿ.ಸತ್ಯ ಅಂತ. ಜಿ ಅಂದರೆ ಏನು ಗೊತ್ತಾ? ಘೋರ. ಘೋರ ಸತ್ಯ."
"...."
"ನೋಡು ಇದೇ ನನ್ನ ಕಟ್ಟಕಡೆಯ ಊಟದ ಕೂಪನ್. ನಿನಗೆ ಕೊಡುತ್ತಾ ಇದ್ದೀನಿ. ಸರಿಯಾಗಿ ಉಂಡು, ತೇಗಿ, ಚೆನ್ನಾದ ಒಂದು ಕಥೆ ಬರೀಬೇಕು. ನಾನು ಮತ್ತೆ ಮುಂದಿನ ವಾರ ಬರುವೆ."
"ಮುಂದಿನ ವಾರ ಅನ್ನುತ್ತೀ. ಹೋದ ಸರ್ತಿ ಒಂದು ತಿಂಗಳು ಮಾಡಿದೆ. ಈ ಬಾರಿ ಎರಡು ತಿಂಗಳು ಮಾಡಿದೆ. ಮುಂದಿನ ವಾರ ಅಂದರೆ ಯಾವಾಗ?"
"ಒಂದು ವಾರ ನಮ್ಮಂಥವರಿಗೆ ಎಷ್ಟು ದೀರ್ಘವಾಗಿರುತ್ತೋ ತಿಳೀತಾ?"
"ಹೋಗಲಿ ಕಥೆ ಮುಗಿದ ತಕ್ಷಣ ನಿನಗೆ ಕಳಿಸಿಕೊಡುತ್ತೇನೆ. ನಿನ್ನ ವಿಳಾಸ ಕೊಡು."
"ನಾನು ಸರ್ವಾಂತರ್ಯಾಮಿ. ನಿನಗೆ ನಾನೆಲ್ಲೂ ಕಾಣಿಸಿಲ್ಲವೆ? ಆ ದಿನ ಬಸ್ ಕೆಳಗೆ ಸತ್ತದ್ದು ನೋಡಿದೆಯಲ್ಲಾ. ಆ ನಂತರ ನಾನು ನಿನಗೆಲ್ಲೂ ಕಾಣಿಸಿಲ್ಲವೇ?"
"ಅರ್ಥ ಆಗಲಿಲ್ಲ"
"ಅರ್ಥ ಮಾಡಿಕೋ. ಅರ್ಥ ಮಾಡಿಕೊಂಡ ದಿನ ನಿನ್ನ ಅತ್ಯುತ್ತಮ ಕಥೆ ಹೊರಹೊಮ್ಮಬಹುದು. ಈ ವಾರದೊಳಗಾಗಿ ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸು."
"ಅಲ್ಲ, ನೀನು ಬಯಸುವುದು ನನ್ನ ಸಾವೇ ಆದರೆ, ಯಾಕೆ ಒಂದೇ ಏಟಿಗೆ ಕೊಲ್ಲುತ್ತಿಲ್ಲ? ಅಲ್ಲ, ಸಾಯಬೇಕೆಂದು ನನಗೇನೂ ಅಸೆಯಿಲ್ಲ. ಆದರೆ ಈ ಚಿತ್ರಹಿಂಸೆ ಯಾಕೆ ಕೊಡುತ್ತಿದ್ದೀಯ?"
"ನಿನ್ನ ಅತ್ಯುತ್ತಮ ಕಥೆ ಬಂದ ದಿನವೇ ನಿನ್ನ ಸಾವೂ ಬರುತ್ತದೆ. ಆದರೆ ಅದು ನಿನ್ನ ಅತ್ಯತ್ತಮ ಕಥೆ ಎಂದು ತಿಳಿಯುವ ಅವಕಾಶ ನಿನಗಿರುವುದಿಲ್ಲ!!" ಯೋಗಿಯಂತೆ ಹೇಳಿದ.
"ಸರಿ ಮುಂದಿನ ವಾರದೊಳಗೆ ನಿನ್ನ ಕಥೆ ತಯಾರಿಸಿ ಇಡುತ್ತೇನೆ"
ಈ ಬಾರಿಯೂ ಕಥೆಗಾರ ಹೊಟೇಲಿನಲ್ಲಿ ಊಟ ಮಾಡಿದ. ಈ ಬಡವನ ಋಣ ಹೊರುವುದು ಇನ್ನೆಷ್ಟು ದಿನ? ಯೋಚಿಸಿದಷ್ಟೂ ವಿಷಯ ಜಟಿಲವಾಗುತ್ತಾ ಹೋಯಿತು. ದರಿದ್ರದವ ಸುಮ್ಮನೆ ಕಥೆ ಎಂದಿದ್ದರೆ ನೂರಾರು ಕಥೆ ಈ ಬೇಳೆಗೆ ಬರೆದು ಕೊಟ್ಟುಬಿಡುತ್ತಿದ್ದ. ಆದರೆ ಅವನಿಗೆ ’ಉತ್ತಮ’ ಕಥೆಯೇ ಬೇಕಂತೆ. ಅವನು ಬಿಟ್ಟುಹೋದ ಚಡಪಡಿಕೆಯನ್ನೇ ತಾನೀಗ ಅನುಭವಿಸುತ್ತಿದ್ದಾನೆ. ಎಷ್ಟು ಪ್ರಯತ್ನಿಸಿದರೂ ಈ ಬಾರಿ ಕಥೆ ಬರೆಯಲು ಸಾಧ್ಯವಾಗಲೇ ಇಲ್ಲ. ಹುಚ್ಚು ದಾರ್ಶನಿಕನಂತೆ "ನೀನು ಅತ್ಯುತ್ತಮ ಕಥೆ ಬರೆದ ದಿನ ಸಾಯುತ್ತೀ" ಎಂದು ಅವನು ಹೇಳಿದ ಮಾತು ಕಥೆಗಾರನ ಮನದಲ್ಲಿ ರಿಂಗಣಿಸುತ್ತಿತು. ಪೆನ್ನು ಕಾಗದಕ್ಕಿಟ್ಟಾಗಲೆಲ್ಲಾ ಭೂತಾಕಾರದ ಅವನ ಚಿತ್ರ ತನ್ನೆದುರಿಗೆ ಬರುತ್ತಿತ್ತು. ಅದೇ ಕಪ್ಪು ಮೈ. ಎದೆಯ ಮೇಲಿನ ರೋಮ, ಕೊಳಕು ಬಟ್ಟೆ, ಮೂರೂವರೆ ತಿಂಗಳ ಗಡ್ಡ. ವಾಸನೆ ಬೀರುವ ದಂತಪಂಕ್ತಿ... ಇವೆಲ್ಲಾ ನೆನಪಾದಾಗ, ಇಂಥಹ ವ್ಯಕ್ತಿಯ ಅಡಿಯಾಳಾಗಿದ್ದೇನೆಂಬ ವಾಸ್ತವ ಕಥೆಗಾರನನ್ನು ತಟ್ಟಿದಾಗಲೆಲ್ಲಾ ತನ್ನ ಬಗ್ಗೆ ತನಗೇ ಹೇಸಿಗೆಯಾಯಿತು. ಈ ಚಿಲ್ಲರೆ ಮನುಷ್ಯನಿಗಾಗಿ ಏಕಿಷ್ಟು ಪರಿತಾಪ? ಅರ್ಥವಾಗಲಿಲ್ಲ. ಅವನನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಅವನ ಹೆಸರೇ ಕಥೆಗಾರನಿಗೆ ಅರ್ಥವಾಗಿಲ್ಲ.. ಜಿ.ಸತ್ಯ... ಘೋರ ಸತ್ಯ!! ಆದರೆ ಕಥೆ ಬರೆಯದೇ ಇದ್ದಷ್ಟೂ ಕಥೆಗಾರನ ಚಡಪಡಿಕೆ ಹೆಚ್ಚಾಯಿತು. ಅವನು ಕೋರಿದ್ದನೆಂದು ಬರೆದಿದ್ದ ಹಿಂದಿನ ಎರಡೂ ಕಥೆಗಳನ್ನು ಮತ್ತೆ ನಾಲ್ಕಾರು ಬಾರಿ ಓದಿದ. ಬಾಲಿಶವೆನ್ನಿಸಿತು. ಪರಪರನೆ ಹರಿದು ಹಾಕಿದ. ಅವನು ಕೊಳಕು ಹಲ್ಲುಗಳನ್ನು ತೋರಿ ನಕ್ಕು ತನ್ನನ್ನು ಲೇವಡಿ ಮಾಡುತ್ತಿರುವಂತೆ ಅನ್ನಿಸಿತು.
ಒಂದು ವಾರ ಕಳೆಯುವುದರೊಳಗೆ ತನ್ನಲ್ಲಿ ವಿಚಿತ್ರ ಬದಲಾವಣೆಗಳಾದುವು. ಕಥೆಗಾರನ ಕೂದಲೆಲ್ಲಾ ನರೆತಿತ್ತು. ಮುಖ ಸುಕ್ಕುಗಟ್ಟಿತ್ತು. ಮೈ ನಡುಗುತ್ತಿತ್ತು. ಮೊನ್ನೆಕಂಡ ಡಾಕ್ಟರು ಕಥೆಗಾರನಿಗೆ ಬಿಪಿ ಇದೆ ಎಂದು ಹೇಳಿದರು. ನಿನ್ನೆ ಬಂದವರು ಸಕ್ಕರೆ ಖಾಯಿಲೆ ಎಂದರು. ತನ್ನ ಕೈ ಸ್ವಾಭಾವಿಕವಾಗಿ ನಡುಗುತ್ತಿತ್ತು. ಒಂದೇ ವಾರ. ನಿಜವಾಗಿಯೂ ಈ ಒಂದು ವಾರದ ದೀರ್ಘಕಾಲದಲ್ಲಿ ತನ್ನಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗಿದ್ದುವು. ಈ ಅವಧಿಯಲ್ಲಿ ಮನಸ್ಸಿನಲ್ಲಿ ಲಕ್ಷಾಂತರ ಆಲೋಚನೆಗಳು ಈಗಾಗಲೇ ಹರಿದು ಹೋಗಿದ್ದುವು. ಆದರೆ ಅವನು ಹೇಳಿದ ಕಥೆ ಮಾತ್ರ ಕಥೆಗಾರನಿಗೆ ಬರೆಯಲಾಗಲೇ ಇಲ್ಲ. ಅದಕ್ಕೆ ವಸ್ತು ತನಗೆ ಸಿಕ್ಕಲೇ ಇಲ್ಲ. ಕಥೆಗಾರನಿಗೆ ಮೊಟ್ಟಮೊದಲ ಬಾರಿಗೆ ಅವನು ಮತ್ತೆ ಬರದೇ ಇದ್ದರೆ ಒಳ್ಳೆಯದೆನ್ನಿಸಿತು. ಈ ವಾರ ಯಾಕಾದರೂ ಮುಗಿಯುತ್ತದೋ ಎನ್ನಿಸಿಬಿಟ್ಟಿತ್ತು. ಕೈನಡುಕ ಎಷ್ಟು ಹೆಚ್ಚಾಗಿತ್ತೆಂದರೆ ಸಿಗರೇಟು ಹಚ್ಚಿಕೊಳ್ಳಲು ಬೆಂಕಿಕಡ್ಡಿ ಗೀರಿದರೆ ನಡುಕದ ಭರದಲ್ಲಿ ಅದು ಆರಿ ಹೋಗುತ್ತಿತ್ತು. ಸಿಗರೇಟು ಇಲ್ಲದೇ ತನಗೆ ಆಲೋಚಿಸುವುದೇ ಅಸಾಧ್ಯವಾಗಿತ್ತು.
ಈ ಬಾರಿ ಸರಿಯಾಗಿ ಒಂದು ವಾರದ ಅವಧಿಗೆ ಅವನು ಬಂದು ಬಿಟ್ಟ. ಕಥೆಗಾರನಲ್ಲಿ ಕಟ್ಟಕಡೆಯ ಆಶಾಜ್ಯೋತಿಯೊಂದು ಬೆಳಗಿತು. ಬಹುಶಃ ಅವನು ತನ್ನನ್ನು ಗುರುತು ಹಿಡಿಯಲಾರ. ತಾನು ಅಷ್ಟೊಂದು ಬದಲಾವಣೆ ಆಗಿದ್ದೆ. ಆದರೆ ಅವನ ತೀಕ್ಷ್ಣ ದೃಷ್ಟಿ ತನ್ನತ್ತಲೇ ಕೇಂದ್ರೀಕೃತವಾಗಿತ್ತು. ನೇರವಾಗಿ ಕಥೆಗಾರನ ಬಳಿ ಬಂದು ಕೇಳಿದ.
"ಎಲ್ಲಿ, ನನ್ನ ಕಥೆ? ಕೊಡು!!"
"ಮೂರು ಕೂಪನ್ನಿನ ಹಣ ಕೊಟ್ಟುಬಿಡುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸು. ನಿನ್ನ ಕಥೆ ನನಗೆ ಬರೆಯಲಾಗಲಿಲ್ಲ."
"ಒಂದು ವಾರದಿಂದ ಊಟ ಮಾಡಿಲ್ಲ. ಕಡೇ ಕೂಪನ್ ನಿನಗೇ ಕೊಟ್ಟುಬಿಟ್ಟೆ. ನಿನ್ನ ಕಥೆಗೋಸ್ಕರವೇ ಕಾಯುತ್ತಿದ್ದೇನೆ. ನಾನು ನಿನ್ನ ಅಭಿಮಾನಿ."
"ನೀನು ಕೊಟ್ಟ ಕೂಪನ್ನಿನಿಂದ ಊಟ ಮಾಡಿದೆ, ನಿಜ. ಆದರೆ ಕಥೆ ಬರೆಯೋಕ್ಕೆ ಮಾತ್ರ ನನ್ನಿಂದ ಸಾಧ್ಯವಾಗಿಲ್ಲ. ಈಗ ನನ್ನ ಪರಿಸ್ಥಿತಿ ನೋಡು. ದಯವಿಟ್ಟು ನನ್ನನ್ನು ಬಿಟ್ಟುಬಿಡು. ನನ್ನಿಂದ ಏನೂ ಬರೆಯೋಕ್ಕೆ ಆಗಲ್ಲ."
"ಉಹೂಂ ನಾನು ಒಪ್ಪಿಕೊಳ್ಳೋದಿಲ್ಲ. ನಾನು ಎಷ್ಟೋ ದಿನಗಳಿಂದ ನಿನ್ನ ಕಥೆಗಾಗಿಯೇ ಸೇರಿಸಿಟ್ಟ ಕೂಪನ್ ಅದು. ನನಗೀಗ ಕಥೆ ಬೇಕೇಬೇಕು."
"ನಾನು ಬರೆಯದ ಕಥೆಯನ್ನು ಎಲ್ಲಿಂದ ತಂದುಕೊಡಲಿ? ಹೇಳು, ಬೇಕಿದ್ದರೆ ಹಣ ಕೊಡುತ್ತೇನೆ."
"ಜೀವನದಲ್ಲಿ ಕಥೆಯನ್ನು ಕೊಳ್ಳಲು ಸಾಧ್ಯ. ಆದರೆ ನನ್ನನ್ನು ಕೊಳ್ಳಲು ಮಾತ್ರ ನಿನಗೆ ಅಸಾಧ್ಯ. ಈ ದಿನ ಕಥೆ ತೆಗೆದುಕೊಂಡು ಹೋಗಬೇಕೆಂದೇ ಬಂದಿದ್ದೇನೆ. ಹೊಸ ಕಥೆಯಿಲ್ಲದಿದ್ದರೆ, ಹಳೆಯ ಕಥೆಯನ್ನೇ ಕೊಡು. ಪರವಾಗಿಲ್ಲ ಅದನ್ನೇ ತೆಗೆದುಕೊಂಡು ಹೋಗುತ್ತೇನೆ."
"ನೋಡು ಆ ಕಥೆಗಳು ಇಲ್ಲ. ಅವುಗಳನ್ನು ಹರಿದುಹಾಕಿದೆ"
"ಉಹೂಂ ಆಗೋದಿಲ್ಲ. ಕಥೆ ಬೇಕೇ ಬೇಕು"
ಅವನು ಸಣ್ಣ ಮಗುವಿನಂತೆ ನೆಲದ ಮೇಲೆ ಕುಳಿತು ಕೈಕಾಲು ಝಾಡಿಸಿದ. ಕಥೆಗಾರನ ಹೃದಯ ಛಳಕ್ ಅಂದಿತು. ತನ್ನ ಎದೆಯಲ್ಲಿ ಭೀಕರವಾದ ನೋವು ಪ್ರಾರಂಭವಾಯಿತು. ಅವನು ಕಥೆಗಾರನ್ನನ್ನು ಬಿಡುವಂತೆ ಕಾಣಲೇ ಇಲ್ಲ. ಇದೇ ಮನುಷ್ಯ ನಾಲ್ಕು ತಿಂಗಳ ಹಿಂದೆ ಬಂದಿದ್ದರೆ ಸ್ಥಳದಲ್ಲೇ ಒಂದು ಕಥೆಯನ್ನು ಹೆಣೆದುಕೊಡುತ್ತಿದ್ದ ಅನ್ನಿಸಿತು. ಆದರೆ ಈ ದಿನ ಈ ಅವಸ್ಥೆಯಲ್ಲಿ ಬಿದ್ದಿರುವ ತಾನು ನಡುಗುವ ಕೈಗಳಿಂದ ... ಆಲೋಚಿಸಲಾರದೇ ಕೊರಡಿನಂತೆ ಬಿದ್ದಿರುವ ತಾನು.. ಅದೂ ಸಿಗರೇಟಿಲ್ಲದ ಬಾಯಿ ನಿರಂತರ ಜೊಲ್ಲು ಸುರಿಸುತ್ತಿರುವಾಗ ಕಥೆ ಬರೆಯುವುದು ಖಂಡಿತ ಸಾಧ್ಯವಿಲ್ಲದ ಮಾತಾಗಿತ್ತು"
ಆಗ ಒಂದು ಅದ್ಭುತ ಆಲೋಚನೆ ಕಥೆಗಾರನ ಮೆದುಳನ್ನು ಹೊಕ್ಕಿತು. ತನ್ನ ಮೇಜಿನ ಬಳಿ ಹೋಗಿ ಬರೆಯುವ ಪ್ಯಾಡನ್ನು ತೆಗೆದ. ಅವನನ್ನು ತಾನು ಅರ್ಥಮಾಡಿಕೊಳ್ಳುತ್ತಿದ್ದಾನೆ ಎಂಬ ಭಾವನೆ ಉಂಟಾಯಿತು. ಪ್ಯಾಡಿನಿಂದ ಒಂದು ಬಿಳೀ ಹಾಳೆಯನ್ನು ಹಾಳಾಗದಂತೆ ಹರಿದ. ಅವನತ್ತ ನಡೆದು ಹೋಗಿ ಆ ಖಾಲಿ ಹಾಳೆಯನ್ನು ಅವನಿಗೆ ಕೊಟ್ಟ. ಭಯದಿಂದ ಅವನತ್ತ ನೋಡುತ್ತಾ ---
"ತೆಗೋ ಜೀವನದಲ್ಲಿ ನಾನು ಬರೆದಿರುವ ಅತ್ಯಂತ ಉತ್ತಮವಾದ ಕಥೆ ಇದೇ".
ಕಥೆಗಾರನ ಕೈ ನಡುಗುತ್ತಿತ್ತು. ಹೃದಯದ ಬಡಿತ ತೀವ್ರವಾಗಿ, ಎದೆ ನೋಯುತ್ತಿತ್ತು. ಅವನು ಅದನ್ನು ತೆಗೆದುಕೊಂಡು ಆ ಬದಿ ಈ ಬದಿ ತಿರುಗಿಸಿ ನೋಡಿದ. ಒಂದು ಮುಗುಳ್ನಗೆ ನಕ್ಕು ಹಾರಾಡಿದ.
"ಆಹಾ.. ಅದ್ಭುತ! ನಾನು ಜೀವನದಲ್ಲಿ ನೋಡಿದ ಅತ್ಯಂತ ಅರ್ಥಗರ್ಭಿತವಾದ ಕಥೆ ಇದೇ" ಎಂದು ಕೂಗಾಡಿ ಕುಣಿದಾಡುತ್ತಾ ರಸ್ತೆಯಲ್ಲಿ ಓಡಿದ. ಕಥೆಗಾರ ನಿಧಾನವಾಗಿ ಕುರ್ಚಿಯಲ್ಲಿ ಕುಸಿದ. ಏದುಸಿರು ಬರುತ್ತಿತ್ತು. ಜೀವನದಲ್ಲಿ ಮಹತ್ತರ ಸಾಧನೆ ಮಾಡಿದಂತೆನ್ನಿಸಿತು. ಆದರೆ ಈ ಜಿ.ಸತ್ಯ ಮಾತ್ರ ಕಥೆಗಾರನಿಗೆ ಅರ್ಥವೇ ಆಗಲಿಲ್ಲ. ಕಣ್ಣಲ್ಲಿ ನೀರು ಬಂದು ಕಣ್ಣು ಮಂಜಾಯಿತು. ಎದುರಿಗಿದ್ದ ಪೋಸ್ಟರ್ ಕಥೆಗಾರನನ್ನು ನೋಡಿ ನಕ್ಕಂತಾಯಿತು. "If you can't understand my silence, you can't understand my words".. ಕಥೆಗಾರ ಮೌನವಾಗಿ ಅದರೆಡೆಗೇ ದೃಷ್ಟಿ ನೆಟ್ಟಿದ್ದ.
ಸೆಪ್ಟೆಂಬರ್ ೧೯೮೭.
No comments:
Post a Comment