skip to main |
skip to sidebar
ಸ್ಟಾಕಿ
"ಅದು ಅಷ್ಟೊಂದು ಜೊಲ್ಲು ಸುರಿಸುತ್ತಾ ಮಲಗಿದೆ. ನೀನೂ ನಾಲ್ಕು ದಿನಗಳಿಂದ ಆಸ್ಪತ್ರೆಗ ಕರಕೊಂಡು ಹೋಗೀ ಬಂದೂ ಮಾಡುತ್ತಲೇ ಇದ್ದೀಯ. ಆದರೂ ಅದಕ್ಕೆ ವಾಸಿಯಾಗೋ ಲಕ್ಷಣ ಕಾಣಿಸುತ್ತಿಲ್ಲ. ನಾನೂ ನನ್ನ ಮಟ್ಟಿಗೆ ಮಾಡಿದ್ದಕ್ಕಿಂತ ಹೆಚ್ಚಾಗಿಯೇ ಮಾಡ್ತಾ ಇದ್ದೀನಿ. ಮನೇಲಿ ಎಳೇ ಮಗೂ ಬೇರೆ ಇದೆ. ದರಿದ್ರ ಮುಂಡೇದು ಅತ್ಲಾಗೆ ಸತ್ತರಾದರೂ ಶಾಂತಿಯಿಂದಿರಬಹುದು."
"ಅದರ ಮೇಲೆ ಯಾಕೆ ರೇಗಾಡುತ್ತೀ ಪಾಪ! ಅದೇನು ತಪ್ಪು ಮಾಡಿದೆ? ಏನೋ ರೋಗ ಬಂದಿದೆ, ಮಾತ್ರೆ ಹಾಕುತ್ತಾ ಇದ್ದೀವಿ, ಎರಡು ದಿನದಲ್ಲಿ ವಾಸಿಯಾಗುತ್ತೆ.. ಸುಮ್ಮನೆ ಗೊಣಗಾಡಬೇಡ. ಡಾಕ್ಟರು ಬಾರ್ಲಿ ನೀರು ಹಾಕೋಕೆ ಹೇಳಿದ್ದಾರಲ್ಲಾ, ಅದನ್ನು ತಂದು ಹಾಕು. ಇಷ್ಟು ದಿನ ನಿಯತ್ತಾಗಿ ಮನೆ ಕಾವಲು ಇದ್ದಿದ್ದಕ್ಕಾದರೂ ಅದನ್ನು ನೋಡಿಕೊಳ್ಳದಿದ್ದರೆ ಹೇಗೆ?"
"ಏನೋ ಬೇಡಾ ಬೇಡಾಂದರೂ ನಾಯೀನ ಇಟ್ಟುಕೊಳ್ಳೋಣ ಅಂದೆ. ಆಮೇಲೆ ನೋಡಿಕೊಳ್ಳಬೇಕಾದ್ದೆಲ್ಲಾ ನಾನು. ನಿನಗೇನು ಆರಾಮವಾಗಿ ಕೂತ ಭಾಷಣ ಬಿಗಿಯುತ್ತೀಯ."
ಇವಳೊಂದಿಗೆ ಚರ್ಚಿಸಿ ಪ್ರಯೋಜನವಿಲ್ಲವೆಂದು ಅವನು ಸುಮ್ಮನಾದ. ಸ್ಟಾಕಿ ತುಂಬಾ ಪ್ರಿಯವಾದ, ಆಕರ್ಷಕವಾದ ನಾಯಿಯಾಗಿತ್ತು. ಅದರ ಆತ್ಮೀಯತೆ ನೋಡಿದಾಗೆಲ್ಲಾ ಅವನಿಗೆ ತನ್ನ ಬಗ್ಗೆಯೇ ಮರುಕವಾಗುತ್ತದೆ. ಅಷ್ಟು ಆತ್ಮೀಯ ಹೆಂಡತಿ ಮಕ್ಕಳು ಕೂಡಾ ಎಲ್ಲೂ ಸಿಗುವುದಿಲ್ಲವೇನೋ. ತಾನು ಹೊಡೆದರೂ ಬಡಿದರೂ ಅದು ಮಾತ್ರ ಎಂದೂ ಕೋಪಿಸಿಕೊಂಡದ್ದಿಲ್ಲ. ಒಂದು ದಿನವೂ ಗುರ್ ಎಂದದ್ದಿಲ್ಲ. ಬಂದವರೆದುರಿಗೆಲ್ಲಾ ಮಗಳ ಕೈಲಿ ಹಾಡು ಹೇಳಿಸಿ ಅವಳ ಪಾಂಡಿತ್ಯ ಪ್ರದರ್ಶನ ಮಾಡುವಂತೆಯೇ ಸ್ಟಾಕಿಯ ನಿಷ್ಠೆಯನ್ನೂ ಪ್ರದರ್ಶಿಸುವ ಅವನ ತೆವಲನ್ನು ಅದು ಸಹನೆಯಿಂದ ಪೂರೈಸುತ್ತಲೇ ಬಂದಿದೆ. ಕಾಲ ಮೇಲು ಬ್ರೆಡ್ ತುಣುಕನ್ನು ಇಟ್ಟು ತಿನ್ನಬೇಡ ಎಂದಾಗ ಅಮಾಯಕವಾಗಿ ಅವನ ಆಜ್ಞೆಗಾಗಿಯೇ ಅವನತ್ತ ನೋಡುವ ಪರಿಯನ್ನು ಕಂಡಾಗ ಅವನಿಗೆ ಅಪರಾಧೀ ಪ್ರಜ್ಞೆ ಕಾಡುವುದುಂಟು. ಅವನ ವಿಕೃತ ಆಲೋಚನೆಗಳಿಗೆ ತಕ್ಕಂತೆ ಅದನ್ನು ಎಷ್ಟುಬಾರಿ ಬಳಸಿಕೊಂಡಿದ್ದಾನೆ. ಛೇ ಮಾನವೀಯತೆಯೇ ಇಲ್ಲದೆ ತಾನು ವರ್ತಿಸಿದ ಸಂದರ್ಭಗಳು ಎಷ್ಟು ಎಂದು ಯೋಚಿಸುವುದುಂಟು. ಆದರೂ ಅದು ಬಾಲ ಅಲ್ಲಾಡಿಸುವ ಆಕರ್ಷಕ ಪರಿ ನೋಡಿದಾಗ ಅವನಿಗೆ ಅಭಿಮಾನ ಉಕ್ಕುವುದುಂಟು. ಪಾಪ ಆ ನಾಯಿಗೆ ನಿಷ್ಠೆ ಬಿಟ್ಟರೆ ಬೇರೇನೂ ತಿಳಿದಿಲ್ಲ.
ಅವನು ಸಿಗರೇಟನ್ನು ಬಾಯಿಗಿಟ್ಟು ಅದನ್ನು ಬೆಳಗಿಸಲು ಅಡುಗೆ ಮನೆಯ ಕಡೆಗೆ ಹೋದ. ಅವಳ ಗೊಣಗಾಟ ಕೇಳುಸುತ್ತಲೇ ಇತ್ತು. ಅಡುಗೆಮನೆಯಿಂದ ಬೆಂಕಿ ಪೊಟ್ಟಣವನ್ನು ತೆಗೆದು ಸಿಗರೇಟನ್ನು ಬೆಳಗಿಸಿಕೊಂಡ. ಅಲ್ಲಿಂದ ನಿಧಾನವಾಗಿ ನಡೆದುಬಂದು ತನ್ನ ಕೋಣೆ ಹೊಕ್ಕು ಬಾಗಿಲು ಹಾಕಿಕೊಂಡ. ತಾನು ಸಿಗರೇಟು ಬೆಳಗಿಸಿ ಕೋಣೆಯೊಳಕ್ಕೆ ಹೋದರೆ ಯಾವುದೋ ಕಲ್ಪನಾಲೋಕದ ವಿಹಾರಕ್ಕೋ ಬರವಣಿಗೆಯ ಕೆಲಸಕ್ಕೋ ಕುಳಿತುಕೊಳ್ಳುತ್ತಾನೆಂದು ಮನೆಯವರಿಗೆಲ್ಲ ಗೊತ್ತು. ಇಂಥ ಸಂದರ್ಭದಲ್ಲಿ ಅವನನ್ನು ಯಾರೂ ಮಾತನಾಡಿಸುವುದಿಲ್ಲ. ಒಮ್ಮೊಮ್ಮೆ ಅವಳ ಗೊಣಗಾಟ ಹೆಚ್ಚಾದಾಗಲೂ ಇದೇ ರೀತಿಯ ಕೃತಕ ಕಲ್ಪನಾಲೋಕಕ್ಕೆ ಹೊರಟು ಅರೆನಿದ್ರಾವಸ್ಥೆಯಲ್ಲಿ ಆರಾಮಕುರ್ಚಿಯಲ್ಲಿ ಅವನು ಕೂಡುವುದುಂಟು. ಅಂದೂ ಅವಳ ಗೊಣಗಾಟ ತಾಳಲಾರದೇ ಸಿಗರೇಟನ್ನು ಬೆಳಗಿಸಿದ್ದ.
ಸಿಗರೇಟಿನ ಹೊಗೆ ದೀರ್ಘವಾಗಿ ಹೊರಬಿಟ್ಟು ಆರಾಮ ಕುರ್ಚಿಯಲ್ಲಿ ಕುಳಿತಾಗ ಅವನಿಗೆ ಕೆಲ ನೆನಪುಗಳು ಮರುಕಳಿಸಿದವು. ಒಂದು - ಸ್ಟಾಕಿ ತಮ್ಮ ಮನೆ ಪ್ರವೇಶಿಸಿದ ಮೊದಲ ದಿನದ ನೆನಪು. ಆ ನೆನಪು ಇಂದಿಗೂ ಅವನ ಮನಃಪಟಲದಲ್ಲಿ ಸ್ಪಷ್ಟವಾಗಿದೆ. ಮೂರುವರ್ಷಗಳ ಹಿಂದೆ ಏಪ್ರಿಲ್ ಒಂದನೇ ತಾರೀಖಿನಂದು ತಮ್ಮ ಮಗಳು ಸ್ಕೂಲಿನಿಂದ ಬರುತ್ತಾ ಒಂಟಿಯಾಗಿ ಬರದೇ ಕೈಯಲ್ಲಿ ನಾಯಿಮರಿಯನ್ನೂ ಹಿಡಿದು ತಂದಿದ್ದಳು.
"ಅಪ್ಪ ನಾನೊಂದು ನಾಯಿ ಮರಿ ತಂದಿದ್ದೇನೆ." ಎಂದವಳು ಹೇಳಿದಾಗ ಏಪ್ರಿಲ್ ಫೂಲ್ ಮಾಡುತ್ತಿದ್ದಾಳೆಂದೇ ಅವನು ಭಾವಿಸಿದ್ದ. ಆದರೆ ವಾಸ್ತವವಾಗಿ ನಾಯಿಮರಿ ಪ್ರತ್ಯಕ್ಷವಾಗಿತ್ತು! ಯಾವುದೇ ತಂದೆ ಪ್ರತಿಕ್ರಿಯುಸುವಂತೆ ಅವನೂ "ಬೇಡಮ್ಮ, ನಮಗ್ಯಾಕೆ?" ಅಂದಿದ್ದ. ಅವನ ಹೆಂಡತಿಯಂತೂ ದೊಡ್ಡ ರಂಪವನ್ನೇ ಮಾಡಿಬಿಟ್ಟಿದ್ದಳು.
"ಬೇಡ, ನಮಗೆ ಯಾಕೆ ಈ ಇಲ್ಲದ ಉಸಾಬರಿ.. ಸುಮ್ಮನೆ ಎಲ್ಲಿಂದ ತಂದಳೋ ಅಲ್ಲಿಯೇ ವಾಪಸು ಬಿಟ್ಟು ಬರಲಿ"
"ಬೇಡಮ್ಮ, ಅಮ್ಮ ಹೇಳಿದ ಮಾತು ಕೇಳು. ನಮಗೆ ಯಾಕೆ ಸುಮ್ಮನೆ ನಾಯಿ? ನಮ್ಮನೆಯೇನೂ ಕಾವಲು ಕಾಯುವಷ್ಟು ದೊಡ್ಡದಲ್ಲ. ಮನೆಯ ಒಳಗೆ ಬಿಟ್ಟುಕೊಂಡರೆ ಸುಮ್ಮನೆ ಕಾಲಿಗೆ ತೊಡರಿಕೊಳ್ಳುತ್ತೆ. ಯಾಕೆ ಸುಮ್ಮನೆ ಇಲ್ಲದ ಕಿರಿಕಿರಿ?"
"ಇಲ್ಲ ಅಪ್ಪ, ನಾನು ನೋಡಿಕೋತೀನಿ, ನಿನಗೆ ಯಾಕೆ ಅನುಮಾನ? ಅದಕ್ಕೆ ಒಳ್ಳೆಯ ಟ್ರೇನಿಂಗ್ ಕೊಟ್ಟರೆ ಎಷ್ಟು ಚೆನ್ನಾಗಿ ಆಡುತ್ತೆ ಗೊತ್ತಾ? ನಂ ಫ್ರೆಂಡು ರಾಧಾ ಮನೇಲಿ ನಾಯಿಯಿದೆ. ಎಷ್ಟು ಮುದ್ದಾಗಿದೆ ಗೊತ್ತಾ?"
"ಅಲ್ಲಮ್ಮ, ಅದು ಯಾವ ಜಾತೀನೋ ಗೊತ್ತಿಲ್ಲ. ಹಾಗೆಲ್ಲಾ ಬೀದಿ ನಾಯಿ ಸಾಕೋದು ಒಳ್ಳೇದಲ್ಲ. ಅದರ ತಾಯೀಗೆ ಏನೇನು ರೋಗ ಇತ್ತೋ, ಏನು ಕಥೇನೋ.. ಇನ್ಯಾರಾದರೂ ತಿಳಿದವರ ಮನೇಲಿ ಒಂದು ಮರಿ ತರೋಣ.. ಈ ಮರಿ ಬೇಡ.."
"ಊಹೂಂ ಬೇಕು, ಇದೇ ಇರಲಿ, ನೋಡು ಎಷ್ಟು ದುಂಡು ದುಂಡಾಗಿದೆ. ಇದನ್ನು ನಾನು ಸ್ಟಾಕಿಂತ ಕರೀತೀನಿ. ರಾಧಾ ಮನೇಲಿರೋ ನಾಯೀನೂ ಸ್ಟಾಕೀನೇ. ಅದೂ ಹೀಗೇ ದುಂಡು ದುಂಡಾಗಿದೆ"
"ಬೇಡಾಂದರೆ ಕೇಳಬೇಕು. ಬೇಕಿದ್ದರೆ ಅಪ್ಪ ಒಂದು ಹೊಸ ಪೊಮರೇನಿಯನ್ ನಾಯಿ ತಂದುಕೊಡುತ್ತಾರೆ. ಇದು ಮಾತ್ರ ಬೇಡ. ನಾಳೆ ಬೆಳಿಗ್ಗೆ ಸ್ಕೂಲಿಗೆ ಹೋಗೋವಾಗ ಇದು ಎಲ್ಲಿತ್ತೋ ಅಲ್ಲೇ ಬಿಟ್ಟು ಬಾ. ಸಧ್ಯಕ್ಕೆ ಆ ನೀರಿನ ಮಡಿಕೇ ಮೇಲಿರೋ ತಟ್ಟೆ ತೆಗೋ. ಹಾಲು ಹಾಕುತ್ತೀನಿ. ಕುಡೀಲಿ. ಮಡಿಕೇಗೆ ಬೇರೆ ಏನಾದರೂ ಮುಚ್ಚಿದರಾಯಿತು. ನಾಳೇ ಮಾತ್ರ ಅದನ್ನು ಬಿಟ್ಟುಬಿಡಬೇಕು.. ಆಯತಾ?"
"ಅಮ್ಮಾ, ಇದೇ ಇರಲಿ ಅಮ್ಮಾ. ಅಪ್ಪಾ, ನೀನು ಹೇಳು ಅಮ್ಮನಿಗೆ.."
"ನೋಡು ನಿನಗೆ ಪಾಮರೇನಿಯನ್ ಬೇಕಾ ಬೇಡವಾ?"
"ಸರಿ ಹಾಗಾದರೆ. ನಾಳೆ ಬೆಳಿಗ್ಗೆ ಬಿಟ್ಟುಬಿಡುತ್ತೀನಿ. ನಮ್ಮ ಸ್ಕೂಲ್ ಹಿಂದೆ ದೊಡ್ಡ ಮೋರಿ ಇದೆಯಲ್ಲಾ, ಅದರ ಹತ್ತಿರ ಇತ್ತು ಇದು.."
ಈ ರೀತಿಯಿಂದ, ಹೊರಹೋಗಬೇಕೆಂಬ ಕರಾರಿನೊಂದಿಗೇ ಸ್ಟಾಕಿ ಆ ಮನೆಯನ್ನು ಪ್ರವೇಶಿಸಿತ್ತು. ಪಾಮರೇನಿಯನ್ ಆಗಲೀ, ಆಲ್ಸೇಷಿಯನ್ ಆಗಲೀ ಆ ಮನೆಗೆ ತರುವ ಉದ್ದೇಶ ಯಾರಿಗೂ ಇರಲಿಲ್ಲ. ಆದರೆ ಮಗಳಿಗೆ ಆ ಆಸೆ ತೋರಿಸದೇ ಈ ನಾಯಿಯನ್ನು ಹೊರಹಾಕುವುದಕ್ಕೆ ಬೇರೆ ದಾರಿಯಿರಲಿಲ್ಲ.
ಮಾರನೆಯ ದಿನ ಸ್ಕೂಲಿಗೆ ಹೊರಡುವ ಅವಸರದಲ್ಲಿ ಅವನ ಸ್ಕೂಟರಿನ ಮೇಲೆ ಹಾರಿ ಕುಳಿತಿದ್ದ ಮಗಳು ಮೂಲೆಯಲ್ಲಿ ಮಲಗಿದ್ದ ಸ್ಟಾಕಿಯನ್ನು ಮರೆತುಬಿಟ್ಟಿದ್ದಳು.
ಸಂಜೆ ಮನೆಗೆ ಬರುವ ವೇಳೆಗೆ ಅವನ ಹೆಂಡತಿ ಭದ್ರಕಾಳಿಯ ಅವತಾರ ತಾಳಿದ್ದಳು. ಸ್ಟಾಕಿ ಮನೆಯಲ್ಲಿ ಒಂದೂ - ಎರಡೂ ಮಾಡಿದ್ದು ಅವಳು ಅದನ್ನೆಲ್ಲಾ ಶುದ್ಧಿಮಾಡುವ ಕಾಯಕಕ್ಕೆ ಬೀಳಬೇಕಾಗಿತ್ತು. ಹೀಗಾಗಿ ಸ್ಟಾಕಿಯನ್ನು ತಕ್ಷಣ ಮನೆಯಿಂದ ಹೊರಹಾಕಬೇಕೆಂಬ ಠರಾವು ಪಾಸಾಯಿತು. ತಕ್ಷಣಕ್ಕೆ ಸ್ಟಾಕಿಯನ್ನು ಕರೆದೊಯ್ದು ಮಗಳ ಕಾನ್ವೆಂಟಿನ ಹಿಂದಿನ ಮೋರಿಯ ಬಳಿ ಬಿಟ್ಟು ಬರುವ ತಾಳ್ಮೆ ಅವನಿಗಿರಲಿಲ್ಲ.
"ನಾಳೆ ಸ್ಕೂಲಿಗೆ ಹೋದಾಗ ಬಿಡೋಣ, ಸದ್ಯಕ್ಕೆ ಅದಕ್ಕೆ ಹಾಲು ಹಾಕು.. ಕಾಂಪೌಂಡಿನಲ್ಲೇ ಇರಲಿ. ಒಂದಕ್ಕೂ ಎರಡಕ್ಕೂ ಹೋದರೆ ಚಿಂತೆಯಿರುವುದಿಲ್ಲ" ಎಂದು ಹೇಳಿ ಅಂದಿನ ಗಂಡಾಂತರವನ್ನು ಅವನು ದಾಟಿದ್ದ.
ಹೀಗೇ ಮಾರನೆಯ ದಿನ ಆಫೀಸಿಗೆ ಹೊರಡುವಾಗ ಅವನ ಸ್ನೇಹಿತರು ಯಾರೋ ಬಂದರು, ಅದರ ನಂತರದ ದಿನ ಮತ್ತೇನೋ ಆಯಿತು. ಹಾಗೂ ಹೀಗೂ ಒಂದು ವಾರಕಾಲ ಸ್ಟಾಕಿ ಆ ಮನೆಯಲ್ಲೇ ಇತ್ತು. ಆಕೆ ಅದಕ್ಕೆ ಹಾಲೆರೆಯುತ್ತಲೇ ಇದ್ದಳು. ಅವರ ಮಗಳು ಅದರೊಂದಿಗೆ ಆಡುತ್ತಲೂ ಇದ್ದಳು. ಅವಳು ಅದಕ್ಕೀಗಾಗಲೇ ಕೈಕುಲುಕುವುದನ್ನು ಹೇಳಿಕೊಟ್ಟಿದ್ದಳು. ವಾರದ ನಂತರ ಒಂದು ಸಂಜೆ ಅವನೇ ಗಟ್ಟಿ ಮನಸ್ಸು ಮಾಡಿ ಮಗಳೊಂದಿಗೆ ಸ್ಕೂಟರಿನಲ್ಲಿ ಹೋಗಿ, ಅವಳ ಸ್ಕೂಲಿನ ಹಿಂದಿನ ಮೋರಿಯ ಬಳಿ ಆ ನಾಯಿಯನ್ನು ಬಿಟ್ಟು ಬಂದಿದ್ದ.
"ಅಮ್ಮ, ಸ್ಟಾಕಿ ಎಷ್ಟು ಚೆನ್ನಾಗಿ ಕೈಕುಲುಕುತ್ತಿತ್ತು. ಈಗ ಅದಿಲ್ಲದೇ ಇರೋದು ತುಂಬಾ ಬೇಜಾರು"
"ಸುಮ್ಮನಿರು, ಪೀಡೆ ತೊಲಗಿತು. ಮಧ್ಯಾಹ್ನ ಇಡೀ ಕುಂಯ್ ಕುಂಯ್ ಅಂತ ನನ್ನ ಪ್ರಾಣ ತಿನ್ನುತ್ತಿತ್ತು. ನಿನಗೇನು ಗೊತ್ತು ಅದರ ಜೊತೆಗೆ ಏಗೋ ಕಷ್ಟ. ನೀನೇನೋ ಆರಾಮವಾಗಿ ಸ್ಕೂಲಿಗೆ ಹೋಗುತ್ತೀ. ಇಪ್ಪತ್ತನಾಲ್ಕುಗಂಟೆ ಅದರ ಜೊತೆಗಿರಬೇಕಾದವಳು ನಾನಲ್ಲವೇ!! ಅದರ ಕಷ್ಟ ನನಗಿಂತ ಇನ್ಯಾರಿಗೆ ಗೊತ್ತಿರುವುದಕ್ಕೆ ಸಾಧ್ಯ?"
ಆದರೆ ನಾಯಿಯ ನಿಯತ್ತನ್ನು ನಿರೂಪಿಸಲು ನಿದರ್ಶನಗಳು ಬೇಕೇ? ಸ್ಟಾಕಿ ಆ ನಿದರ್ಶನಗಳ ಪಟ್ಟಿಗೆ ತನ್ನ ನಿಯತ್ತನ್ನೂ ಸೇರಿಸಿತ್ತು. ಬೆಳಿಗ್ಗೆ ಏಳುವಷ್ಟರಲ್ಲಿ ಸ್ಟಾಕಿ ಹಾಲಿನ ಸರಬರಾಜು ಮಾಡುವವನೊಂದಿಗೇ, ಬಾಲ ಅಲ್ಲಾಡಿಸುತ್ತಾ, ಮನೆಯ ಮುಂದೆ ಹಾಜರಾಗಿತ್ತು.
"ನಿಮ್ಮ ಮನೆಯ ನಾಯಿ ಸಿ.ಕೆ.ಸಿ ಹತ್ತಿರ ನಿಂತಿತ್ತು ಸ್ವಾಮಿ, ನಾನೇ ಅದನ್ನ ಕರಕೊಂಬಂದೆ. ಬಡ್ಡೆತ್ತದ್ದು ರಾತ್ರೆ ತಪ್ಪಿಸಿಕೊಂಡು ಹೋಗಿರಬೇಕು.. ಅಥವಾ ಚೆಂದಾಗಿದೇಂತ ಯಾರಾದರೂ ತಕ್ಕಂಡು ಹೋಗಿರಬಹುದು. ಪಾಪ ಅಮ್ಮಾವರು ಅಷ್ಟೊಂದು ಪ್ರೀತಿಯಿಂದ ನೋಡಿಕಳ್ತಿರೋ ಈ ನಾಯಿ ನಿಯತ್ತಿಲ್ದೇ ಓಡೋಲ್ಲ. ಯಾರೋ ತಗಂಡೇ ಹೋಗಿರಬೇಕು. ನನ್ನ ನೋಡಿದಾಕ್ಶಣಕ್ಕೇ ಬಾಲ ಆಡಿಸಿತು. ಕುರ, ಕುರ, ಅಂತ ಕರೀತಲೇ ಇಲ್ಲೀವರ್ಗೂ ಕರಕಂಬಂದೆ. ಸದ್ಯ ವಾಪಸ್ ಬಂತಲ್ಲ.."
ಸ್ಟಾಕಿ ಬಾಲ ಅಲ್ಲಾಡಿಸುತ್ತಾ ಆಕೆಯ ಕಾಲನ್ನು ನೆಕ್ಕಲು ಪ್ರಾರಂಭಿಸಿತು.
"ಥೂ ದರಿದ್ರಮುಂಡೇದೇ.. ಸ್ನಾನಾ ಮಾಡಿ ಬರೋಷೋತ್ತಿಗೆ ಕಾಲೆಲ್ಲಾ ನೆಕ್ಕೆ ಹಾಳು ಮಾಡಿಬಿಟ್ಟಿದೆ.. ಹಚಾ... ಕೆಂಪಯ್ಯಾ ಅದರ ತಟ್ಟೇಲಿ ಹಾಲು ಹಾಕು. ಇಲ್ಲದಿದ್ದರೆ ನನ್ನನ್ನು ಬಿಡೋದಿಲ್ಲ ಅನ್ನಿಸುತ್ತೆ."
ಹೀಗೆ ಕೆಂಪಯ್ಯನ ಕೃಪೆಯಿಂದ ಸ್ಟಾಕಿಯ ಗೃಹಪ್ರವೇಶ ಮತ್ತೆ ಆಯಿತು. ಮತ್ತೆ ಚರ್ಚೆ ವಾದಗಳ ಮಹಾಯಜ್ಞ ನಡೆಯಿತು. ಆದರೆ ಈ ಬಾರಿ ಅವನು ಕರಗಿದ. ಮಗಳ ಪಾರ್ಟಿ ಸೇರಿ ಅದರ ಪರವಾಗಿ ವಾದ ಮಾಡಿದ್ದರಿಂದ ಮನೆಯ ಮಹಾಲಕ್ಷ್ಮಿಯಂತೆ ಅಲ್ಲೇ ಆ ಮನೆಯಲ್ಲಿಯೇ ಆ ನಾಯಿ ನೆಲೆ ನಿಂತಿತು.
ಸಿಗರೇಟು ಮುಗಿಯುತ್ತಿದ್ದಂತೆ ಅವನ ನೆನಪಿನ ಸರಣಿಯೂ ಕಡಿಯಿತು. ಅಡಿಗೆ ಮನೆಯ ಕಡೆಗೆ ಹೋಗಿ ಮತ್ತೊಂದು ಸಿಗರೇಟು ಬೆಳಗಿಸಿಕೊಂಡ.
"ಇದೇನು ಮಾರಾಯ ಈ ದರಿದ್ರ ದುರಭ್ಯಾಸ. ಹೋಗಲಿ ಒಂದು ಬೆಂಕೆ ಪೊಟ್ಟಣವನ್ನು ನಿನ್ನ ಹತ್ತಿರವೇ ಇಟ್ಟುಕೊಳ್ಳಬಾರದಾ?"
"ಲೈಟರಿನಲ್ಲಿ ಗ್ಯಾಸ್ ಆಗಿಹೋಗಿದೆ.. ನಾಳೆ ರೀಫಿಲ್ ಮಾಡಿಸುತ್ತೀನಿ. ಅಲ್ಲೀ ತನಕ ಇದೇ ಗತಿ. ಸುಮ್ಮನೆ ವಣವಣ ಮಾಡಬೇಡ. ನನಗೆ ಒಂದು ಕಾಫಿಯಾಕೆ ಹಾಕಬಾರದು? ಅಂದಹಾಗೆ ಸ್ಟಾಕಿಗೆ ಬಾರ್ಲಿನೀರು ಕುಡಿಸಿದೆಯಾ?"
"ಊಂ ಹಾಕಿದ್ದೀನಿ. ಹಾಕದೇ ಇದ್ದರೆ ಸಾಧ್ಯವಾ? ನನಗೂ ಇದೇ ಕೆಲಸವಾಗಿಬಿಟ್ಟಿದೆ. ನಾಯಿಗೆ ಬಾರ್ಲಿನೀರು, ಗಂಡನಿಗೆ ಕಾಫಿನೀರು.. ನಿಮಗೆಲ್ಲಾ ಯಾಕಾದರೂ ರಜಾ ಬರುತ್ತೋ, ನನ್ನ ಪ್ರಾಣ ತಿನ್ನಲು.. ಕಾಫಿಯನ್ನು ರೂಮಿಗೇ ತಂದುಕೊಡುತ್ತೀನಿ. ಆ ಸಿಗರೇಟನ್ನು ಇಲ್ಲಿ ಊದಿ ಅಡುಗೆಮನೆಯೆಲ್ಲಾ ಹೊಗೆ ಮಾಡಬೇಡ... ಸರೀನಾ?"
ಅವನು ಕಾಫಿ ಹೀರುತ್ತಾ, ಸಿಗರೇಟು ಸೇದುತ್ತಿದ್ದಂತೆ ಮತ್ತೆ ಸ್ಟಾಕಿಯ ನೆನಪುಗಳು ಮರುಕಳಿಸ ತೊಡಗಿದುವು. ಪಾಪದ ನಾಯಿ. ಮೂರು ವರ್ಷ ವಯಸ್ಸಿಗೇ ಹೀಗೆ ರೋಗದಿಂದ ಬಳಲುತ್ತಾ ಮಲಗಿದೆಯಲ್ಲಾ ಅನ್ನಿಸಿತು. ಮನುಷ್ಯರಾಗಿದ್ದರೆ ಈ ವೇಳೆಗೆ ಆಸ್ಪತ್ರೆಗೆ ಸೇರಿ ಡ್ರಿಪ್ ಕೊಟ್ಟು ಇಡೀ ಟೆಸ್ಟುಗಳ ಕಾಂಡವೇ ನಡೆಯುತ್ತಿತ್ತು. ಅಷ್ಟೆಲ್ಲಾ ಮುತುವರ್ಜಿ ನಾಯಿಗೆಲ್ಲಿ? ನಾಯಿಯ ನಿಯತ್ತಿಗೂ ಕಿಮ್ಮತ್ತಿಲ್ಲವಾಗಿದೆಯಲ್ಲಾ.. ಎಂದುಕೊಂಡ.
ಮಗಳು ಉತ್ಸಾಹದಿಂದ ನಾಯಿಯನ್ನು ತಂದಿದ್ದರೂ, ಅವಳ ಈ ಅಮಿತೋತ್ಸಾಹ ಎರಡೇ ದಿನಗಳಲ್ಲಿ ಟುಸ್ಸಾಗಿತ್ತು. ಕೈಕುಲುಕುವುದು, ಸವರುವುದು, ದಿನಕ್ಕೆರಡುಬಾರಿ ಮಾತನಾಡಿಸುವುದರಲ್ಲಿ ಅವಳು ತನ್ನ ಕೋಟಾದ ಜವಾಬ್ದಾರಿಯನ್ನು ಮುಗಿಸಿಬಿಡುತ್ತಿದ್ದಳು. ಅದನ್ನು ವಾಕಿಂಗ್ ಕರೆದೊಯ್ಯುವ, ಭಾನುವಾರಗಳಂದ ಸ್ನಾನ ಮಾಡಿಸುವ, ಜ್ವರ ಬಂದರೆ ಆಸ್ಪತ್ರೆಗೆ ಕರೆದೊಯ್ಯುವ ಕಿರಿಕಿರಿಯ ಕೆಲಸಗಳೆಲ್ಲಾ ಅವನ ಪಾಲಿಗೆ ಬಿದ್ದಿದ್ದವು. ಎಲ್ಲಿಂದಲೋ ಬೇಡಿ ತಂದ "ಹೌಟು ಟ್ರೇನ್ ಯುವರ್ ಡಾಗ್" ಪುಸ್ತಕವನ್ನು ಹಿಡಿದು, ಸ್ಟಾಕಿಯನ್ನು ದಂಡಿಸಿ, ನಾಲ್ಕಾರು ವಿದ್ಯೆಗಳನ್ನು ಅವನೇ ಅದಕ್ಕೆ ಹೇಳಿಕೊಟ್ಟಿದ್ದ. ಮಗಳು ಮಾತ್ರ ತಾನು ಕಲಿಸಿದ ವಿದ್ಯೆಗಳನ್ನು ಗೆಳತಿಯರೆದುರು ಪ್ರದರ್ಶಿಸುವುದರಲ್ಲಿ ಸಂತೃಪ್ತಳಾಗಿದ್ದಳು. ಅವನ ಹೆಂಡತಿಗೆ ಆ ನಾಯಿಯ ಅಸ್ತಿತ್ವವೇ ಒಂದು ತಲೆನೋವಾಗಿಬಿಟ್ಟಿತ್ತು. ಅವಳು ಮಾತ್ರ ಸಮಯ ಸಿಕ್ಕಾಗಲೆಲ್ಲಾ ಅದನ್ನು ಬಡಿದು ಆಚೆ ತಳ್ಳುವುದರಲ್ಲೇ ನಿರತಳಾಗಿದ್ದಳು.
ಸ್ಟಾಕಿಯ ಅಭಿಮಾನ ಮಾತ್ರ ಮೆಚ್ಚುವಂಥದು. ಅವಳು ಬೈದರೂ, ತಾನು ಬಡಿದರೂ ಶಪಿಸಿದರೂ, ಅದು ತಿನ್ನುತ್ತಿದ್ದದ್ದು ಅವರಿಬ್ಬರಲ್ಲೊಬ್ಬರು ಇಟ್ಟ ಅನ್ನವನ್ನು ಮಾತ್ರ. ಅವರಿಬ್ಬರಲ್ಲಿ ಯಾರೂ ಅನ್ನ ಹಾಕದಿದ್ದರೆ ಅದು ಆಹಾರವನ್ನು ಮುಟ್ಟದಿದ್ದ ಪರಿಯಂತೂ ತುಂಬಾ ವಿಚಿತ್ರದ್ದೆನ್ನಿಸಿತ್ತು. ಜೀನುಗಳನ್ನು ಬೆರೆಸಿ, ಉತ್ತಮ ಮಾನವ ತಳಿಯನ್ನು ನಿರ್ಮಿಸಲೆತ್ನಿಸುವ ಸಂಶೋಧಕರು ನಾಯಿಯ ಒಂದಿಷ್ಟು ಅಂಶಗಳನ್ನೂ ಗಮನಿಸಬೇಕು ಎಂದು ಅವನಿಗೆ ಅನ್ನಿಸುವುದುಂಟು.
ಹೀಗೆ ಕೈಗೆ, ಕಾಲಿಗೆ ತೊಡರಿಕೊಳ್ಳುತ್ತಾ, ಪ್ರೀತಿಯಿಂದ ನೆಕ್ಕುತ್ತಾ ಬಾಲವನ್ನು ಅಲ್ಲಾಡಿಸುತ್ತಾ, ಗಟ್ಟಿಮುಟ್ಟಾಗಿದ್ದ ನಾಯಿ ಅಂದು ಅರೆಜೀವವಾಗಿ ಮಲಗಿತ್ತು. ಅದು ತನ್ನೆಡೆಗೆ ತೋರಿದ ಅಂತಃಕರಣದ ಅರ್ಧದಷ್ಟಾದರೂ ಅದರೆಡೆಗೆ ತೋರಿಸಲು ಅಸಮರ್ಥನಾಗಿ ತಾನಿದ್ದಾನೇ ಎಂದೆಲ್ಲಾ ಸೆಂಟಿಮೆಂಟಲ್ ಆಗಿ ಯೋಚಿಸಿದ. ಅವನ ಹೆಂಡತಿಯಂತೂ ಎಂದಿನಂತೆ ಕುದಿಯುತ್ತಲೇ ಇದ್ದಳು. ಸ್ಟಾಕಿಯ ಅಸ್ತಿತ್ವವೇ ಅವಳಿಗೆ ಒಂದು ತಲೆನೋವು ಎಂದು ಗೊಣಗಿದಳು. ಸ್ಟಾಕಿ ಮನೆಗೆ ಬಂದು ಮೂರು ವರ್ಷಗಳಾದರೂ ಅವಳಿಗೆ ಈ ವಿಚಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವಳು ಯಾವಾಗಲೂ ಸಿಡಿಸಿಡಿ ಅನ್ನುತ್ತಲೇ ಇರುತ್ತಾಳೆ. ಆ ನಾಯಿಯನ್ನು ನೋಡಿದಾಗಲೆಲ್ಲಾ ತಾನು ಅದನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾನೆ ಎಂದು ಅವನಿಗೆ ಅನ್ನಿಸುತ್ತದೆ. ನಾಯಿಯನ್ನು ತಾನು ನಡೆಸಿಕೊಂಡಂತೆ ತನ್ನನ್ನು ಯಾರಾದರೂ ನಡೆಸಿಕೊಂಡರೆ ನಿಯತ್ತಂತಿರಲಿ, ಬದಲಿಗೆ ಸಿಡಿದೆದ್ದು ಹಿಂಸಾಚಾರಕ್ಕೊ ತೊಡಗಬಹುದು ಎಂದೆಲ್ಲಾ ಅವನಿಗೆ ಅನ್ನಿಸುತ್ತದೆ. ಒಮ್ಮೊಮ್ಮೆ ಅವನಿಗನ್ನಿಸುವುದುಂಟು.. ಯಾಕೆ ಇಷ್ಟು ಯೋಚನೆ? ತನ್ನದೇ ಮೃದು ಹೃದಯವಿರಬೇಕು. ನಾಯಿ ಸಾಕುವವರಿಗೆಲ್ಲಾ ಈ ಯೋಚನೆಗಳು ಬಂದಿದ್ದಲ್ಲಿ "ಹೌಟು ಟ್ರೇನ್ ಯುವರ್ ಡಾಗ್" ನಂತಹ ಪುಸ್ತಕಗಳೇ ಪ್ರಕಟವಾಗುತ್ತಿರಲಿಲ್ಲವೇನೋ.
ಆದಿನವಿಡೀ ಅವನು ನಾಯಿಯ ಬಗೆಗೇ ಯೋಚಿಸಿದ. ಸಂಜೆಯ ವೇಳೆಗೆ ಅವನ ಹೆಂಡತಿ ಅಪಸ್ವರ ಹಾಡಲು ತೊಡಗಿದ್ದಳು...
"ಇದೇನಿದು ಇದರ ರೋಗ? ನೋಡು, ಜೊಲ್ಲು ಸುರಿಸುತ್ತಾ ಮಲಗಿದೆ. ಇದಕ್ಕೆ ಹುಚ್ಚುಗಿಚ್ಚು ಹಿಡಿದಿದೆಯಾ ಹೇಗೆ?"
"ಹುಚ್ಚಾಗಿದ್ದರೆ ಡಾಕ್ಟರೇ ಹೇಳುತ್ತಿದ್ದರು. ಅವರೇ ಇಂಜೆಕ್ಷನ್ ಕೊಟ್ಟು ಅದರ ಪ್ರಾಣವನ್ನೂ ತೆಗೆಯುತ್ತಿದ್ದರು.."
"ಅದರ ಹುಚ್ಚು ಹಾಗಿರಲಿ. ನಿನ್ನ ಹುಚ್ಚಿಗೆ ನಾನೇನು ಮಾಡಲಿ? ಮನೇಲಿ ಪುಟ್ಟ ಮಗುವಿದೆ. ಇದು ಒದ್ದಾಡುತ್ತಾ ಇರುವ ರೀತಿ ನೋಡಿದರೆ ನನಗೆ ಯಾಕೋ ಭಯ ಆಗ್ತಾ ಇದೆ. ಇದರಿಂದ ಮನೆಯವರಿಗೆಲ್ಲಾ ಸೋಂಕಾದರೆ ಏನು ಗತಿ? ಏನಾದರೂ ಮಾಡು.."
"ನೀನು ಸುಮ್ಮನೆ ಹೀಗೆಲ್ಲಾ ಕೆಟ್ಟಕೆಟ್ಟದಾಗಿ ಯೋಚನೆ ಮಾಡಬೇಡ"
"ಇಲ್ಲದ್ದನ್ನ ಯೋಚನೆ ಮಾಡುವ ವಿಚಾರವಲ್ಲ. ನೀನೇ ಯೋಚನೆ ಮಾಡಿ ನೋಡು. ಅದು ಈಗಿರೋ ಸ್ಥಿತಿಯಲ್ಲಿ ಕಾಂಪೌಂಡಿನಲ್ಲಿ ಬಿಡುವುದಕ್ಕಾಗೋದಿಲ್ಲ. ಮನೆಯೆಲ್ಲಾ ಹೊಲಸು ಮಾಡುತ್ತಿದೆ. ಅದರ ಮಲ, ಮೂತ್ರ, ಈಗ ಜೊಲ್ಲು ಎಲ್ಲವೂ ಇಲ್ಲೇ ಸುರೀತಾ ಇದೆ. ನೀನೂ ಆ ನಾಯಿಯ ಶುಶ್ರೂಶೆ ಮಾಡಿ ಮಗುವನ್ನ ಬೇರೆ ಎತ್ತಿಕೊಳ್ಳುತ್ತಾ ಇದ್ದೀ. ಹೋಗಲೀ ನೀನಾದರೂ ಪ್ರತೀ ಸರತಿ ಲೈಫ್‍ಬಾಯ್ ಸಾಬೂನಿನಲ್ಲಿ ಕೈ ತೊಳೆದುಕೊಳ್ಳುತ್ತಾ ಇದ್ದೀಯಾಂತ ಇಟ್ಟುಕೊಳ್ಳೋಣ. ಆದರೆ ಅವಳು? ಅವಳಿಗೆ ಎಷ್ಟು ಹೇಳಿದರೂ ಬಚ್ಚಲುಮನೆಕಡೆ ಹೋಗುವ ತಾಳ್ಮೆಯೇ ಇಲ್ಲವೇ.. ಅದೇ ಕೈಯಲ್ಲಿ ಊಟಾನೂ ಮಾಡುತ್ತಾಳೆ, ಮಗೂನೂ ಮುದ್ದಿಸುತ್ತಾಳೆ.. ನೀನು ಸ್ವಲ್ಪ ಪ್ರಾಕ್ಟಿಕಲ್ಲಾಗಿ ಯೋಚನೆ ಮಾಡು. ಭಾವನೆಗಳು ಮಾನವೀಯತೆ, ಮಣ್ಣು, ಮಶಾನ, ಎಲ್ಲವನ್ನೂ ಬದಿಗಿಟ್ಟು ನೋಡು, ಮಾರಾಯ..."
"ಅಂದರೆ ಈಗ ನೀನು ಹೇಳೋದೇನು? ನಾಯಿಗಳನ್ನಿ ಇನ್-ಪೇಷೆಂಟಾಗಿ ತೆಗೊಳ್ಳೋ ಆಸ್ಪತ್ರೆ ಇದ್ದಿದ್ದರೆ ಆರಾಮವಾಗಿ ಆಸ್ಪತ್ರೆ ಸೇರಿಸಬಹುದಿತ್ತು. ಆದರೆ ದೇಶದಲ್ಲಿನ ಪರಿಸ್ಥಿತಿ ಇನೂ ಅಷ್ಟು ಮುಂದುವರೆದಿಲ್ಲವಲ್ಲಾ.."
"ಅಲ್ಲ ಮಾರಾಯಾ, ಅದರ ಮುಖನೋಡಿದರೆ ನನಗಂತೂ ಅದು ಬದುಕೋ ಲಕ್ಷಣ ಕಾಣಿಸುತ್ತಾ ಇಲ್ಲ. ಅದನ್ನ ಆಚೆ ಎಲ್ಲಿಯಾದರೂ ಬಿಟ್ಟುಬಿಡು. ಸುಮ್ಮನೆ ಇಲ್ಲಿ ಸತ್ತರೆ ಅದರೆ ಹೆಣದ ಯಾತ್ರೆ ಮಾಡಬೇಕಾಗುತ್ತೆ. ಅದು ಹೇಗಿದ್ದರೂ ಬದುಕೋದಿಲ್ಲ ಅನ್ನೋದು ಅದನ್ನ ನೋಡಿದರೇನೇ ಗೊತ್ತಾಗುತ್ತೆ. ಅದರ ಸಾವು ಅದು ಸಾಯಲಿ..ಸುಮ್ಮನೆ ಒಂದು ನಾಯಿಗಾಗಿ ಯಾಕೆ ಇಷ್ಟೆಲ್ಲಾ ಅಂತಃಕರಣ ತೋರಿಸಿ ನಮ್ಮೆಲ್ಲರ ಮನಶ್ಶಾಂತಿಯನ್ನು ಹಾಳುಮಾಡುತ್ತೀಯೋ ಗೊತ್ತಿಲ್ಲ."
"ರೋಗ ಇದೇಂತ ತಿಳಿದೂ ತಿಳಿದೂ ಅದನ್ನು ಹ್ಯಾಗೆ ಆಚೆ ಬಿಟ್ಟು ಬರಲಿ? ನೀನೇ ಹೇಳು?"
"ನನ್ನ ಅಭಿಪ್ರಾಯ ಹೇಳಿದ್ದೀನಿ. ನಿನಗೆ ನಾಳೆ ಸಾಯೋ ನಾಯಿ ಮುಖ್ಯಾನೋ ಅಥವಾ ನಮ್ಮೆಲ್ಲರ ಆರೋಗ್ಯ ಮುಖ್ಯಾನೋ ನೀನೇ ನಿರ್ಧಾರ ಮಾಡಬೇಕು. ಯೋಚಿಸಿನೋಡು."
"ಡಾಕ್ಟ್ರು ಏನು ಹೇಳುತ್ತಾರೋ ಒಂದು ಸರ್ತಿ ಕೇಳಿ ಆಮೇಲೆ ಏನೂ ಮಾಡಿದರೆ...."
"ನೋಡು, ನಿನ್ನಿಷ್ಟ. ನೀನೇನಾದರೂ ಮಾಡು. ನೀನು ಹಿಡಿದ ಹಠಾನೇ ಹಿಡಿದರೆ ನಾನು ಈ ಮಗೂನ ಎತ್ತಿಕೊಂಡು ಎಲ್ಲಿಗಾದರೂ ಹೋಗಬೇಕಾಗುತ್ತೆ ಅಷ್ಟೇ. ಹಳ್ಳ ಪಳ್ಳ ತೋಡೋದು, ನಾಯೀನ ಇಲ್ಲೇ ಹೂಳೋದು ಇವೆಲ್ಲಾ ನನಗೆ ಹಿಡಿಸೋಲ್ಲ. ಅದೂ ಅಲ್ಲದೇ ರೋಗದಲ್ಲಿ ಸಾಯೋ ನಾಯಿಯ ದೇಹದಲ್ಲಿ ಏನೇನು ಸೋಂಕಿರುತ್ತೋ. ಯಾರಿಗೆ ಗೊತ್ತು? ಸುಮ್ಮನೆ ನಾನು ಹೇಳಿದ ಹಾಗೆ ಸಿ.ಕೆ.ಸಿ ಹಿಂದಿನ ಮೋರಿಯ ಗತಿಯನ್ನು ಈ ಪ್ರಾಣಿಗೆ ಕಾಣಿಸಿ ವಾಪಸ್ಸಾಗು. ಅದರ ಪಾಡು ಅದು ನೋಡಿಕೊಳ್ಳುತ್ತೆ.."
"ಅಲ್ಲವೇ ಇಷ್ಟುದಿನ ಅದು ನಮ್ಮ ಜೊತೆ ಪ್ರೀತಿಯಿಂದ ಬದುಕಿತ್ತಲ್ಲವೇನೇ?"
"ಇತ್ತು. ಅದಕ್ಕೆ ಊಟ ಹಾಕಿದ್ವಿ. ಎಲ್ಲಾ ನಿಜ. ಅದಕ್ಕೆ ಈಗ ರೋಗ ಬಂದಿದೆ. ನಿನ್ನ ಮಗಳಿಗೆ ಆ ಬಗ್ಗೆ ವಿಶೇಷ ಬೇಸರವೇನೂ ಇಲ್ಲ. ನೀನೇ ಮೊದಲಿಗೆ ನಾಯಿ ಬೇಡಾ ಅಂತ ಅಂದವನು. ಈಗ ನೀನೇ ಅಂತಃಕರಣ ಅಂತ ಒದ್ದಾಡುತ್ತಾ ಇದ್ದೀಯ. ಇದರಲ್ಲಿ ಅಪರಾಧೀ ಭಾವನೆ ಎಲ್ಲಿಂದ ಬಂತು. ಆ ನಾಯಿಯನ್ನ ಮನೆಗೆ ತರದೆಯೇ ಅದು ರಸ್ತೆಯಲ್ಲೇ ಬೆಳೆದು ಈ ರೋಗ ಬಂದಿದ್ದರೆ? ಆವಾಗ ನಮ್ಮ ಜವಾಬ್ದಾರಿ ಏನು? ಸುಮ್ಮನೆ ಯೋಚನೆ ಮಾಡಿ ಪ್ರಯೋಜನವಿಲ್ಲ. ಇಷ್ಟು ದಿನ ಅದಕ್ಕೆ ಅನ್ನ ಹಾಕಿದಿವಿ. ಇನ್ನು ಮುಂದಕ್ಕೆ ಹಾಕೋದಿಲ್ಲ. ಅಷ್ಟೇ.."
ಅವಳಂತೂ ತುಂಬಾ ವ್ಯಾವಹಾರಿಕವಾಗಿ ತನ್ನ ತೀರ್ಮಾನವನ್ನು ನೀಡಿಬಿಟ್ಟಿದ್ದಳು. ಆದಿನ ಅವನು ನಾಯಿಯನ್ನು ಒಯ್ದು ಆಚೆ ಬಿಟ್ಟು ಬರದಿದ್ದರೆ, ಅವಳೇ ಆ ಕೆಲಸವನ್ನು ಮಾಡಿಯಾಳು ಎಂದು ಅವನಿಗೆ ಅನ್ನಿಸಿತು. ಅವನ ಸಮಾಧಾನಕ್ಕಾಗಿ ಅವನು ಎಷ್ಟು ಆಲೋಚಿಸಿದರೂ ಅವಳು ಹೇಳಿದ್ದರಲ್ಲಿ ಹುರುಳಿಲ್ಲದಿಲ್ಲ ಎಂದು ಅವನಿಗನ್ನಿಸಿತು. ಅವನ ಮನಸ್ಸು ಭಾರವಾಗಿ ವ್ಯಗ್ರವಾಗಿತ್ತು. ಆದರೆ ಅವಳು ಹೇಳಿದಂತೆ ಸಣ್ಣ ಮಗು ಮುಖ್ಯ. ಅದಕ್ಕೆ ಸೋಂಕಾಗಬಾರದು. ಜೊತೆಗೆ ಎಷ್ಟೇ ಗೊಣಗಿದರೂ ಸ್ಟಾಕಿಯನ್ನು ನೋಡಿಕೊಳ್ಳುತ್ತಿರುವವಳು ಅವಳು. ಅವಳೇ ಇಷ್ಟು ಖಂಡಿತವಾಗಿ ಹೇಳುವಾಗ ತಾನಾದರೂ ಏನು ಮಾಡಬಹುದಿತ್ತು? ನಾಳೆ ಆಫೀಸು ಪ್ರಾರಂಭವಾದರೆ ಆಸ್ಪತ್ರೆಗೆ ಕೊಂಡೊಯ್ಯಲೂ ಅವನಬಳಿ ಸಮಯವಿರಲಿಲ್ಲ. ನಾಯಿಗೆ ಮೈಸರಿಯಿಲ್ಲವೆಂದು ಈವರೆಗೂ ರಜೆ ಹಾಕಿದವರನ್ನು ಅವನು ಕಂಡಿರಲಿಲ್ಲ. ಎಲ್ಲವನ್ನೂ ಯೋಚಿಸಿದಾಗ, ನಾಯಿಯನ್ನು ಎಲ್ಲಾದರೂ ಬಿಟ್ಟು ಬರುವುದೇ ಒಳ್ಳೆಯದು ಎಂದು ಅವನಿಗನ್ನಿಸಿತು. ಅದು ಸತ್ತಿದೆ ಎಂದು ಮನಸ್ಸಿನಲ್ಲಿ ಯೋಚನೆ ಮಾಡಿ ಮನಸ್ಸು ಗಟ್ಟಿಮಾಡಿಕೊಳ್ಳಬೇಕು. ಹಾಗೆಂದುಕೊಂಡು ಸ್ಟಾಕಿಯನ್ನು ಒಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿಟ್ಟುಕೊಂಡು ಸ್ಕೂಟರ್ ಚಾಲೂ ಮಾಡಿ, ಅದನ್ನು ಸಿಕಿಸಿಯ ಮೋರಿಯ ಬಳಿ ಬಿಟ್ಟು ಬಂದೇ ಬಿಟ್ಟ. ಅದು ಎಲ್ಲಿಂದ ಬಂದಿತ್ತೋ ಅದೇ ಜಾಗಕ್ಕೆ, ಮೊದಲ ಬಾರಿ ಎಲ್ಲಿ ಬಿಟ್ಟಿದ್ದನೋ ಅದೇ ಜಾಗದಲ್ಲಿ...
ಭಾರವಾದ ಮನಸ್ಸಿನಿಂದ ಅವನು ಹಿಂದಿರುಗುತ್ತಿದ್ದಾಗ, ತಾನು ಮಾಡಿದ್ದು ಅನ್ಯಾಯವೆಂದು ಅವನಿಗೆ ಅನ್ನಿಸುತ್ತಿತ್ತು. ಹೌದು ಆದರೇನು ಮಾಡಲು ಸಾಧ್ಯವಿತ್ತು? ಅಕಸ್ಮಾತ್ ಅದು ರಸ್ತೆಯ ನಾಯಿಯೇ ಆಗಿದ್ದರೆ ಅದಕ್ಕೆ ಇದೇ ಗತಿಯಾಗುತ್ತಿತ್ತಲ್ಲವೇ. ಅದರ ಪ್ರಾಪ್ತಿ ಇಷ್ಟೇ ಎಂದು ಅಂದುಕೊಳ್ಳುತ್ತಾ ಅವನು ತನ್ನಮನಸ್ಸನ್ನು ಸಮಾಧಾನಗೊಳಿಸಿಕೊಂಡ. ಹಾಗೆ ನೋಡಿದರೆ ಅವನು ಆ ಪರಿಸ್ಥಿತಿಯಲ್ಲಿ ಬೇರೆ ಏನೂ ಮಾಡಲು ಸಾಧ್ಯವಿದ್ದಿಲ್ಲ.
ಹೀಗೇ ಕಾಲ ಸರಿದಂತೆ ತನ್ನ ಅಪರಾಧೀ ಪ್ರಜ್ಞೆಯನ್ನೂ ಗೆಲ್ಲುತ್ತಾನೆ ಎಂದು ಅವನಿಗನ್ನಿಸಿತು. ಕಾಲ ತೀರಿದರ್ಂತೆ ಎಲ್ಲದರಿಂದಲೂ ಮುಕ್ತಿ ಹೊಂದಬಹುದು. ಅಂದು ಅವನು ಮನೆಗೆ ಬರುವ ವೇಳೆಗೆ ಹೆಂಡತಿ ಸ್ನಾನಕ್ಕಾಗಿ ಬಿಸಿನೀರು ಕಾಯಿಸಿ ಇಟ್ಟಿದ್ದಳು. ಅವನು ಬಂದ ಕೂಡಲೇ ಆ ನೀರಿಗೆ ಎರಡು ತೊಟ್ಟು ಡೆಟಾಲ್ ಹಾಕಿ ಸ್ನಾನ ಮಾಡಲು ಹೇಳಿದಳು. ಸ್ಟಾಕಿ ಮಲಗಿದ್ದ ಜಾಗ ಫಿನೈಲಿನಿಂದ ಶುಭ್ರವಾಗಿತ್ತು. ಅವನೂ ಸ್ನಾನ ಮಾಡಿ ಹಾಸಿಗೆ ಸೇರಿದ್ದ.
ಮಗಳು ಸ್ವಲ್ಪ ಮಂಕಾಗಿದ್ದರೂ, ನಿರ್ಲಿಪ್ತವಾಗಿರುವಂತಿತ್ತು. ಸ್ಟಾಕಿಯನ್ನು ಅಲ್ಲಿ ಬಿಟ್ಟು ಬಂದು ಹದಿನೈದು ದಿನಗಳು ಕಳೆದುವು. ಆ ವೇಳೆಗೆ ಅದು ಸತ್ತಿರಬಹುದು. ಸಿಕೆಸಿಯ ಹಿಂದೆ ಹೋಗಿ ನೋಡಿಬರಲು ಅವನಿಗಾಗಲೀ ಮಗಳಿಗಾಗಲೀ ಧೈರ್ಯವಾಗಲಿಲ್ಲ. ನೋಡಿದರೂ ಅವರು ಏನು ಮಾಡಬಹುದಿತ್ತು? ಮನೆಗೆ ಕರೆದೊಯ್ದು ಹೊಂಡ ತೋಡಿ ಹೂಳುವುದೇ ತಾನೇ?
ಅವನು ಹೀಗೇ ಪದಬಂಧವನ್ನು ಬಿಡಿಸುತ್ತಾ ಮನೆಯ ಜಗಲಿಯ ಮೇಲೆ ಕುಳಿತಿದ್ದ. ಅವನ ಕಾಲಿನ ಬಳಿ ಅವನಿಗೆ ಏನೋ ತೇವವಾದ ಅನುಭವವಾಯಿತು. ಪತ್ರಿಕೆ ಬಿಡಿಸಿ ನೋಡುತ್ತಾನೆ. ನಾಯಿ.. ಸ್ಟಾಕಿ. ಬಾಲ ಅಲ್ಲಾಡಿಸುತ್ತಾ, ಅದರ ಕಂಗಳಲ್ಲೇ ನಗುತ್ತಾ ನಿಂತಿತ್ತು. ಅವನಿಗೆ ಆಶ್ಚರ್ಯವಾಯಿತು! ಈ ನಾಯಿ ಬದುಕಿ ಉಳಿದದ್ದಾದರೂ ಹೇಗೆ? ಅದೂ ಕೇವಲ ಹದಿನೈದು ದಿನಗಳಲ್ಲೇ ಚೇತರಿಸಿಕೊಂಡು ಅದನ್ನು ನಡುನೀರಿನಲ್ಲಿ [ನಡುಮೋರಿಯಲ್ಲಿ?] ಕೈ ಬಿಟ್ಟ ತನ್ನತ್ತ ನಿಷ್ಠೆ ತೋರಿಸುತ್ತ, ಬಾಲ ಅಲ್ಲಾಡಿಸುತ್ತಾ ಎದುರಿಗೆ ನಿಂತಿದೆ. ಒಂದು ರೀತಿಯಲ್ಲಿ ಅವನನ್ನು ಅಣಕಿಸಲೋ ಎಂಬಂತೆ.
ಒಳಗಿನಿಂದ ಬಂದ ಅವನ ಮಗಳು ಖುಷಿಯಿಂದ "ಹೇ ಸ್ಟಾಕೀ" ಅಂದು ಅದರ ಕೈ ಕುಲುಕಿದಳು.
ಅವನಿಗೆ ನಾಯಿಯ ಮೇಲೆ ಅತೀ ಕೋಪ ಬಂದಿತು. ಈ ನಾಯಿ ಅನ್ನುವ ಪ್ರಾಣಿಗೆ ವ್ಯಕ್ತಿತ್ವವೇ ಇಲ್ಲವೇ? ರೋಗದ ಮಧ್ಯದಲ್ಲಿ, ಸಾವು ಬದುಕುಗಳ ಹೋರಾಟ ನಡೆಸುತ್ತಿರುವಾಗ ತಾನು ಅದನ್ನು ದೂರ ಬಿಟ್ಟು ಬಂದಿದ್ದ. ಆಗ ಅದಕ್ಕೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಈಗ ನೋಡಿದರೆ ಅದು ಬಾಲ ಆಡಿಸುತ್ತಾ ತನ್ನೆದುರು ನಿಂತಿದೆ. ಅವನಿಗೆ ಇದನ್ನು ತಡೆಯಲು ಸಾಧ್ಯವೇ ಆಗಲಿಲ್ಲ. ಈ ನಿಯತ್ತು ಯಾಕಾದರೂ ಇದೆ? ಅದು ಬಾಲ ಆಡಿಸಿದಷ್ಟೂ ಅವನ ಪಾಪ ಪ್ರಜ್ಞೆ ಬೆಳೆಯುತ್ತಾ ಹೋಯಿತು. ಈ ನಾಯಿ ಸತ್ತಿದ್ದರೆ ಇರಬಹುದಾಗಿದ್ದ ಶಾಂತಿ ಈಗ ಅವನಿಗೆ ಇಲ್ಲವಾಯಿತು.
ಅದನ್ನು ನೋಡಿ ಅವನಿಗೆ ತುಂಬಾ ಸಿಟ್ಟು ಉಂಟಾಯಿತು. ಅದನ್ನು ಒಮ್ಮೆ ಝಾಡಿಸಿದ. ಅದು ಎರಡಡಿ ದೂರ ಹೋಗಿ ಮತ್ತೆ ಬಾಲ ಅಲ್ಲಾಡಿಸುತ್ತಾ ಅವನ ಕಾಲನ್ನು ನೆಕ್ಕಿತು. ಕಚ್ಚಿದ್ದರಾದರೂ ಚೆನ್ನಿತ್ತು ಎಂದು ಅವನಿಗೆ ಅನ್ನಿಸಿತು. ಇಲ್ಲ. ಹಾಗೆ ಕಚ್ಚಬಾರದೆನ್ನುವುದೂ ಅವನದೇ ತರಬೇತಿ. ಅದು ಪ್ರತಿಭಟಿಸುವುದರೆ ತರಬೇತಿ ಅವನು ನೀಡಿರಲಿಲ್ಲ.
ಸ್ಟಾಕಿ ತನ್ನ ಬಾಲವನ್ನು ಜೋರಾಗಿ ಆಡಿಸುತ್ತಲೇ ಇತ್ತು. ಕೋಪ ಬಂದು ಅವನು ಅದನ್ನು ಡಾಕ್ಟರ ಬಳಿ ಕರೆದೊಯ್ದ. ಒಂದುದ್ದ ವಾಗ್ವಾದದ ನಂತರ ಅದರ ಬಾಲವನ್ನು ಕತ್ತರಿಸಬೇಕೆಂದು ಅವರಿಗೆ ಮನವರಿಕೆ ಮಾಡಿದ....
೧೯೮೭
No comments:
Post a Comment