October 22, 2009

ಲಾಟರಿ





ಅಂದಿನವರೆಗೂ ಭಾಸ್ಕರರಾಯರ ಬದುಕಿನಲ್ಲಿ ಯಾವ ಏರುಪೇರೂ ಆಗಿರಲಿಲ್ಲ. ಅವರ ಸುಮಾರು ನಲವತ್ತು ವರ್ಷದ ಸರ್ವೀಸಿನಲ್ಲಿ, ಆನಂತರದ ಹದಿನೆಂಟು ವರ್ಷಗಳ ರಿಟೈರ್‍ಮೆಂಟಿನಲ್ಲಿ ಅನಾವೃಷ್ಟಿಯನ್ನು ಕಂಡಿದ್ದರೇ ಹೊರತು ಅತಿವೃಷ್ಟಿಯನ್ನು ಎಂದೂ ಕಂಡವರಲ್ಲ. ಅನಾವೃಷ್ಟಿಯೂ ಅವರನ್ನು ಹೆಚ್ಚಾಗಿ ಕಾಡಲಿಲ್ಲವೆಂದೇ ಹೇಳಬೇಕು. ಅವರಿಗೆ ಕಷ್ಟವಾದ ಒಂದೇ ಕಾಲಘಟ್ಟವೆಂದರೆ ಮೈಸೂರಿನಲ್ಲಿ ಮನೆ ಕಟ್ಟಿದ ಸಮಯಕ್ಕೆ ಸಂಬಂಧಿಸಿದ್ದು. ಹಾಗೆ ನೋಡಿದರೆ ಅದೂ ಕಷ್ಟದ ಕಾಲವಲ್ಲ. ಆದರೂ ಸಾಲದಲ್ಲಿರಬಾರದೆಂಬ ರಾಯರ ಹುಂಬತನದಿಂದಾಗಿ ಅವರು ಬ್ಯಾಂಕಿನ ಸಾಲ ತೀರಿಸುವವರೆಗೂ ಬೇಚೈನಾಗಿ ಜೀವಿಸಿದ್ದರು. ಇದ್ದ ಬದ್ದ ದುಡ್ಡನ್ನೆಲ್ಲಾ ಹೀಗೆ ಸಾಲತೀರಿಸಲು ಹಾಕಿ ಹದಿನೈದು ವರ್ಷಗಳ ಲೋನನ್ನು ಐದೇ ವರ್ಷಗಳಲ್ಲಿ ತೀರಿಸಿ ರಾಯರು ಮುಕ್ತಿಪಡೆದಿದ್ದರು. ಆ ಐದೂ ವರ್ಷಗಳಲ್ಲಿ, ಮಕ್ಕಳ ಸಿನೇಮಾ, ಹೊಟೇಲಿನೂಟ, ಹೊಸ ಬಟ್ಟೆ ಎಲ್ಲಕ್ಕೂ ಮುಟ್ಟುಗೋಲು ಹಾಕಿ, ಒಂದು ವಿಚಿತ್ರ ಬಡತನದಲ್ಲಿ ಜೀವಿಸಿದ್ದರು. ರಾಯರು ಮೊದಲ ಬಾರಿಗೆ ತಮ್ಮದೇ ಆದ ಲಕ್ಷ ರೂಪಾಯಿಗಳ ಮೊತ್ತವನ್ನು ನೋಡಿದ್ದು ತಮ್ಮ ರಿಟೈರ್‍ಮೆಂಟಾಗಿ, ಪಿಂಚನಿಯ ಕಮ್ಯುಟೇಶನ್ ಮಾಡಿ ನಾಲ್ಕಾರು ಬಾರಿ ತಬರನೋಪಾದಿಯಲ್ಲಿ ತಾವೇ ಕೆಲಸ ಮಾಡಿದ್ದ ಇಲಾಖೆಯ ಮೆಟ್ಟಲ ಮೇಲೆ ಚಪ್ಪಲಿ ಸವೆಸಿ ಗಿಟ್ಟಿಸಿದ್ದ ಚೆಕ್ಕಿನಲ್ಲಿ ಮಾತ್ರ. ಆ ಲಕ್ಷರೂಪಾಯಿಗಳನ್ನು ಬಹಳ ಜಾಗರೂಕವಾಗಿ ಪೋಸ್ಟಾಫೀಸಿನಲ್ಲಿ ಬ್ಯಾಂಕಿನಲ್ಲಿ ಹೂಡಿ, ಬಂದ ಬಡ್ಡಿಯಲ್ಲಿ ತಮ್ಮ ಘನತೆಗೆ ಚ್ಯುತಿಯಿಲ್ಲದಂತೆ ಮಗ ಶ್ರಾವಣನ ಮನೆಯಲ್ಲಿ ಹಾಯಾಗಿದ್ದರು.

ಹೈದರಾಬಾದಿನಲ್ಲಿ ಶ್ರಾವಣನ ಮನೆ ಸೇರಿ ಜೀವನ ಪ್ರಾರಂಭಿಸಿದಾಗಿನಿಂದಲೂ ರಾಯರಿಗೆ ದಿನ ನಿತ್ಯದ ವಾಕಿಂಗಿಗೆ ಬೇಕಾದ ಜಾಗ ಸಿಗದೇ ಫಜೀತಿಯಾಗಿತ್ತು. ಶ್ರಾವಣ ಮೊದಲು ಮನೆ ಮಾಡಿದ್ದ ಅಕಬರಬಾಗಿನ ಸುತ್ತ ಮುತ್ತ ನಡೆದಾಡಲು ಸರಿಯಾದ ಪರಿಸರವಿರಲಿಲ್ಲ. ಅತ್ತ ತಿರುಮಲಗಿರಿಗೆ ಹೋಗಿ ಸಿಕಂದರಾಬಾದಿನಲ್ಲಿ ಮನೆ ಮಾಡುತ್ತೇನೆಂದು ಬೆದರಿಸಿದ್ದರೂ ಅಲ್ಲಿಗೆ ಹೋಗಿಯೇ ಇರಲಿಲ್ಲ. ಆದರೂ ಶ್ರಾವಣ ಹೈದರಾಬಾದಿನಲ್ಲಿ ಸಾಕಷ್ಟುಬಾರಿ ಮನೆ ಬದಲಾಯಿಸಿದ್ದ. ಮಗನಿಗೆ ಐಐಟಿ ಕೋಚಿಂಗೆಂದು ರಾಮಯ್ಯ ಟ್ಯೂಟೋರಿಯಲ್‌ ಅದೂ ಇದೂ ಅಂತ ಅಕಬರಬಾಗಿನಿಂದ ನಲ್ಲಕುಂಟಾಕ್ಕೆ. ಹುಡುಗನಿಗೆ ಯಾವ ಐಐಟಿಯೂ, ಆರೀಸಿಯೂ ಸಿಗದೇ ಸುಲ್ತಾನ್-ಉಲ್-ಉಲೂಮ್ ಕಾಲೇಜಿನಲ್ಲಿ ಸೀಟು ಸಿಕ್ಕಿದಾಗ ಕಾಲೇಜಿಗೆ ಹತ್ತಿರವಾಗುತ್ತೆಂದು ಪಂಜಾಗುಟ್ಟಾಕ್ಕೆ ಮನೆ ಬದಲಾಯಿಸಿದ್ದ. ಪಂಜಾಗುಟ್ಟಾಗೆ ಬಂದಾಗ ಒಂದು ರೀತಿಯಲ್ಲಿ ರಾಯರಿಗೆ ನಿರಂಬಳವಾಗಿತ್ತು. ಪ್ರತಿದಿನ ಪಂಜಾಗುಟ್ಟಾದಿಂದ ಕೆ.ಬ್ರಹ್ಮಾನಂದ ರೆಡ್ಡಿ ಉದ್ಯಾನವನಕ್ಕೆ ಹೋಗಿ ವಾಕಿಂಗಿನ ರಿವಾಜನ್ನು ರಾಯರು ಮುಗಿಸಿ ಬರುತ್ತಿದ್ದರು. ಹಳೇ ನಗರದ ಅಕಬರಬಾಗಿನ ಮನೆಯನ್ನು ಬಾಡಿಗೆಗೆ ನೀಡಿ ಇಲ್ಲಿ ಇನ್ನೊಂದು ಬಾಡಿಗೆ ಮನೆಯನ್ನು ಹಿಡಿದಿದ್ದ ಶ್ರಾವಣನ ಪರಿ ಅವರಿಗೆ ವಿಚಿತ್ರವೆನ್ನಿಸಿತ್ತು. ಆದರೆ ಮೌನವೇ ಅಸ್ತ್ರವಾಗಿದ್ದ ರಾಯರು ಈ ಬಗ್ಗೆ ಎಂದೂ ಏನೂ ಮಾತಾನಾಡಿದವರೂ ಅಲ್ಲ, ಮಾತನಾಡುವವರೂ ಅಲ್ಲ.

ಕಳೆದ ಒಂದು ವರ್ಷದಿಂದ ರಾಯರು ಬ್ರಹ್ಮಾನಂದರೆಡ್ಡಿ ಪಾರ್ಕಿನಿಂದ ತುಸುದೂರವಿದ್ದ ಜ್ಯೂಬಿಲಿ ಹಿಲ್‌ನ ಎಂಟನೇ ರಸ್ತೆಯಲ್ಲಿ ಸೇರುತ್ತಿದ್ದ ಲಾಫ್ಟರ್ ಕ್ಲಬ್ಬಿಗೂ ಸೇರಿದ್ದರು. ಬೆಳಿಗ್ಗೆ ಐದೂವರೆಗೆ ಮನೆ ಬಿಟ್ಟರೆ ರಾಯರು ಮೊದಲು ಲಾಫ್ಟರ್ ಕ್ಲಬ್ಬಿನಲ್ಲಿ ಸ್ವಲ್ಪ ಹೊತ್ತು ನಕ್ಕು ಹಗುರಾಗಿ ನಂತರ ಬ್ರಹ್ಮಾನಂದರೆಡ್ಡಿ ಪಾರ್ಕಿನಲ್ಲಿ ಒಂದು ಸುತ್ತು ಹಾಕಿ ಮನೆಗೆ ವಾಪಸ್ಸಾಗುತ್ತಿದ್ದರು. ಹ್ಹಹ್ಹಹ್ಹಹ್ಹ ಎಂದು ವಿಚಿತ್ರವಾಗಿ ಕೆನೆದಾಡುವ, ಕೆಲಸಕ್ಕೆ ಬಾರದ ಕೆಲ ಉಸಿರಾಟದ ಕವಾಯತ್ತನ್ನು ಮಾಡುವ ಕ್ಲಬ್ಬಿನ ಬಗೆಗೆ ರಾಯರಿಗೆ ವಿಶೇಷ ಪ್ರೀತಿಯೇನೂ ಇರಲಿಲ್ಲ. ಆದರೆ ಮನೆಯ ವಾತಾವರಣದಿಂದ ಇದು ಒಂದು ಸ್ವಾಗತಾರ್ಹ ಬದಲಾವಣೆಯಾಗಿತ್ತು. ವಾಕಿಂಗಿಗೆ ಹೋಗುವಾಗ ಮೊಬೈಲ್ ಫೋನನ್ನು ತೆಗೆದುಕೊಂಡುಹೋಗಬೇಕೆಂದು ಶ್ರಾವಣ ತಾಕೀತು ಮಾಡುತ್ತಿದ್ದ. ಆದರೆ ರಾಯರಿಗೆ ಈ ಬಂಧನ ಇಷ್ಟವಿರಲಿಲ್ಲ. ತಮ್ಮಷ್ಟಕ್ಕೆ ತಾವು ಒಬ್ಬೊಂಟಿಯಾಗಿ ಕಾಲ ಕಳೆಯಬೇಕೆಂದಿರುವಾಗ ಕತ್ತಿಗೆ ನೇತಾಡುವ ಈ ಮೊಬೈಲಿನ ಬಂಧನ ಅವರಿಗೆ ಒಗ್ಗಿರಲಿಲ್ಲ. ಲಾಫ್ಟರ್ ಕ್ಲಬ್ಬಿನವರು ಮೊಬೈಲಿರಬಾರದೆಂಬ ಮುದುಕರಿಗೆ ಪ್ರಿಯವಾದ ನಿಯಮವನ್ನು ಹಾಕಿದ್ದರಿಂದ ರಾಯರಿಗೆ ಮನೆಯಲ್ಲಿ ಸಮಜಾಯಿಷಿ ಹೇಳುವುದೂ ಸರಳವಾಗಿತ್ತು.

ಎಷ್ಟು ವರ್ಷಗಳಕಾಲ ಶ್ರಾವಣ ಮತ್ತು ಇತರ ಮಕ್ಕಳ ಮನಸ್ಸಿನ ಮೇಲೆ ರಾಯರು ದರಬಾರು ನಡೆಸಿದ್ದರು. ಮನೆಯಲ್ಲಿ ಆಮದನಿಯಿದ್ದ ಏಕೈಕ ವ್ಯಕ್ತಿಯಾಗಿ ರಾಯರಿಗೆ ಮಿಕ್ಕೆಲ್ಲರ ಬದುಕನ್ನೂ ನಿರ್ದೇಶಿಸುವ ಅಧಿಕಾರ ಬಂದುಬಿಟ್ಟಿತ್ತು. ಆದರೆ ಕಳೆದ ಹದಿನೆಂಟು ವರುಷಗಳಿಂದ ರಾಯರಿಗೆ ಇದ್ದದ್ದು ಪಿಂಚನಿಯ ಪಾಕೆಟ್ ಮನಿ ಮಾತ್ರ. ಈಗ ಮಗನೇ ಎಲ್ಲವನ್ನೂ ನಿರ್ದೇಶಿಸುತ್ತಾನೆ. ತಾವು ಈ ಹದಿನೆಂಟು ವರ್ಷಗಳಲ್ಲಿ ಹೆಚ್ಚೆಚ್ಚು ಇತರರಮೇಲೆ ಹಣಕ್ಕಲ್ಲದೇ ಅನೇಕ ಸಣ್ಣಪುಟ್ಟ ಕೆಲಸಗಳಿಗೂ ಅವಲಂಬಿತವಾಗುತ್ತಾ, ಬಾಲ್ಯಕಾಲದ ಅಸಹಾಯತೆಗೆ ಹಿನ್ನಡೆಯುತ್ತಿದ್ದಾರೆ. ಹೀಗಾಗಿಯೇ ಈಗ ರಾಯರು ಐದು ವರ್ಷದ ಬಾಲಕನ ಹಠ, ವಿತಂಡವಾದ ಮತ್ತು ತಾನು ಸ್ವತಂತ್ರನಾಗಿದ್ದೇನೆಂಬ ಭ್ರಮೆಗೆ ಇಳಿದುಬಿಡುತ್ತಿದ್ದಾರೆ. ಆದರೆ ರಾಯರ ಪ್ರಬುದ್ಧತೆಯಿಂದಾಗಿ ಈ ಹಠ ಮತ್ತು ವಿತಂಡವಾದ ಬಹಿರಂಗವಾಗಿ ಮಾತುಕತೆಯಲ್ಲಿ ಕಾಣಿಸದೇ ಅವರ ನಡೆನುಡಿಯಲ್ಲಿ ಹಾಸುಹೊಕ್ಕಾಗಿದೆ. ಆಟಿಕೆಗಳು ಬೇಕು ಎನ್ನುವ ಐದು ವರ್ಷದ ಬಾಲಕನ ವಿರುದ್ಧ ಏನೂ ಬೇಡ ಅನ್ನುವ - ಅದರಲ್ಲೂ ಮೊಬೈಲಂತೂ ಬೇಡಲೇ ಬೇಡ ಅನ್ನುವ ಹಠವನ್ನು ಅವರು ಮೈಗೂಡಿಸಿಕೊಂಡುಬಿಟ್ಟಿದ್ದಾರೆ. ಎಲ್ಲರನ್ನೂ ಒಂದು ಚೌಕಟ್ಟಿನಲ್ಲಿ ಬಂಧಿಸಿಡುತ್ತಿದ್ದ ರಾಯರಿಗೆ ಈಗ ಮುಕ್ತತೆಯ ಅವಶ್ಯಕತೆ ಕಾಣಿಸುತ್ತಿದೆ.

ಮುಂಜಾನೆಯ ಹ್ಹಹ್ಹಹ್ಹಹ್ಹ ಮತ್ತು ವಾಕಿಂಗ್ ರಾಯರಿಗೆ ಈ ಎಲ್ಲದರಿಂದಲೂ ಬಿಡುಗಡೆ ನೀಡುವ ಸಾಧನವಾಗಿತ್ತು. ಲಾಫ್ಟರ್ ಕ್ಲಬ್ಬಿನಲ್ಲಿ ಅವರಿಗೆ ಸಿಗುತ್ತಿದ್ದವರೆಲ್ಲಾ ತಮ್ಮ ವಯಸ್ಸಿನವರೇ. ವೇದಾಂತ ಮಾತಾಡುವವರೊಬ್ಬರಾದರೆ, ಬದರಿ ಪ್ರವಾಸದ ಪುಣ್ಯವನ್ನು ಚಪ್ಪರಿಸುವವರಿನ್ನೊಬ್ಬರು. ಲಾಫ್ಟರ್ ಕ್ಲಬ್ಬಿನಿಂದ ಅವರಾರೂ ದೈಹಿಕವಾಗಿ ಉತ್ತಮರಾದರೆಂದು ಹೇಳಲು ಸಾಧ್ಯವಿಲ್ಲ. ಒಂದಿಷ್ಟು ಮಾತು, ಆಗಾಗ ರಾಜಕೀಯ - ವರ್ಲ್ಡ್ ಕಪ್ ಸೋತಾಗ ಆಚರಿಸಬೇಕಾದ ರಾಷ್ಟ್ರೀಯ ಶೋಕ ಇವೆಲ್ಲವೂ ಕ್ಲಬ್ಬಿನ ಚಟುವಟಿಕೆಗಳಾಗಿದ್ದುವು. ಇದರಿಂದ ರಾಯರಿಗೆ ಬೋರಾಗುತ್ತಿದ್ದುದಂತೂ ನಿಜ. ಆದರೆ ಮಧ್ಯತರಗತಿಯ ವಾತಾವರಣದಲ್ಲಿ ಬೆಳೆದುಬಂದಿದ್ದ ಅವರಿಗೆ ಇದಕ್ಕಿಂತ ಹೆಚ್ಚಿನ ಆಸಕ್ತಿಯಿರುವವರು ಯಾರೂ ಸಿಗುವುದು ಅಸಾಧ್ಯವಾಗಿತ್ತು. ಹಾಗೆ ಯಾರಾದರೂ ಇದ್ದರೂ ಅವರು ಲಾಫ್ಟರ್ ಕ್ಲಬ್ಬಿಗೆ ಬರುವ ಸಾಧ್ಯತೆ ಕಡಿಮೆಯಿದ್ದು, ತಮ್ಮದೇ ಕಾರಿನಲ್ಲಿ ಬಂದು ಪಾರ್ಕಿನಲ್ಲಿ ಒಂದು ಸುತ್ತುಹಾಕಿಹೋಗುವವರಾಗಿದ್ದಿರಬಹುದು.

ಹೀಗಿರುತ್ತಿರಲು ಅಲ್ಲಿಗೆ ಹೋದ ಕೆಲದಿನಗಳಲ್ಲಿ ಕ್ಲಬ್ಬಿನ ನೆವ ಹಾಕಿ ಅಲ್ಲಿಗೆ ಬರುತ್ತಿದ್ದ ಆದರೆ ಈ ನಗೆಯ ನಾಟಕದಲ್ಲಿ ಪಾಲ್ಗೊಳ್ಳದಿದ್ದ ಒಬ್ಬಾಕೆ ಮಾತ್ರ ರಾಯರ ಗಮನವನ್ನು ಸೆಳೆದಿದ್ದರು. ಆಕೆ ನಿಧಾನವಾಗಿ ನಡೆದು ಬಂದು ಅಲ್ಲೇ ಪಕ್ಕದ ಕಲ್ಲುಬೆಂಚಿನ ಮೇಲೆ ಕೂತು, ನಗೆಯ ನಾಟಕವನ್ನು ಪ್ರತಿದಿನ ಹಸನ್ಮುಖಿಯಾಗಿ ನೋಡಿ, ಬ್ರಹ್ಮಾನಂದರೆಡ್ಡಿ ಪಾರ್ಕಿನಲ್ಲಿ ಒಂದು ಪುಟ್ಟ ಸುತ್ತು ಹಾಕಿ ನಾಪತ್ತೆಯಾಗುತ್ತಿದ್ದರು. ಆಕೆಯನ್ನು ನೋಡಿದಾಗಲೆಲ್ಲ ಹೀಗೆ ಮನಸ್ಸಿಗೊಪ್ಪದ ಕೃತಕ ನಗುವಿನ ಬಂಧನಕ್ಕೆ ತಾನು ಮಾತ್ರ ಯಾಕೆ ಒಳಗಾಗಿದ್ದೇನೆ ಎಂದು ಭಾಸ್ಕರರಾಯರಿಗೆ ಅನ್ನಿಸುವುದುಂಟು. ಆಕೆ ಇದರೊಳಗೆ ಸೇರದೆಯೇ ಈ ಕಲಾಪದಿಂದ ಸಿಗಬಹುದಾದ ಮನರಂಜನೆಯನ್ನು ಹೊರಗಿನಿಂದಲೇ ಪಡೆದು ಹೋಗಿಬಿಡುತ್ತಿದ್ದರು. ರಾಯರಿಗೆ ಒಮ್ಮೊಮ್ಮೆ ಅನ್ನಿಸುವುದುಂಟು: "ಇದೇನು, ಮನೆಯ ಉಸಿರುಗಟ್ಟಿಸುವ ವಾತಾವರಣದಿಂದ ಸಿಕ್ಕ ಬಿಡುಗಡೆಗೆ ತೆರಬೇಕಿದ್ದ ಬೆಲೆಯೇ? ಯಾಕೆ ಅರ್ಧಘಂಟೆ ಕಾಲ ಹೀಗೆ ಹ್ಹಹ್ಹಹ್ಹಹ್ಹ ಮಾಡಬೇಕು?" ಎಂದು.

ಹೀಗೆ ಆಲೋಚನೆಯಲ್ಲಿದ್ದಾಗಲೇ ರಾಯರನ್ನು ಒಂದು ದಿನ ಆಕೆಯೇ ಬಂದು ಮಾತನಾಡಿಸಿದಾಗ ಮನೆಯಲ್ಲೂ ಮೌನವಹಿಸುವ ರಾಯರು ಅವಾಕ್ಕಾಗಿದ್ದರು. ಆದರೆ ಹೀಗೆ ಇಷ್ಟವಿದ್ದೋ, ಇಲ್ಲದೆಯೋ ತಿಳಿಯದೆಯೇ ರಾಯರಿಗೆ ಆಕೆಯೊಂದಿಗೆ ಸ್ವಲ್ಪ ಸ್ವಲ್ಪವಾಗಿ ಪರಿಚಯವಾಗಹತ್ತಿತು. ಮನೆಯಲ್ಲಿ ಮೌನ ಧರಿಸುವ ರಾಯರಿಗೆ ತಮ್ಮ ತಳಮಳಗಳನ್ನು ತೋಡಿಕೊಳ್ಳಲು ಇದ್ದ ಅನಾಮಿಕ ಅಪರಿಚಿತರ ಅವಶ್ಯಕತೆಯನ್ನು ಆಕೆ ತುಂಬಲು ಪ್ರಯತ್ನಿಸಿದರು ಅನ್ನಿಸುತ್ತದೆ. ಒಂದೆರಡು ತಿಂಗಳಲ್ಲಿ ರಾಯರೂ ಈ ನಗೆನಾಟಕವನ್ನು ಬಿಟ್ಟು ನೇರವಾಗಿ ಪಾರ್ಕಿನ ಮುಖ್ಯಗೇಟಿನ ಬಳಿ ಸಿಗುತ್ತಿದ್ದ ಆಕೆಯ ಜೊತೆ ವಾಕಿಂಗ್ ಮಾಡಲು ಪ್ರಾರಂಭಿಸಿಬಿಟ್ಟರು. ಅವರು ಹೆಚ್ಚೇನೂ ಮಾತಾಡುತ್ತಿರಲಿಲ್ಲ. ಆದರೆ ತೊಂದರೆಯಿಲ್ಲದೇ ಮಾತಾಡಬಹುದು ಅನ್ನುವ ಸಾಧ್ಯತೆಯೇ ಸುಖವನ್ನು ತಂದುನೀಡಿತ್ತು.


ಶ್ರಾವಣನಿಗೆ ಮೊದಲಿನಿಂದಲೂ ತಾನು ತನ್ನ ತಂದೆಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆಂಬ ದೃಢ ನಂಬಿಕೆಯಿತ್ತು. ಆದರೂ ಅವರನ್ನು ಖುಷಿಯಾಗಿಡಲು ಏನು ಮಾಡಬೇಕೆಂದು ತಿಳಿಯದೇ ಒದ್ದಾಡಿಹೋಗುತ್ತಿದ್ದ. ಉದಾಹರಣೆಗೆ ಅಪ್ಪನ ಹುಟ್ಟಿದ ಹಬ್ಬಕ್ಕೆ ಏನು ತಂದುಕೊಡುವುದು? ಎಲ್ಲವನ್ನೂ ಗೆದ್ದು ನಿರ್ವಾಣ ಪಡೆದಿರುವ ಗೊಮ್ಮಟನಂತಿರುವ ಅಪ್ಪನಿಗೆ ಯಾವುದೂ ಬೇಕಿರಲಿಲ್ಲ. ತಿಂಗಳಿಗೊಮ್ಮೆ ಬರುವ ತಮ್ಮ ಪಿಂಚನಿ, ಹಾಗೂ ತಮ್ಮ ಹೂಡಿಕೆಗಳಿಂದ ಮೂಡುವ ಬಡ್ಡಿ - ಎರಡೂ ಅವರ ಎಲ್ಲ ಅವಶ್ಯಕತೆಗಳನ್ನೂ ಅವರ ಅತ್ಮಾಭಿಮಾನಕ್ಕೆ ಧಕ್ಕೆ ಇಲ್ಲದಂತೆ ಒದಗಿಸಿಬಿಡುತ್ತಿತ್ತು. ಅವರ ಜೊತೆ ಹೆಚ್ಚಿನ ಸಮಯ ಕಳೆದರೆ ಅವರಿಗೆ ಸಮಾಧಾನವಾಗುವುದೋ ಎಂದರೆ, ಅದೂ ನಿಜವಾಗಿರಲಿಲ್ಲ. ಒಂದುಥರದಲ್ಲಿ ಅಮ್ಮ ಬದುಕಿದ್ದಷ್ಟು ದಿನ ಅಪ್ಪ ತನ್ನನ್ನು ಗೆಳೆಯನಂತೆ ನೋಡಿದ್ದರು. ಆದರೆ ಅಮ್ಮ ತೀರಿಕೊಂಡಾಗಿನಿಂದ ಒಂದು ರೀತಿಯ ಒಂಟಿತನದಲ್ಲಿ ಅವರು ತಮ್ಮ ಜೀವನವನ್ನು ಕಳೆಯಲು ಪ್ರಯತ್ನಿಸುತ್ತಿದ್ದರು. ಅವರಿಗಿದ್ದ ಎರಡೇ ಅಭ್ಯಾಸಗಳೆಂದರೆ ನಿದ್ದೆ-ಎಚ್ಚರಗಳ ನಡುವೆ ಓದುವುದು [ಅವರು ಓದಿದ್ದು ಎಷ್ಟರ ಮಟ್ಟಿಗೆ ಅರಗಿಸಿಕೊಳ್ಳುತ್ತಿದ್ದರೆನ್ನುವುದು ತಿಳಿಯದಿದ್ದರೂ ಆ ಅಭ್ಯಾಸವನ್ನು ಅವರು ಬಿಟ್ಟಿರಲಿಲ್ಲ], ಮತ್ತು ಆಗಾಗ ಮನೆಯಿಂದ ಆಚೆ "ಒಂದು ಸುತ್ತು ಹಾಕಿ ಬರುತ್ತೇನೆ" ಎನ್ನುತ್ತಾ ನಡೆದಾಡುವುದು. ಅದರಲ್ಲಂತೂ ಮುಂಜಾನೆಯ ವಾಕ್ ಮಾತ್ರ ಎಂದೂ ಕೈಬಿಡುತ್ತಿರಲಿಲ್ಲ. ಶ್ರಾವಣನಿಗೆ ಈಗಲೂ ಈ ಮಾತು ಆಗಾಗ ನೆನಪಾಗುತ್ತದೆ. ಮಗನಿಗೆ ಸುಲ್ತಾನ್-ಉಲ್-ಉಲೂಮ್ ಕಾಲೇಜಿನಲ್ಲಿ ಸೀಟ್ ದೊರೆತಾಗ, ಅವನು ಅಲ್ಲಿಗೆ ಹೋಗಬೇಕೋ ಅಥವಾ ಕೋಟಾಕ್ಕೆ ಕಳಿಸಿ ಮತ್ತೊಂದು ವರ್ಷ ಐಐಟಿಯ ಟ್ರೇನಿಂಗ್ ಕೊಡಿಸಬೇಕೋ ಎಂದೆಲ್ಲಾ ಚರ್ಚೆ ನಡೆಯುತ್ತಿದ್ದಾಗ ಮೌನವಾಗಿದ್ದ ರಾಯರನ್ನು ಶ್ರಾವಣ ಕೇಳಿದ್ದ: "ಏನಪ್ಪಾ ಎಲ್ಲರೂ ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಸೂಚಿಸಿದ್ದೇವೆ. ನನ್ನ ವಿದ್ಯೆಗೆ ಸಂಬಂಧಿಸಿದಂತೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದ ನೀನು ಮೊಮ್ಮಗನ ವಿಷಯಕ್ಕೆ ಮಾತ್ರ ಮೌನವಾಗಿದ್ದೀಯ?" ಅದಕ್ಕೆ ರಾಯರು ಹೇಳಿದ್ದು ಇಷ್ಟು: "ಈಗ ನಾನು ನನ್ನ ವಾಕ್ ಸ್ವಾತಂತ್ರ ಕಳೆದುಕೊಂಡು ಬಿಟ್ಟಿದ್ದೇನೆ. ನನ್ನ ಮಾತನ್ನು ಯಾರೂ ಕೇಳುವುದಿಲ್ಲವಾದ್ದರಿಂದ ಹೇಳುವ ಅವಶ್ಯಕತೆ ಕಾಣುವುದಿಲ್ಲ. ಆದರೆ ಈಗ ನನಗೆ walkಸ್ವಾತಂತ್ರ ಸಿಕ್ಕಿದೆ. ಅದೇ ಸಾಕು".

ಎರಡು ವರ್ಷಗಳಿಂದ ಪಂಜಾಗುಟ್ಟಾಕ್ಕೆ ಮನೆ ಬದಲಾಯಿಸಿದಾಗಿನಿಂದಲೂ ಅಪ್ಪನಿಗೆ ಎಲ್ಲವನ್ನೂ ಧಿಕ್ಕರಿಸಿ ನಡೆವ ಚಟ ಹತ್ತಿಬಿಟ್ಟಿತ್ತು. ಹೀಗಾಗಿಯೇ ಅವರು ಅನೇಕ ಬಾರಿ "ಸ್ವಾತಂತ್ರ" ಅನ್ನುವು ಪದವನ್ನು ಬಳಸುತ್ತಿದ್ದರು. "ಎಲ್ಲಿಗಾದರೂ ಹೋಗು, ಜೇಬಲ್ಲಿ ಮೊಬೈಲನ್ನು ಇಟ್ಟ್ಕೊಂಡು ಹೋಗು" ಅನ್ನುವ ತನ್ನ ಮಾತನ್ನು ಅವರು ಕಿವಿಗೇ ಹಾಕಿಕೊಂಡಿರಲಿಲ್ಲ. ಈ ಥರದ ಮಾತು ಬಂದಾಗ ಮೌನವಾಗಿ ಕಿರುನಗು ಬೀರುತ್ತಿದ್ದರಷ್ಟೇ. ಅಕಸ್ಮಾತ್ ಏನಾದರೂ ಹೆಚ್ಚು ಕಮ್ಮಿ ಆದರೆ ಕೆಲಸಕ್ಕೆ ಬರುತ್ತೆ ಎಂದು ಶ್ರಾವಣ ವಿವರಿಸಲು ಹೋದಾಗ ಒಪ್ಪಿದಂತೆ ತಲೆಯಾಡಿಸಿದರೂ ಅದರ ಪ್ರಭಾವ ಅವರ ವರ್ತನೆಯಲ್ಲಿ ಕಂಡುಬಂದಿರಲಿಲ್ಲ.

ಈಗಿತ್ತಲಾಗಿ ಮುಂಜಾನೆ ಅವರ ವಾಕಿಂಗಿನ ಸಮಯ ತುಸು ಹೆಚ್ಚೇ ಆಗುತ್ತಿದೆ. ಯಾವುದೋ ಲಾಫ್ಟರ್ ಕ್ಲಬ್ ಎಂದು ಸೇರಿ ದಿನವೂ ಬೆಳಿಗ್ಗೆ ನಗುವ ಕಸರತ್ತನ್ನು ಮಾಡಿ ವಾಕಿಂಗ್ ಹೋಗಿ ಬರುತ್ತಾರೆ. ಇದು ಎರಡು ಗಂಟೆಕಾಲದ ಪ್ರಸಂಗ. ಅನೇಕ ಬಾರಿ ಶ್ರಾವಣ ತಾನೂ ಅವರೊಡನೆ ಬ್ರಹ್ಮಾನಂದ ರೆಡ್ಡಿ ಪಾರ್ಕಿಗೆ ಹೋಗಬೇಕೆಂದು ಬಯಸುವುದುಂಟು. ಅನೇಕರು ಅಲ್ಲಿಗೆ ಕಾರಿನಲ್ಲಿ ಬಂದು ಅಲ್ಲಿ ನಡೆದಾಡುತ್ತಾರೆ. ಆದರೆ ರಾಯರು ಈ ಅಭ್ಯಾಸವನ್ನು ಪ್ರೋತ್ಸಾಹಿಸಿಲ್ಲ. "ಬೆಳಿಗ್ಗೆ ನಾನೂ ನಿನ್ನ ಜೊತೆ ಬರುತ್ತೇನೆ" ಎಂದು ಶ್ರಾವಣ ಹೇಳಿದರೆ ತಲೆಯಾಡಿಸಿದವರಂತೆ ಕಂಡರೂ ಬೆಳಿಗ್ಗೆ ಯಾರಿಗೂ ಹೇಳದೆಯೇ ಮನೆಯ ಬಾಗಿಲನ್ನು ಎಳೆದುಕೊಂಡು ಹೋಗಿಬಿಡುತ್ತಿದ್ದರು. ಒಂದೊಮ್ಮೆ ಶ್ರಾವಣ ಬೆಳಿಗ್ಗೆ ಅವರು ಹೊರಡುವುದಕ್ಕೆ ಮುನ್ನವೇ ಅಕಸ್ಮಾತ್ ಎದ್ದು ತಯಾರಾದರೆ "ನನ್ನ ಲಾಫ್ಟರ್ ಕ್ಲಬ್ ನಿನಗೆ ಬೋರಾಗುತ್ತದೆ. ನೀನು ನಿನ್ನ ಪಾಡಿಗೆ ವಾಕಿಂಗ್ ಮಾಡಿ ಬಾ" ಎಂದೋ "ನನ್ನ ಸ್ಪೀಡು ಕಮ್ಮಿಯಾಗಿದೆ. ನಿನ್ನ ಜೊತೆಗೆ ನಾನು ಹೆಜ್ಜೆ ಹಾಕುವುದಕ್ಕೆ ಸಾಧ್ಯವಿಲ್ಲ" ಎಂದೋ ಶ್ರಾವಣನನ್ನು ದೂರವಿಟ್ಟುಬಿಟ್ಟಿದ್ದರು.

ಹೀಗೆ ಏನೂ ಬೇಡವೆಂದು ಪಟ್ಟು ಹಿಡಿದು ಕೂತಿರುವ ಗೌತಮ ಬುದ್ಧನ ಮುಖದಮೇಲೆ ನಗೆಯನ್ನು ತರಿಸುವುದು ಹೇಗೆನ್ನುವುದು ಶ್ರಾವಣನ ಯೋಚನೆಯಾಗಿತ್ತು. ಶ್ರಾವನ ತನ್ನ ಸಂಸಾರದೊಂದಿಗೆ ಹೊರಗೆ ಊಟಕ್ಕೆ ಹೋದಾಗ, ಅಥವಾ ಸಿನೆಮಾಕ್ಕೆ ಹೋಗುವಾಗ ರಾಯರನ್ನು ಆಹ್ವಾನಿಸುವುದುಂಟು. ಆದರೆ ರಾಯರಿಗೆ ಒಂಟಿತನದಲ್ಲಿದ್ದ ಸುಖ ಏನೆನ್ನುವುದು ಶ್ರಾವಣನ ಗ್ರಹಿಕೆಗೆ ಸಿಕ್ಕಿರಲಿಲ್ಲ.


ಪ್ರತಿಭಾ ರೆಡ್ಡಿಯವರಿಗೆ ವಾಕಿಂಗಿನ ಯಾವ ಶೋಕಿಯೂ ಇದ್ದಿದ್ದಿಲ್ಲ. ಆದರೂ ಈಗಿತ್ತಲಾಗಿ ಬೆಳಗಿನ ಕಾಲ ಮನೆಯಲ್ಲಿರುವುದು ದುಸ್ತರವಾಗಿಬಿಟ್ಟಿತ್ತು. ಆಕೆ ಎಂದೂ ಬೆಳಿಗ್ಗೆ ಬೇಗ ಎದ್ದವರಲ್ಲ. ಅದು ಹೇಗೋ ಚಿಕ್ಕಂದಿನಿಂದಲೂ ರಾತ್ರೆ ತಡವಾಗಿ ಮಲಗುವುದು ಸೂರ್ಯೋದಯವಾದ ನಂತರ ಏಳುವುದು ಆಕೆಗೆ ಒಗ್ಗಿದ ಅಭ್ಯಾಸ. ಮದುವೆಯಾದ ಹೊಸದರಲ್ಲಿ ಕೆಲದಿನ ತನ್ನ ಗಂಡನ ಅವಶ್ಯಕತೆಯನುಸಾರ ಮುಂಜಾನೆ ಬೇಗ ಎದ್ದು ಆತನಿಗೆ ಕಾಫಿ ಮಾಡಿಹಾಕಬೇಕಾದ ದಿನಚರಿಗೆ ಬಿದ್ದಿದ್ದರಾದರೂ ಅದು ಇಷ್ಟವಾದ ಕೆಲಸವೇನೂ ಅಲ್ಲ. ರಾತ್ರೆ ಏಳಕ್ಕೇ ಜೈನರಂತೆ ಊಟಮುಗಿಸಿ ಒಂಬತ್ತೂವರೆಗೆ ಹಾಸಿಗೆ ಹಿಡಿಯುವ ಗಂಡನ ಚಾಳಿಯನ್ನು ಆಕೆ ಕ್ರಮಕ್ರಮವಾಗಿ ಬದಲಾಯಿಸಿ, ರಾತ್ರೆ ಹನ್ನೆರಡಕ್ಕೆ ಮುನ್ನ ಮಲಗದಿರುವಂತೆ ನೋಡಿಕೊಳ್ಳುವುದರಲ್ಲಿ ಸಫಲರಾಗಿದ್ದರು. ಇದಕ್ಕೆ ಆಕೆ ಡಬಲ್ ಸ್ಟ್ರಾಟಜಿಯನ್ನು ತಮ್ಮದಾಗಿಸಿಕೊಂಡಿದ್ದರು. ಮೊದಲನೆಯದು ಆಕೆಗೆ ಇಷ್ಟವಾದ ಕಾರ್ಯಕ್ರಮ - ಆದಷ್ಟು ದಿನ ಗಂಡನನ್ನು ರಾತ್ರೆಯ ಸೆಕೆಂಡ್ ಷೋ ಸಿನೇಮಾಕ್ಕೆ ಒಪ್ಪಿಸಿದ್ದು. ಮೊದಲಿಗೆ ಎನ್‍ಟಿಆರ್, ಏಎನ್‍ಆರ್, ನಂತರಕ್ಕೆ ಚಿರಂಜೀವಿ ಎಲ್ಲರೂ ಅದ್ಭುತ ನಟರೆಂದೂ, ಅವರು ನಟಿಸುವ ಸಿನೇಮಾ ಉತ್ತಮ ಕಲಾಕೃತಿಗಳೆಂದೂ ಗಂಡನನ್ನು ನಂಬಿಸುವಲ್ಲಿ ಸಫಲರಾಗಿದ್ದು. ಇದಕ್ಕಾಗಿ ಆಕೆ ಮಹಿಳೆಯರಿಗೇ ಪ್ರತ್ಯೇಕವಾದ ಸಾಲಿನಲ್ಲಿ ನಿಂತು, ನುಗ್ಗಿ, ಗಂಡನಿಗೂ ಟಿಕೇಟನ್ನು ಕೊಂಡು ಬರುವ ಸಾಹಸದ ಬೆಲೆಯನ್ನು ತೆತ್ತಿದ್ದರು. ಎರಡನೆಯ ಆದರೆ ಆಕೆಗೆ ಅಷ್ಟೇನೂ ಇಷ್ಟವಾಗದ ಅಸ್ತ್ರ. ಗಂಡ ಪಟ್ಟಾಭಿರಾಮನನ್ನು ತನ್ನ ಬಾಟಲಿ ಹಿಡಿದು ಕುಳಿತುಕೊಳ್ಳುವುದಕ್ಕೆ ಪ್ರೇರೇಪಿಸುವುದು. ಹೀಗಾಗಿ ಅವರ ಮನೆಯಲ್ಲಿ ಸದಾ ಗುಂಡಿನ ಸಪ್ಲೈ ಇದ್ದೇ ಇರುತ್ತಿತ್ತು. ವಿಡಿಯೋ ಕೆಸೆಟ್ಟು ಮತ್ತು ವಿಸಿಡಿಗಳ ಸಮಯ ಬರುವ ವೇಳೆಗೆ ಪಟ್ಟಾಭಿರಾಮ ಮತ್ತು ಪ್ರತಿಭಾ ನೂಕುನುಗ್ಗಲ ಕಷ್ಟವಿಲ್ಲದೆಯೇ, ಮನೆಯಲ್ಲಿಯೇ, ಗುಂಡೂ-ಸಿನೇಮಾ ಎರಡೂ ಕಾರ್ಯಕ್ರಮಗಳನ್ನು ನಡೆಸುವ ದಾರಿಯನ್ನು ಕಂಡುಕೊಂಡುಬಿಟ್ಟಿದ್ದರು.

ಮೂರು ವರ್ಷಗಳ ಕೆಳಗೆ ಪ್ರತಿಭಾ ರೆಡ್ಡಿಯವರ ಜೀವನದಲ್ಲಿ ಎರಡು ದೊಡ್ಡ ಆಘಾತಕರ ಘಟನೆಗಳು ನಡೆದುವು. ಮೊದಲನೆಯದೆಂದರೆ ಪಟ್ಟಾಭಿರಾಮನ ಹಠಾತ್ ನಿಧನ. ಒಂದು ರಾತ್ರೆ ಜ್ಯೂನಿಯರ್ ಎನ್‍ಟಿಆರ್ ನಟಿಸಿದ "ಆದಿ" ಅನ್ನುವ ಸಿನೇಮಾ ನೋಡಿದ ಕೂಡಲೇ ಆದ ಹೃದಯಾಘಾತದಿಂದ ಆತ ಚೇತರಿಸಿಕೊಳ್ಳಲೇ ಇಲ್ಲ. ಅದಾದ ಕೆಲವು ದಿನಗಳಲ್ಲೇ ಪ್ರತಿಭಾ ರೆಡ್ಡಿಯವರ ನಲವತ್ತೈದು ವರ್ಷದ ಮಗನಿಗೆ ಕಿಡ್ನಿ ಕೆಲಸಮಾಡುತ್ತಿಲವೆಂದು ತಿಳಿದುಬಂದು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‍ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಅದು ಹಾಗಾದ ಕೂಡಲೇ ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿಬಿಟ್ಟಿತ್ತು. ಚೆನ್ನಾಗಿ ಊರೂರು ಓಡಾಡಿಕೊಂಡಿದ್ದ ಸೋಮ್ ರೆಡ್ಡಿ ಈಗ ಭಿನ್ನವಾದ [ಗುಂಡಿಲ್ಲದ] ಜೀವನ ಶೈಲಿಗೆ ಒಗ್ಗಿಕೊಳ್ಳಬೇಕಿತ್ತು. ದೊಡ್ಡ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದ ಸೋಮ್ ಈಗ ಇದ್ದಲ್ಲೇ ಕೆಲಸ ಮಾಡುತ್ತಾ ತನ್ನ ಡಯಾಲಿಸಿಸ್‍ನ ಖರ್ಚಿಗೂ ಸಂಪಾದಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ದಿನ ಬಿಟ್ಟು ದಿನ ಗುಂಡಿನ ಪಾರ್ಟಿ, ಡಿನ್ನರ್ ಎಂದು ಓಡಾಡುತ್ತಿದ್ದ ಸೋಮ್ ಈಗ ಹೌಸ್ ಅರೆಸ್ಟ್‌ಗೆ ಒಳಗಾದವನಂತೆ ಹೆಚ್ಚಿನ ಕಾಲ ಮನೆಯಲ್ಲೇ ಬಂಧನಕ್ಕೊಳಗಾಗಿಬಿಟ್ಟಿದ್ದ. ಹೀಗಿರುತ್ತಿರಲು ಸೋಮ್‌ನ ಹೆಂಡತಿ ತನ್ನ ಭಕ್ತಿಯನ್ನು ತೀವ್ರಗೊಳಿಸಿದ್ದಲ್ಲದೇ, ಗಂಡ ತನ್ನನ್ನು ನಂಬಬೇಕಾದ್ದಲ್ಲದೇ, ತನ್ನ ನಂಬಿಕೆಗಳನ್ನೂ ಒಪ್ಪುವಂತೆ ಮಾಡಿಬಿಟ್ಟಿದ್ದಳು.

ಪ್ರತಿಭಾಗಾಗಲೀ, ಪಟ್ಟಾಭಿರಾಮ ರೆಡ್ಡಿಗಾಗಲೀ ದೇವರ ಬಗ್ಗೆ ವಿಶೇಷವಾದ ಆಸ್ಥೆಯಾಗಲೀ, ನಂಬಿಕೆಯಾಗಲೀ ಇರಲಿಲ್ಲ. ಹೀಗಾಗಿ ಅನೇಕ ವರ್ಷಗಳ ಕಾಲ ದೇವರ ಮೂರ್ತಿಯೆಂದರೆ ಅಲಂಕಾರಕ್ಕಾಗಿ ಇಟ್ಟಿದ್ದ ಅನೇಕ ಗಣಪತಿ ಪ್ರತಿಮೆಗಳಷ್ಟೇ ಆಗಿದ್ದುವು. ಆದರೆ ಸೋಮ್‍ನ ಹೆಂಡತಿಗೆ ವಿಪರೀತ ಭಕ್ತಿ. ಹೀಗಾಗಿ ಮೊದಲಿಗೆ ಸೋಮ್‌ನ ಕೋಣೆಯಲ್ಲಿ ಒಂದು ಪುಟ್ಟ ಫೋಟೋದಿಂದ ಪ್ರಾರಂಭವಾದ ಮನೆಯ ಭಕ್ತಿ ಕಾರ್ಯಕ್ರಮ ನಿಧಾನವಾಗಿ ನೆಟ್ಟಕಲ್ಲಪ್ಪ ಸರ್ಕಲ್‍ನ ದೇವಸ್ಥಾನ ಬೆಳೆದ ರೀತಿಯಲ್ಲಿ ಬೆಳೆಯುತ್ತಾ ಹೋಗಿಬಿಟ್ಟಿತ್ತು. ಈಗ ಸೋಮ್‌ಗೆ ಈ ತೊಂದರೆ ಕಂಡಾಗಿನಿಂದಲಂತೂ ದಿನಸಿ ಇಡುತ್ತಿದ್ದ ಅಡುಗೆ ಕೋಣೆಯ ಪಕ್ಕದ ಸ್ಟೋರ್ ರೂಮು ದೇವಾಲಯವಾಗಿ ಆ ಮನೆಯಲ್ಲಿ ಮೊದಲ ಬಾರಿಗೆ ವೀಭೂತಿ ಉದುರಿಸತ್ತೆನ್ನಲಾದ ಬಾಬಾರ ಫೋಟೋದ ಪ್ರವೇಶವೂ ಪಡೆಯಿತು. ಮಗನ ಮದುವೆಯಾದಾಗಿನಿಂದಲೂ ತನ್ನದೇ ಸಾಮ್ರಾಜ್ಯವಾಗಿದ್ದ ಅಡುಗೆ ಮನೆಯನ್ನು ಸೊಸೆಯೊಂದಿಗೆ ಹಂಚಿಕೊಳ್ಳಬೇಕಾದ ಕಿರಿಕಿರಿಗೆ ಒಳಗಾಗಿದ್ದ ಆಕೆಗೆ ಅಲ್ಲಿ ಪೂಜೆ ಪ್ರಾರಂಭವಾದದ್ದು ತನ್ನ ಖಾಸಗೀ ಕೋಣೆಯಲ್ಲಿ ಪರ ಪುರಷ ಪ್ರವೇಶಿದಷ್ಟೇ ಕಿರಿಕಿರಿಯನ್ನು ಉಂಟುಮಾಡಿತ್ತು. [ದೇವರು ಪುಲ್ಲಿಂಗವಾದರೆ ಆತನೂ ಪರಪುರುಷನೇ ಎಂದು ಪ್ರತಿಭಾ ಯಾವಾಗಲೋ ಹೇಳಿದ್ದು ನೆನಪು].

ದೇವರಲ್ಲಿ ನಂಬಿಕೆಯಿಲ್ಲದ, ಮನುಷ್ಯರಲ್ಲೂ ನಂಬಿಕೆ ಕಳೆದುಕೊಳ್ಳುತ್ತಿದ್ದ ಪ್ರತಿಭಾರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ತನ್ನ ಮಗನಿದ್ದ ಪರಿಸ್ಥಿತಿಯಲ್ಲಿ ಯಾವುದರ ಬಗ್ಗೆ ಮಾತನಾಡುವುದೂ ಕಷ್ಟವಾಗುತ್ತಿತ್ತು. ಮುಂಜಾನೆ ಐದಕ್ಕೆ ಪ್ರಾರಂಭವಾಗುವ ಬಾಬಾರ ಭಜನೆಯನ್ನು ತಪ್ಪಿಸಿಕೊಳ್ಳಲು ಆಕೆ ವಾಕಿಂಗಿನ ಹೊಸ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದರು.

ಜ್ಯೂಬಿಲಿ ಹಿಲ್‍ನ ತಮ್ಮ ಮನೆಯಿಂದ ಅಷ್ಟು ಬೇಗನೇ ಹೊರಡುವ ಆಕೆಗೆ ಜನರನ್ನು ನೋಡುತ್ತಾ, ಇಷ್ಟು ಬೇಗ ಏಳಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ಮನಸ್ಸಿನಲ್ಲೇ ಎಲ್ಲರಿಗೂ ಶಾಪ ಹಾಕಿಕೊಳ್ಳುತ್ತಾ ಒಳಗೊಳಗೇ ವಟಗುಟ್ಟುತ್ತಾ ಕಾಲೆಳೆದುನಡೆಯುವುದು ಉತ್ಸಾಹದ ವಿಷಯವೇನೂ ಆಗಿರಲಿಲ್ಲ. ಆದರೆ ಮನೆಯಲ್ಲಿ ನಡೆಯುತ್ತಿದ್ದ ಬಾಬಾ ಭಜನೆಗಿಂತ ಇದು ಉತ್ತಮ ಎಂದು ಆಕೆಗೆ ಅನ್ನಿಸಿತ್ತು. ಹೀಗೆ ನಡೆದಾಡುತ್ತಿದ್ದಾಗ ಒಂದು ದಿನ ಆಕೆ ಲಾಫ್ಟರ್ ಕ್ಲಬ್ಬಿನ ಕಾರೋಬಾರನ್ನು ಕಂಡರು. ಅಲ್ಲಿ ಹ್ಹಹ್ಹಹ್ಹಹ್ಹ ಮಾಡುತ್ತಿದ್ದ ಮುದುಕರನ್ನು ನೋಡಿ ಆಕೆಗೆ ನಗು ಬಂತು. ಹೀಗಾಗಿ ಪ್ರತಿದಿನ ಕೇವಲ ಟೈಂಪಾಸ್ ಮಾಡುವುದಕ್ಕೆ ಬಂದು ಅಲ್ಲಿ ಒಂದು ಮೂಲೆಯಲ್ಲಿ ಕೂತು ಅರ್ಧಗಂಟೆ ಈ ಕಾರುಬಾರನ್ನು ನೋಡಿ ಮನದಲ್ಲೇ ನಕ್ಕು ನಂತರ ಪಾರ್ಕಿನಲ್ಲಿ ಒಂದು ಪುಟ್ಟ ಸುತ್ತು ಹಾಕಿ ಬರುವ ದಿನಚರಿಗೆ ಆಕೆ ತಮ್ಮನ್ನು ಒಗ್ಗಿಸಿಕೊಂಡುಬಿಟ್ಟಿದ್ದರು. ಹೀಗೆ ತಮಗೆ ಟೈಂಪಾಸಿಗೆ ಟೈಂಪಾಸೂ ಆಯಿತು, ದೇಹದಂಡನೆಯೂ ಆಗಲಿಲ್ಲ.

ತಾವು ಮನೆಗೆ ತಲುಪುವ ವೇಳೆಗೆ ಸೋಮ್ ಮತ್ತು ಅವನ ಹೆಂಡತಿ ಡಯಾಲಿಸಿಸ್‍ಗಾಗಿ ಆಸ್ಪತ್ರೆಗೆ ಹೊರಟುಬಿಟ್ಟಿರುತ್ತಿದ್ದರು. ಹೀಗಾಗಿ ಮನೆಯಲ್ಲಿ ಒಂದು ವಿಚಿತ್ರ ಮೌನವೂ ಇರುತ್ತಿತ್ತು. ಸದಾ ಜನರ ನಡುವಿದ್ದು ಅಭ್ಯಾಸವಾಗಿದ್ದ ಪ್ರತಿಭಾರಿಗೆ ಈ ಮೌನವೂ ಒಂದು ರೀತಿಯಲ್ಲಿ ದುಸ್ತರವಾಗಿರುವಂತೆ ಅನ್ನಿಸಿದರೂ, ಭಜನೆಗಿಂತ ಎಷ್ಟೋ ಉತ್ತಮವೆನ್ನಿಸಿತ್ತು.
ಆಕೆಯ ವಟವಟ ತಡೆಯುವುದಕ್ಕಿಂತ ಹೀಗೆ ವಾಕಿಂಗಿಗೆ ಆಕೆಯನ್ನು ಬಿಡುವುದೇ ಒಳಿತೆಂದು ಸೋಮ್ ಮತ್ತವನ ಹೆಂಡತಿ ನಿರ್ಧರಿಸಿದ್ದರಿಂದ ಈ ಏರ್ಪಾಟು ಚೆನ್ನಾಗಿಯೇ ನಡೆದಿತ್ತು. ಪ್ರತಿಭಾ ಮರೆಯದೇ ತಮ್ಮ ಮೊಬೈಲನ್ನು ಕತ್ತಿಗೆ ನೇತುಹಾಕಿಕೊಂಡು ಬರುತ್ತಿದ್ದರಲ್ಲದೇ, ದಿನಕ್ಕೊಬ್ಬರಂತೆ ಹಳೆಯ ಗೆಳತಿಯರನ್ನು ಹೆಕ್ಕಿ ಹೆಕ್ಕಿ ಅಷ್ಟು ಹೊತ್ತಿಗೇ ಫೋನ್ ಮಾಡಿ ಬಾಲ್ಯಕಾಲದ ಯಾವುದೋ ಅನಿಯಮಿತ ಸೇಡನ್ನು ತೀರಿಸಿಕೊಳ್ಳುತ್ತಿದ್ದರು. ಸೋಮ್‌ಗೆ ಒಂದು ರೀತಿಯಲ್ಲಿ ತನ್ನ ತಾಯಿಯ ಮೊಬೈಲ್ ಬಿಲ್ಲನ್ನು ಕಟ್ಟುವುದೂ ಕಿರಿಕಿರಿಯ ಮಾತಾಗಿತ್ತು. ಆದರೆ ಈ ಬಗ್ಗೆ ಏನಾದರೂ ಮಾತಾಡಿದರೆ ಪ್ರತಿಭಾರ ವಾಗ್ಝರಿಗೆ ಒಳಗಾಗಬೇಕಾಗುತ್ತೆಂಬ ಭಯಕ್ಕೆ ಅವನು ಸುಮ್ಮಗಿರುತ್ತಿದ್ದ. ಈ ಎಲ್ಲದರ ಪರಿಣಾಮವೆಂದರೆ, ಗೆಳೆಯನಂತೆ ಟ್ರೀಟ್ ಮಾಡುತ್ತಿದ್ದ ಬೆಳೆದು ನಿಂತ [ಮಧ್ಯವಯಸ್ಕನಾಗಿದ್ದ] ಮಗನಿಗೂ ಪ್ರತಿಭಾರಿಗೂ ನಡುವಿನ ಅಂತರ ಬೆಳೆಯುತ್ತ ಹೋಯಿತು. ಅದೃಷ್ಟವಶಾತ್ ಪ್ರತಿಭಾ ಸೋಮ್‍ನ ತಾಯಿ - ಅವನ ಹೆಂಡತಿಯ ಅತ್ತೆಯ ಸ್ಥಾನದಲ್ಲಿದ್ದದ್ದರಿಂದ; ಆರ್ಥಿಕವಾಗಿ ಸೋಮ್ ಆಕೆಯ ಮೇಲೆ ಆಧಾರಿತವಾಗಿರಲಿಲ್ಲವಾದ್ದರಿಂದ ಇದು ಜಟಿಲತೆಯ ಉತ್ತುಂಗವನ್ನು ಮುಟ್ಟಲಿಲ್ಲ. ಪ್ರತಿಭಾ ಆಗಾಗ ತಾವೇನಾದರೂ ತಮ್ಮ ಸೊಸೆಯ ಸ್ಥಾನದಲ್ಲಿದ್ದು ಅವಳು ತನ್ನಸ್ಥಾನದಲ್ಲಿದ್ದಿದ್ದರೆ ಮನೆಯ ಸಂಬಂಧಗಳು ಹೇಗಿದ್ದಿರಬಹುದೆಂದು ಊಹಿಸಿ ಮೈ ಜುಂ ಎನ್ನಿಸಿಕೊಳ್ಳುವುದಿತ್ತು. ಸದ್ಯಕ್ಕೆ ಆಕೆಯ ಸೊಸೆ, ಸೊಸೆಯಾಗೇ ಇದ್ದು ಅತ್ತೆಯಾಗದಿದ್ದದ್ದು ಒಳ್ಳೆಯದೇ ಆಯಿತು ಅನ್ನಿಸಿತು. ಹೀಗಾಗಿಯೇ ಮೊದಲಬಾರಿಗೆ ಆಕೆ ವರದಕ್ಷಿಣೆಯ ಡೆಬಿಟ್-ಕ್ರೆಡಿಟ್‌ನಲ್ಲಿ ನಷ್ಟವೇ ಅನ್ನಿಸಬಹುದಾದ ಇಬ್ಬರು ಹೆಣ್ಣುಮಕ್ಕಳನ್ನು ಸೋಮ್‌ನ ಹೆಂಡತಿ ಹೆತ್ತದ್ದಕ್ಕೆ ಆ ನಂಬಿಕೆಯಿಲ್ಲದ ಬಾಬಾರಿಗೆ ಒಂದು ನಮಸ್ಕಾರ ಹಾಕಲೂ ತಯಾರು ಎಂದು ಮನದಲ್ಲೇ ಅಂದುಕೊಂಡರು. ಇಲ್ಲವಾದರೆ ತಮ್ಮ ಸೊಸೆಯ ಸೊಸೆಯ ಅವಸ್ಥೆಯಬಗ್ಗೆ ಆಕೆಗೆ ಊಹಿಸಲೂ ಸಾಧ್ಯವಾಗಿರಲಿಲ್ಲ.

ಲಾಫ್ಟರ್ ಕ್ಲಬ್ಬಿನ ಹಾಸ್ಯಾಸ್ಪದ ಎನ್ನಿಸುವಂತಹ ಕವಾಯತ್ತನ್ನು ಅಲ್ಲಿದ್ದವರೇ ನಂಬಿದಂತಿರಲಿಲ್ಲ. ಅದನ್ನು ನೋಡಿದಾಗಲೆಲ್ಲ ಪ್ರತಿಭಾರಿಗೆ ತಾವು ಹಿಂದೆ ಓದಿದ್ದ ಸತ್ಯಂ ಶಂಕರ ಮಂಚಿಯವರ ಕಥೆ ತಂಪುಲಮಾರಿ ಸೋಮಲಿಂಗಂ ನೆನಪಾಗುವುದುಂಟು. "ಸೋಮಲಿಂಗಂ ದಿಟ್ಟಿಸಿ ನೋಡಿದರೆ ಹಚ್ಚ ಹಸಿರಿನ ಗಿಡವೂ ಬಾಡುವುದು, ಅವನು ನಡೆವ ನೆಲದ ಮೇಲೆ ಹುಲ್ಲೂ ಬೆಳೆಯದು" ಎಂದೆಲ್ಲಾ ವಿವರಿಸಲ್ಪಟ್ಟ ಈ ತಂಪುಲಮಾರಿ ಸೋಮಲಿಂಗಂನಂತೆ ಯಾರೋ ದುಷ್ಟ ಹುನ್ನಾರದಿಂದ ಈ ಲಾಫ್ಟರ್ ಕ್ಲಬ್ಬನ್ನು ಏರ್ಪಾಟು ಮಾಡಿರಬಹುದೇ? ತಮ್ಮ ಮನೆಯಲ್ಲಿ ಬಾಬಾರ ಪೂಜೆ ನಡೆಯುವುದಕ್ಕೂ ಇಂಥದೇ ಯಾವುದೋ ಕಾಣದ ಕೈನ ಕೈವಾಡವಿದ್ದಿರಬಹುದೇ? ಶಾಂತಿಯಿಂದಿರುವ ಪ್ರಪಂಚದ ಜನಸ್ಥೋಮಕ್ಕೆ ಕಾದಾಡಲು ಮತ್ತೊಂದು ಕಾರಣವನ್ನು ನೀಡಲು ಅನೇಕ ದೇವರುಗಳು, ಮತ್ತು ಅವರ ಅನುಯಾಯಿಗಳನ್ನು ಯಾರಾದರೂ ದುಷ್ಟ ಹುನ್ನಾರದಿಂದ ಸೃಷ್ಟಿಸಿರಬಹುದೇ ಅಂತ ಪ್ರತಿಭಾ ಆಲೋಚಿಸುವುದುಂಟು. ಹೀಗೆ ಈ ಎರಡೂ ಲಾಫ್ಟರ್ ಕ್ಲಬ್ ಎಂಬ ಕೋಮನ್ನೂ, ಬಾಬಾರ ಅನುಯಾಯಿ ಎನ್ನುವ ಬಣವನ್ನೂ ಸೃಷ್ಟಿಸಿದ ಅಶರೀರವಾದ ಎರಡೂ ಕೈಗಳೂ ಒಂದೇ ಕೈಯಾಗಿದ್ದಿರಬಹುದೇ? ಆದರೂ ಮನೆಯ ಬಾಬಾರ ಪೂಜೆ ಕಂಪಲ್ಸರಿಯಾದ್ದರಿಂದ ಕಿರಿಕಿರಿ ಉಂಟು ಮಾಡಿದರೆ, ಈ ಕವಾಯತನ್ನು ಅವರು ಕರುಣೆಯ ಕಣ್ಣಿನಿಂದ, ಹಾಗೂ ತಮಗೆ ದೊರೆಯುತ್ತಿದ್ದ ಮನರಂಜನೆಯ ದೃಷ್ಟಿಯಿಂದ ನೋಡುತ್ತಿದ್ದರು.

ಶಿಸ್ತಿಗೆ ಒಗ್ಗಿರದ ಶಾಲಾಮಕ್ಕಳಂತೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಅಲ್ಲಿನ ಕವಾಯತ್ತನ್ನು ಮಾಡುತ್ತಿದ್ದರು. ಕೆಲವರಂತೂ ಯಾರೋ ಬಲವಂತವಾಗಿ ತಮ್ಮನ್ನು ಇಲ್ಲಿಗೆ ತಳ್ಳಿಬಿಟ್ಟಿರುವಂತೆ ಪ್ರವರ್ತಿಸುವುದನ್ನು ಪ್ರತಿಭಾ ಗಮನಿಸಿದ್ದರು. ಒಂದು ದಿನ ಹೀಗೆ ಇಷ್ಟವಿಲ್ಲದೇ ಕೈ ಎತ್ತಿ ಬರದೇ ಇರುವ ನಗುವನ್ನ ತಿಣುಕುತ್ತಿದ್ದ ಭಾಸ್ಕರರಾಯರನ್ನು ನೋಡಿ ಪ್ರತಿಭಾರಿಗೆ ಅನುಕಂಪ ಬಂತು. ಮಿಕ್ಕವರೆಲ್ಲಾ ಅಲ್ಲಿಂದ ತಮ್ಮ ತಮ್ಮ ಮನೆಯತ್ತ ಹೊರಟರೆ ಈ ಮುದುಕಪ್ಪ ಮಾತ್ರ ಮತ್ತೆ ಬ್ರಹ್ಮಾನಂದರೆಡ್ಡಿ ಪಾರ್ಕಿಗೆ ಹೋಗಿ ವಾಕಿಂಗ್ ಮುಂದುವರೆಸುತ್ತಿದ್ದುದರಿಂದ ಆತನೊಂದಿಗೆ ಏನಾದರೂ ಹರಟೆ ಕೊಚ್ಚುವ ಸಾಧ್ಯತೆಯಿತ್ತು.


ಭಾಸ್ಕರರಾಯರು ಮೊದಲಿಗೆ ಸ್ವಲ್ಪ ಅವಾಕ್ಕಾದರು. ಅವರು ಎಂದೂ ತಮ್ಮಷ್ಟಕ್ಕೆ ತಾವೇ ಇರುವಂತಹ ವ್ಯಕ್ತಿ. ಒಂಟಿತನ ಅವರಿಗೆ ಒಗ್ಗಿಬಂದದ್ದು. ಆದರೆ ಪ್ರತಿಭಾ ರೆಡ್ಡಿಯವರು ರಾಯರನ್ನು ಮಾತನಾಡಿಸಿದಾಗ ಅವರಿಗೆ ಏನೋ ಆಯಿತು. ಮೊದಲಿಗೆ ಆಕೆ ಮಾತನಾಡಿಸಿದ್ದು ತಮ್ಮನ್ನು ಅಲ್ಲವೇ ಅಲ್ಲ ಎಂಬಂತೆ ಆಕೆಯನ್ನು ಗಮನಿಸದಿರುವಂತೆ ಮುಂದಕ್ಕೆ ಸರಸರ ಹೆಜ್ಜೆ ಹಾಕಿದರು. ಆದರೆ ಪ್ರತಿಭಾ ಸುಲಭಕ್ಕೆ ಆತನನ್ನು ಬಿಡುವವರಾಗಿರಲಿಲ್ಲ.

"ಹಲೋ ನಿಮ್ಮನ್ನೇ, ಮಾತನಾಡಿಸಿದರೆ ಹಾಗೆ ನಾಚಿ ಓಡಿಹೋಗುವಂಥದ್ದೇನಿದೆ? ನಾನೇನು ನಿಮ್ಮನ್ನು ನುಂಗಿ ಹಾಕಿಬಿಡುತ್ತೇನೆಯೆ?" ಎಂದು ಆಕೆ ಹೇಳಿದಾಗ ಭಾಸ್ಕರರಾಯರಿಗೆ ಏನು ಹೇಳಬೇಕೋ ತೋರಲಿಲ್ಲ. ಹೀಗೆ ಅಪರಿಚಿತರು ಅವರನ್ನು ಮಾತನಾಡಿಸಿದರೆ ಅದು ಸ್ಪಷ್ಟವಾಗಿ ಯಾವುದಾದರೂ ವಿಳಾಸವೋ ಅಥವಾ ಸಮಯ ಎಷ್ಟೆಂದು ಕೇಳುವುದಕ್ಕೋ ಆಗಿರುತ್ತಿತ್ತು. ಹಾಗೆ ನೋಡಿದರೆ ಆತ "ಪರಸ್ತ್ರೀ" ಜೊತೆ ಮಾತಾಡಿದ್ದು ಯಾವಾಗ ಅನ್ನುವುದು ನೆನಪೇ ಆಗಲಿಲ್ಲ. ಮಧ್ಯಮವರ್ಗದ ವಿಚಿತ್ರ ಮಡಿವಂತಿಕೆಯಲ್ಲಿ ಬೆಳೆದಿದ್ದ ರಾಯರು ಒಂದು ಕ್ಷಣದ ಮಟ್ಟಿಗೆ ಅವಾಕ್ಕಾದರೂ ಚೇತರಿಸಿಕೊಂಡು ನಾಚುತ್ತಲೇ ತಲೆಯಾಡಿಸಿದರು. ಆತನ ಮುಖನೋಡಿ ಪ್ರತಿಭಾ "ಅರೇ.. ನೀವು ಯಾಕೆ ಇಷ್ಟು ಮುಜುಗರ ಪಡುತ್ತಿದ್ದೀರಿ? ನಾನೇನೂ ನಿಮ್ಮನ್ನು ಬುಟ್ಟಿಗೆ ಹಾಕಿಕೊಂಡು ಪಲಾಯನ ಮಾಡುವವಳಲ್ಲ" ಅಂದರು. ಇದರಿಂದ ಭಾಸ್ಕರರಾಯರು ಇನ್ನಷ್ಟು ವಿಚಲಿತರಾದರು. ಈ ವಯಸ್ಸಿನಲ್ಲಿ ಇಂಥಹ ಮಾತುಗಳನ್ನು ಅವರು ಕೇಳಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಅಥವಾ ಇಂಥಹ ಮಾತುಗಳನ್ನು ಕೇಳಲು ಸಾಧ್ಯವಾಗುವುದು ಈ ವಯಸ್ಸಿನಲ್ಲಿಯೇ ಏನೋ..

ಆಕೆಯ ಮಾತಿನ ಮೋಡಿಗೆ ರಾಯರು ಬಲಿಯಾದರು ಅನ್ನಿಸುತ್ತದೆ. ಎಲ್ಲೋ ಆಕೆಯ ಜೊತೆ ಮಾತನಾಡುವುದು ಆಸಕ್ತಿಯ ವಿಷಯ ಎಂದು ರಾಯರಿಗೆ ಅನ್ನಿಸಿತು. ಜನರ ಜೊತೆಗಿನ ಸಂಬಂಧಗಳಲ್ಲಿ ಇರಬಹುದಾದ ತಮ್ಮ ಮಡಿವಂತಿಕೆಯನ್ನು ಆಕೆ ಪ್ರಶ್ನಿಸಿದಂತೆ ಅನ್ನಿಸಿತು. ಜೊತೆಗೆ ಯಾರಾದರೂ ಮಾತನಾಡಿಸಿದಾಗ ಉತ್ತರಿಸದೇ ಮುಸುಡಿ ತಿರುಗಿಸಿಹೋಗುವ ಜಾಯಮಾನದವರಲ್ಲ ರಾಯರು. ಮೊದಲ ದಿನ ಆಕೆ ಕಿರುನಗೆ ನಕ್ಕಾಗ ಆತನೂ ತಲೆಯಾಡಿಸಿದ್ದರು. ಆದರೆ ಗಂಡಸರ ಜೊತೆಯೇ ಸ್ನೇಹ ಮಾಡಿರದ ರಾಯರು ಪ್ರತಿಭಾರನ್ನು ಉತ್ಸಾಹದಿಂದ ಮಾತನಾಡಿಸುವುದು ದೂರದ ಮಾತಾಗಿತ್ತು. ತಮ್ಮ ವಯಸ್ಸಿನವರ ನಡುವೆ, ಡೊಳ್ಳು ಹೊಟ್ಟೆಯ ಗಂಡಸರೂ, ಟೈರುಗಳಾಕಾರದ ನಡುವಿನ ಹೆಂಗಸರೂ ಕಾಣುವಾಗ ತಮ್ಮ ದೇಹವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದ ಪ್ರತಿಭಾರನ್ನು ನೋಡಿ ರಾಯರು ಮನದಲ್ಲೇ ಮೆಚ್ಚಿಕೊಂಡರು. ಐದು ವರ್ಷಗಳಿಂದ ರಾಯರು ತಮ್ಮ ಪುಟ್ಟ ಹೊಟ್ಟೆಯನ್ನು ಕರಗಿಸಲು ಶತ ಪ್ರಯತ್ನಮಾಡುತ್ತಿದ್ದಾರೆ. ಆದರೆ ರಾಯರು ವಾಕಿಂಗ್ ಕಾರ್ಯಕ್ರಮ ಆರು ತಿಂಗಳು ಹೀಗೆ ಮೂರು ತಿಂಗಳು ಹಾಗೆ ನಡೆಯುತ್ತದೆ. ಸಾಲದ್ದಕ್ಕೆ ಎದುರಿಗೆ ಕಡಕ್ಕಾಗಿ ಕಾಣುವ ರಾಯರಿಗೆ ಕರಿದ ತಿಂಡಿಗಳೆಂದರೆ ವಿಶೇಷ ಪ್ರೀತಿ. ಶ್ರಾವಣನೂ ಅದಕ್ಕೆ ತಕ್ಕಂತೆ ಸೂಪರ್‌ಮಾರ್ಕೆಟ್‌ನಿಂದ ಏನನ್ನಾದರೂ ತಂದು ಮನೆಯಲ್ಲಿಡುತ್ತಲೇ ಇದ್ದ. ಮಧ್ಯವಯಸ್ಸು ದಾಟಿದವರು ಯಾರಾದರೂ ತೆಳ್ಳಗಿದ್ದರೆ ರಾಯರ ದೃಷ್ಟಿ ಅವರ ಮೇಲೆ ಸಹಜವಾಗಿ ಬೀಳುತ್ತಿತ್ತು.

ಇಷ್ಟುವಯಸ್ಸಾದರೂ ಚೆನ್ನಾಗಿರುವ ಈಕೆ ಯುವತಿಯಾಗಿದ್ದಾಗ ಅನೇಕ ಹೃದಯಗಳನ್ನು ಮುರಿದಿರಬಹುದು ಅಂತ ರಾಯರಿಗನ್ನಿಸಿತು. ಈ ಇಳಿವಯಸ್ಸಿನಲ್ಲೂ ಒಂದು ಸುಂದರ ಹೆಂಗಸು ಮಾತನಾಡಿಸಿದರೆ ಉಂಟಾಗುವ ಉತ್ಸಾಹಕ್ಕೂ - ಗಂಡಸರು ಸ್ನೇಹ ಬೆಳೆಸಿದಾಗ ಆಗುವ ಅನುಭವಕ್ಕೂ ಇದ್ದ ವ್ಯತ್ಯಾಸದ ಬಗ್ಗೆ ರಾಯರು ಯೋಚಿಸಿದರು. ಯಾಕೆ ತಮ್ಮನ್ನು ಹೀಗೆ ಒಂಟಿಯಾಗಿ ಭೇಟಿಯಾಗಿ ಸ್ನೇಹ ಬೆಳೆಸಲು ಯತ್ನಿಸಿದ ಈಕೆಯ ಬಗ್ಗೆ ತಮಗೆ ಕುತೂಹಲ? ಯಾಕೆ ಮನಸ್ಸಿನಲ್ಲಿ ತಳಮಳ? ತಿಳಿಯದ ಗಂಡಸರು ಮಾತನಾಡಿಸಿದಾಗ ಯಾಕೆ ಇದೇ ಅನುಭವ ಆಗುವುದಿಲ್ಲ? ರಾಯರಿಗೆ ಈ ಪ್ರಶ್ನೆಗಳಿಗೆ ಉತ್ತರ ಹೊಳೆಯಲಿಲ್ಲ. ಆದರೆ ಮಾಡಲು ಹೆಚ್ಚೇನೂ ಇಲ್ಲದೇ ಬರೇ ಓದು, ಟಿವಿ, ಮಾತುಕತೆಯ ನಡುವೆ ನಡೆದುಹೋಗುತ್ತಿದ್ದ ತಮ್ಮ ಜೀವನಕ್ಕೆ ಇದರಿಂದಾಗಿ ತುಸು ಉತ್ಸಾಹ ದೊರೆತರೆ ತಪ್ಪೇನೂ ಇರಲಿಲ್ಲ. ಹೀಗಾಗಿ ಆಕೆ ಮೊದಲ ದಿನ ಮಾತನಾಡಿಸಿದಾಗ ನಾಚಿದಂತೆ ಕಂಡ ರಾಯರು ಮನೆಗೆ ಬಂದು ಅದೇ ಗುಂಗಿನಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಆಕೆ ಮತ್ತೆ ಮಾರನೆಯ ದಿನ ಸಿಕ್ಕರೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನುವುದರ ಬಗ್ಗೆ ಸಾಕಷ್ಟು ಮಾನಸಿಕ ತಯಾರಿ ನಡೆಸಿದರು. ಹೀಗೆ ಆಕೆಯ ಸ್ನೇಹ ಬೆಳೆಸುವುದರಿಂದ ಆಗಬಹುದಾದ ಅಪಾಯದ ಬಗ್ಗೆಯೂ ಯೋಚಿಸಿದರು - ಜನ - ಮುಖ್ಯತಃ ಲಾಫ್ಟರ್ ಕ್ಲಬ್ಬಿನವರು ಏನನ್ನಬಹುದು? ಒಂದು ಹೆಣ್ಣು ಸಿಕ್ಕಕೂಡಲೇ ವಯಸ್ಸನ್ನೂ ಗಮನಿಸದೆ ಆಕೆಯ ಹಿಂದೆ ಬಾಲಬಡಿದುಕೊಳ್ಳುತ್ತಾ ಹೊರಟೇ ಬಿಟ್ಟ ಅನ್ನಬಹುದೇ? ಯಾವ ಏರುಪೇರೂ ಇಲ್ಲದೇ ನಡೆಯುತ್ತಿದ್ದ ಜೀವನದಲ್ಲಿ ಇದ್ದಕ್ಕಿದ್ದಂತೆ ಹೊಸ ಆಯಾಮಗಳು ಹುಟ್ಟುತ್ತಿರುವುದರ ಬಗ್ಗೆ ಯೋಚಿಸಿ ಪುಳಕಿತಗೊಂಡರು. ತಮ್ಮಲ್ಲೇ ನಗುತ್ತ, ಅನೇಕ ವರ್ಷಗಳ ಮೇಲೆ ಯಾವುದೋ ಹಾಡನ್ನು ಉಲ್ಲಾಸದಿಂದ ಗುನುಗಿದ ರಾಯರನ್ನು ಕಂಡು ಶ್ರಾವಣನೂ ಆಶ್ಚರ್ಯಗೊಂಡನಾದರೂ ಆ ಬಗ್ಗೆ ಮಾತನಾಡಲಿಲ್ಲ.

ಹೀಗೇ ಒಂದೆರಡು ದಿನ ಅವರುಗಳ ಭೇಟಿ ಬ್ರಹ್ಮಾನಂದ ರೆಡ್ಡಿ ಉದ್ಯಾನದಲ್ಲಿ ಆಗುವುದು, ಮಾತನಾಡುತ್ತಾ ಇಬ್ಬರೂ ಹೆಜ್ಜೆ ಹಾಕುವುದು ನಡೆಯಿತು. ರಾಯರು ಈ ಅನುಭವವನ್ನು ಅಂತರ್ಗತ ಮಾಡಿಕೊಳ್ಳುತ್ತಿದ್ದರು. ಕುಮುದಾ ಬದುಕಿದ್ದಷ್ಟು ದಿನ ಅವರಿಗೆ ಆಕೆ ಸಂಗಾತಿಯಾಗಿ ಇದ್ದಳು. ಮಾತು ಹೆಚ್ಚು ಇಲ್ಲದಿದ್ದರೂ, ಒಬ್ಬರಿಗೊಬ್ಬರು ಎಷ್ಟು ಒಗ್ಗಿಹೋಗಿದ್ದರೆಂದರೆ ಅವರ ಸಾಂಗತ್ಯವೇ ಇಬ್ಬರಿಗೂ ನೆಮ್ಮದಿಯನ್ನು ನೀಡುತ್ತಿತ್ತು. ಹೀಗಾಗಿ ರಾಯರಿಗೆ ತಮ್ಮ ತಳಮಳವನ್ನು ಬೇರೆಡೆ ಹಂಚಿಕೊಳ್ಳಬೇಕಾದ ಅವಶ್ಯಕತೆ ಕಂಡೇ ಇರಲಿಲ್ಲ. ಈಗಲೂ ತಳಮಳವನ್ನು ಹಂಚಿಕೊಳ್ಳಬೇಕೆಂಬ ಬಯಕೆಗಿಂತ, ಹಂಚಿಕೊಳ್ಳುವ ಸಾಧ್ಯತೆ ಕಂಡದ್ದೇ ಅವರಿಗೆ ಸಾಕಾಗಿತ್ತು. ತಮ್ಮದೇ ವಯಸ್ಸಿಗೆ ಅನ್ವಯವಾಗುವ ಈ ವಿಚಾರಗಳ ಬಗ್ಗೆ ಬೇರೆ ಯಾರೊಂದಿಗೂ ಮಾತನಾಡುವುದು, ಅದು ಸ್ವಂತ ಮಗನೇ ಆಗಿದ್ದರೂ ಶಕ್ಯವಲ್ಲದ ಮಾತಾಗಿತ್ತು. ಆದರೆ ಅವರುಗಳ ಮಾತುಗಳು ಹೆಚ್ಚು ಗಹನವಾಗಲು ಅವಕಾಶವನ್ನೇ ಇಬ್ಬರೂ ನೀಡಲಿಲ್ಲ. ಒಂದು ಥರದಲ್ಲಿ ಹರಟೆಯೋಪಾದಿಯಲ್ಲಿ ಅವರ ಪರಿಚಯ ಬೆಳೆಯುತ್ತಾ ಹೋಯಿತು. ಹಾಗೆ ನೋಡಿದರೆ ರಾಯರ ಪುಳಕ, ಉತ್ಸಾಹವೆಲ್ಲಾ ಅವರ ಮನಸ್ಸಿನೊಳಗೆ ಇದ್ದದ್ದು ಮಾತ್ರ. ಅದು ಬಹಿರಂಗವಾಗಿ ಅವರ ಮನಸ್ಥಿತಿಯಲ್ಲಿ ಕಂಡಿತೇ ವಿನಹ ಮಾತುಗಳಲ್ಲಿ ಹೊರಹೊಮ್ಮಲಿಲ್ಲ.

ಹೀಗಾಗಿ ಪ್ರತಿಭಾ ಮಾತನಾಡಿಸಿದರೂ, ಹೆಚ್ಚು ಮಾತು ಆದದ್ದೇ ಪ್ರತಿಭಾರಿಂದ. ಎಲ್ಲ ವಿಚಾರಗಳ ಬಗೆಗೂ ಸ್ಪಷ್ಟ ಅಭಿಪ್ರಾಯವಿದ್ದ ಆಕೆ ಸಿನೆಮಾದಿಂದ ಹಿಡಿದು ತಮ್ಮದೇ ಹೆಸರಿನವರು ರಾಷ್ಟ್ರಾಧ್ಯಕ್ಷರಾದ ಬಗೆಗೂ ಮಾತನಾಡಲು ಹಿಂಜರಿಯುತ್ತಿರಲಿಲ್ಲ. ಈ ಒಡನಾಟದಿಂದಾಗಿ ರಾಯರಿಗೆ ಅನೇಕ ವಿಚಾರಗಳು ತಿಳಿದು ಬಂದುವು - ರಜನೀಕಾಂತನ ದೊಡ್ಡ ಸಿನೇಮಾ ಶಿವಾಜಿಯಲ್ಲಿ ನಟಿಸಿರುವ ಶ್ರೀಯಾ ಅನ್ನುವ ಹುಡುಗಿ ಮೊದಲಿಗೆ ಹೆಚ್ಚು ತೆಲುಗು ಸಿನೆಮಾದಲ್ಲಿ ನಟಿಸಿ ಈಗಷ್ಟೇ ತಮಿಳಿಗೆ ವರ್ಗಾವಣೆಯಾದವಳು. ಅವಳು ಮೂಲತಃ ಉತ್ತರಭಾರತದವಳು; ಆರತಿ ಅಗರ್‌ವಾಲ್ ಎನ್ನುವ ನಟಿ ತರುಣ್ ಎನ್ನುವ ನಟನ ಪ್ರೀತಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಫಿನಾಯಿಲ್ ಕುಡಿದಳು; ರಜನಿಗಿಂತ ಕಡಿಮೆ ಸಂಭಾವನೆ ಪಡೆದರೂ, ತೆಲುಗಿನಲ್ಲಿ ಚಿರಂಜೀವಿ ಅನ್ನುವ ನಟನ ಸ್ಥಾನ ರಜನಿಗಿಂತ ಕಡಿಮೆಯೇನೂ ಅಲ್ಲ.... ಹೀಗೆ ಎಷ್ಟೋ ಮಟ್ಟಿಗೆ ರಾಯರ ಸಾಮಾನ್ಯ ಜ್ಞಾನ ಬೇಳೆಯುತ್ತಾ ಹೋಯಿತು. ಹಾಗೆ ನೋಡಿದರೆ ಪ್ರತಿಭಾರೆಡ್ಡಿ ಇತರರೊಂದಿಗೆ ಮಾತನಾಡಲು ಬೇಕಾದ್ದು ಒಂದು ಜೊತೆ ಕಿವಿಗಳು ಮಾತ್ರ. ಎದುರಿಗಿದ್ದ ಮನುಷ್ಯನಿಗೆ ಮಾತು ಬರುವುದೋ ಇಲ್ಲವೋ ಅನ್ನುವ ಪ್ರಮೇಯ ಆಕೆಗೆ ಇದ್ದಂತಿರಲಿಲ್ಲ. ಆಕೆಯೇ ಒಪ್ಪಿದಂತೆ ತಾವು ನಾನಾ ಪಾಟೇಕರ್‌ನ ಸ್ತ್ರೀ ಅವತರಣಿಕೆಯಾಗಿದ್ದರು. ಹೀಗಾಗಿಯೇ ಒಮ್ಮೆ ಆಕೆ ಅಸ್ಖಲಿತವಾಗಿ ಹತ್ತು ನಿಮಿಷ ಯಾವುದೋ ವಿಚಾರದ ಬಗ್ಗೆ ಮಾತಾಡಿ ಭಾಸ್ಕರರಾಯರನ್ನು ನೀವೇನಂತೀರಿ ಎಂದು ಕೇಳಿದಾಗ ಆತ ಎಂದೂ ಇಲ್ಲದ ಹಾಸ್ಯ ಪ್ರಜ್ಞೆಯನ್ನು ತೋರಿ ತಾವು ಹಿಂದೆ ಓದಿದ್ದ ಡುಂಡಿರಾಜನ ಪದ್ಯವೊಂದನ್ನು ಆಕೆಯತ್ತ ಬಿಟ್ಟಿದ್ದರು:

ಸಮತೋಲನ

ಸೃಷ್ಟಿಕರ್ತ ಜಾಣ
ಅರಿತಿದ್ದನಾತ ಮನುಷ್ಯನ
ವಾಚಾಳಿತನ.
ಇಲ್ಲಿರುವ ಬಾಯಿಗಳ
ಎರಡು ಪಟ್ಟು
ಕಿವಿಗಳನ್ನು ಕೊಟ್ಟು
ಕಾಪಾಡಿದ್ದಾನೆ
ಸಮತೋಲನ.

ಪ್ರತಿಭಾರಿಗೆ ರಾಯರಲ್ಲಿ ಮೆಚ್ಚುಗೆಯಾದದ್ದೇ ಈ ಮಾತು. ಏನೋ ಮಾತಾಡುತ್ತಿದ್ದಾಗ ಹೀಗೆ ಏನಾದರೊಂದು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಗಂಭೀರವಾದ ವಿಷಯವನ್ನೂ ಉಡಾಫೆಯಿಂದ ನೋಡುವ ಕಲೆ ಅವರಿಗಿತ್ತು. ಅವರು ಯಾವುದರ ಬಗೆಗೂ ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಅನ್ನುವುದನ್ನು ಪ್ರತಿಭಾ ಗಮನಿಸಿದ್ದರು. ನೀವು ಇಂಡಿಯನ್ ಐಡಲ್‌ನಲ್ಲಿರುವ ಉದಿತ್‌ ನಾರಾಯಣನಂತೆ ಎಂದು ಆಕೆ ಹೇಳಿದ್ದು ರಾಯರಿಗೆ ಅರ್ಥವೇ ಆಗಿರಲಿಲ್ಲ. ಆದರೆ ಹೀಗೆ ಮಾಡಿದಾಗ್ಯೂ ಅವರು ಸ್ವತಃ ನಗುವುದನ್ನು ಆಕೆ ಕಂಡೇ ಇರಲಿಲ್ಲ. ಪ್ರತಿಭಾ ಸಿಕ್ಕಾಗಿನಿಂದಲೂ ರಾಯರು ಲಾಫ್ಟರ್ ಕ್ಲಬ್ಬಿಗೆ ಹೋಗುವುದನ್ನು ಹೆಚ್ಚೂ ಕಮ್ಮಿ ಬಿಟ್ಟೇ ಬಿಟ್ಟಿದ್ದರೆನ್ನಬೇಕು. ಹೀಗಾಗಿ ಅವರ ಬದುಕಿನಲ್ಲಿದ್ದ ಕೃತಕ ನಗುವೂ ಮಾಯವಾಗಿಬಿಟ್ಟಿತ್ತು. ಬೆಳಿಗ್ಗೆ ಸೀದಾ ಬ್ರಹ್ಮಾನಂದರೆಡ್ಡಿ ಪಾರ್ಕಿಗೆ ಹೋಗುವುದು, ಅಲ್ಲಿ ಬಂದ ಪ್ರತಿಭಾರ ಜೊತೆ ಹೆಜ್ಜೆ ಹಾಕುವುದೂ ಅವರ ದಿನ ನಿತ್ಯದ ನಿಯಮವಾಯಿತು. ಹಾಗೆ ನೋಡಿದರೆ ದಿನಕ್ಕೆ ಒಂದೂವರೆ ಘಂಟೆ ಜೊತೆಯಾಗಿ ಕಳೆಯುವಂಥ ವಿಚಾರಗಳು ಏನೂ ಇದ್ದಿದ್ದಿಲ್ಲ. ಹೌದು, ಆದರೆ ರಾಯರು ಮದುವೆಯಾದ ಹೊಸತರಲ್ಲೂ ಕುಮುದಾಬಾಯಿಯ ಜೊತೆ ಮಾತಾಡಲು ಮನೆಯಿಂದ ದೂರ ಪಾರ್ಕುಗಳಿಗೆ ಹೋಗುತ್ತಿದ್ದದ್ದು ನೆನಪಿದೆ. ಆಗಲೂ ಅವರುಗಳು ಹೇಗೆ ಸಮಯ ಕಳೆದರೆಂದು ವಿವರಿಸುವುದು ರಾಯರಿಗೆ ಕಷ್ಟವಾಗುತ್ತಿತ್ತು. ಇಷ್ಟಾದರೂ ಒಂದು ಹೊಸಪರಿಚಯದ ಕುತೂಹಲವೇ ಅವರನ್ನು ಈ ದಾರಿಯಲ್ಲಿ ನಡೆಸಿತ್ತು.

ಆಕೆಯ ಜೊತೆಗಿನ ಭೇಟಿಯಲ್ಲಿ ಮೊದಲಿಗೆ ಅವರುಗಳು ಲೋಕಾಭಿರಾಮ ಮಾತನಾಡಿದರೂ, ಬೇಗನೇ ಪ್ರತಿಭಾ ಮಗ ಸೋಮ್ ಮತ್ತು ಮನೆಯ ಪರಿಸ್ಥಿತಿಯ ಬಗ್ಗೆ ಗೊಣಗಾಡುವುದೇ ಮುಖ್ಯವಾಯಿತು. ರಾಯರಿಗೆ ದೇವರ ಬಗ್ಗೆ ಪ್ರತಿಭಾಗಿದ್ದಷ್ಟು ಸ್ಪಷ್ಟ ನಿಲುವಿರಲಿಲ್ಲ. ಒಂದು ರೀತಿಯಲ್ಲಿ ದೇವರ ಅಸ್ತಿತ್ವವನ್ನು ಪ್ರಶ್ನಿಸುವತ್ತ ಅವರು ನಡೆದರೂ, ಜಿದ್ದು ಕೃಷ್ಣಮೂರ್ತಿ, ಯೂಜಿಗಳ ಪುಸ್ತಕಗಳ ಪ್ರಭಾವ ರಾಯರ ಮೇಲೆ ಗಾಢವಾಗಿ ಆಗಿತ್ತು. ರಾಯರು ಎಲ್ಲವನ್ನೂ ತಾತ್ವಿಕ ನೆಲೆಯಿಂದ ನೋಡುತ್ತಿದ್ದರು. ರಾಯರು ತಮ್ಮ ಬಗ್ಗೆ ಹೆಚ್ಚು ಹೇಳಲು ಹೋಗಲೇ ಇಲ್ಲ. ಹೇಳುವುದಕ್ಕೆ ಇದ್ದುದಾದರೂ ಏನು? ಪ್ರತಿಭಾರಿಗೆ ಹೋಲಿಸಿದರೆ ಅವರಿಗೆ ಮನೆಯಲ್ಲಿ ಯಾವ ತೊಂದರೆಗಳೂ ಇರಲಿಲ್ಲ. ಮಗ ಅವರನ್ನು ತಮ್ಮ ಪಾಡಿಗೆ ಬಿಟ್ಟುಬಿಡುತ್ತಿದ್ದ. ಕುರುಕಲು ತಿಂಡಿ ತಿನ್ನುತ್ತಾ ರಾಯರು ತಮ್ಮ ಪುಟ್ಟ ಬೊಜ್ಜನ್ನು ವಾಕಿಂಗಿನ ಮೂಲಕ ಕರಗಿಸಲೆತ್ನಿಸುತ್ತಾ ಜೀವನ ಕಳೆಯುತ್ತಿದ್ದರು.


ಕಳೆದ ಕೆಲವು ದಿನಗಳಿಂದ ಅಪ್ಪನ ನಡೆನುಡಿಯಲ್ಲಿ ಉತ್ಸಾಹವಿದ್ದದ್ದನ್ನು ಶ್ರಾವಣ ಕಂಡಿದ್ದ. ಕಾರಣ ಏನೆನ್ನುವುದನ್ನು ಕಂಡು ಹಿಡಿಯಲು ಅವನಿಗೆ ಅಳುಕು. ಇನ್ನು ಇರುವ ಖುಷಿಯೂ ನಿಂತುಹೋಗುತ್ತೇನೋ ಅನ್ನುವ ಭೀತಿಯಿಂದ ಈ ವಿಷಯದ ಗೋಜಿಗೆ ಹೋಗದೆಯೇ ಏನೂ ಆಗಿಲ್ಲವೆನ್ನುವಂತೆ ಇದ್ದುಬಿಟ್ಟಿದ್ದ. ಆದರೆ ಅಪ್ಪನ ಉಲ್ಲಾಸದ ಕಾರಣವೇನು ಎಂದು ತಿಳಿಯುವ ಕುತೂಹಲ ಶ್ರಾವಣನಿಗೆ ಇದ್ದೇ ಇತ್ತು. ಅದೇನೆಂದು ತಿಳಿದರೆ, ಯಾವುದರಿಂದ ಅಪ್ಪನಿಗೆ ಖುಷಿಯಾಗುತ್ತದೆ ಅನ್ನುವುದಾದರೂ ಗೊತ್ತಾಗುತ್ತದೆ. ಆದರೆ ಕುತೂಹಲವನ್ನು ತಣಿಸುವ ಧೈರ್ಯ ಶ್ರಾವಣನಿಗೆ ಇರಲಿಲ್ಲ. ಆ ಪ್ರಯತ್ನದಲ್ಲಿ ಹೆಚ್ಚು ಕಮ್ಮಿ ಏನಾದರೂ ಅದರೆ ಅನ್ನುವ ಭಯ ಅವನಿಗೆ. ಹಿಂದೆ ಎಂದೋ ನೋಡಿದ್ದ "ವಾಟ್ಸ್ ಸೋ ಬ್ಯಾಡ್ ಎಬೌಟ್ ಫೀಲಿಂಗ್ ಗುಡ್" ಅನ್ನುವ ಸಿನೆಮಾ ಅವನಿಗೆ ನೆನಪಾಯಿತು. ಆ ಸಿನೇಮಾದಲ್ಲಿ ಊರಿಗೇ ಒಂದು ವೈರಸ್ ತಟ್ಟಿ ಎಲ್ಲರೂ ಖುಷಿಯಿಂದ ಇರುತ್ತಾರೆ. ಆದೆರೆ ಆ ವೈರಸ್ಸನ್ನು ಕಂಡು ಹಿಡಿದು ಅದನ್ನು ಪಸರಿಸುತ್ತಿದ್ದ ಪಕ್ಷಿಯನ್ನು ಸೆರೆ ಹಿಡಿದು ಖುಷಿಯಾಗಿರುವ ರೋಗವನ್ನು ನಿರ್ಮೂಲನ ಮಾಡುವವರೆಗೂ ಅಲ್ಲಿನ ಆರೋಗ್ಯ ವಿಭಾಗ ಸುಮ್ಮನಿರುವುದಿಲ್ಲ. ಹೀಗೆ ಖುಷಿಯ ಕಾರಣವನ್ನು ಬಗೆಯುತ್ತಾ ಖುಷಿಯನ್ನೇ ಹಾಳುಮಾಡುವುದು ಅವನಿಗೆ ಇಷ್ಟವಿದ್ದಿಲ್ಲ.

ಆದರೆ ಇದ್ದಕ್ಕಿದ್ದಂತೆ - "ನಾನು ನಾಲ್ಕಾರು ದಿನ ಯಾತ್ರೆಗೆ ಹೋಗುತ್ತಿದ್ದೇನೆ. ನನಗೆ ಈ ಎಲ್ಲದರಿಂದ ಒಂದು ಬದಲಾವಣೆ ಬೇಕಾಗಿದೆ" ಎಂಬ ಮಾತನ್ನು ರಾಯರು ಹೇಳಿದ್ದು ಶ್ರಾವಣನಿಗೆ ದಿಕ್ಕುತೋಚದ ಹಾಗೆ ಮಾಡಿತು. ಹೀಗೆಲ್ಲಾ ಬೇಜಾರಾದಾಗ ಮೈಸೂರಿನ ವಿಷಯ ಮಾತಾಡುತ್ತಿದ್ದರೇ ಹೊರತು ಬೇರೆ ಎಲ್ಲಿಗಾದರೂ ಹೋಗುವ ಮಾತನ್ನು ಅವರು ಎಂದೂ ಆಡಿರಲಿಲ್ಲ. ಒಂಟಿಯಾಗಿ ಹೋಗುತ್ತೀರಾ? ಯಾರ ಜೊತೆಗಾದರೂ ಹೋಗುತ್ತೀರಾ ಅಂತ ಕೇಳಿದರೆ ಏನೂ ಹೇಳದೆಯೇ ಹೊರಟು ನಿಂತಿದ್ದರು. ಇದು ಲಾಫ್ಟರ್ ಕ್ಲಬ್ಬಿನ ವತಿಯಿಂದ ನಡೆಯುತ್ತಿರುವ ಕರಾಮತ್ತೋ ಹೇಗೆ ಎಂದು ಶ್ರಾವಣನಿಗೆ ಕುತೂಹಲವಿತ್ತು. ಹಿಂದಿನ ವರ್ಷ ಲಾಫ್ಟರ್ ಕ್ಲಬ್ಬಿನ ಕೆಲ ಜನ ಬದರಿ-ಕೇದಾರ ಯಾತ್ರೆಯ ಪ್ಲಾನ್ ಹಾಕಿದ್ದನ್ನು ರಾಯರು ಮನೆಯಲ್ಲಿ ಹೇಳಿದಂತೆ ನೆನಪು. ಆದರೆ ರಾಯರಿಗೆ ಅದರಲ್ಲಿ ಆಸಕ್ತಿಯಿದ್ದಿದ್ದಿಲ್ಲ. ಶ್ರಾವಣ ಎಷ್ಟು ವಿವರಗಳನ್ನು ಕೇಳಿದರೂ, ಯಾವ ದಿನ ಹೋಗುತ್ತೇನೆ ಅನ್ನುವ ಮಾತನ್ನೂ ಹೇಳದೇ ಬರೇ ತಾವು ಈ ಮಧ್ಯದ ಯಾವುದೋ ದಿನದಂದು ಪ್ರವಾಸ ಹೋಗುವ ಸಂಕೇತವನ್ನು ಮಾತ್ರ ರಾಯರು ನೀಡಿದ್ದರು. ಇದಕ್ಕೆ ಮೂಲ ಪ್ರೇರಣೆಯೇನು - ಎಲ್ಲಿಗೆ ಹೋಗುವುದು, ರೈಲಿನಲ್ಲೋ-ಬಸ್ಸಲ್ಲೋ, ಅವರ ಸಹಯಾತ್ರಿಗಳು ಯಾರು, ಯಾವಾಗ ವಾಪಸ್ಸಾಗುವುದು, ಯಾವುದೇ ವಿವರಗಳನ್ನು ರಾಯರು ನೀಡಲಿಲ್ಲ. ಯಾವತ್ತೂ ತೋರದ ಈ ವಿಚಿತ್ರ ಸ್ವಭಾವವನ್ನು ರಾಯರು ಯಾಕೆ ತೋರುತ್ತಿದ್ದಾರೆಂದೂ, ಅದಕ್ಕೂ ಈಚೆಗೆ ಸ್ವಲ್ಪ ಹೆಚ್ಚು ಖುಷಿಯಾಗಿದ್ದ ರಾಯರ ಮನಃಸ್ಥಿತಿಗೂ ಸಂಬಂಧವಿದೆಯೇ ಅನ್ನುವ ಕುತೂಹಲವನ್ನೂ ಶ್ರಾವಣ ತಣಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಶ್ರಾವಣ ಈ ಬಗ್ಗೆ ತನ್ನ ಹೆಂಡತಿಯ ಜೊತೆ ಮಾತನಾಡಿದ. ಯಾರು ಏನೇ ಕೇಳಿದರೂ ಭಾಸ್ಕರ ರಾಯರು ತಮ್ಮ ಮೌನದ ಸ್ಟ್ರಾಟಜಿಯನ್ನು ತಮ್ಮದಾಗಿಸಿಕೊಂಡು ಯಾವ ವಿವರವನ್ನೂ ಕೊಡದೆಯೇ ಇದ್ದರು. ಈ ವಾರದಲ್ಲಿ ಯಾವಾಗಲಾದರೂ ನಾನು ಒಂದು ಸರ್ಪ್ರೈಜ್ ಪರೀಕ್ಷೆಯನ್ನು ಕೊಡುತ್ತೇನೆ ಎಂದು ಸತಾಯಿಸುತ್ತಿದ್ದ ಮಾಸ್ತರ ನೆನಪಾಯಿತು ಶ್ರಾವಣನಿಗೆ.. ಪ್ರತಿದಿನ ಆ ಸರ್ಪ್ರೈಜ್ ಇಂದಿರಬಹುದೇ ಅಂತ ಕಾಯುವುದೇ ಕೆಲಸವಾಗಿ ಮಿಕ್ಕದ್ದೇನೂ ಮುಂದುವರೆಯುತ್ತಿರಲಿಲ್ಲ. ಹೆಚ್ಚಿನ ವಿವರ ಕೇಳಿದ್ದಕ್ಕೆ "ನಿಜಕ್ಕೂ ಹೇಳದೆಯೇ ಹೋಗಬೇಕೂಂತ ಇದ್ದೆ.. ಆದರೆ ನಂತರ ನೀವುಗಳು ಪೋಲೀಸು ಇತ್ಯಾದಿ ಅಂತ ರಾದ್ಧಾಂತ ಮಾಡಿ 'ಕಾಣೆಯಾಗಿದ್ದಾರೆ' ಅಂತ ಪೇಪರಿನಲ್ಲಿ ಫೋಟೋ ಹಾಕಿಸುತ್ತೀಯಾಂತ ಹೆದರಿ ನಿನಗೆ ಈ ವಿಷಯವನ್ನು ಮುಂಚಿತವಾಗಿ ತಿಳಿಸುತ್ತಿದ್ದೇನೆ" ಅಂತ ಬೇರೆ ತಾಕೀತು ಮಾಡಿ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿಬಿಟ್ಟಿದ್ದರು.

ಇದು ರಾಯರ ಜಾಯಮಾನವಲ್ಲವೇ ಅಲ್ಲ. ಅವರ ಜೀವನ ಎಂದಿಗೂ ಪೂರ್ವನಿಗದಿತರೀತಿಯಲ್ಲಿ ಮುಂದುವರೆಯುತ್ತಿತ್ತು. ಹೀಗೆ ಆಘಾತವನ್ನು, ಆಶ್ಚರ್ಯವನ್ನೂ ರಾಯರು ಎಂದೂ ಉಂಟುಮಾಡಿದವರಲ್ಲ. ಹೀಗೇಕೆ ಮಾಡುತ್ತಿದ್ದಾರೆ? ಇದರ ಹಿಂದಿನ ಕರಾಮತ್ತು ಏನು? ಯಾಕೆ ಇದ್ದಕ್ಕಿದ್ದಂತೆ ಅನಿಗದಿತ ಸ್ಥಳಕ್ಕೆ ಹೊರಟು ನಿಂತಿದ್ದಾರೆ? ಎಷ್ಟು ದಿನದ ನಂತರ ಬರುತ್ತಾರೆ? ಯಾವುದಕ್ಕೂ ಜವಾಬಿಲ್ಲ. ಅಪ್ಪನ ಬಗ್ಗೆ ಜಾಸೂಸಿ ಮಾಡಿ ಅವರನ್ನು ಶಾಲಾಬಾಲಕನಂತೆ ನೋಡಬೇಕೋ, ಅಥವಾ ತನ್ನ ಮೇಲೆ ಎಂದೂ ಜಾಸೂಸಿ ಮಾಡದೇ ಬೆಳೆಸಿದ ಅಪ್ಪನ ಸ್ವಾತಂತ್ರ್ಯವನ್ನು ಗೌರವಿಸಿ ಬಿಟ್ಟುಬಿಡಬೇಕೋ ತಿಳಿಯದೇ ಶ್ರಾವಣ ಕಂಗಾಲಾದ. ಕಡೆಗೆ ಗಂಡ ಹೆಂಡತಿ ಬಹಳ ಚರ್ಚಿಸಿ, ಒಂದು ಮೊಬೈಲ್ ಫೋನ್ ಕೊಂಡು ಹೋಗುವುದಾದರೆ ಹೋಗಿ, ಇಲ್ಲವಾದರೆ ಬೇಡ ಎಂದು ಹೇಳಬೇಕೆಂದು ನಿರ್ಧರಿಸಿದರು. ಹಾಗೆಂದು ಅಪ್ಪನಿಗೆ ಹೇಳಿದ್ದೂ ಆಯಿತು. ಆದರೆ ಭಾಸ್ಕರರಾಯರು ಅವರನ್ನು ನೋಡಿ ತಲೆಯಾಡಿಸಿ, "ಇಲ್ಲ, ಫೋನ್ ಒಯ್ಯುವುದಿಲ್ಲ. ಮನಸ್ಸಾದರೆ ಎಸ್.ಟಿ.ಡಿ ಬೂತಿನಿಂದ ಫೋನ್ ಮಾಡುತ್ತೇನೆ. ನಾನು ಹೋಗುವುದಂತೂ ಖಂಡಿತ." ಎಂದು ಖಂಡ ತುಂಡವಾಗಿ ಹೇಳಿ ಈ ಬಗ್ಗೆ ತಮಗೆ ಚರ್ಚಿಸಲು ಹೆಚ್ಚಿನ ಆಸಕ್ತಿ ಇಲ್ಲವೆಂಬಂತೆ ಪುಸ್ತಕದಲ್ಲಿ ತಲೆ ಹುದುಗಿದರು.

ಈ ಪೀಕಲಾಟವನ್ನು ಬಗೆಹರಿಸುವುದು ಹೇಗೆಂದು ಶ್ರಾವಣನಿಗೆ ತಿಳಿಯಲಿಲ್ಲ. ತಾನು ಏನೋ ಚೌಕಾಶಿ ಮಾಡಬಹುದೆಂದು ರಾಯರಿಗೆ ಮೊಬೈಲ್ ಫೋನಿನ ವಿಚಾರ ಹೇಳಿದರೆ ವ್ಯಾಪಾರವನ್ನೇ ಮಾಡುತ್ತಿಲ್ಲವೆಂದು ರಾಯರು ಹೇಳಿಬಿಟ್ಟರಲ್ಲ! ಮನೆಯ ಒಡೆಯ ತಾನಾಗಿದ್ದೇನೆ ಅನ್ನುವ ಭ್ರಮೆಯಲ್ಲಿದ್ದ ಶ್ರಾವಣನಿಗೆ ರಾಯರುನ್ನು ಯಾವ ಮುಲಾಜಿಗೂ ತಾನು ಕಟ್ಟಿಹಾಕಲು ಸಾಧ್ಯವಾಗಿಲ್ಲ ಎನ್ನುವ ಅರಿವಾಯಿತು. ತನ್ನ ಕೆಲಸದ ನಿಮಿತ್ತ ಅವನು ಯೂರೋಪಿಗೆ ಒಂದು ವಾರದಲ್ಲಿ ಹೋಗಬೇಕಿತ್ತು. ರಾಯರು ಯಾರಿಗೂ ಹೇಳದೇ ಒಂಟಿಯಾಗಿ ಹೋದರೆ ಆ ನಂತರ ಏನಾದರೂ ಹೆಚ್ಚುಕಮ್ಮಿಯಾದರೆ ತನ್ನ ಹೆಂಡತಿ ಆ ಪರಿಸ್ಥಿತಿಯನ್ನು ಸಂಭಾಳಿಸಲು ಶಕ್ತಳಲ್ಲ ಅನ್ನಿಸಿ ಶ್ರಾವಣ ತನ್ನ ಯಾತ್ರೆಯನ್ನು ಮುಂದೂಡಿದ. ರಾಯರ ಈ ವಿಚಿತ್ರ ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಾವಣ ಒಂದುರೀತಿಯಿಂದ ತಾನು ಸಿದ್ಧನಾದ. ಅಪ್ಪನಿಗೆ ಏನಾದರೂ ಬೇಕಿದ್ದರೆ ಒದಗಿಸಿಕೊಡಲು ಸದಾ ತಯಾರಿದ್ದ ತನಗೇ ಈ ಕುತ್ತು ಯಾಕೆ ಬಂತು ಎಂದು ಶ್ರಾವಣನಿಗೆ ಅರ್ಥವಾಗಲಿಲ್ಲ. ಎಷ್ಟು ಯೋಚಿಸಿದರೂ ಈ ನಿರ್ಣಯಕ್ಕೆ ಸಮರ್ಪಕವಾದ ಕಾರಣ ಅವನಿಗೆ ಸಿಗಲಿಲ್ಲ. ಇಲ್ಲಿ ಬೋರಾಗಿ ರಜೆ ಬೇಕಿದ್ದರೆ ತಾನು ಎಲ್ಲಿಗಾದರೂ ಕರೆದೊಯ್ಯಲು ತಾನೇ ಸಿದ್ಧನಿದ್ದೆನಲ್ಲ. ಹಾಗಿದ್ದಾಗಲೂ ರಾಯರು ಈ ರೀತಿಯಾಗಿ ಯಾಕೆ ವರ್ತಿಸುತ್ತಿದ್ದಾರೆ ಅನ್ನುವ ವಿಚಾರ ಶ್ರಾವಣನಿಗೆ ಸೋಜಿಗವನ್ನುಂಟುಮಾಡಿತು. ಅನಾವಶ್ಯಕವಾಗಿ ಅವನ ರಕ್ತದೊತ್ತಡವೂ ಜಾಸ್ತಿಯಾಯಿತು.

ಇದ್ದಕ್ಕಿದ್ದ ಹಾಗೆ ಶ್ರಾವಣನಿಗೆ ದೇವರಲ್ಲಿ ನಂಬಿಕೆಯೂ ಭಕ್ತಿಯೂ ಏಕಕಾಲಕ್ಕೆ ಹುಟ್ಟಿಬಿಟ್ಟಿತು. ಮನಸ್ಸಿನಲ್ಲೇ ತಿಳಿಯದ ದೇವರಿಗೆ ಪ್ರಾರ್ಥನೆ ಸಲ್ಲಿಸಿದ. ಎಲ್ಲವೂ ಸಾಂಗವಾಗಿ ನಡೆದರೆ ತಿರುಪತಿಯ ಬೆಟ್ಟವನ್ನು ಮೆಟ್ಟಲಿನಿಂದ ಹತ್ತುತ್ತೇನೆ ಅನ್ನುವ ಹರಕೆಯನ್ನೂ ಹೊತ್ತ. ಎಡಪಂಥೀಯ ವಿಚಾರಧಾರೆ ಉಗುಳುತ್ತಿದ್ದ ಶ್ರಾವಣ ತನ್ನ ಮನಸ್ಸಿನಲ್ಲೇ ಸಂಪ್ರದಾಯದತ್ತ ತಿರುಗಿದ್ದು ಅವನಿಗೆ ತನ್ನ ಅಸಹಾಯಕತೆ ಮತ್ತು ಚಡಪಡಿಕೆಯ ದ್ಯೋತಕವಾಯಿತು. ಯಾವ ವಿಚಾರವಾದವೂ ವೈಜ್ಞಾನಿಕ ವಾದಸರಣಿಯೂ ಮನುಷ್ಯನ ಈ ರೀತಿಯ ತೆವಲುಗಳನ್ನು ವಿಶ್ಲೇಶಿಸಿ ವಿವರಿಸಲಾರವು, ಈ ರೀತಿಯಾದ ಘಟನೆಗಳು ಜರುಗಿದಾಗಲೇ ತನ್ನಂತಹ ವಿಚಾರವಾದಿ ಚಿಂತಕರು ತಮ್ಮ ಸಮತೋಲನವನ್ನು ಕಳೆದುಕೊಂಡು ಯಾವುದೋ ಮೌಢ್ಯದತ್ತ ವಾಲುವುದಕ್ಕೆ ಕಾರಣವಾಗಿರಬಹುದೋ ಎಂದೂ ಆಲೋಚಿಸಿದ. ಇಲ್ಲದಿದ್ದರೆ, ಎಲ್ಲವೂ ಸಹಜವಾಗಿ ನಡೆಯುತ್ತಿದ್ದ ಈ ಮನೆಯಲ್ಲಿ ಭಾಸ್ಕರರಾಯರಿಗೆ - ಯಾರಿಗೂ ಹೇಳದೇ ಅನಿಯತ ಸ್ಥಳಕ್ಕೆ ಅನಿಯತ ಕಾಲಕ್ಕಾಗಿ ಯಾತ್ರೆ ಹೋಗುವ ಅವಶ್ಯಕತೆಯಾದರೂ ಏನಿತ್ತು? ಇದು ಯಾರ ಐರನ್ ಲೆಗ್ಗಿನ ಪ್ರಭಾವವೋ ತಿಳಿಯದೇ ಅವನು ಕಕ್ಕಾಬಿಕ್ಕಿಯಾದ.

ಎಲ್ಲಿಂದಲೋ ಬಂದು ಬಡಿದ ಗರದಿಂದ ಚೇತರಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಾ ಶ್ರಾವಣ ಕಕ್ಕಾಬಿಕ್ಕಿಯಾಗಿ ಕೂತಿದ್ದ. "ಊರ ಪಿಡುಗು ವೊಚ್ಚಿ ವೀರಚೆಟ್ಟಿ ಗೋಚಿಕಿ ಕೊಟ್ಟಿಂದಿ" [ಊರಪಿಡುಗು ಬಂದು ವೀರಚೆಟ್ಟಿಯ ಕೌಪೀನಕ್ಕೆ ಹೊಡೆಯಿತು] ಅನ್ನುವ ತೆಲುಗು ಗಾದೆಯನ್ನು ಶ್ರಾವಣನ ಈ ಸ್ಥಿತಿ ನೋಡಿಯೇ ಬರೆದಿರಬಹುದೇ ಎಂದೂ ಆಲೋಚಿಸಬೇಕಾಯಿತು.


ಹೀಗೆ ತಾವೇ ಹೋಗಿ ಜಬರ್‍ದಸ್ತಿ ಮಾತನಾಡಿಸಿದ ಭಾಸ್ಕರರಾಯರ ಬಗ್ಗೆ ಪ್ರತಿಭಾ ಯೋಚಿಸಿದರು. ಅವರನ್ನು ಮಾತನಾಡಿಸುವುದರಲ್ಲಿ ದಿನದ ಒಂದು ಗಂಟೆಕಾಲ ಕಳೆಯಲು ಸಾಧ್ಯವಾದರೆ ಯಾಕಾಗ ಬಾರದು? ಈ ವಯಸ್ಸಿನಲ್ಲಿ ಚಟುವಟಿಕೆಗಳು ಕಡಿಮೆಯಿರುವಾಗ, ಚಟುವಟಿಕೆ-ಕೆಲಸವನ್ನು ಕೈಗೊಳ್ಳಬೇಕೆಂದರೂ ದೇಹ ಸಹಕರಿಸದಾಗ ಮಾತುಕತೆಯಲ್ಲಿಯೇ ಎಲ್ಲವನ್ನೂ ಸಾಧಿಸಬೇಕಾಗುತ್ತದೆ. ಆದರೆ ತಮ್ಮ ವಾರಗೆಯವರೆಲ್ಲಾ, ಮಕ್ಕಳು- ಮೊಮ್ಮಕ್ಕಳು ದೇವರು ದಿಂಡರೆಂದು ಬಂಧಿತ ಬದುಕನ್ನು ಜೀವಿಸುತ್ತಿದ್ದಾರೆ. ಯಾರಿಗೂ ಸ್ವಂತವಾಗಿ ಒಂದು ಸಿನೆಮಾಕ್ಕೋ ಅಥವಾ ಒಂದು ಟ್ರೆಕ್ಕಿಗೋ, ಟೂರಿಗೋ ಹೋಗುವ ಸ್ವಾತಂತ್ರವಿಲ್ಲ. ಏಲ್ಲದ್ದಕ್ಕೂ ಮಕ್ಕಳ ಪರವಾನಗಿ ಕೇಳಬೇಕಾದ ಪರಿಸ್ಥಿತಿ. ಈ ಪರಿಸ್ಥಿತಿ ಉಂಟಾಗಿರುವುದೂ ಆರ್ಥಿಕ ಸ್ವಾತಂತ್ರ ಇಲ್ಲದ್ದರಿಂದಲೇನೋ. ಹೇಗೆ ನೋಡಿದರೂ ಈ ವಯಸ್ಸಿಗೆ ಬೇಕಾದ ಸಾಂಗತ್ಯ ಸಿಗುವುದು ದುಸ್ತರವಾಗಿತ್ತು. ಇದಕ್ಕೆ ಕಾರಣ ಬಹುಶಃ ಪ್ರತಿಭಾರು ತಮ್ಮನ್ನು ಮಾನಸಿಕವಾಗಿ ನಲವತ್ತು ವರ್ಷದವರಂತೆ ಪರಿಗಣಿಸಿಕೊಂಡು ವರ್ತಿಸುತ್ತಿದ್ದರು. ಆದರೆ ಆ ವಯಸ್ಸಿನವರೆಲ್ಲ ಕೆರಿಯರ್, ಮತ್ತು ಮನೆಗೆಲಸಗಳಲ್ಲಿ ತೊಡಗಿ ಅವರೊಡನೆ ಕಾಲ ಕಳೆಯುವುದು ಆಗದ ಮಾತಾಗಿತ್ತು. ಪಟ್ಟಾಭಿರಾಮ ಹೋದಾಗಿನಿಂದಲೂ ಒಬ್ಬ ಸಹಚರನ ಅವಶ್ಯಕತೆ ಪ್ರತಿಭಾರಿಗೆ ಕುಟುಕುತ್ತಿತ್ತು.

ಈ ಇಂಥ ಸಮಯದಲ್ಲಿ ಸದಾ ಒಂಟಿಯಾಗಿರುತ್ತಿದ್ದ, ಒಂಟಿತನವನ್ನು ಒಪ್ಪಿ ಒಗ್ಗಿಹೋಗಿದ್ದ ಭಾಸ್ಕರರಾಯರ ಪರಿಚಯವನ್ನು ಆಕೆ ಮಾಡಿಕೊಂಡರು. ಎಲ್ಲೋ ತಮ್ಮ ಮಾತಿನ ನಂತರ ಲಾಫ್ಟರ್ ಕ್ಲಬ್ಬನ್ನು ಬಿಟ್ಟು ತಮ್ಮೊಂದಿಗೆ ಹೆಜ್ಜೆ ಹಾಕಲು [ಉತ್ಸಾಹ ತೋರಿಸದಿದ್ದರೂ, ಕ್ಲಬ್ಬನ್ನು ಬಿಟ್ಟು] ಪ್ರಾರಂಭಿಸಿದ ರಾಯರಲ್ಲಿ ಆಕೆಗೆ ವಿಶೇಷ ಆಸಕ್ತಿ ಹುಟ್ಟಿತು. ಮನಬಿಚ್ಚಿ ಒಂದು ಗಂಟೆಕಾಲ ಈತನೊಂದಿಗೆ ಕಳೆದರೆ ಹುರುಪುಂಟಾಗಬಹುದಾದರೆ ಯಾಕಾಗಬಾರದು? ಆತನೂ ಒಂಟಿಯಾದ್ದರಿಂದ ಇಬ್ಬರಿಗೂ ಇನ್ನೊಬ್ಬರ ಸಾಂಗತ್ಯ ಮುದನೀಡಬಹುದಾಗಿತ್ತು.

ತಮ್ಮೊಂದಿಗೆ ಸಮಯ ಕಳೆಯುವುದು ರಾಯರಿಗೆ ಖುಶಿಯ ವಿಷಯ ಎಂದು ಪ್ರತಿಭಾರಿಗೆ ಮನವರಿಕೆಯಾಗಿತ್ತು. ಆದರೂ ಅವರಿಗೆ ವಿಪರೀತ ಅಂಜಿಕೆ ಅನ್ನುವುದನ್ನು ಆಕೆ ಮನಗಂಡಿದ್ದರು. ರಾಯರು ತಮ್ಮ ವೃತ್ತಿಯನ್ನು ನಿರ್ವಹಿಸಿದ್ದ ರೀತಿ, ಬೆಳೆದು ಬಂದ ಶಾಖಾಹಾರೀ - ಪಾನರಹಿತ ಹಿನ್ನೆಲೆಗೂ, ಕಾರ್ಪೊರೇಟ್ ಜಗತ್ತಿನಲ್ಲಿಕೆಲಸ ಮಾಡಿ ಕಾರಿಟ್ಟು, ಗುಂಡುಹಾಕುವ ಮಾಂಸಾಹಾರಿ ಪಟ್ಟಾಭಿರಾಮನ ಹಿನ್ನೆಲೆಗೂ ಭಿನ್ನತೆ ಬಹಳವಿತ್ತು. ಒಂದುರೀತಿಯಲ್ಲಿ ಪಟ್ಟಾಭಿರಾಮ ಆರ್ಥಿಕವಾಗಿಯೂ ಮೇಲ್ಮಧ್ಯಮ ವರ್ಗಕ್ಕೆ ಸೇರಿದವನಾಗಿದ್ದ. ಹೀಗಾಗಿಯೇ ಮನೆಯ ವಾತಾವರಣ ಬಹುಶಃ ರಾಯರ ಮನೆಯ ವಾತಾವರಣಕ್ಕಿಂತ ಭಿನ್ನವಾಗಿದ್ದಿರಬಹುದು. ಪ್ರತಿಭಾರು ಈ ಎಲ್ಲವನ್ನೂ ಆಲೋಚಿಸಿದರು. ಉದಾಹರಣೆಗೆ ಅವರೊಂದಿಗೆ ಮಾತನಾಡುವುದಾಗಲೀ, ಪಾರ್ಕಿನಲ್ಲಿ ವಾಕ್ ಮಾಡುವುದಾಗಲೀ ತಮ್ಮ ಮನೆಯವರಿಗೆ ಆಘಾತ ಉಂಟುಮಾಡುವ ವಿಷಯವಾಗುತ್ತಿರಲಿಲ್ಲವೇನೋ. ಆದರೆ ಭಾಸ್ಕರ ರಾಯರ ಸಂದರ್ಭದಲ್ಲಿ ಅದು ಅವರಿಗೂ ಮನೆಯವರಿಗೂ ಮುಜುಗರ ಉಂಟುಮಾಡುವ ವಿಷಯವಾಗಿದ್ದಿರಬಹುದು.

ಇದೇ ಕಾರಣಕ್ಕಾಗಿ ಪ್ರತಿಭಾರಿಗೆ ರಾಯರಲ್ಲಿದ್ದ ಆಸಕ್ತಿ ಹೆಚ್ಚಾಯಿತು. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂದು ತಿಳಿಯದಿದ್ದರೂ ಅವರೊಳಗೆ ಒಬ್ಬ ತುಂಟ ಸೈತಾನ ಹೊಕ್ಕಂತಾಗಿ ಅವರು ರಾಯರೊಂದಿಗೆ ಈ ಪಂದ್ಯವನ್ನು ಮುಂದುವರೆಸಿದ್ದರು. ಪ್ರತಿದಿನವೂ ರಾಯರ ಪರಿಚಯ ಮತ್ತು ಒಡನಾಟದ ಸ್ಥರದಲ್ಲಿ ಪ್ರಗತಿ ಸಾಧಿಸುವುದೇ ಆಕೆಯ ಉದ್ದೇಶವೆಂಬಂತೆ ಆಕೆ ಪ್ರವರ್ತಿಸಿದರು. ಇದನ್ನು ಎಲ್ಲಿಯ ವರೆಗೆ ಒಯ್ಯಬಹುದು ಅನ್ನುವ ಊಹೆಯಾಗಲೀ ಗುರಿಯಾಗಲೀ ಆಕೆಗೆ ಇದ್ದಂತಿರಲಿಲ್ಲ. ಆದರೆ ತಮ್ಮ ಮನೆಯಲ್ಲಿನ ದುಸ್ತರ ಪರಿಸ್ಥಿತಿಯಿಂದ ಪಲಾಯನ ಮಾಡಲು ರಾಯರ "ಸಹಕಾರ"ವನ್ನು ಆಕೆ ಜಬರ್‌ದಸ್ತಿ ಪಡೆದರೂ ಅದರಲ್ಲಿ ಆಕೆಗೆ ತಪ್ಪೇನೂ ಕಾಣಲಿಲ್ಲ.

ಅವರುಗಳಲ್ಲಿದ್ದ ಭಿನ್ನತೆ ಪ್ರತಿಭಾರ ಗಮನಕ್ಕೆ ಬರದೇ ಇರಲಿಲ್ಲ. ಆಹಾರಕ್ಕೆ ಸಂಬಂಧಿಸಿದ್ದಲ್ಲದೇ ಆಸಕ್ತಿಗಳಿಗೆ ಸಂಬಂಧಿಸಿದ ಭಿನ್ನತೆಗಳೂ ಅವರಲ್ಲಿದ್ದುವು. ಉದಾಹರಣೆಗೆ ಪ್ರತಿಭಾರು ಇನ್ನೂ ಸಿನೇಮಾಗಳನ್ನು ಆಸಕ್ತಿಯಿಂದ ನೋಡುತ್ತಿದ್ದರು. ರಾಯರು ಪುಸ್ತಕ ಪ್ರೇಮಿ. ಪ್ರತಿಭಾರಿಗೆ ಹೊರಗೆ ತಿನ್ನುವುದರಲ್ಲಿ, ಸುತ್ತಾಡುವುದರಲ್ಲಿ ಆಸಕ್ತಿ. ಆದರೆ ರಾಯರು ಮನೆಯಲ್ಲೇ, ತಮ್ಮ ಕೋಣೆಯಲ್ಲೇ ಮುದುರಿ ಮಲಗುವುದನ್ನು ಬಯಸುತ್ತಿದ್ದರು. ಪ್ರತಿಭಾರಿಗೆ ದೈಹಿಕವಾಗಿ ಯಾವ ತೊಂದರೆಯೂ ಇರಲಿಲ್ಲ. ಆಕೆ ಎಂದೂ ಎಕ್ಸರ್‍ಸೈಜ್‍ ಇತ್ಯಾದಿ ಎಂದು ದೇಹವನ್ನು ದಂಡಿಸಿದವರಲ್ಲ. ಜೊತೆಗೆ ಬೇಕಾದ್ದನ್ನು ತಿಂದು ಬಿಂದಾಸ್ ಬದುಕುವ ಜಾಯಮಾನದವರು. ರಾಯರಿಗೆ ಬೊಜ್ಜು ಕರಗಿಸುವ ಕಾತರ. ಹೀಗಾಗಿಯೇ ಮೊದಲ ದಿನ ಭೇಟಿಯಾದಾಗ ಪ್ರತಿಭಾರಿಗೆ ಅವರೊಂದಿಗೆ ಹೆಜ್ಜೆ ಹಾಕುವುದು ಕಷ್ಟವಾಯಿತು. ತಮ್ಮ ಮಾತಿನ ನಡುವೆ ಆತನ ಸ್ಪೀಡನ್ನೂ ಸಾಧಿಸುವುದು ಸುಲಭದ ಮಾತಾಗಿರಲಿಲ್ಲ. ಕಡೆಗೂ ಗೆದ್ದದ್ದು ಪ್ರತಿಭಾರೇ.

"ಅಲ್ಲ ಅಷ್ಟುಅವಸರವಾಗಿ ಯಾಕೆ ನಡೆಯಬೇಕು, ಮನೆಗೆ ಓಡಿಹೋಗಿ ಸಾಧಿಸುವುದಾದರೂ ಏನು? ನಿಮಗೆ ನಿಗದಿತವಾದ ಕೆಲೋರಿಗಳನ್ನು ಸುಡಬೇಕೆಂಬ ಆಸೆಯಿದ್ದರೆ, ಸ್ವಲ್ಪ ನಿಧಾನವಾಗಿ ನಡೆದು ಎರಡು ಸುತ್ತು ಹೆಚ್ಚು ಮಾಡಿದರೂ ಅಗುವುದಿಲ್ಲವಾ?" ಎಂಬ ಮಾತಿಗೆ ರಾಯರು ತಲೆದೂಗಿ ತಮ್ಮ ವೇಗವನ್ನು ಕಡಿಮೆ ಮಾಡಿದ್ದರು.

ಒಟ್ಟಾರೆ ಪ್ರತಿಭಾರಿಗೆ ಇಬ್ಬರಲ್ಲೂ ಕಂಡ ಒಂದೇ ಸಾಮನ್ಯ ಅಂಶವೆಂದರೆ, ಇಬ್ಬರಿಗೂ ದಿನದ ಇಪ್ಪತ್ತ್ನಾಲ್ಕು ಗಂಟೆಗಳನ್ನು ಹೇಗೆ ಕಳೆಯಬೇಕು ಅನ್ನುವ ತೊಂದರೆಯಿರುವ ವಿಚಾರ. ಈ ಸಮಯವನ್ನು ತಮಗೆ ತಿಳಿಯದಂತೆ, ಒತ್ತಡವಿಲ್ಲದಂತೆ ಕಳೆಯಲು ಇಬ್ಬರೂ ಕಾತರರಾಗಿದ್ದರು. ಹೀಗಾಗಿ ವಾಕಿಂಗ್ ಕಾರಣವಾಗಿ ಒಂದರ್ಧ ಗಂಟೆ ಹೆಚ್ಚು ಕಾಲಕ್ಷೇಪವಾದರೆ ಅದೂ ಸ್ವಾಗತಾರ್ಹವೇ ಆಗಿತ್ತು.


ಬ್ರಹ್ಮಾನಂದ ರೆಡ್ಡಿಉದ್ಯಾನವನದಲ್ಲಿ ವಾಕಿಂಗ್ ಹೋಗುವುದರಲ್ಲಿ ಅನೇಕ ಇತರ ಉಪಯೋಗಗಳೂ ಇದ್ದುವು. ಅದರಲ್ಲಿ ಒಂದೆಂದರೆ, ಆಗಾಗ ವಾರ್ತಾಪತ್ರಿಕೆಯವರು ತಂದು ತಮ್ಮ ಪತ್ರಿಕೆಯ ಪ್ರತಿಗಳನ್ನು ಹಂಚಿ ಹೋಗುತ್ತಿದ್ದರು. ಇಂಗ್ಲೀಷ್ ಪತ್ರಿಕೆ ಸಿಕ್ಕರೆ ಇಬ್ಬರೂ, ತೆಲುಗು ಪತ್ರಿಕೆಯಾದರೆ ಪ್ರತಿಭಾ ಮಾತ್ರ ಪತ್ರಿಕೆಗಳನ್ನು ಪಡೆದು ಮನೆಯತ್ತ ಹೋಗುವುದು ವಾಡಿಕೆ. ಇಂಗ್ಲೀಷ್ ಪತ್ರಿಕೆಯಾದರೆ, ಅದರಲ್ಲೂ ಕ್ರಾನಿಕಲ್ ಆದರೆ ವಿಶೇಷ ಹುಕ್ಕಿಯಿಂದ ಇಸಿದು ಒಯ್ಯುತ್ತಿದ್ದುದನ್ನು ರಾಯರು ಗಮನಿಸಿದ್ದರು. ಅವರ ಮುಖದ ಮೇಲಿನ ಕುತೂಹಲದ ಪ್ರಶ್ನಾರ್ಥಕ ಚಿನ್ಹೆಯನ್ನು ನೋಡಿಯೇ ಪ್ರತಿಭಾ ಹೇಳಿದ್ದರು: "ಇದರಲ್ಲಿ ಎರಡೆರಡು ಸುಡೊಕು ಬರುತ್ತೆ. ಅದನ್ನು ತುಂಬಿಸುವಲ್ಲಿ ಒಂದೂವರೆ ಗಂಟೆ ಕಾಲಹರಣವಾಗುತ್ತದೆ."

ಭಾಸ್ಕರರಾಯರಿಗೆ ಸುಡೋಕುವಿನ ಬಗ್ಗೆ ವ್ಯಾಮೋಹವೇನೂ ಇರಲಿಲ್ಲ. ಆದರೂ, ಒಂದೂವರೆ ಗಂಟೆ ಕಾಲಹರಣವಾಗುವುದಾದರೆ ಯಾಕೆ ಒಂದು ಕೈ ನೋಡಬಾರದು ಅಂತ ಅನ್ನಿಸಿತು. ಆದರೆ ಪತ್ರಿಕೆಯಲ್ಲಿ ರಾಯರಿಗಿದ್ದ ಆಸಕ್ತಿಯೇ ಬೇರೆ ಅದೆಂದರೆ - ಬದುಕಿರುವವರ, ಸತ್ತವರ ಸುದ್ದಿ ಓದುವುದು ಮಾತ್ರ. ಅವರಿಗೆ ಇಹ ಲೋಕದ ಜನ ಸತ್ತು ಪರಲೋಕಕ್ಕೆ ಹೋದವರಿಗೆ ಸಂದೇಶಗಳನ್ನು ಕಳಿಸುವ ಪ್ರಕ್ರಿಯೆ ಅತ್ಯಂತ ಕುತೂಹಲವನ್ನು ಉಂಟುಮಾಡುತ್ತಿತ್ತು. ಪರಲೋಕದಲ್ಲಿದ್ದವರು ಇಲ್ಲಿನ ಪತ್ರಿಕೆಗಳನ್ನು ಓದುತ್ತಾರೆಯೇ? ಅದನ್ನು ಅಲ್ಲಿಗೆ ಡೆಲಿವರ್ ಮಾಡುವುದು ಯಾರು? ಎಂದೆಲ್ಲಾ ಯೋಚಿಸುತ್ತಾ ಅವರು ತಮ್ಮ ನಿತ್ಯದ ಮನರಂಜನೆಯನ್ನು ಪಡೆಯುತ್ತಿದ್ದರು. ಅದರ ಜೊತೆಗೆ ಹೆಸರನ್ನು ಬದಲಾಯಿಸಿಕೊಂದವರ ಜಾಹೀರಾತುಗಳು ಅವರ ಗಮನವನ್ನು ವಿಶೇಷವಾಗಿ ಸೆಳೆಯುತ್ತಿತ್ತು. ರಾಯರು ಈ ಜಾಹೀರಾತುಗಳನ್ನು ನೋಡಿ ತಮ್ಮಲ್ಲೇ ನಕ್ಕು ಈ ರೀತಿಯ ಹೆಸರನ್ನು ಬದಲಾಯಿಸಿಕೊಂಡವರ ಮನಸ್ಸಿನಲ್ಲಿ ಯಾವ ಪ್ರೇರಕ ಶಕ್ತಿಯಿದ್ದಿರಬಹುದು ಎಂದು ಆಲೋಚಿಸಿದರು. ಉದಾಹರಣೆಗೆ ತಮಗೇ ತಾವು ಬೇರೊಂದು ಹೆಸರು ಹುಡುಕಬೇಕಿದ್ದರೆ ಏನು ಮಾಡುತ್ತಿದ್ದರು? ಅಥವಾ ಶ್ರಾವಣ ತನ್ನ ಹೆಸರನ್ನು ಬದಲಾಯಿಸಿದರೆ ಏನೆಂದು ಬದಲಾಯಿಸಿಕೊಂಡಾನು? ಈ ಲಹರಿಯಲ್ಲಿಯೇ ರಾಯರು ಸುಮಾರು ಸಮಯ ತೇಲಿಬಿಡುತ್ತಿದ್ದರು. ಆದರೂ ಪ್ರತಿಭಾ ಅವರ ಸುಡೊಕು ಹೀರಿದಷ್ಟು ಸಮಯ ಈ ಚಟುವಟಿಕೆ ಹೀರುತ್ತಿರಲಿಲ್ಲವಾದ್ದರಿಂದ ಒಂದು ಕೈ ಸುಡೊಕುವಿನ ಮೇಲೆ ಪ್ರಯೋಗ ಮಾಡಬಹುದೇ ಅನ್ನಿಸಿತು.

ಆ ದಿನವೂ ಎಂದಿನಂತೆ ಹೊರಬರುವ ವೇಳೆಗೆ ಪತ್ರಿಕೆಯ ಪ್ರತಿಗಳನ್ನು ಒಬ್ಬ ಹುಡುಗ ಹಂಚುತ್ತಿದ್ದ. ಎಲ್ಲರೂ ಆಸಕ್ತಿಯಿಂದ ಪತ್ರಿಕೆಯನ್ನು ಸ್ವೀಕರಿಸಿ ಮುಂದುವರೆಯುತ್ತಿದ್ದರು. ರಾಯರ ಸರದಿ ಬಂದಾಗ ಪತ್ರಿಕೆಯ ಅಂತಿಮ ಪ್ರತಿ ಉಳಿದಿತ್ತು. ಹೀಗಾಗಿ ಪ್ರತಿಭಾರಿಗೆ ಪತ್ರಿಕೆಯ ಪ್ರತಿ ದೊರೆಯಲಿಲ್ಲ. ರಾಯರಿಗೇನನ್ನಿಸಿತೋ, ತಮ್ಮ ಪ್ರತಿಯನ್ನು ಪ್ರತಿಭಾರಿಗೆ ಕೊಟ್ಟು, "ತೆಗೊಳ್ಳಿ ಪರವಾಗಿಲ್ಲ" ಅಂದರು. ಯಾಕೋ ಪ್ರತಿಭಾರಿಗೆ ಅದನ್ನು ತೆಗೊಳ್ಳಬೇಕು ಅನ್ನಿಸಲಿಲ್ಲ. "ಇರಲಿ ಬಿಡಿ, ದಾರಿಯಲ್ಲಿ ಕೊಂಡುಕೊಂಡು ಹೋಗುತ್ತೇನೆ" ಅಂದರು. ಇದನ್ನು ಕೊಂಡುಕೊಳ್ಳುವಂತಹ ಗಹನ ವಿಚಾರ ಏನಿದೆ ಅನ್ನುತ್ತಾ ರಾಯರು ಪತ್ರಿಕೆಯನ್ನು ಆಕೆಯ ಕೈಗೆ ತುರುಕಿದರು. ಹೀಗೆ ಸ್ವಲ್ಪ ಹೊತ್ತು ಪಹಲೇ ಆಪ್ ಪಹಲೇ ಆಪ್ ನಡೆಯಿತು. ಕಡೆಗೆ ಆಕೆ ಸೋಲೊಪ್ಪಿಕೊಂಡು ಪತ್ರಿಕೆಯನ್ನು ಸ್ವೀಕರಿಸಿದರು. ಯಾಕೋ ಪ್ರತಿಭಾರಿಗೆ ಇದು ಸ್ವಲ್ಪ ಕುಟುಕಿತು. ಅದೇನನ್ನಿಸಿತೋ, ಇದ್ದಕ್ಕಿದ್ದಂತೆ ಹುಕ್ಕಿಬಂದು "ಇರಲಿ, ಪತ್ರಿಕೆಗೆ ಥ್ಯಾಂಕ್ಸ್. ಹೌ ಎಬೌಟ್ ಹ್ಯಾವಿಂಗ್ ಬ್ರೇಕ್‍ಫಸ್ಟ್ ಟುಗೆದರ್?" ಎಂದರು. ಈ ಪ್ರಶ್ನೆ ಕಿವಿಗೆ ಬಿದ್ದಾಗ ರಾಯರು ನಿಜಕ್ಕೂ ಅವಾಕ್ಕಾದರು. ಆಕೆ ಪ್ರಶ್ನೆಕೇಳಿ ಮುಂದಿನ ಮಾತು ಆಡುವ ಕೆಲವೇ ಕ್ಷಣಗಳ ಅಂತರದಲ್ಲಿ ರಾಯರ ಮನಸ್ಸಿನಲ್ಲಿ ಅನೇಕ ಚಿತ್ರಗಳು ಹಾದುಹೋದುವು. ಮನೆಗೆ ತಿಂಡಿತಿನ್ನಲು ಹೋಗಬೇಕಾದವರು ಹೀಗೆ ಅಪರಿಚಿತ ಎನ್ನಬಹುದಾದ ಹೆಂಗಸಿನ ಜೊತೆಗೆ ಬೆಳಿಗ್ಗೆಯೇ ಹೋಗಿ ಹೊಟೇಲಿನಲ್ಲಿ ತಿಂಡಿ ತಿನ್ನುತ್ತಿರುವ ದೃಶ್ಯವನ್ನು ಯಾರಾದರೂ ಕಂಡರೆ ಏನೆಂದಾರು? ಹಾಗೆ ನೋಡಿದರೆ ಈಗಾಗಲೇ ಲಾಫ್ಟರ್ ಕ್ಲಬ್ಬಿಗೆ ಚಕ್ಕರ್ ಹಾಕಿ ತಾವು ಈಕೆಯ ಜೊತೆ ಪಾದ ಬೆಳೆಸುತ್ತಿರುವುದರ ಬಗ್ಗೆ ಈಗಾಗಲೇ ಜನ ಮಾತನಾಡುತ್ತಿದ್ದಿರಬಹುದು. ಅಲ್ಲಿ ಅಕಸ್ಮಾತ್ ಶ್ರಾವಣನೋ ಮೊಮ್ಮಗನೋ ಬಂದುಬಿಟ್ಟರೆ ಅವರೇನೆಂದುಕೊಂಡಾರು, ಹಾಗೂ ತಾವೇನು ಜವಾಬು ನೀಡಬಹುದು?

ರಾಯರು ಈ ಆಲೋಚನಾಸರಣಿಯಲ್ಲಿ ಹೆಚ್ಚು ಮುಂದುವರೆಯಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಪ್ರತಿಭಾ ಈಗಾಗಲೇ ತಾವು ತಂದಿದ್ದ ವ್ಯಾಗನ್‌ಆರ್‌ ಬಾಗಿಲಿನ ಬೀಗ ತೆರೆದ ಸಂಕೇತವಾಗಿ ವಿಚಿತ್ರ ಸದ್ದು ಮಾಡುವ ರಿಮೋಟ್ ಕೀಲಿಯನ್ನು ಒತ್ತಿದ್ದರು. ಬನ್ನಿ ಕೂತುಕೊಳ್ಳಿ ಎಂದು ಬಾಗಿಲನ್ನೂ ತೆರೆದರು. ರಾಯರಿಗೆ ಏನೂ ಹೇಳಲು ಆಗದೇ ಮೂಕರಾಗಿ ಕೂತರು. ಕಾರು ಹತ್ತಿ ಅನೇಕ ವರ್ಷಗಳೇ ಆಗಿತ್ತು ಎಂದು ರಾಯರಿಗೆ ಆಗ ನೆನಪಾಯಿತು. ಹೌದು ತಾವು ತಮ್ಮ ಸರ್ವೀಸಿನಲ್ಲಿದ್ದಾಗ ಆಗಾಗ ಕಾರು ಹತ್ತುವ ಅವಕಾಶ ಸಿಗುತ್ತಿತ್ತು. ಆದರೆ ಈಚೆಗೆ ಅವರಿಗೆ ಕಾರು ಹತ್ತುವ ಅವಶ್ಯಕತೆಯೇ ಬಂದಿರಲಿಲ್ಲ. ಆಕೆ ಸೀಟ್ ಬೆಲ್ಟು ಕಟ್ಟಿಕೊಳ್ಳಲು ಹೇಳಿದಾಗ ಅದನ್ನು ಹೇಗೆ ಕಟ್ಟಿಕೊಳ್ಳುವುದೆಂದು ತಿಳಿಯದೇ ಫಜೀತಿಯಾಯಿತು. ಕಡೆಗೆ ಇಬ್ಬರೂ ಕೂತ ನಂತರ ಆಕೆ, "ಎಲ್ಲಿಗೆ ಹೋಗೋಣ?" ಅಂತ ಕೇಳಿದರು.

ರಾಯರ ಮುಜುಗರ ಮುಂದುವರೆದಿತ್ತು. ಹಾಗೆ ನೋಡಿದರೆ ಬ್ರೇಕ್‌ಫಸ್ಟ್ ದೊರೆಯುವ ಜಾಗಗಳು ಯಾವುದೆಂದೂ ಅವರಿಗೆ ತಿಳಿದಿರಲಿಲ್ಲ. ಆರಕ್ಕೇರದ ಮೂರಕ್ಕಿಳಿಯದ ಅವರ ಬದುಕಿನಲ್ಲಿ ಈಕೆ ಹೀಗೆ ಇದ್ದಕ್ಕಿದ್ದಂತೆ ಏರುಪೇರುಂಟು ಮಾಡುತ್ತಿದ್ದಾರೆ ಅನ್ನಿಸಿತು. ರಾಯರಿಗೆ ಕಾರಿಳಿದು ಓಡಿಹೋಗುವಾ ಅಂತಲೂ ಅನ್ನಿಸಿತು. ಆದರೆ ಅವರನ್ನು ನಾಯಿಗೆ ಚೈನು ಕಟ್ಟಿಹಾಕಿದಂತೆ ಸೀಟ್ ಬೆಲ್ಟು ಕಟ್ಟಿಹಿಡಿದಿದೆ ಅನ್ನುವ ಭಾವನೆ ಮನಸ್ಸಿಗೆ ಬಂತು. ತಮ್ಮ ಜೀವನದ ಏಳು ದಶಕಗಳಲ್ಲಿ ಎಂದೂ ಮಾಡಿರದ ಇಂಥ "ಸೋಷಿಯಲೈಸೇಷನ್" ರಾಯರಿಗೆ ಹೊಸ ಅನುಭವ ನೀಡುತ್ತಿತ್ತು. ಒಳಗೊಳಗೇ ಸ್ವಲ್ಪ ಪುಳಕಿತರಾದರೂ ಅವರ ಮುಜುಗರ ಮತ್ತು ಸಿಕ್ಕಿಬಿದ್ದರೆ ಏನಾಗಬಹುದೆಂಬ ಭೀತಿ ಎಲ್ಲ ರೋಮಾಂಚನವನ್ನೂ ಇಲ್ಲವಾಗಿಸಲು ಸಾಕಾಗಿತ್ತು.

"ಹೌ ಎಬೌಟ್ ಗ್ರಾಂಡ್ ಕಾಕತೀಯಾ? ಅಲ್ಲಿ ದಕ್ಷಿಣ್ ಅನ್ನುವ ಒಳ್ಳೆಯ ರೆಸ್ಟುರಾ ಇದೆ" ಎಂದು ಪ್ರತಿಭಾ ಕೇಳಿದಾಗ ರಾಯರು ಅಪ್ರತಿಭರಾದರು. ಇಲ್ಲಿಯವರೆಗೆ ಉಡುಪಿ ಮತ್ತು ದರ್ಶಿನಿಗಳನ್ನು ಮಾತ್ರ ನೋಡಿದ್ದ ಅವರಿಗೆ ಈಕೆ ಇದ್ದಕ್ಕಿದ್ದಹಾಗೆ ಪಂಚತಾರಾ ಹೋಟೇಲಿನ ಹೆಸರನ್ನು - ಅದೂ ಕೇವಲ ನಾಷ್ಟಾಕ್ಕಾಗಿ - ಸೂಚಿಸುತ್ತಿರುವುದು ಕಂಡು ದಂಗುಬಡಿದರು. ಇನ್ನು ಏನೂ ಹೇಳದಿದ್ದರೆ ಅಲ್ಲಿಗೆ ಹೋಗಿಯೇ ಬಿಡುವ ಸಾಧ್ಯತೆ ಕಂಡದ್ದರಿಂದ ತಡವರಿಸುತ್ತಲೇ "ಬೇಡ... ಬೇರೆ ಎಲ್ಲಾದರೂ.. ಹಾಗೆ ನೋಡಿದರೆ ನನ್ನ ಮಗ ಮತ್ತು ಸೊಸೆ ಮನೆಯಲ್ಲಿ ನನಗಾಗಿ ಕಾಯುತ್ತಿರುತ್ತಾರೆ.. ಇಲ್ಲದಿದ್ದರೆಯೇ ವಾಸಿಯೇನೋ.." ಎಂದು ತಡವರಿಸಿದರು.

"ಎಲ್ಲವನ್ನೂ ನಿಮ್ಮ ದೃಷ್ಟಿಯಿಂದ ನೋಡಿದರೆ ಮುಗಿಯಿತಾ? ನಾನು ಮನೆಗೆ ಹೋದರೆ ನನಗಾಗಿ ಯಾರೂ ಕಾಯುತ್ತಿರುವುದಿಲ್ಲ ಅನ್ನುವುದು ನಿಮಗೆ ಹೊಳೆಯುವುದೇ ಇಲ್ಲವಲ್ಲಾ?" ಎಂದು ತುಸು ಮುನಿಸಿನಿಂದ ಆಕೆ ಹೇಳಿದರು. ಈ ರೀತಿಯ ವಾದಸರಣಿ ರಾಯರಿಗೆ ಹೊಸದು. ಹಾಗೆ ನೋಡಿದರೆ ಕುಮುದಾ ತೀರಿಕೊಂಡಾಗಿನಿಂದಲೂ ಯಾವುದೇ ಸಂಬಂಧವನ್ನು ದಿನನಿತ್ಯದ ಲಾವಾದೇವಿಗಳಿಗಿಂತ ಮುಂದಕ್ಕೆ ಒಯ್ಯದ ರಾಯರಿಗೆ ಇದು ಹೊಸದಾಗಿ ಕಲಿಯಬೇಕಾದ ವಿದ್ಯೆ ಅನ್ನಿಸಿತು. ಒಂದು ಹೆಣ್ಣನ್ನು ನೋಯಿಸಿವುದು ಹೇಗೆ? ಹಾಗೆ ನೋಡಿದರೆ ತಾವು ಮನೆಗೆ ಒಂದರ್ಧ ಗಂಟೆ ತಡವಾಗಿ ಹೋದರೆ ಶ್ರಾವಣನಿಗೆ ಚಿಂತೆಯಾಗುವುದೂ ನಿಜ. ಈ ಆಹ್ವಾನದ ದಾಕ್ಷಿಣ್ಯ ಮತ್ತು ತಮ್ಮದೇ ತುರ್ತುಗಳನಡುವೆ ರಾಯರು ತೂರಾಡಿ ಕಡೆಗೆ ಪ್ರತಿಭಾರಿಗೆ ಶರಣಾಗಿರುವ ಸತ್ಯವನ್ನು ಒಪ್ಪಿ ಮುಂದುವರೆವುದೇ ಒಳಿತೆಂದು ಭಾವಿಸಿ ಕೈ ಚೆಲ್ಲಿ ಕೂತರು. ಆದರೂ "ಕಾಕತೀಯ ಬೇಡ" ಅನ್ನುವ ಮಾತಂತೂ ಅವರ ಬಾಯಿಂದ ಹೇಗೋ ಹೊಮ್ಮಿಬಿಟ್ಟಿತು. ಒಂದು ನಾಷ್ಟಾಕ್ಕೆ ಐನೂರು ರೂಪಾಯಿಗಳಷ್ಟು ಖರ್ಚು ಮಾಡುವುದು ಅವರ ಮಧ್ಯಮವರ್ಗದ ಮನಸ್ಸಿಗೆ ಒಪ್ಪಿತವಾಗಲೇ ಇಲ್ಲ.

"ಹಾಗಾದರೆ ಚಟ್ನೀಸ್‌ಗೆ ಹೋಗೋಣ, ಅಲ್ಲಿ ನಿಮಗೆ ಒಳ್ಳೆಯ ತಿಂಡಿಸಿಗುತ್ತದೆ. ಆದರೆ ಚಟ್ನೀಸ್‌ನಲ್ಲಿ ಇಷ್ಟು ಹೊತ್ತಿನಲ್ಲಿ ಜನಜಂಗುಳಿ ಹೆಚ್ಚಾಗಿರುತ್ತದೆ. ಕಾಯಲು ತಯಾರಾಗಿರಬೇಕು" ಎಂದು ಆಕೆ ತಾಕೀತು ಮಾಡಿದರು. ರಾಯರಿಗೆ ಇದೂ ಪೀಕಲಾಟಕ್ಕೆ ಬಂತು. ಪ್ರತಿದಿನ ಮನೆಗೆ ಹೋಗುವ ಹಾದಿಯಲ್ಲಿ ಜನ ಚಟ್ನೀಸ್‍ನಲ್ಲಿ ತಮ್ಮ ಹೆಸರು ಬರೆಸಿ ಸರದಿಗಾಗಿ ಕಾಯುತ್ತಿರುವುದನ್ನು ರಾಯರು ಕಂಡಿದ್ದರು. ಹೀಗಾಗಿ ಪ್ರತಿಭಾ ಹೇಳುತ್ತಿದ್ದದ್ದು ನಿಜವಾಗಿತ್ತು. ಇದು ಇಲ್ಲಿನ ಎಂಟಿಆರ್ ಆಗಿರಬಹುದೇ ಎಂದು ಯೋಚಿಸಿದ್ದ ರಾಯರು ಎಂದೂ ಆ ಹೋಟೇಲನ್ನು ಹೊಕ್ಕವರಲ್ಲ. ರಾಯರ ಮುಜುಗರಕ್ಕೆ ಅಂತ್ಯವೇ ಇರಲಿಲ್ಲ. ಹೆಚ್ಚು ಸಮಯವೆಂದರೆ ಮನೆಯಲ್ಲಿ ಆತಂಕ, ನಂತರ ಹೇಳಬೇಕಾದ ಸಮಜಾಯಿಷಿ, ಸಾಲದ್ದಕ್ಕೆ ಹೆಚ್ಚು ಸಮಯವೆಂದರೆ ಹೆಚ್ಚು ಜನರ ಕಣ್ಣಿಗೆ ಬೀಳುವ ಸಾಧ್ಯತೆ.. ಇದೆಲ್ಲವನ್ನೂ ಪರಿಗಣಿಸಿದರೆ ಕಾಕತೀಯಕ್ಕೆ ಹೋಗುವುದೇ ಉತ್ತಮವಾದ ಆಯ್ಕೆಯಾಗಿದ್ದಿರಬಹುದು. ಅಲ್ಲಿಗೆ ತಮ್ಮ ಪರಿಚಯದವರು ಬರುವ ಸಾಧ್ಯತೆ ಕಮ್ಮಿ. ಆದರೆ ಚಟ್ನೀಸ್‍ನಲ್ಲಿ ತಮ್ಮ ಮೊಮ್ಮಗನಿಂದ ಆರಂಭವಾಗಿ ಪರಿಚಯದವರು ಇನ್ನೂ ಯಾರಾದರೂ ಸಿಗುವ ಅಪಾಯವಿದ್ದೇ ಇತ್ತು.ಆದರೆ ಈಗ ಅಡ್ಡಕತ್ತರಿಯಲ್ಲಿ ಸಿಕ್ಕಿಬಿದ್ದಿರುವುದರಿಂದ ಏನಾದರಾಗಲೀ ಅನುಭವಿಸಿಬಿಡುವುದೆಂದು ಭಾವಿಸಿ ರಾಯರು ಶರಣಾದರು.

ಸ್ವಲ್ಪ ಹೊತ್ತು ಕಾದ ನಂತರ ಅವರಿಗೆ ಟೇಬಲ್ ಸಿಕ್ಕಿತು. ಈ ಮಧ್ಯೆ ಪ್ರತಿಭಾ ಮೊದಲ ಸುಡೋಕುವಿನತ್ತ ತಮ್ಮ ಕಣ್ಣು ಹಾಯಿಸಿದರು. "ನಿಮ್ಮಬಳಿ ಪೆನ್ನಿದೆಯೇ?" ಎಂದಾಗ ರಾಯರು ತಮ್ಮ ಜೇಬಿನಿಂದ ತಾವು ದಸ್ತಕತ್ತಿಗೆ ಉಪಯೋಗಿಸುವ ಪಾರ್ಕರ್ ಪೆನ್ನನ್ನು ತೆಗೆದು ಕೊಟ್ಟರು. ಎಲ್ಲಿಗೆ ಹೋದರೂ ಪೆನ್ನನ್ನು ಜೇಬಿನಲ್ಲಿರಿಸಿ ಹೋಗುವುದು ರಾಯರ ಅಭ್ಯಾಸ. ಸರ್ವೀಸಿನಲ್ಲಿದ್ದಾಗ ಬೆಳೆಸಿಕೊಂಡ ಈ ಅಭ್ಯಾಸವನ್ನು ಅವರು ಬದಲಾಯಿಸಲು ಸಾಧ್ಯವೇ ಆಗಿರಲಿಲ್ಲ. ಜೊತೆಗೆ ಅವರಿಗೆ ಬಾಲ್ ಪೆನ್ನೆಂದರೆ ಕಿರಿಕಿರಿ. ಹೀಗಾಗಿ ಅವರು ತಮ್ಮ ಸರ್ವೀಸಿನಲ್ಲಿದ್ದಾಗ ಫಾರಿನ್ನಿನಿಂದ ಬರುತ್ತಿದ್ದ ಬಂಧುಗಳ ಮುಖಾಂತರ ಗೆಂಜಿ ತರಿಸಿಕೊಂಡಿದ್ದ ಪಾರ್ಕರ್ ಫೌಂಟನ್ ಪೆನ್ನನ್ನೇ ಉಪಯೋಗಿಸುತ್ತಿದ್ದರು. ಈಗೀಗ ಇಂಥ ಪೆನ್ನುಗಳು ದೇಶದಲ್ಲೇ ಸುಲಭವಾಗಿ ಸಿಕ್ಕರೂ ಅದಕ್ಕೆ ಹೆಚ್ಚು ಗಿರಾಕಿಗಳಿದ್ದಂತಿರಲಿಲ್ಲ. ಟೇಬಲ್ ಸಿಕ್ಕಿಲ್ಲವೆಂದು ಹೊರಗೆ ಕಾಯುತ್ತಿದ್ದಾಗ ಆಕೆ ಸುಡೊಕುವಿನತ್ತ ಕಣ್ಣುಹಾಯಿಸಿದರು. ಆಕೆ ಸುಡೋಕು ತುಂಬುತ್ತಿದ್ದದ್ದರಿಂದ ರಾಯರಿಗೇನಾದರೂ ಬೋರಾಗಿರಬಹುದೇ ಎಂದು ಆಕೆ ಓರೆಗಣ್ಣಿನಿಂದ ನೋಡಿದರು. ಹಾಗೇನೂ ಇದ್ದಂತೆ ಕಾಣಲಿಲ್ಲ. ಆತ ಅಲ್ಲಿದ್ದ ಈನಾಡು ಪತ್ರಿಕೆಯನ್ನು ಹಿಡಿದು ಅದರಲ್ಲಿದ್ದ ಚಿತ್ರಗಳನ್ನು ನೋಡಿ ಓದಲು ಪ್ರಯತ್ನ ಮಾಡುತ್ತಿದ್ದರು. ಸುಡೋಕು ಮುಗಿಯುವ ವೇಳೆಗೆ ಅವರಿಗೆ ಟೇಬಲ್ ಸಿಕ್ಕಿತು. ಪ್ರತಿಭಾ ಸುಡೊಕುವಿನ ಮನೆಗಳನ್ನೆಲ್ಲ ಕ್ಷಣಮಾತ್ರದಲ್ಲಿ ತುಂಬಿ ಮುಗಿಸಿದ್ದರು. "ಇದು ಈಜಿ ಲೆವೆಲ್ಲು. ಇದರ ಕೆಳಗಿರುವುದು ಕಷ್ಟದ್ದು.. ಹಾಗೆ ನೋಡಿದರೆ ಸುಡೋಕುವಿನಲ್ಲಿ ಸಾಮಾನ್ಯವಾಗಿ ಐದು ಕಠಿಣತೆಯ ಘಟ್ಟಗಳಿರುತ್ತವೆ. ಆದರೆ ಒಂದು ವೆಬ್ ಸೈಟಿನಲ್ಲಿ "ಈವಿಲ್" ಅನ್ನುವ ಆರನೆಯ ಘಟ್ಟವೂ ಇದೆ!" ಎಂದು ಪ್ರತಿಭಾ ಹೇಳಿದರು. ಯಾವುದೂ ಅರ್ಥವಾಗದ ರಾಯರು ತಲೆಯಾಡಿಸಿದ್ದರು.

"ಏನು ತೆಗೋತೀರಿ? ಮೆಗಾಸ್ಟಾರ್ ಚಿರಂಜೀವಿಗಾಗಿಯೇ ವಿಶೇಷವಾಗಿ ರೂಪಿಸಿರುವ ಸ್ಟೀಮ್ಡ್ ದೋಸಾ ಇದೆ, ತೆಗೊಳ್ಳಿ, ಆರೋಗ್ಯಕ್ಕೂ ಒಳ್ಳೇದು" ಎನ್ನುವ ಪುಕ್ಕಟೆ ಸಲಹೆಯನ್ನು ರಾಯರು ಒಪ್ಪುತ್ತಾರೆ ಅಂದುಕೊಂಡಿದ್ದ ಪ್ರತಿಭಾರಿಗೆ ರಾಯರು ತಮ್ಮದೇ ವಿಚಾರವನ್ನು ಮಂಡಿಸಿದ್ದು ಆಶ್ಚರ್ಯ ಉಂಟುಮಾಡಿತು. ಬ್ರಹ್ಮಾನಂದ ರೆಡ್ಡಿ ಪಾರ್ಕಿನಿಂದ ಇಲ್ಲಿಯವರೆಗೆ ಆಕೆಯ ಸುಪರ್ದಿನಲ್ಲಿದ್ದಂತಿದ್ದ ರಾಯರು ಈಗ ತಮ್ಮ ಸ್ವತಂತ್ರ್ಯವನ್ನು ಒಂದು ತಿಂಡಿಯ ವಿಷಯವಾಗಿ ಘೋಷಿಸಿಬಿಟ್ಟರು. ಬರೇ ಇಡ್ಲಿ ಹೇಳಿ ಈ ಕಾರ್ಯಕ್ರಮವನ್ನು ಬೇಗ ಮುಗಿಸಿ ಮನೆಗೆ ಹೋಗುವ ತುರ್ತು ಒಂದು ಕಡೆ ಕಂಡಂತಾದರೂ, ಬಂದೇ ಬಿಟ್ಟಿರುವುದರಿಂದ - ನೀರಿಗಿಳಿದೇ ಬಿಟ್ಟಿರುವುದರಿಂದ - ಈ ಕೆಲಸವನ್ನಾದರೂ ಸರಿಯಾಗಿ ಮಾಡೋಣ ಅನ್ನಿಸಿತು, ಅವರ ಚಪಲವೂ ಅವರ ಸಂಯಮವನ್ನು ಗೆದ್ದು ಬಿಟ್ಟಿತು. ಪ್ರತಿಭಾರು ಹೇಳಿದ ಯಾವುದೇ ಮಾತನ್ನೂ ಕೇಳದೇ ಎಂಎಲ್‍ಎ ಪೆಸರೆಟ್ಟನ್ನು ಆರ್ಡರ್ ಮಾಡಿ ನೀರಿನ ಲೋಟದಿಂದ ಒಲಿಂಪಿಕ್ ಆಟದ ಐದು ವೃತ್ತಗಳ ಚಿನ್ಹೆಯನ್ನು ಮಾಡಿದರು. ಆ ಸಮಯಕ್ಕೆ ಸರಿಯಾಗಿ ಪ್ರತಿಭಾ ಪತ್ರಿಕೆಯನ್ನು ಅವರತ್ತ ತಳ್ಳಿದರು, ಇಲ್ಲಿ ಕಣ್ಣುಹಾಯಿಸಲು ಕೊಟ್ಟರೆ, ಹೋಗುವಾಗ ಅದನ್ನು ಮನೆಗೆ ಒಯ್ದು ಎರಡನೆಯ ಸುಡೋಕು ಮಾಡುವ ಉದ್ದೇಶವಿರಬಹುದು ಅಂತ ರಾಯರಿಗನ್ನಿಸಿತು. ಅಥವಾ ಫೌಂಟನ್ ಪೆನ್ನಿನ ಇಂಕು ಸುಡೊಕುವಿನ ಮನೆಗಳಲ್ಲಿ ಹಬ್ಬಿ ಸರಿಯಾಗಿ ಮಾಡಲು ಸಾಧ್ಯವಿದ್ದಿರದೇ ಈ ಕಾರ್ಯಕ್ರಮವನ್ನು ಆಕೆ ಮುಂದೂಡಿರಲಿಕ್ಕೂ ಸಾಕು. ರಾಯರು ಅದೇ ಸುವರ್ಣಾವಕಾಶ ಎನ್ನುವಂತೆ ಪತ್ರಿಕೆಯಲ್ಲಿ ತಲೆ ಹುದುಗಿಸಿ ಜನರಿಂದ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದರು.

ಆದರೆ ಮಾತು ಮುಂದುವರೆಸಬೇಕಾಗಿತ್ತು. ಪ್ರತಿಭಾ ತಟ್ಟೆಂದು ಒಂದು ಪ್ರಶ್ನೆ ಕೇಳಿದರು.."ಅದು ಸರಿ, ಬೆಳಿಗ್ಗಿನ ವಾಕಿಂಗಿಗೆ ಬರುವಾಗ ನಿಮಗೆ ಪೆನ್ನು ಯಾಕೆ?" ರಾಯರಿಗೆ ಸ್ವಲ್ಪ ರೇಗಿತು. "ನಿಮ್ಮಂಥಹವರು ದಾರಿಯಲ್ಲಿ ಸುಡೊಕು ಮಾಡಬೇಕೆಂದು ಕೇಳಿದಾಗ ಕೊಡೋದಕ್ಕೆ" ಎಂದು ಕೊಂಕಾಗಿ ನಡೆದರು. ಪ್ರತಿಭಾರಿಗೆ ಇದೂ ಗಮ್ಮತ್ತಿನ ವಿಷಯ ಅನ್ನಿಸಿತು. ಅವರನ್ನು ಇನ್ನೂ ಕೆಣಕಲೆಂದೇ "ಹಾಗಾದರೆ ಪರ್ಸೂ ತಂದಿದ್ದೀರಾ? ಬಿಲ್ ಕೊಡೋದಕ್ಕೆ?" ಅಂದರು. "ಇಲ್ಲ" ಎಂದು ರಾಯರು ಹೇಳುತ್ತಿದ್ದಂತೆಯೇ ಇಬ್ಬರಿಗೂ ತಮ್ಮಲ್ಲಿ ದುಡ್ಡಿಲ್ಲ ಅನ್ನುವ ವಿಷಯದ ಜ್ಞಾನೋದಯವಾಯಿತು. ಆಕೆಯೂ ತನ್ನ ಪರ್ಸನ್ನು ತಂದಿರಲಿಲ್ಲ. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿದರು. ಹಾಗೂ ಮಾತಾಡದೆಯೇ ನಿಧಾನವಾಗಿ, ತಿಂಡಿ ಬರುವುದರೊಳಗೆ, ಯಾರಾದರೂ ತಮ್ಮನ್ನು ಪತ್ತೆ ಹಚ್ಚುವುದರೊಳಗೆ ಅಲ್ಲಿಂದ ಜಾರಿ ಪಲಾಯನ ಮಾಡಿದರು.

ಅಲ್ಲಿಂದ ಓಟಕೀಳಬೇಕಾದ ಪರಿಸ್ಥಿತಿ ಬಂದದ್ದು ರಾಯರಿಗೆ ನಿರಂಬಳವಾದಂತೆ ಅನ್ನಿಸಿತು. ಸಧ್ಯ ಅರ್ಧ ಗಂಟೆ ಬಚಾವಾಯಿತಲ್ಲ, ಮನೆಯಲ್ಲಿ ಹೇಳಬೇಕಾದ ಸಮಜಾಯಿಷಿ ಅಷ್ಟರ ಮಟ್ಟಿಗೆ ಕಡಿಮೆಯಾಯಿತು ಅಂದುಕೊಳ್ಳುತ್ತಾ ರಾಯರು ಅಲ್ಲಿಂದ ಪಲಾಯನ ಮಾಡಲು ತಯಾರಾದರು.

ಪ್ರತಿಭಾ ತಮ್ಮ ಕಾರಿನಲ್ಲಿ ಬಿಡುತ್ತೇನೆಂದರೂ ಕೇಳದೇ ರಾಯರು ಹೆಜ್ಜೆ ಹಾಕತೊಡಗಿದರು. ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು....


ಒಂದು ದಿನ ಬೆಳಿಗ್ಗೆ ಎದ್ದಾಗ ರಾಯರು ಕಾಣಿಸಲಿಲ್ಲ. ಅದೂ ಈ ನಡುವೆ ಸಹಜವೇ ಆಗಿಬಿಟ್ಟಿತ್ತು. ಅವರ ವಾಕಿಂಗಿನ ಸಮಯ ಹೆಚ್ಚುತ್ತಾ ಹೋಗುತ್ತಿದ್ದು, ಆಗಾಗ ಬೆಳಿಗ್ಗಿನ ತಿಂಡಿಯನ್ನು ರಾಯರು "ಹೊಟ್ಟೆ ಸರಿಯಿಲ್ಲ" ಅನ್ನುವ ಕಾರಣಕ್ಕಾಗಿ ತಿನ್ನದೇ ಇರುತ್ತಿದ್ದರು. ಇದೂ ಸಾಲದ್ದಕ್ಕೆ, ವಾಕಿಂಗಿನಿಂದಾಗಿ ಕರಗಬೇಕಾಗಿದ್ದ ಹೊಟ್ಟೆ ಬೆಳೆಯುತ್ತಿರುವುದನ್ನು ಶ್ರಾವಣ ಗಮನಿಸಿದ್ದ. ರಾಯರ ದಿನಚರಿಯಲ್ಲಿ ಏನೋ ಬದಲಾವಣೆಯಾಗಿದೆ ಎನ್ನಿಸಿದರೂ ಅವರು ಖುಷಿಯಿಂದ ಇರುವುದನ್ನು ಕಂಡಿದ್ದ ಶ್ರಾವಣ ತನ್ನ ಮೂಗನ್ನು ಈ ವಿಷಯದಲ್ಲಿ ತೂರಿಸಿರಲಿಲ್ಲ. ಆದರೆ ಈ ಯಾತ್ರೆಯ ಕುತೂಹಲ ಮಾತ್ರ ಅವನನ್ನು ಕೊಲ್ಲುತ್ತಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತೇನೆಂದು ನೋಟಿಸ್ ಕೊಟ್ಟ ರಾಯರು ದಿನವೂ ಸಸ್ಪೆನ್ಸ್‌ ಬೆಳೆಸುತ್ತಾ ತಮ್ಮ ಚಿತ್ರಹಿಂಸೆಯನ್ನು ಮುಂದುವರೆಸಿದ್ದರು. ಮುಂಜಾನೆ ಹೊರಟರೆ ವಾಪಸ್ಸು ಎಷ್ಟು ಹೊತ್ತಿಗೆ ಬರುತ್ತಾರೆ ಅನ್ನುವುದು ತಿಳಿಯದೇ, ಬರುತ್ತಾರೋ ಇಲ್ಲವೋ ಅನ್ನುವುದೂ ತಿಳಿಯದಿರುವಂತಹ ಹಿಂಸೆಯ ಪರಿಸ್ಥಿತಿಯನ್ನು ರಾಯರು ಉಂಟುಮಾಡಿಬಿಟ್ಟಿದ್ದರು.

ಈ ದಿನ ರಾಯರು ಬರೇ ವಾಕಿಂಗಿಗೆ ಹೋಗಿದ್ದಾರೋ ಅಥವಾ ಯಾತ್ರೆಗೆ ಹೋಗಿದ್ದಾರೋ ಅನ್ನುವುದನ್ನು ಊಹಿಸುವುದರಲ್ಲಿ ಶ್ರಾವಣ ತೊಡಗಿದ. ಅವನ ಹೆಂಡತಿ ಅವನನ್ನು ತಿಂಡಿಗೆ ಕರೆದಳು. ಮೊದಲೆಲ್ಲಾ ರಾಯರಿಗಾಗಿ ಕಾಯುತ್ತಿದ್ದವರು ಈ ಮಧ್ಯೆ ಎಂಟೂವರೆಗೆ ರಾಯರು ಬರಲೀ ಬರದಿರಲೀ ಕೂತುಬಿಡುತ್ತಿದ್ದರು. ರಾಯರು ವಾರದಲ್ಲಿ ಎರಡು ದಿನ ತಿಂಡಿ ತಿಂದರೆ, ನಾಲ್ಕು ದಿನ ತಿನ್ನುತ್ತಿರಲಿಲ್ಲ. ಮೊದಲಿಗೆ ಯಾಕೆಂದು ಕೇಳುತ್ತಿದ್ದವರು ಈಗ ಆ ಮಾತನ್ನೂ ಕೇಳುವುದನ್ನು ಬಿಟ್ಟುಬಿಟ್ಟಿದ್ದರು. ಆದರೂ ಯಾಕೋ ಅಂದು ಶ್ರಾವಣನಿಗೆ ಸ್ವಲ್ಪ ಅನುಮಾನವೇ ಇತ್ತು. ತಿಂಡಿ ತಿನ್ನುವುದಕ್ಕೆ ಮೊದಲು ಅವನಿಗೆ ರಾಯರ ಕೋಣೆಗೆ ಹೋಗಿ ಅವರ ಸೂಟ್‌ಕೇಸ್ ಇದೆಯೇ ಇಲ್ಲವೇ ಎಂದು ನೋಡುವ ಮನಸ್ಸಾಯಿತು. ಮೈಸೂರಿನಿಂದ ಬಂದಾಗಿನಿಂದಲೂ ರಾಯರು ತಮ್ಮ ಸರ್ವಸ್ವವನ್ನೂ ಸೂಟ್‌ಕೇಸಿನಲ್ಲೇ ಇಟ್ಟುಕೊಂಡಿರುತ್ತಿದ್ದರು. ಅವರಿಗಾಗಿಯೇ ಒಂದು ಪ್ರತ್ಯೇಕ ಕಪಾಟನ್ನು ಮಾಡಿಸಿಕೊಟ್ಟಿದ್ದರೂ ಯಾಕೋ ಅದನ್ನು ಉಪಯೋಗಿಸದೇ ತಮ್ಮ ಹಳೇ ಸೂಟ್‌ಕೇಸಿನಲ್ಲೇ ಎಲ್ಲವನ್ನೂ ಜೋಪಾನವಾಗಿ ಮಡಿಸಿ ಇಟ್ಟುಕೊಳ್ಳುತ್ತಿದ್ದರು. ಹೀಗೆ ಯಾಕೆಂದು ಶ್ರಾವಣ ಒಮ್ಮೆ ಕೇಳಿದ್ದೂ ಉಂಟು. ಅದಕ್ಕೆ ರಾಯರು ನಗುತ್ತಾ "ಕಾಪಾಟಿನೊಳಗಿನಿಂದ ಬರೋ ನೆನಪುಗಳನ್ನು ಭರಿಸೋ ಶಕ್ತಿ ನನಗಿಲ್ಲ ಕಣೋ" ಎಂದಿದ್ದರು!!

ಆ ದಿನ ಕೋಣೆಯಲ್ಲಿ ಅವರ ಸೂಟ್‌ಕೇಸ್ ಕಾಣಿಸಲಿಲ್ಲ. ಅಂದರೆ ರಾಯರು ಅಂದಿನ ದಿನದ ಮುಹೂರ್ತವನ್ನು ನಾಪತ್ತೆಯಾಗಲು ಆರಿಸಿದ್ದಾರೆಂದಂತಾಯಿತು. ಟೇಬಲ್‍ನ ಮೇಲಿದ್ದ ಬ್ಯಾಂಕಿನ ಪಾಸ್‍ಬುಕ್ ಶ್ರಾವಣನ ಕಣ್ಣಿಗೆ ಬಿತ್ತು. ಕುತೂಹಲದಿಂದ ಅದನ್ನು ತೆರೆದು ನೋಡಿದ. ಕೆಲ ದಿನಗಳ ಹಿಂದೆ ರಾಯರ ಒಂದು ಎಫ್.ಡಿ ಮೆಚ್ಯೂರ್ ಆಗಿತ್ತು. ಅದನ್ನು ಸಾಮಾನ್ಯವಾಗಿ ರಾಯರು ಮತ್ತೆ ಪಾವತಿ ಮಾಡುವ ಪರಿಪಾಠ ಇಟ್ಟುಕೊಂಡಿದ್ದರು. ಆದರೆ ಈ ಬಾರಿ ಹಾಗಾಗಿರಲಿಲ್ಲ. ಅಕೌಂಟಿನಿಂದ ಸುಮಾರು ಮೂವತ್ತೈದು ಸಾವಿರ ರೂಪಾಯಿಗಳನ್ನು ಅವರು ತೆಗೆದಿದ್ದರು. ಶ್ರಾವಣನಿಗೆ ಸ್ವಲ್ಪ ಚಿಂತೆಯಾಯಿತು. ಆದರೆ ಈಗ ಏನೂ ಮಾಡುವಂತಿರಲಿಲ್ಲ. ಅಪ್ಪನ ವ್ಯವಹಾರದಲ್ಲಿ ತಲೆ ಹಾಕಬಾರದು ಅಂತ ತಾನಿದ್ದದ್ದು ಬೇಜವಾಬ್ದಾರಿಯ ಸಂಗತಿಯೇನೋ ಅಂತ ಶ್ರಾವಣನಿಗೆ ಅನ್ನಿಸಿತು. ಈಗ ಯಾರಾದರೂ ರಾಯರೆಲ್ಲಿ ಎಂದು ಕೇಳಿದರೆ ನನಗೆ ಗೊತ್ತಿಲ್ಲ ಎಂದು ಉತ್ತರಿಸಬೇಕಾದ ವಿಚಿತ್ರ ಪರಿಸ್ಥಿತಿಯಲ್ಲಿ ಅವನು ಸಿಲುಕಿ ಬಿದ್ದಿದ್ದ!!

ಶ್ರಾವಣನ ಮನಸ್ಸಿನಲ್ಲಿ ಬೇಡಾದ ವಿಚಾರಗಳೆಲ್ಲವೂ ಬಂದುಹೋದುವು. ಅಕಸ್ಮಾತ್ ಏನಾದರೂ ಆದರೆ ತನಗೆ ತಿಳಿಯುವುದು ಹೇಗೆ? ಅಪ್ಪ ವಾಪಸ್ಸು ಯಾವಾಗ ಬರಬಹುದೆಂಬ ಸೂಚನೆಯೂ ಕೊಡದೇ ಹೋಗಿರುವುದರಿಂದ ಇದ್ದಬದ್ದವರಿಗೆಲ್ಲಾ ಸಮಜಾಯಿಷಿ ಹೇಳಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು. ಇದರಿಂದಾಗಿ ಶ್ರಾವಣನಿಗೆ ವಿಪರೀತ ಸಿಟ್ಟೂ ಬಂದಿತ್ತು. ಆದರೆ ಆ ಸಿಟ್ಟನ್ನು ಅವನು ತೋರಿಸುವ ಸ್ಥಿತಿಯಲ್ಲಿರಲಿಲ್ಲ. ಶ್ರಾವಣನಿಗೆ ತನ್ನ ಅಸಹಾಯಕತೆಯಲ್ಲಿ ಅಳುವೇ ಬಂದುಬಿಟ್ಟಿತ್ತು.

ಈಗಿತ್ತಲಾಗಿ ಅಪ್ಪ ವಾಕಿಂಗಿಗೆ ಹೋದಾಗ ಯಾವುದೋ ಒಂದು ಹೆಂಗಸಿನ ಜೊತೆ ಓಡಾಡುತ್ತಿದ್ದಾರೆ ಅನ್ನುವ ಮಾತನ್ನು ಒಂದೆರಡು ಬಾರಿ ಕೇಳಿದ್ದ. ತಾನು ಯುವಕನಾಗಿದ್ದಾಗ ಯಾರ ಜೊತೆ ಓಡಾಡುತ್ತಿದ್ದೀ, ಎಲ್ಲಿ ಹೋಗುತ್ತಿದ್ದೀ ಎಂದು ಯಾವತ್ತೂ ಕೇಳಿರದ ಅಪ್ಪನನ್ನು ಈ ವಿಷಯದಲ್ಲಿ ಪ್ರಶ್ನಿಸುವಷ್ಟು ಸಣ್ಣವನಾಗಲು ಅವನು ಬಯಸಿರಲಿಲ್ಲ. ಆದರೂ ತನ್ನ ಅಪ್ಪನ ಬಗ್ಗೆ ಯಾವುದೇ ಸುದ್ದಿಯಿಲ್ಲದೇ ಇರುವುದು ದಿವ್ಯ ನಿರ್ಲಕ್ಷ್ಯದ ಸಂಕೇತ ಎಂದು ಯಾರಾದರೂ ಅಂದರೆ ಉತ್ತರಿಸುವುದು ಹೇಗೆಂದು ಅವನಿಗೆ ತಿಳಿದಿರಲಿಲ್ಲ.

ಮನಸ್ಸು ಹೀಗೆ ಚಂಚಲಿತಗೊಂಡಿರುವಾಗಲೇ ಅವನಿಗೆ ಫೋನ್ ಬಂತು. ಅದು ಅಪ್ಪನದ್ದಾಗಿತ್ತು. ಅಪ್ಪ ತಾನು ಹೊರಟುನಿಂತಿರುವುದರ ಸಂಕೇತವಾಗಿ ಗುಡ್‍ಬೈ ಹೇಳಲು ಪೋನ್ ಮಾಡಿದ್ದರು. ಅದರಲ್ಲೂ ಅಪ್ಪ ಬುದ್ಧಿವಂತ, ಮೊಬೈಲಿನ ಮೇಲೆ ಮಾಡಿದರೆ ತನಗೆ ಎಲ್ಲಿಂದ ಕಾಲ್ ಮಾಡುತ್ತಿದ್ದೇನೆಂಬುದು ಗೊತ್ತಾಗುತ್ತದೆ ಅನ್ನಿಸಿದ್ದರಿಂದಲೋ ಏನೋ ಲ್ಯಾಂಡ್‍ಲೈನಿಗೆ ಮಾಡಿದ್ದರು. ಶ್ರಾವನ ಲ್ಯಾಂಡ್‌ಲೈನಿಗೆ ಕಾಲರ್ ಐಡಿ ಹಾಕಿಸಿರದ್ದಕ್ಕೆ ಬೇಸರ ಮಾಡಿಕೊಂಡ. ಅಪ್ಪ ಮಾತನಾಡುತ್ತಿದ್ದಂತೆ ಹಿನ್ನೆಲೆಯಲ್ಲಿ ಏರ್‌ಪೋರ್ಟಿನಲ್ಲಿ ಮಾಡುವ ಸೆಕ್ಯೂರಿಟಿಯ ಅನೌನ್ಸ್‌ಮೆಂಟ್ ಕೇಳಿಸಿತು. ಆದರೆ ಅದು ಸ್ಪಷ್ಟವಾಗಿರಲಿಲ್ಲ. ಅಂದರೆ ಅಪ್ಪ ವಿಮಾನದಲ್ಲಿ ಎಲ್ಲಿಗಾದರೂ ಹೊರಟಿದ್ದಾರೆ ಎಂದಾಯಿತು. ಮೂವತ್ತೈದು ಸಾವಿರ ಹಣ ಡ್ರಾ ಮಾಡಿದ್ದಾರೆಂದರೆ ಎಲ್ಲಿಗೆ ಹೋಗಿರಬಹುದು? ಈ ಸಮಯಕ್ಕೆ ಯಾವ ಊರಿಗೆ ಹೈದರಾಬಾದಿನಿಂದ ಫ್ಲೈಟಿದೆ? ಎರಡೂ ವಿಚಾರಗಳ ಬೆನ್ನು ಹತ್ತಿ ಹೋಗುವುದು ವ್ಯರ್ಥದ ಕೆಲಸ ಎಂದ ಅವನಿಗೆ ಬೇಗನೇ ಮನವರಿಕೆಯಾಯಿತು. ಈಗಿನ ದಿನಗಳಲ್ಲಿ ೯೯ ರೂಪಾಯಿಗಳಿಗೇ ಫ್ಲೈಟು ಟಿಕೇಟು ಕೊಡುತ್ತೇನೆಂದು ಓಡಾಡುವ ಗೊರೂರರ ಮಗ ಗೋಪೀನಾಥ ಇರುವಾಗ, ಹಾಗೂ ಒಂದೇ ಸಮಯಕ್ಕೆ ನಾಲ್ಕೈದು ಫ್ಲೈಟುಗಳು ಉಡಾವಣೆಯಾಗುವಾಗ ಇಂಥ ಪತ್ತೇದಾರಿಯ ಕೆಲಸ ವ್ಯರ್ಥದ್ದೇ ಆಗಿತ್ತು.

"ನಾನು ನಾಲ್ಕಾರು ದಿನಗಳಲ್ಲಿ ವಾಪಸ್ಸು ಬರುತ್ತೇನೆ. ನನಗಾಗಿ ಯೋಚಿಸಬೇಡಿ. ಸಾಧ್ಯವಾದರೆ ಮತ್ತೆ ಫೋನ್ ಮಾಡುತ್ತೇನೆ. ಆದರೆ ನಿರೀಕ್ಷಿಸಬೇಡಿ.. ಯಾಕೆಂದರೆ ನಾನು ಹೋಗುವ ಜಾಗದಲ್ಲಿ ಫೋನ್ ಸವಲತ್ತು ಇದೆಯೋ ಇಲ್ಲವೋ ಮೊಬೈಲಿನ ಸಿಗ್ನಲ್ ಬರುತ್ತೋ ಇಲ್ಲವೋ ಗೊತ್ತಿಲ್ಲ. ನಾನು ಹುಷಾರಾಗಿಯೇ ಇದ್ದೇನೆ. ಇಲ್ಲಿ ಗಲಾಟೆ, ಏನೂ ಕೇಳಿಸುತ್ತಿಲ್ಲ. ಇಡುತ್ತೇನೆ." ಎಂದು ಹೇಳಿ ಫೋನ್ ಇಟ್ಟುಬಿಟ್ಟರು.

ಶ್ರಾವಣ ನೆಮ್ಮದಿಯ ನಿಟ್ಟುಸಿರುಬಿಡುವುದೋ ಆತಂಕದಿಂದ ಕರಗಿಹೋಗಬೇಕೋ ತಿಳಿಯದೇ ತಬ್ಬಿಬ್ಬಾದ.


ಪ್ರತಿಭಾರಿಗೆ ಈ ಐಡಿಯಾ ಎಲ್ಲಿಂದ ಬಂತು ಎನ್ನುವುದು ತಿಳಿಯಲಿಲ್ಲ. ಆದರೆ ಮುಂಚಿನಿಂದಲೂ ಆಕೆ ಈ ರೀತಿಯ ಅನಿರೀಕ್ಷಿತವಾದಂತಹ ಕೆಲಸಗಳನ್ನು ಮಾಡಿದ್ದು ಉಂಟು. ಮದುವೆಯಾದ ಹೊಸತರಲ್ಲಿ ಪಟ್ಟಾಭಿರಾಮನ ಮೋಟರ್‌ಬೈಕನ್ನು ಕಲಿಯಲು ಪ್ರಯತ್ನಿಸಿ ರಸ್ತೆಯಲ್ಲಿ ನಡೆಯುತ್ತಿದ್ದ ಒಬ್ಬ ಬಡಪಾಯಿಯ ಕಾಲನ್ನು ಮುರಿದಿದ್ದರು. ಕೆಲವು ದಿನ ಈಜು ಕಲಿಯುತ್ತೇನೆಂದು ಪೂಲಿಗೆ ಹೋಗಿ ಚೆನ್ನಾಗಿ ಕಲಿತೂ ಬಂದಿದ್ದರು. ಅನೇಕ ಬಾರಿ ಟ್ರೆಕ್ಕಿಂಗ್ ಅದೂ ಇದೂಂತ ಪಟ್ಟಾಭಿರಾಮನನ್ನು ಪೀಡಿಸಿದ್ದು ಉಂಟು. ಪ್ರತಿಭಾರಿಗೆ ಹೇಗೆ ಮಾತನಾಡಲು ಕಾರಣ ಬೇಡವೋ ಹಾಗೆಯೇ ಪ್ರಯಾಣ ಮಾಡಲೂ ಕಾರಣ ಬೇಕಿರಲಿಲ್ಲ. ಪಟ್ಟಾಭಿರಾಮ ತೀರಿಕೊಂಡಾಗಿನಿಂದ ಅವರ ಪ್ರಯಾಣಗಳಿಗೆ ಕಡಿವಾಣ ಹಾಕಿದಂತಾಗಿತ್ತು. ಮೇಲಾಗಿ ಸೋಮ್ ಇದ್ದ ಪರಿಸ್ಥಿತಿಯಲ್ಲಿ ಹೀಗೆ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿದ್ದಾಗ ಎಲ್ಲಿಯೋ ಮೆರೆಯುವುದು ಸರಿಕಾಣುವುದಿಲ್ಲ ಎಂದು ಆಕೆ ಆಲೋಚಿಸಿ ಸುಮ್ಮನಿದ್ದರು. ಯಾವಾಗಲೂ ಜನರ ನಡುವೆ ಇರುತ್ತಿದ್ದ ಪ್ರತಿಭಾರಿಗೆ ಒಂಟಿಯಾಗಿ ಪ್ರಯಾಣಮಾಡುವುದು ಎಂದಿಗೂ ಒಗ್ಗಿದ ಮಾತಲ್ಲ.

ಅಂದು ಪೇಪರ್ ಸಿಗದೇ ರಾಯರು ತಮ್ಮ ಪ್ರತಿಯನ್ನು ಪ್ರತಿಭಾರಿಗೆ ಕೊಟ್ಟಾಗ ಆಕೆಗೆ ಏನು ಹೇಳಬೇಕೋ ತೋಚದೇ ನಾಷ್ಟಾಕ್ಕೆ ಆಹ್ವಾನಿಸಿದರು. ಇದು ಪೂರ್ವನಿಯೋಜಿತವಾದದ್ದಲ್ಲ. ಆದರೂ ಹೀಗೆ ಸಹಜಸ್ಫೂರ್ತಿಯಿಂದ ತಮ್ಮಬಾಯಿಂದ ಈ ಮಾತು ಯಾಕೆ ಹೊರಟಿತು ಆಕೆಗೇ ತಿಳಿಯಲಿಲ್ಲ. ತಾವು ಈ ಮಾತು ಹೇಳಿದ ಕೂಡಲೇ ಭಾಸ್ಕರರಾಯರಿಗೆ ಮುಜುಗರವಾಯಿತೆನ್ನುವುದು ಅವರ ಮುಖಚಹರೆಯಿಂದ ಗೋಚರಿಸುತ್ತಿತ್ತು. ಆ ಪ್ರತಿಕ್ರಿಯೆಯನ್ನು ಪ್ರತಿಭಾ ತಮ್ಮ ಮನಃಪಟಲದಲ್ಲಿ ಗ್ರಹಿಸಿ ಇಟ್ಟುಕೊಳ್ಳಲು ಪ್ರಯತ್ನಿಸಿದರು. ರಾಯರಿಗೆ ತುಸು ಪೀಕಲಾಟ ಉಂಟುಮಾಡುವುದೂ ಆಕೆಗೆ ವಿಕೃತ ಖುಷಿ ನೀಡುತ್ತಿತ್ತು. ಇಷ್ಟು ಭೋಳೆ ಸ್ವಭಾವದ ಸಹೃದಯರನ್ನು ಆಕೆ ಈಚೆಗಂತೂ ಕಂಡಿರಲಿಲ್ಲ. ಹೀಗಾಗಿ ರಾಯರ ಜೊತೆಗೆ ಸಮಯ ಕಳೆಯುವುದು ಆಕೆಗೆ ಇಷ್ಟವಾದ ಕಾಯಕವಾಯಿತು. ಹೇಗೂ ಮನೆಯಲ್ಲಿ ಶಾಂತಿಯಿಲ್ಲವಾದ್ದರಿಂದ ಇನ್ನಷ್ಟುಕಾಲ ಈತನ ಒಳ್ಳೆಯತನದ ಛಾಯೆಯಲ್ಲಿ ಸ್ವಲ್ಪ ಸಮಯ ಕಳೆಯುವುದರಲ್ಲಿ ಆಕೆಗೆ ಒಂದು ವಿಚಿತ್ರ ಖುಶಿ ಕಾಣಿಸ ತೊಡಗಿತು. ಹೀಗಾಗಿಯೇ ಆತನನ್ನು ಅವಾಕ್ಕುಗೊಳಿಸಲೆಂದೇ "ಹೌ ಎಬೌಟ್ ಗ್ರಾಂಡ್ ಕಾಕತೀಯ" ಎಂದು ಕೇಳಿಬಿಟ್ಟರು.

ಆದರೆ ಅಂದು ಚಟ್ನೀಸ್‌ನಲ್ಲಿ ಕಾಯುತ್ತಿರುವಾಗ ಇಬ್ಬರ ಬಳಿಯೂ ಹಣವಿಲ್ಲ ಎಂದು ತಿಳಿದು ಅವರುಗಳು ಪಲಾಯನಮಾಡಬೇಕಾಗಿ ಬಂದಾಗ ಪ್ರತಿಭಾರಿಗೆ ಇದರಿಂದಾಗಿ ತುಂಬಾ ಇರಿಸುಮುರುಸಾಯಿತು. ಅಷ್ಟೆಲ್ಲಾ ಜೋರುಮಾಡಿ ಕರೆತಂದು ಕೂಡ್ರಿಸಿ ಇಬ್ಬರಲ್ಲೂ ದುಡ್ಡಿಲ್ಲವೆಂದರೆ? ಈ ಮಾತು ಪ್ರತಿಭಾರನ್ನು ದಿನವೆಲ್ಲ ಕುಟುಕಿತು. ಪಾಪ ಭಾಸ್ಕರರಾಯರ ಎಂಎಲ್‌ಎ ಪೆಸರೆಟ್ಟು ಅವರಿಗಿಲ್ಲವಾಯಿತಲ್ಲ. ಮನೆಗೆ ಹೋಗುವ ವೇಳೆಗೆ ತಿಂಡಿಗೆ ತಡವಾಗಿಬಿಟ್ಟಿರಬಹುದೋ ಹೇಗೆ? ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕರೆತಂದು ಹೀಗೆ ಮಾಡಿಬಿಟ್ಟೆನಲ್ಲಾ ಎಂದು ತುಂಬಾ ಯೋಚಿಸಿದರು. ಇದಕ್ಕೆ ಪ್ರಾಯಶ್ಚಿತ್ತ ಆದಷ್ಟು ಬೇಗ ಮಾಡಿಕೊಳ್ಳಬೇಕು ಅಂದುಕೊಂಡ ಪ್ರತಿಭಾ ಮಾರನೆಯ ದಿನವೇ ಪ್ರಾಯಶ್ಚಿತ್ತದ ಮೊದಲ ಅಡಿಪಾಯವನ್ನು ಹಾಕಿದರು.

"ನಿನ್ನೆ ಆದದ್ದು ಆಯಿತು. ಈ ದಿನ ನನ್ನ ಜೊತೆ ನಾಷ್ಟಾ ಮಾಡಿಯೇ ಆಗಬೇಕು" ಎಂದು ಪಟ್ಟು ಹಿಡಿದು ನಿಂತರು. ರಾಯರು ಹಿಂದಿನ ದಿನದಷ್ಟು ಹಠ ಮಾಡದೆಯೇ ಸುಲಭವಾಗಿ ತಲೆಯಾಡಿಸಿದ್ದು ನೋಡಿ ಪ್ರತಿಭಾಗೆ ಸ್ವಲ್ಪ ಆಶ್ಚರ್ಯವಾಗಿರಲಿಕ್ಕೂ ಸಾಕು. ಆಕೆ "ಎಲ್ಲಿಗೆ?" ಎಂದು ಕೇಳಿದರು.

ರಾಯರು ಚಟ್ನೀಸ್ ಅಂದಾಗ ಪ್ರತಿಭಾರು ಒಂದು ಕ್ಷಣದ ಮಟ್ಟಿಗೆ ಅವಾಕ್ಕಾದರೂ, ತಮ್ಮ ಪ್ರತಿಕ್ರಿಯೆ ನೋಡಬೇಕೆನ್ನುವ ರಾಯರ ಹುನ್ನಾರವನ್ನು ಗಮನಿಸಿದರು. ಅದಕ್ಕೇ "ಸರಿ" ಅಂದದ್ದೇ ಕಾರನ್ನು ಹತ್ತಿ ರಾಯರನ್ನು ಕುಳಿತುಕೊಳ್ಳಲು ಹೇಳಿದರು. ಆಕೆ ದಾರಿಯುದ್ದಕ್ಕೂ ಏನೂ ಮಾತಾಡದೇ ಕಾರಿನಲ್ಲಿ ಹಾಕಿದ್ದ ರೇಡಿಯೋದಲ್ಲಿ ಬರುತ್ತಿದ್ದ ಯಾವುದೋ ತೆಲುಗು ಹಾಡನ್ನು ಗುನುಗುತ್ತ ಕಾರನ್ನು ಚಟ್ನೀಸ್ ಬಳಿ ನಿಲ್ಲಿಸಿದರು. ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ರಾಯರು ಸೋಲುವ ಸೂಚನೆ ತೋರಿಸಿದರು.. "ಹೌ ಎಬೌಟ್ ಗ್ರಾಂಡ್ ಕಾಕತೀಯಾ?" ಎಂದು ಹಿಂದಿನ ದಿನ ಪ್ರತಿಭಾರು ಕೇಳಿದ್ದ ಶೈಲಿಯಲ್ಲೇ ತುಂಟತನದಿಂದ ಕೇಳಿದರು. ಯಾವತ್ತೂ ಇಲ್ಲದ ರಾಯರ ಈ ತುಂಟಾಟಿಕೆ ಪ್ರತಿಭಾರಿಗೆ ಆಶ್ಚರ್ಯವನ್ನುಂಟುಮಾಡಿತ್ತು. ಆದರೆ ರಾಯರು ಈ ಆಟವನ್ನು ಆಡಲು ತಯಾರಿದ್ದರೆ ತಾವೂ ಅದಕ್ಕೆ ತಾಳ ಹಾಕುವುದಕ್ಕೆ ಸಿದ್ಧರಿದ್ದರೆಂಬುದನ್ನು ಪ್ರತಿಭಾ ತೋರಿಸಲು ನಿರ್ಧರಿಸಿದರು. ಆಕೆ ಕಾರನ್ನು ರಾಜೀವ್ ಗಾಂಧಿ ವೃತ್ತದಿಂದ ಎಡಕ್ಕೆ ತಿರುಗಿಸಿ ಪೂರಾ ಬೇಗಂಪೇಟೆಯ ಫ್ಲಾಯೋವರಿನ ಕೆಳಗಿನಿಂದ ಸುತ್ತು ಹಾಕಿಕೊಂಡು ಕಾಕತೀಯಾದ ಒಳಗೇಟಿನೊಳಗೆ ಪ್ರವೇಶಿಸಿದರು. ಅದನ್ನು ಕಂಡು ರಾಯರು ದಂಗಾದಂತೆ ಇತ್ತು. ತಮಾಷೆಗೆ ಹೇಳಿದ ಮಾತಿಗೆ ತಾವು ಹೀಗೆ ನಿಜಕ್ಕೂ ಅಲ್ಲಿಗೆ ಕರೆತರಬಹುದೆಂದು ರಾಯರಿಗನ್ನಿಸಿರಲಿಲ್ಲ ಎನ್ನುವುದು ಆಕೆಗೆ ಕಂಡುಬಂತು. ಕಡೆಗೂ ಈ ಆಟವನ್ನು ಎಲ್ಲಾದರೂ ನಿಲ್ಲಿಸಬೇಕಿತ್ತು. ಯಾರಾದರೊಬ್ಬರು ಸೋಲನ್ನೊಪ್ಪಬೇಕಿತ್ತು. ಪ್ರತಿಭಾರಿಗೆ ರಾಯರ ಮುಜುಗರ ಕಂಡು ಅನುಕಂಪ ಉಕ್ಕಿ ಬಂತು. ಅಲ್ಲಿ ಬಾಗಿಲು ತೆರೆಯಲು ಬಂದ ವಸ್ತ್ರಧಾರಿಗೆ ಕೈ ಅಡ್ಡ ತೋರಿಸಿ ಕಾರನ್ನು ಮುಂದುವರೆಸಿ ಹೊರಗೇಟಿನಿಂದ ತೆಗೆದರು.

ಅಲ್ಲಿಗೆ ಅವರಿಬ್ಬರ ನಡುವಿನ ಈ ಆಟ ಮುಗಿಯಿತೆನ್ನಿಸುತ್ತದೆ. ಇಲ್ಲವಾದರೆ ತಾವಿಬ್ಬರೂ ಕುಂದೆರಾನ ಕಥೆಯ ಪಾತ್ರಗಳಾಗಿಬಿಡಬಹುದೆಂಬ ಭಯ ರಾಯರನ್ನು ಆವರಿಸಿದ್ದಿರಬಹುದು. ಪ್ರತಿಭಾರು ಮಾತನಾಡದೆಯೇ ಕಾರು ನಡೆಸಿದರು. ರಾಜೀವ್ ಗಾಂಧಿ ವೃತ್ತದ ಬಳಿ ಮತ್ತೆ ಬಂದು ಮಿನರ್ವಾ ಕಾಫಿ ಶಾಪಿನ ಪಾರ್ಕಿಂಗ್ ಲಾಟಿನಲ್ಲಿ ಗಾಡಿ ನಿಲ್ಲಿಸಿದರು. ಚಟ್ನೀಸ್ ಬಿಟ್ಟರೆ ಇದೇ ಒಳ್ಳೆಯ ಜಾಗವೆಂದೂ ಹೇಳಿದರು. ಇಲ್ಲಿ ಚಿರಂಜೀವಿಯ ಬೇಕ್ಡ್ ದೋಸಾ ಸಿಗದಿದ್ದರೂ ರಾಯರಿಗೆ ಬೇಕಾದ ಎಂಎಲ್‍ಎ ಪೆಸರೆಟ್ಟು ಸಿಗುತ್ತೆ ಅಂತ ಸ್ವಲ್ಪ ಕೊಂಕಾಗಿಯೇ ನುಡಿದರು. ಇಬ್ಬರೂ ತಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿ ಒಬ್ಬರ ಮುಖವನ್ನೊಬ್ಬರು ನೋಡುತ್ತಾ ಕೂತರು. ಅವರಿಬ್ಬರ ನಡುವೆ ಇಂದು ಸುಡೊಕು ಇರಲಿಲ್ಲ. ವಾರ್ತಾಪತ್ರಿಕೆಯೂ ಇರಲಿಲ್ಲ.

ರಾಯರು ನೀರಿನ ಲೋಟದಲ್ಲಿ ಒಲಿಂಪಿಕ್ ಚಿನ್ಹೆ ಮಾಡುತ್ತಿದ್ದಂತೆ ಪ್ರತಿಭಾ ಏನು ಮಾತಾಡಬೇಕೋ ತೋಚುತ್ತಿಲ್ಲ ಎಂಬಂತೆ "ನಾವುಗಳು ಯಾಕೆ ಒಂದು ವಾರ ಎಲ್ಲಾದರೂ ಹೋಗಿಬರಬಾರದು? ಹೀಗೇ ಎಲ್ಲಿಗಾದರೂ ಒಂದು ಟ್ರಿಪ್. ಪಟ್ಟಾಭಿರಾಮ ಇದ್ದಾಗ ಪ್ರತಿವರ್ಷವೂ ಎಲ್ಲಾದರೂ ಒಂದು ಹಾಲಿಡೇ ಅಂತ ಹೋಗುತ್ತಿದ್ದೆವು. ನನಗೂ ಈ ಬಾಬಾರಿಂದ ಬೇಸರ ಬಂದುಬಿಟ್ಟಿದೆ. ಒಬ್ಬಳೇ ಹೋಗುವುದರಲ್ಲೂ ಸುಖವಿಲ್ಲ. ನೀವೂ ಬಂದರೆ ಚೆನ್ನಾಗಿರುತ್ತೆ. ನಿಮಗೂ ಇದರಿಂದ ಒಂದು ಬ್ರೇಕ್ ಸಿಕ್ಕ ಹಾಗಾಗುತ್ತದೆ." ಅಂದರು.

ಆಷ್ಟುಹೊತ್ತಿಗೆ ಪೆಸರೆಟ್ಟು ಬಂತು. ರಾಯರು ಅದು ಬಿಸಿಯಾಗಿದೆ ಎನ್ನುವುದನ್ನೂ ಪರಿಗಣಿಸದೇ ತಮ್ಮ ಕೈಯನ್ನು ಅದರೊಳಗೆ ಹುದುಗಿಸಿದರು. ಈ ಬಗ್ಗೆ ಮಾತನಾಡಲು ಆತ ಸದ್ಯಕ್ಕೆ ತಯಾರಿಲ್ಲವೆಂದು ಪ್ರತಿಭಾರಿಗೆ ಅನ್ನಿಸಿತು. ಆಕೆಯೂ ಆ ಮಾತನ್ನು ಮುಂದುವರೆಸದೇ ಸುಮ್ಮನಾದರು. ಇಬ್ಬರೂ ತಿಂಡಿ ಮುಗಿಸಿ ಬಿಲ್ ಬಂದಾಗ ರಾಯರು ತಮ್ಮ ಪರ್ಸನ್ನು ತೆಗೆದದ್ದು ನೋಡಿ ಪ್ರತಿಭಾರನ್ನು ತಟ್ಟಿತು. "ನಾನು ನಾನು" ಎಂದು ಸ್ವಲ್ಪ ಇಬ್ಬರೂ ಕಿತ್ತಾಡಿದರೂ, ಪ್ರತಿಭಾ ಸೋಲೊಪ್ಪಿಕೊಂಡರು. "ಹಾಗಾದರೆ ನಾಳೆ ನನ್ನ ಸರದಿ" ಎಂದು ಹೇಳಿ ಕೈ ಚೆಲ್ಲಿ ಕೂತರು.

೧೦

ರಾಯರು ಇದಕ್ಕೆ ಹೇಗೆ ಒಪ್ಪಿದರು ಎನ್ನುವುದು ಅವರಿಗೇ ತಿಳಿಯುತ್ತಿಲ್ಲ. ಚಿಕ್ಕಂದಿನಲ್ಲಿ ಕದ್ದು ಸಿನೇಮಾ ನೋಡಿದ್ದು ಬಿಟ್ಟರೆ ಅವರ ಜೀವನದಲ್ಲಿ ಯಾವ ಏರುಪೇರೂ ಇಲ್ಲದಂತೆ ಒಂದು ಮಧ್ಯಮವರ್ಗದ ಜೀವನವನ್ನು ಅವರು ಜೀವಿಸಿದ್ದರು. ಹೀಗೆ ಈ ವಯಸ್ಸಿನಲ್ಲಿ ಹಿಂದುಮುಂದು ತಿಳಿಯದ ಮಾಂಸಾಹಾರಿ ಹೆಣ್ಣಿನ ಜೊತೆ ಒಡನಾಟ, ಮತ್ತು ಆಕೆ ಹಾಕುತ್ತಿರುವ ತಾಳಕ್ಕೆ ಆತ ಕುಣಿಯುತ್ತಿರುವುದನ್ನು ಕಂಡು ತಮ್ಮಲ್ಲೇ ಆಶ್ಚರ್ಯಗೊಂಡರು. ಇಷ್ಟುದಿನವೂ ಆಗಿರದಿದ್ದ ಅನುಭವ ಈಗ ಇದ್ದಕ್ಕಿದ್ದಂತೆ ಆಗುತ್ತಿರುವುದು ಏಕೆಂದು ಅವರಿಗೆ ತಿಳಿಯಲೇ ಇಲ್ಲ. ಬಹುಶಃ ತಮ್ಮ ಮುಖದಲ್ಲೇ ತಮ್ಮ ಮನದ ಧೈರ್ಯ ಬರೆದಿರುತ್ತದೇನೋ. ಹೀಗಾಗಿಯೇ ಯಾರೂ ತಮ್ಮನ್ನು ನೋಡಿದಾಗ ಇಂಥ ವಿಚಾರಗಳು ಹೊಳೆಯದಿರಬಹುದು. ಆ ನಿಟ್ಟಿನಲ್ಲಿ ಪ್ರತಿಭಾ ಭಿನ್ನರಾಗಿದ್ದರು. ತಮ್ಮ ಬಗ್ಗೆ ಪ್ರತಿಭಾರಿಗೆ ಬೆಳೆಯುತ್ತಿದ್ದ ಅಕ್ಕರೆಯ ಕಾರಣವಂತೂ ಅವರಿಗೆ ತಿಳಿಯಲಿಲ್ಲ. ಅವರಾಗೇ ಆಕೆಯನ್ನೆಂದೂ ಅರಸಿ ಹೋದವರಲ್ಲ. ಆದರೆ ಈ ನಡುವೆ ಮುಂಜಾನೆ ಆಕೆಯನ್ನು ಭೇಟಿಯಾಗದಿದ್ದರೆ ಒಂದು ಖಾಲಿತನ ರಾಯರ ಮನದಲ್ಲಿ ನಿಂತುಬಿಡುತ್ತಿತ್ತು.

ಹಾಗೆ ನೋಡಿದರೆ ಆಕೆಯ ಜೊತೆ ಕಳೆದ ಘಳಿಗೆಗಳು ಅವರಿಗೆ ಸಮಯ ಕಳೆಯಲು ಸಹಾಯಕವೆನ್ನಿಸಿದರೂ, ಆಕೆಯ ಜೊತೆಯ ಮಾತುಕತೆಯಿಂದ ಒಂದು ನೆಮ್ಮದಿ ಸಿಕ್ಕಂತೆನ್ನಿಸಿದರೂ, ಆಕೆಯ ಮೇಲೆ ವಿಶೇಷ ಅಕ್ಕರೆಯೇನೂ ಅವರಿಗೆ ಬೆಳೆಯಲಿಲ್ಲ. ಬೇಕಾದಾಗ ಮಾತನಾಡುವ, ಬೇಡದಾಗ ದೂರ ಸರಿಯುವ ಸ್ವಾತಂತ್ರ ಇರಲಿಲ್ಲ. ಒಮ್ಮೊಮ್ಮೆ ಆಕೆಯ ಈ ಕಾರುಬಾರುಗಳು ಅತಿ ಅನ್ನಿಸಿದರೂ ಅದನ್ನು ರಾಯರು ತಡೆದು ಆಕೆಯ ಜೊತೆಗಿನ ಒಡನಾಟವನ್ನು ಮುಂದುವರೆಸಿದ್ದರು. ಹೀಗಾಗಿಯೇ ಚಟ್ನೀಸ್‍ನಲ್ಲಿ ಆದ ಅವಾಂತರದ ಮಾರನೆಯ ದಿನ ಮತ್ತೆ ಏನಾದರೂ ಘಟಿಸಬಹುದೆಂಬ ಖಾತ್ರಿ ರಾಯರಿಗಿತ್ತು.

ಈ ರೀತಿಯಾಗಿ ಹೊರಗಡೆ ತಿಂಡಿ ತಿನ್ನುವುದೇ ಹೊಸ ಅನುಭವವಾಗಿದ್ದ ರಾಯರಿಗೆ ಹೀಗೆ ಏಕಾಏಕಿ ಊರಿಂದ ಒಂದು ವಾರದ ಮಟ್ಟಿಗೆ ಓಡಿಹೋಗುವ ಈ ಪ್ರಸ್ತಾಪ ವಿಚಿತ್ರದ್ದು ಅನ್ನಿಸಿರಬಹುದು. ಅಂದು ರಾಯರು ಯಾಕೋ ವಿಚಿತ್ರ ಹುಂಬ ಮೂಡಿನಲ್ಲಿದ್ದರು. ಜೀವನ ಪರ್ಯಂತ ಸಮಾಜದ ಕಟ್ಟುಪಾಡುಗಳ ನಡುವೆ ಬದುಕಿದ್ದ ತಮಗೆ ಒಮ್ಮೆ ಎಲ್ಲವನ್ನೂ ಮುರಿದು ಹೊರಪ್ರಪಂಚ ನೋಡುವ ಅವಕಾಶ ಒದಗಿ ಬರುತ್ತಿತ್ತು. ಅದನ್ನು ಸ್ವೀಕರಿಸಬೇಕೇ ಬೇಡವೇ? ಎಷ್ಟು ಮುಕ್ತವಾಗಿ ಈ ಕೆಲಸವನ್ನು ಮಾಡಬೇಕು? ಹಾಗೂ ಇದರಲ್ಲಿ ಪ್ರತಿಭಾರ ನಿಜವಾದ ಆಸಕ್ತಿ ಎಷ್ಟು ಎನ್ನುವುದನ್ನ ರಾಯರು ಅಂದಾಜು ಮಾಡಿ ನೋಡಬೇಕಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ ಇದನ್ನೊಂದು ಜೋಕ್ ಎಂದು ಪರಿಗಣಿಸಿ ರಾಯರು ತಮ್ಮ ಕೋಣೆಗೆ ಹೊರಟುಬಿಡುತ್ತಿದ್ದರು. ಆದರೆ ಈಗಿತ್ತಲಾಗಿ ಪ್ರತಿಭಾರನ್ನು ಕಂಡಮೇಲೆ ಯಾವುದೂ ಅಸಾಧ್ಯವಲ್ಲ ಅನ್ನುವ ಬಗ್ಗೆ ಅವರು ಯೋಚಿಸತೊಡಗಿದ್ದರು.

ಎಷ್ಟೋ ಬಾರಿ ತಮ್ಮ ಸರ್ವೀಸಿನಲ್ಲಿದ್ದಾಗ ಕಟ್ಟಳೆಗಳನ್ನು ಮೀರುವ ಅನೇಕ ಅವಕಾಶಗಳು ಬಂದಿದ್ದರೂ ಸಮಾಜದ ಭಯಕ್ಕೆ ಸಂಸಾರದ ಕಟ್ಟುಪಾಡಿಗೆ ತಮ್ಮನ್ನು ತಾವು ಒಗ್ಗಿಸಿಕೊಂಡೇ ರಾಯರು ಜೀವನ ನಡೆಸಿದ್ದರು. ಆದರೆ ಹೀಗೆ ಈ ವಯಸ್ಸಿನಲ್ಲಿ ಈ ಬಗ್ಗೆ ಯಾಕಾದರೂ ಆಲೋಚಿಸಬೇಕು ಅನ್ನಿಸಿದರೂ ರಾಯರಿಗೆ ಇದರಲ್ಲೇನೋ ತಾವು ನೋಡಿರದ ರೋಮಾಂಚನವಿದೆ ಅನ್ನಿಸಿತ್ತು.

ಅಂದು ಮಿನರ್ವಾದಿಂದ ಮನೆಗೆ ಬಂದ ರಾಯರು ತಮ್ಮ ಲೆಕ್ಕಪತ್ರಗಳನ್ನು ತೆಗೆದು ತಮ್ಮ ಬಳಿಯಿರುವ ಒಟ್ಟು ಮೊತ್ತದ ಲೆಕ್ಕಾಚಾರ ಹಾಕಿದರು. ಹಾಗೆ ನೋಡಿದರೆ ಈಗಿತ್ತಲಾಗಿ ರಾಯರಿಗೆ ಯಾವ ಖರ್ಚೂ ಇರಲಿಲ್ಲ. ತಮ್ಮ ಹಣವನ್ನೆಲ್ಲಾ ಬ್ಯಾಂಕಿನ ಎಫ್‍ಡಿಯಲ್ಲಿ ಹಾಕಿಟ್ಟಿದ್ದ ರಾಯರಿಗೆ ಅದು ಅಲ್ಲಿ ಕೂತು ಮಾಡುವುದಾದರೂ ಏನು ಅನ್ನುವ ಪ್ರಶ್ನೆ ಕಾಡದಿರಲಿಲ್ಲ. ಹೀಗಾಗಿ ರಾಯರು ಮನೆಗೆ ಬಂದಕೂಡಲೇ ತಮ್ಮ ಕೋಣೆಯ ಬಾಗಿಲನ್ನು ಪಾಸ್ ಪುಸ್ತಕವನ್ನೂ ಎಫ್‍ಡಿ ರಸೀತಿಗಳನ್ನೂ ಆಚೆಗೆಳೆದರು.

೧೧

ಎಂದೂ ಇಲ್ಲದೇ ಈ ವಯಸ್ಸಿನಲ್ಲಿ ತನ್ನ ತಂದೆ ಹೀಗೆ ಹೇಳದೇ ಕೇಳದೇ ಯಾವುದೋ ಹೆಂಗಸಿನ ಜೊತೆ ಪಲಾಯನ ಮಾಡಿದ್ದಾರೆಂಬ ಸಾಧ್ಯತೆಯನ್ನು ಶ್ರಾವಣನಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಪ್ಪ ನಾಪತ್ತೆಯಾದ ಮಾರನೆಯ ದಿನವೇ ಕೇರಿಯಲ್ಲೆಲ್ಲಾ ಈ ಮಾತು ಹಬ್ಬ ತೊಡಗಿತ್ತು. ವಾಕಿಂಗಿನಲ್ಲಿ ನೋಡಿದ್ದ ಜನರಲ್ಲದೇ ಪಕ್ಕದ ಮನೆಯ ರಾಜಾ ರಾಯರು, ಭಾಸ್ಕರರಾಯರನ್ನು ಒಂದು ಹೆಂಗಸಿನ ಜೊತೆ ಹೈದರಾಬಾದ್ ಏರ್‍ಪೋರ್ಟಿನಲ್ಲಿ ಫ್ಲೈಟ್ ಹತ್ತಿದ್ದನ್ನು ನೋಡಿದರಂತೆ. ಆದರೆ ಯಾವ ಊರಿನ ಫ್ಲೈಟಿನ ಅನೌಂಸ್‍ಮೆಂಟೆಂದು ಅವರಿಗೆ ಗೊತ್ತಿದ್ದಿಲ್ಲ. ವಾಪಸ್ಸು ಬಂದಾಗ ಅವರು ಶ್ರಾವಣನ ಬಳಿ ಈ ಮಾತನ್ನು ಕೇಳಿದ್ದರು: "ಎಂದೂ ಇಲ್ಲದೇ ಈಗ ಇದ್ದಕ್ಕಿದ್ದಹಾಗೆ ಯಾವುದೋ ರೆಡ್ಡಿ ಹೆಂಗಸಿನ ಜೊತೆ ಯಾಕೆ ನಿಮ್ಮಪ್ಪ ಹೋಗುತ್ತಿದ್ದಾರೆ?"

ಹೌದು ತಾವು ಅಪ್ಪನಿಗೆ ಏನೂ ಕಡಿಮೆ ಮಾಡಿದ್ದಿಲ್ಲ ಆದರೂ ಹೀಗೆ ಮನೆ ಬಿಟ್ಟು ತಮ್ಮ ಜೀವನಕಾಲದ ಕಾಲುಭಾಗದಷ್ಟು ಉಳಿತಾಯವನ್ನು ಒಂದೇ ಏಟಿಗೆ ತೆಗೆದು ಹೀಗೆ ವಿಮಾನಯಾನ ಮಾಡುವ ಅವಶ್ಯಕತೆ ಏನಿತ್ತು. ಎಲ್ಲಿಗೆ ಹೋಗಬೇಕೋ, ಏನು ಅವಶ್ಯಕತೆಯೋ ಹೇಳಿದ್ದರೆ ತಾವು ನೋಡಿಕೊಳ್ಳುತ್ತಿರಲಿಲ್ಲವೇ. ಅಪ್ಪ ತನಗೇ ಮೋಸ ಮಾಡಿ ಹೊರಟುಹೋದರೆನ್ನಿಸಿ ಶ್ರಾವಣನಿಗೆ ರಾಯರ ಮೇಲೆ ಮತ್ತೆ ವಿಪರೀತ ಸಿಟ್ಟು ಬಂತು. ಆದರೆ ರಾಯರು ಬರುವ ವರೆಗೂ ಅವನು ಅಸಹಾಯಕನಾಗಿದ್ದ. ಮೇಲಾಗಿ ಇದರ ಸುಳಿವು ಒಂದು ಟಿವಿ ವಾಹಿನಿಗೆ ದೊರಕಿ ಅವರುಗಳು ಶ್ರಾವಣನ ಮನೆಯ ಮುಂದೆ ಒಂದು ಜೀಪನ್ನು ತಂದು ನಿಲ್ಲಿಸಿಬಿಟ್ಟರು. ಶ್ರಾವಣ ಅವರನ್ನು ಬೇಡಿಕೊಂಡ... "ಇದು ನಮ್ಮ ಸಂಸಾರಕ್ಕೆ ಸಂಬಂಧಿಸಿದ್ದು. ದಯವಿಟ್ಟು ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಬಿಡಿ, ನಮ್ಮ ವಿಚಾರದಲ್ಲಿ ತಲೆ ಹಾಕಿ ವಿಷಯವನ್ನು ಜಟಿಲಗೊಳಿಸಬೇಡಿ". ಆದರೆ ೮೦ರ ವಯಸ್ಸಿನ ಹನಿಮೂನಿನ ಈ "ಸ್ಟೋರಿ"ಯನ್ನು ಅವರು ಸುಲಭವಾಗಿ ಬಿಟ್ಟುಕೊಡುವವರಾಗಿರಲಿಲ್ಲ. ಹೀಗೆ ರಾಯರ ಒಂದು ಪುಟ್ಟ ಕಾರ್ಯ ತಮ್ಮ ತಲೆಯ ಮೇಲೆ ಬಂಡೆಯಾಗಿ ಕೂತುಕೊಳ್ಳಬಹುದೆಂದು ಯಾರೂ ಊಹಿಸಿರಲಿಲ್ಲ.

ಶ್ರಾವಣನಿಗೆ ಏನು ಮಾಡಬೇಕೋ ತಿಳಿಯದಾಯಿತು. ಅಪ್ಪನಿಗೆ ಹೀಗೆ ಹೋಗಲಿಕ್ಕೆ ಪ್ರೇರಣೆಯಾದರೂ ಎಲ್ಲಿಂದ ಬಂತು? ಜೀವನದಲ್ಲಿ ಯಾವತ್ತೂ ಯಾವ ಅತಿರೇಕವನ್ನೂ ಮಾಡದ ಈತನಿಗೆ ಈಗ ಯಾಕೆ ಈ ದುರ್ಬುದ್ಧಿ ಬಂತು? ಅವನಿಗೆ ತಿಳಿದಂತೆ ರಾಯರಿಗೆ ಇದ್ದ ಒಂದೇ ಒಂದು ಜೀವಿತಕಾಲದ ಆಸೆಯೆಂದರೆ ಮೈಸೂರಿನಲ್ಲಿ ತಾನು ಮನೆ ಮಾಡಬೇಕೆಂಬುದು. ಸುಮಾರಷ್ಟುಕಾಲ ಅಲ್ಲೇ ತನ್ನ ಸಹೋದರ ಮಹೇಶನ ಜೊತೆಗೆ ರಾಯರು ಕಳೆದಿದ್ದರಾದರೂ, ತಾನೂ ತನ್ನ ಸಂಸಾರ ಅಲ್ಲೇ ನೆಲೆಸಬೇಕೆಂದು ಅಪ್ಪನ ಆಸೆಯಾಗಿತ್ತು. ಮಹೇಶ ಅಪ್ಪನನ್ನು ನೋಡಿಕೊಳ್ಳಲು ತಯಾರಿದ್ದರೂ ಅವನ ಮನೆಯ ಪರಿಸ್ಥಿತಿಯನ್ನು ಕಂಡಾಗ ಅಪ್ಪ ಹೈದರಾಬಾದಿನಲ್ಲಿರುವುದೇ ವಾಸಿ ಎಂದು ಶ್ರಾವಣನಿಗೆ ಅನ್ನಿಸಿತ್ತು.

ಆದರೆ ಈಗಿತ್ತಲಾಗಿ, ಅಕಬರಬಾಗಿನಿಂದ ಮನೆ ಬದಲಾಯಿಸಿ ಪಂಜಾಗುಟ್ಟಾಕ್ಕೆ ಬಂದಾಗಿನಿಂದಲೂ ಅಪ್ಪ ಮೈಸೂರಿನ ಮಾತಡುವುದನ್ನ ಬಿಟ್ಟು ಇಲ್ಲಿಯೇ ಶಾಂತಿಯಿಂದ ಇದ್ದರು. ಕಳೆದ ಒಂದು ತಿಂಗಳಿನಿಂದ ಲಾಫ್ಟರ್ ಕ್ಲಬ್ಬಿಗೆ ಹೋಗುತ್ತಿಲ್ಲ ಹಾಗೂ ವಾಕಿಂಗನ್ನು ಈ ರೆಡ್ಡಿ ಹೆಂಗಸಿನ ಜೊತೆ ಮಾತಾಡುತ್ತಾ ನಡೆಸುತ್ತಿದ್ದಾರೆ ಅನ್ನುವುದು ಶ್ರಾವಣನಿಗೆ ತಿಳಿದುಬಂತು. ಆಕೆಯ ಜೊತೆ ವಾಕಿಂಗ್ ಹೋದದ್ದು ಅಷ್ಟು ಅಸಹಜ ಅನ್ನಿಸದಿದ್ದರೂ, ಈಗಿತ್ತಲಾಗಿ ಎರಡುವಾರಕಾಲದಿಂದ ಇಬ್ಬರೂ ನಾಷ್ಟಾಕ್ಕೆ ಅಲ್ಲಿ ಇಲ್ಲಿ ಹೋಗುತ್ತಿದ್ದಾರೆಂದು - ಅದು ತುಸು ವಿಚಿತ್ರವೆಂದೂ ತಿಳಿದವರು ಆಡಿಕೊಳ್ಳತೊಡಗಿದ್ದರು. ಈ ಎಲ್ಲ ವಿಚಾರಗಳೂ ತನಗೆ ಅಪ್ಪ ಹೊರಟುಹೋದ ಮೇಲೆ ತಿಳಿಯುತ್ತಿರುವುದಕ್ಕೆ ತಾನೇ ಜವಾಬ್ದಾರನಾಗಿದ್ದ.

ಎಲ್ಲಕ್ಕಿಂತ ಹೆಚ್ಚು ಸಿಟ್ಟು ತಂದ ವಿಷಯವೆಂದರೆ ರಾಯರು ಇದನ್ನೆಲ್ಲಾ ಮುಚ್ಚಿಟ್ಟಿದ್ದು. ಸ್ವಲ್ಪವಾದರೂ ಅವರು ಈ ಬಗ್ಗೆ ಸೂಚನೆ ನೀಡಿದ್ದರೆ ಮಾನಸಿಕವಾಗಿಯಾದರೂ ಈ ಪರಿಸ್ಥಿತಿಗೆ ತಾನು ತಯಾರಾಗಿರುತ್ತಿದ್ದೆ ಎಂದು ಶ್ರಾವಣ ಅಂದುಕೊಂಡ. ಆ ಕ್ಷಣದಲ್ಲಿ ತಾನೇ ಒಂದೆರಡು ದಿನ ರಾಯರನ್ನು ಹಿಂಬಾಲಿಸಿ ಜಾಸೂಸಿ ಮಾಡಿ ಅವರೇನು ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬೇಕಿತ್ತು ಅನ್ನಿಸಿತು. ಆದರೆ ಈ ಇಳಿವಯಸ್ಸಿನಲ್ಲಿ ರಾಯರು ಟೇನೇಜಿನ ಹುಡುಗತನವನ್ನು ತೋರಿಸುತ್ತಾರೆಂದು ಅಂದುಕೊಂಡೇ ಇರಲಿಲ್ಲ.

ಹಾಗೂ ಹೀಗೂ ಶ್ರಾವಣನಿಗೆ ಪ್ರತಿಭಾರೆಡ್ಡಿಯವರ ಮನೆಯ ನಂಬರೂ, ಅವರ ಮಗನ ಹೆಸರೂ ತಿಳಿದುಬಂತು. ಶ್ರಾವಣ ಸೋಮ್‍ನ ಆಫೀಸಿಗೆ ಹೋಗಿ ಅವನನ್ನು ಭೇಟಿ ಮಾಡಿದ. ಮನೆಯಲ್ಲಿ ಈ ವಿಚಾರ ಮಾತನಾಡುವುದು ಮುಜುಗರದ್ದು ಎಂದು ತಿಳಿದಿದ್ದರಿಂದ ಸೋಮ್‌ನ ಡಯಾಲಿಸಿಸ್ ವೇಳೆ ಅವನು ಆಫೀಸಿನಲ್ಲಿರುವ ವೇಳೆ ಎಲ್ಲ ವಿಚಾರಿಸಿಕೊಂಡು ಅಲ್ಲಿಗೆ ಹೋದ. ಸೋಮ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿರಲಿಲ್ಲ. ಏಕೆಂದರೆ ಪ್ರತಿಭಾ ತಾವು ಎಲ್ಲಿಗೆ ಮತ್ತು ಯಾರ ಜೊತೆ ಹೋಗುತ್ತಿದ್ದಾರೆಂದು ಮನೆಯಲ್ಲಿ ಹೇಳಿ ಹೋಗಿದ್ದರು. ಹೌದು ಈ ವಯಸ್ಸಿನಲ್ಲಿ ಹೀಗೆ ಯಾತ್ರೆ ಹೊರಡುವುದು ವಿಚಿತ್ರವೆನ್ನಿಸಿದರೂ ಅವನ ತಾಯಿ ಯಾವಾಗಲೂ ಅನಿರೀಕ್ಷಿತವಾದದ್ದನ್ನು ಮಾಡುತ್ತಿದ್ದುದರಿಂದ ಇದನ್ನು ಅರಗಿಸಿಕೊಳ್ಳಲು ಅವನಿಗೆ ಕಷ್ಟವಾಗಲಿಲ್ಲ. ತಾನೇ ಆಕೆಯನ್ನು ಒಂದು ಔಟಿಂಗಿಗೆ ಕರೆದೊಯ್ಯುವ ಸ್ಥಿತಿಯಲ್ಲಿರಲಿಲ್ಲವಾದ್ದರಿಂದ ಇದೂ ಒಳ್ಳೆಯದೇ ಎಂದು ಒಪ್ಪಿದ್ದ. ಆದರೆ ಸೋಮ್‍ ಅಂದುಕೊಂಡಿದ್ದದ್ದೇ ಬೇರೆ ಮತ್ತು ಆಗಿದ್ದದ್ದೇ ಬೇರೆ. ಸೋಮ್ ಬೆಳಿಗ್ಗಿನ ವಾಕಿಂಗಿನ ಗೆಳೆಯರು ಸೇರಿ ಒಂದು ಗುಂಪಾಗಿ ರಜೆಯ ಮೇಲೆ ಹೋಗಿದ್ದಾರೆ ಅಂದುಕೊಂಡಿದ್ದ. ಆದರೆ ಆಕೆ ಕೇವಲ ಭಾಸ್ಕರ ರಾಯರೊಂದಿಗೆ ಮಾತ್ರ ಹೋಗಿರುವುದು ಅವನಿಗೆ ತುಸು ವಿಚಿತ್ರವೇ ಅನ್ನಿಸಿತು. ಆದರೂ ಅವನ ಡಯಾಲಿಸಿಸ್, ಅದೇ ಸಮಯಕ್ಕೆ ಆಫೀಸು, ಮನೆಯಲ್ಲಿನ ಪೂಜಾ ಪುನಸ್ಕಾರಗಳ ನಡುವೆ ಅವನಿಗೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಪ್ರಮೇಯ ಕಾಣಿಸಲಿಲ್ಲ.

ಸೋಮ್‌ನ ಹೆಂಡತಿಗೆ ಇದು ಬಹಳ ವಿಚಿತ್ರವೆನ್ನಿಸಿತ್ತಂತೆ. ಆದರೆ ಅತ್ತೆಯ ಪಿರಿಪಿರಿ ತಪ್ಪಿದ್ದೇ ಒಳ್ಳೆಯದಾಯಿತೆಂದು ಆಕೆ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವ ಕಾರ್ಯಕ್ರಮವನ್ನು ಹಾಕಿಕೊಂಡುಬಿಟ್ಟಳು. ತನ್ನ ಮನೆಗೆ ಬಂದ ಟಿ.ವಿ.ಯವರು ಸೋಮ್‍ನ ಮನೆಗೂ ಬಂದು ಅವನ ಪ್ರತಿಕ್ರಿಯೆಯನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದರು ಎಂದು ಅವನು ಹೇಳಿದ. ಅವರೇನು ಪ್ರಶ್ನೆ ಕೇಳಿದ್ದರೋ ನೆನಪಿಲ್ಲವಾದರೂ, ಹೀಗೆ ತನ್ನ ತಾಯಿ ಯಾತ್ರೆ ಹೊರಟಿದ್ದರಲ್ಲಿ ತನಗೇನೂ ಅಸಹಜತೆ ಕಾಣಿಸಲಿಲ್ಲ ಎಂದು ಹೇಳಿದ್ದು ಮಾತ್ರ ಅವನಿಗೆ ನೆನಪಿತ್ತು. ಆ ಸಂಜೆ ಭಾಸ್ಕರರಾಯರ ಪ್ರಣಯ ಕಥೆ ಟಿ.ವಿ.ಯಲ್ಲಿ ಪ್ರಸಾರಗೊಳ್ಳಲಿತ್ತು. ಇದರಿಂದಾಗಿ ಹೆಚ್ಚು ಇರುಸುಮುರುಸಾದದ್ದು ಶ್ರಾವಣನಿಗೇಯೇ. ಸೋಮ್‌ನಿಂದ ತಿಳಿದ ವಿಷಯವೆಂದರೆ ಅಪ್ಪ ಮತ್ತು ಪ್ರತಿಭಾ ಎಲ್ಲೋ ಮೈಸೂರಿನ ಕಡೆ ಹೋಗಿದ್ದಾರೆ ಅನ್ನುವುದು. ಆಕೆ ದಿನವೂ ಫೋನ್ ಮಾಡಲು ಪ್ರಯತ್ನಿಸುತ್ತಿದ್ದಾರಂತೆ. ಆದರೆ ಅವರಿರುವ ಜಾಗದಲ್ಲಿ ಮೊಬೈಲಿನ ಸಿಗ್ನಲ್ ಸರಿಯಿಲ್ಲವಾದ್ದರಿಂದ ಮಾತು ಸರಳವಾಗಿ ಆಗುತ್ತಿಲ್ಲ. ಶ್ರಾವಣ ಸೋಮ್‌ನನ್ನು ಗೆಂಜಿ ಪ್ರತಿಭಾರ ಮೊಬೈಲ್ ನಂಬರನ್ನು ಪಡೆದುಕೊಂಡು ಬಂದ.

ಈಗ ಶ್ರಾವಣನ ಕೈಗೆ ಎರಡು ಕೆಲಸಗಳು ಅಂಟಿದವು. ಒಂದು: ಟಿವಿಯವರು ಈ ಪ್ರಕರಣವನ್ನು ಪ್ರಸಾರಮಾಡುವುದನ್ನು ತಡೆಯುವ ಸವಾಲು. ಎರಡನೆಯದು ಭಾಸ್ಕರರಾಯರನ್ನು ಪ್ರತಿಭಾರ ಮೊಬೈಲಿನ ಮೂಲಕ ಸಂಪರ್ಕಿಸುವುದು. ಟಿವಿಯವರ ಬಗ್ಗೆ ಶ್ರಾವಣ ಸೋಮ್ ಜೊತೆ ಮಾತನಾಡಿದ. ಆದರೆ ಸೋಮ್ ತನ್ನದೇ ಲೋಕದಲ್ಲಿದ್ದ. "ಅವರಿಗೆ ಇದು ಮುಖ್ಯವಾದ ಸಮಾಚಾರ ಆಗೋದಕ್ಕೆ ಸಾಧ್ಯವೇ ಇಲ್ಲ. ಸುಮ್ಮನೆ ವರಿ ಮಾಡಿಕೋಬೇಡಿ, ಇಬ್ಬರು ಫ್ರೆಂಡ್ಸ್ ಒಂದು ಯಾತ್ರೆಗೆ ಹೋದರೆ ಅದು ಯಾಕೆ ದೊಡ್ಡ ಸುದ್ದಿಯಾಗಬೇಕು? ನಾನೂ ನಮ್ಮಮ್ಮನ ಯಾತ್ರೆ ಸಹಜದ್ದು, ಮಹತ್ವದ್ದೇನೂ ಅಲ್ಲವೆಂದು ಹೇಳಿದೆ.." ಆದರೆ ಶ್ರಾವಣನಿಗೆ ಅವನ ಮಾತು ಸಮಂಜಸ ಅನ್ನಿಸಲಿಲ್ಲ. "ಇಲ್ಲ ಇದು ಟಿಆರ್‌ಪಿ ಲೋಕ, ನಿಮಗೆ ಗೊತ್ತಿಲ್ಲ. ೨೪ ತಾಸು ವಾರ್ತೆಗಳನ್ನು ಕೊಡುವವರಿಗೆ ಯಾವ ಸುದ್ದಿಯೂ ಮುಖ್ಯವಾಗುತ್ತದೆ. ಇದೂ ಸಹ ಮುಖ್ಯವಾಗುತ್ತದೆ.." ಎಂದರೂ ಸೋಮ್ ಕಿವಿಗೆ ಹಾಕಿಕೊಳ್ಳದೇ ಅದು ಮಹತ್ವದ ವಿಷಯವೇ ಅಲ್ಲವೆಂಬಂತೆ ಸುಮ್ಮನಾದ.

ಶ್ರಾವಣ ತನಗೆ ದೊರೆತ ಮೊಬೈಲಿನ ನಂಬರಿಗೆ ಅನೇಕಬಾರಿ ಫೋನ್ ಮಾಡಿದರೂ ಅದು ವ್ಯಾಪ್ತಿ ಪ್ರದೇಶದಿಂದ ದೂರವಿದೆ ಅನ್ನುವ ಮಾತು ಬಂತೇ ವಿನಹ ಕನೆಕ್ಷನ್ ಸಿಕ್ಕಲಿಲ್ಲ. ಅಲ್ಲಿ ಬಂದ ಏಕತಾನದ ಸಂದೇಶ ಇಷ್ಟೇ: "ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಆದರೆ ಕನ್ನಡದಲ್ಲಿ ಈ ಸಂದೇಶ ಬರುತ್ತಿದ್ದುದರಿಂದ ಅವರು ಕರ್ನಾಟಕದಲ್ಲೇ ಎಲ್ಲೋ ಇರಬೇಕು ಎಂದು ಊಹಿಸಿದ. ಏನಾದರಾಗಲೀ ಎಂದು ಒಂದು ಎಸ್ಸೆಮ್ಮೆಸ್ ಕೊಟ್ಟು ಆಕೆ ಅದನ್ನು ನೋಡಿದಾಗಲಾದರೂ ಉತ್ತರಿಸಿಯಾರು ಎಂಬ ಆಶಯದೊಂದಿಗೆ ತನ್ನ ಮೊಬೈಲನ್ನು ಗಟ್ಟಿಯಾಗಿ ಹಿಡಿದು ನಡೆದ.

ಇನ್ನು ಟಿವಿ ವಾಹಿನಿಯ ಕಾರ್ಯಾಲಯಕ್ಕೆ ಹೋಗಿ ಪ್ರಸಾರದಿಂದ ಆಗಬಹುದಾದ ಅನಾಹುತವನ್ನು ನಿಲ್ಲಿಸುವುದೂ ಅವನ ಮನದೊಳಗಿತ್ತು. ದಾರಿಯುದ್ದಕ್ಕೂ ಅವನು ಭಾಸ್ಕರರಾಯರು ತನ್ನನ್ನು ಈ ಪರಿಸ್ಥಿತಿಗೆ ತಲುಪಿಸಿದ್ದಕ್ಕೆ ಶಾಪ ಹಾಕುತ್ತಲೇ ನಡೆದ. ತನ್ನ ಅಪ್ಪನ ಮೇಲೆ ಇಷ್ಟೊಂದು ಸಿಟ್ಟು ಬಂದದ್ದು ಬಹುಶಃ ಜೀವನದಲ್ಲಿ ಮೊದಲಬಾರಿಯಿರಬೇಕು. ಇದು ದೈಹಿಕ ಮೋಹಕ್ಕೆ ಸಂಬಂಧಿಸಿದ್ದು ಆಗೇ ಇರಲಿಲ್ಲ. ವೃದ್ಧಾಪ್ಯದ ಏಕತಾನತೆಗೆ ರಾಯರು ಜಗತ್ತಿಗೆ ನೀಡಿದ್ದ ಪ್ರತಿಕ್ರಿಯೆಯಾಗಿತ್ತು. ಟಿವಿಯ ಕಾರ್ಯಾಲಯಕ್ಕೆ ಒಂದು ವೇಳೆ ಹೋಗದಿದ್ದರೆ ಏನಾಗಬಹುದು ಎಂದು ಶ್ರಾವಣ ಯೋಚಿಸಿದ. ಸಮಾಜದಲ್ಲಿ ತನಗಿರುವ ಸ್ಥಾನಮಾನಕ್ಕೆ ಧಕ್ಕೆ ಉಂಟಾಗಬಹುದೇ? ಆದರೆ ಅದರ ಪರಿಣಾಮವನ್ನು ಎಷ್ಟುದಿನಗಳ ಕಾಲ ಭರಿಸಬೇಕು? ಇದರಿಂದಾಗಿ ಭಾಸ್ಕರರಾಯರ ಮೇಲೆ ಯಾವ ಪರಿಣಾಮವಾಗಬಹುದು? ತಮ್ಮಷ್ಟಕ್ಕೆ ತಾವೇ ಇದ್ದ ರಾಯರು ಯಾಕೆ ಈ ಸಲ್ಲದ ಕೀರ್ತಿಯ ಭಾಗವಾಗುತ್ತಿದ್ದಾರೆ? ಇರುವ ತೊಂದರೆಗಳು ಸಾಲದೆಂಬಂತೆ ಕ್ಷಣಿಕ ಸೆಲೆಬ್ರಿಟಿಯ ಈ ಪಟ್ಟವನ್ನು ಹೊತ್ತು ಜೀವಿಸಲು ಅವರಿಗೆ ಸಾಧ್ಯವೇ?

ಟಿವಿ ವಾಹಿನಿಯ ಕಾರ್ಯಾಲಯಕ್ಕೆ ಹೋಗಿ ಈ ಕಥೆಯ ಕರ್ತೃವನ್ನು ಭೇಟಿಯಾಗಲು ಶ್ರಾವಣ ಪ್ರಯತ್ನಿಸಿದ. ತಾನು ಈ ಬಗ್ಗೆ ಒಂದು ಪುಟ್ಟ ಸಂದರ್ಶನ ಕೊಡುವುದಾದರೆ ಅವನ ಭೇಟಿ ಮಾಡಿಸುವುದಾಗಿ ರಿಸೆಪ್ಷನ್ನಿನ ಸುಂದರಿ ಹೇಳಿದಳು. ಅವಳು ಹಾಕಿದ ಷರತ್ತುಗಳೆಲ್ಲವನ್ನೂ ಶ್ರಾವಣ ಕೇಳಿ ತನ್ನ ಒಪ್ಪಿಗೆ ಸೂಚಿಸಿದ. ಅವನಿಗೆ ಈ ಕಾರ್ಯಕ್ರಮವನ್ನು ತಡೆಯುವ ಉದ್ದೇಶ ಬಿಟ್ಟರೆ ಬೇರೇನೂ ಮನಸ್ಸಿನಲ್ಲಿದ್ದಂತಿರಲಿಲ್ಲ. ಆದರೆ ವರದಿಗಾರನನ್ನು ಭೇಟಿಯಾದಾಗ ಶ್ರಾವಣನ ಭರವಸೆಯೆಲ್ಲಾ ಛಿದ್ರವಾಯಿತು. ನಗರದ ಪುಟ್ಟ ಚಾನೆಲ್‍ಗೆ ಇಷ್ಟು ಶಕ್ತಿಯಿರಬಹುದೆಂದು ಅವನೆಂದೂ ಊಹಿಸಿರಲಿಲ್ಲ. ವರದಿಗಾರ ಹೇಳಿದ್ದು ಇಷ್ಟೇ.. "ಸರ್ ನಾವು ಪ್ರತಿದಿನ ೮ ಘಂಟೆಗೆ ಒಂದು ಬ್ರೇಕಿಂಗ್ ನ್ಯೂಸ್ ಕಾರ್ಯಕ್ರಮ ಮಾಡಬೇಕು, ಅದಕ್ಕೆ ಯಾವುದೇ ವಿಷಯವಾದರೂ ಪರವಾಗಿಲ್ಲ. ನಾವು ಮಾಡುವ ಕಾರ್ಯಕ್ರಮಗಳನ್ನು ಆಧರಿಸಿ ಮುಖ್ಯ ಚಾನಲ್‌ಗಳೂ ನಮ್ಮ ವರದಿಗಳನ್ನು ಅನುಸರಿಸುತ್ತವೆ. ಒಮ್ಮೊಮ್ಮೆ ರಾಷ್ಟ್ರೀಯ ಚಾನಲ್‍ಗಳೂ ಅದನ್ನು ಆಯ್ದು ಪ್ರಸಾರ ಮಾಡುವುದುಂಟು.. ಅಲ್ಲದೇ ಪ್ರೆಸ್ ಕೂಡಾ.. ಹೀಗಾಗಿ ಸ್ವಾರಸ್ಯಕರವಾದ ಸುದ್ದಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ." ಶ್ರಾವಣನಿಗೆ ಇದು ವಿಚಿತ್ರವೆನ್ನಿಸಿತು. ತನ್ನ ಅಪ್ಪ ಒಂದು ವಾರಕಾಲ ಯಾವುದೋ ಹೆಂಗಸಿನೊಂದಿಗೆ ಪ್ರವಾಸ ಹೊರಟಿರುವುದು ಮತ್ತೊಬ್ಬನಿಗೆ ಅನ್ನವನ್ನಿಡುತ್ತಿರುವ ವಿಡಂಬನೆಯನ್ನು ಅವನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇದನ್ನು ನಿಲ್ಲಿಸಬೇಕೆಂದರೆ ಈಗಾಗಲೇ ಈ ಸ್ಟೋರಿಯ ಮೇಲೆ ನಾವು ಮಾಡಿರುವ ಖರ್ಚನ್ನು ಪಡೆಯಬೇಕು.. ಇಲ್ಲದಿದ್ದರೆ ನಾವು ನಷ್ಟಕ್ಕೊಳಗಾಗುತ್ತೇವೆ ಎಂದು ವರದಿಗಾರ ಹೇಳಿದ. ನಷ್ಟಪರಿಹಾರವಾಗಿ ಇಪ್ಪತ್ತೈದು ಸಾವಿರ ಕೊಟ್ಟರೆ ಕಾರ್ಯಕ್ರಮವನ್ನು ನಿಲ್ಲಿಸುವ ಯೋಚನೆ ಮಾಡಬಹುದು ಎಂದಾಗ "ಪೇ ಚಾನಲ್" ಅಂದರೆ ಅದಕ್ಕೆ ಇನ್ನೂ ಗಹನವಾದ ಅರ್ಥವಿರಬಹುದೆಂದು ಶ್ರಾವಣನಿಗೆ ಮನದಟ್ಟಾಗುತ್ತಾ ಬಂತು.

ಈ ಘಟನೆಗೆ ಅವನು ಇಷ್ಟು ಹಣ ಕೊಡಲು ತಯಾರಿರಲಿಲ್ಲ. ಪ್ರಸಾರ ಮಾಡಿಕೊಂಡು ಹಾಳಾಗಿಹೋಗಿ, ಆದರೆ ನನ್ನ ಸಂದರ್ಶನ ಮಾತ್ರ ನಿಮಗೆ ಸಿಗುವುದಿಲ್ಲ ಎಂದು ಹೇಳಿ ಅವನು ಹೊರಟುಹೋದ. ಅಂದು ಸಂಜೆ ಉಪ್ಪು ಖಾರ ಮಸಾಲೆಗಳೊಂದಿಗೆ ಕಾರ್ಯಕ್ರಮ ಪ್ರಸಾರವಾಯಿತು. ಸೋಮ್ ಅಲ್ಲದೇ ರಾಜಾರಾಯರ, ಲಾಫ್ಟರ್ ಕ್ಲಬ್ಬಿನ ಅನೇಕ ಜನರ, ಬ್ರಹ್ಮಾನಂದ ರೆಡ್ಡಿ ಪಾರ್ಕಿನಲ್ಲಿ ವಾಕಿಂಗ್ ಮಾಡುವವರ, ಚಟ್ನೀಸ್, ಮತ್ತು ಮಿನರ್ವಾ ಕಾಫಿ ಶಾಪಿನ ಮಾಣಿಗಳಾದಿಯಾಗಿ ಅನೇಕ ಜನರ ಸಂದರ್ಶನ ಆ ಕಾರ್ಯಕ್ರಮದಲ್ಲಿತ್ತು. ತಾನೇ ಊಹಿಸದಷ್ಟು ಜನ ತನ್ನ ತಂದೆಯ ಕಾರುಬಾರಿನ ಬಗ್ಗೆ ತಿಳಿದಿದ್ದಾರೆಂದು ಗೊತ್ತಾದಾಗ ಶ್ರಾವಣ ಅವಾಕ್ಕಾದ.

೧೨

ಪ್ರತಿಭಾರವರಿಗೆ ಈ ಸುದ್ದಿ ಕೇಳಿ ನಗು ಬಂತು. ಹಾಗೂ ಹೀಗೂ ಮೊಬೈಲ್ ಸಿಗ್ನಲ್ ಇದ್ದ ಜಾಗದಿಂದ ಪೋನ್ ಮಾಡಿದಾಗ ಸೋಮ್ ತಮ್ಮ ಮತ್ತು ಭಾಸ್ಕರರಾಯರ ಬಗ್ಗೆ ಸ್ಥಳೀಯ ಚಾನಲ್‍ನಲ್ಲಿ ಸುದ್ದಿ ಬಂದಿದೆ ಎಂದು ಗೊತ್ತಾದ ಕೂಡಲೇ ಜೋರಾಗಿ ನಗಲು ಪ್ರಾರಂಭಿಸಿದರು. ಈ ಒಂದು ಪುಟ್ಟ ರಜೆಯನ್ನು ಇಷ್ಟು ದೊಡ್ಡ ಸುದ್ದಿ ಮಾಡುವ ವಾಹಿನಿಗಳಿಗೇನನ್ನಬೇಕು? ಆಕೆಗೆ ಈ ಬಗ್ಗೆ ಹೆಚ್ಚಿನ ಯೋಚನೆಯೇನೂ ಆಗಲಿಲ್ಲ. ಬದಲಿಗೆ ಈ ಸುದ್ದಿ ತಿಳಿಯದೆಯೇ ಮಂಕಾಗಿ ಕೂತಿರುವ ಭಾಸ್ಕರರಾಯರನ್ನು ಉತ್ಸಾಹಗೊಳಿಸುವುದು ಹೇಗೆಂಬ ವಿಚಾರ ಆಕೆಯನ್ನು ಕಾಡತೊಡಗಿತು.

ಉತ್ಸಾಹದಿಂದಲೇ ಕಣ್ಣಲ್ಲಿ ಕನಸು ತುಂಬಿಸಿಕೊಂಡು ಹೈದರಾಬಾದಿನಿಂದ ಹೊರಟಿದ್ದ ರಾಯರು ಇಲ್ಲಿಗೆ ಬಂದ ಒಂದು ದಿನದಲ್ಲಿ ಯಾಕೋ ಮಂಕಾಗಿದ್ದರು. ಮುಂಜಾನೆ ಎದ್ದಾಗ ಲವಲವಿಕೆಯಿಂದ ಇರುವ ರಾಯರಿಗೆ ದಿನ ಕಳೆಯುತ್ತಿದ್ದಂತೆ ಮಂಕು ಕವಿಯುತ್ತಾ ಹೋಗುತ್ತಿತ್ತು. ಅವರನ್ನು ಮುಂಜಾನೆ ಮಾತ್ರ ನೋಡಿದ್ದ ಪ್ರತಿಭಾರಿಗೆ ಇದು ಅವರ ಎಂದಿನ ಪ್ರವರ್ತನೆಯೋ ಅಥವಾ ಇಲ್ಲಿಗೆ ಬಂದಿರುವುದರಿಂದ ಆಗಿರುವ ಆತಂಕವೋ ತಿಳಿಯದಾಯಿತು.

ಮೊದಲ ದಿನವೇ, ರಾಯರು ಯಾವವಿವರಗಳನ್ನೂ ಯಾರಿಗೂ ನೀಡದೇ ಪ್ರಯಾಣಕ್ಕೆ ಕೈಹಾಕಿದ್ದಾರೆಂದು ತಿಳಿದ ಕೂಡಲೇ ಆಕೆ ಅವಾಕ್ಕಾಗಿದ್ದರು. ಹೀಗೆ ಮಾಡುವುದರಿಂದ ಮಕ್ಕಳಿಗೆ ಆತಂಕವಾಗುವುದಲ್ಲವೇ? ಸಾಲದ್ದಕ್ಕೆ ಕದ್ದು ಓಡಿಹೋಗುವಂಥಹಾ ಯಾತ್ರೆ ಇದು ಯಾಕೆ ಆಗಬೇಕು ಎನ್ನುವುದು ಆಕೆಗೆ ತಿಳಿಯಲಿಲ್ಲ. ಮನೆಯಲ್ಲಿ ಹೇಳಿ ಬಂದಿದ್ದರೆ ಯಾರು ತಾನೇ ಬೇಡವೆನ್ನುತ್ತಿದ್ದರು ಎನ್ನುವ ಆಶ್ಚರ್ಯ ಆಕೆಗೆ ಆಯಿತು. ಈ ವಯಸ್ಸಿನ ಘಟ್ಟದಲ್ಲೂ ಇದರಲ್ಲಿ ಹೆಚ್ಚಿನ ಅರ್ಥ ಹುಡುಕಲು ದುಷ್ಟ ಮನಸ್ಸುಗಳು ಬಿಟ್ಟರೆ ಇನ್ಯಾರಿಗೂ ಸಾಧ್ಯವಿರಲಿಲ್ಲ. ಇದರ ಬಗ್ಗೆ ಇಬ್ಬರೂ ಕೆಲ ಹೊತ್ತು ವಾದ ಮಾಡಿದರು. ಆ ನಂತರ, ಪ್ರತಿಭಾರ ಬಲವಂತಕ್ಕೇ ರಾಯರು ಏರ್‌ಪೋರ್ಟಿನಿಂದ ಮಗನಿಗೆ ಫೋನ್ ಮಾಡಿದ್ದರು. ತನ್ನ ಮೊಬೈಲ್ ನಂಬರು ಕೊಡಬೇಕೆಂದು ಆಕೆ ಎಷ್ಟು ಕೇಳಿಕೊಂಡರೂ ಆತ ಬಗ್ಗಲಿಲ್ಲ. ಎಲ್ಲವೂ ಸರಿ, ಆದರೆ ಒಮ್ಮೊಮ್ಮೆ ಈತ ವಿಚಿತ್ರ ಹಠವನ್ನು ತೋರಿಸುತ್ತಾನೆ ಅಂತ ಒಳಗೇ ಅಂದುಕೊಂಡರು. ಪ್ರಯಾಣದ ಪ್ರಾರಂಭದಲ್ಲೇ ಈ ಘಟನೆ ನಡೆದದ್ದು ಇಬ್ಬರ ನಡುವಿನ ಮಾಧುರ್ಯಕ್ಕೆ ಸ್ವಲ್ಪ ಕುತ್ತನ್ನುಂಟುಮಾಡಿತು.

ಆದರೆ ಮೊದಲ ದಿನ ರಾಯರು ಮೈಸೂರಿನಲ್ಲಿ ತೋರಿಸಿದ ಉತ್ಸಾಹವನ್ನು ಆಕೆಗೆ ಮರೆಯಲು ಸಾಧ್ಯವೇ ಆಗಿರಲಿಲ್ಲ. ಪುಟ್ಟ ಮಕ್ಕಳು ತಮ್ಮ ಹೊಸ ಆಟಿಕೆಗಳನ್ನು ಕಂಡವರಿಗೆಲ್ಲಾ ತೋರಿಸುವಂತೆ ಮೈಸೂರೆಂಬ ತಮ್ಮ ಸ್ವಂತ ಆಸ್ತಿಯನ್ನು ಎಲ್ಲರಿಗೂ ತೋರಿಸಬೇಕೆನ್ನುವ ಉತ್ಸಾಹವನ್ನು ರಾಯರು ತೋರಿಸಿದ್ದರು. ರಾಯರಿಗೇ ಈ ವಿಷಯವನ್ನು ಬಿಟ್ಟಿದ್ದರೆ ಅವರು ಮೈಸೂರಿನಿಂದ ಆಚೆಗೆ ಹೋಗುವ ಯೋಚನೆಯೇ ಮಾಡುತ್ತಿರಲಿಲ್ಲವೇನೋ. ಚಾಮುಂಡಿ ಬೆಟ್ಟ, ಅದೂ ಇದೂಂತ ಕಡೆಗೆ ಝೂ ಗಾರ್ಡನ್ನನ್ನೂ ತೋರಿಸುತ್ತೇನೆಂದಾಗ ಪ್ರತಿಭಾರು ಅವರ ಉತ್ಸಾಹಕ್ಕೆ ಕಡಿವಾಣ ಹಾಕಿ ಅಲ್ಲಿಂದ ಮುಂದುವರೆಯುವ ಮಾತಾಡಿದರು.

ಪ್ರತಿಭಾರಿಗೆ ಒಮ್ಮೊಮ್ಮೆ ರಾಯರಾಡುವ ಆಟಗಳು ಕಿರಿಕಿರಿಯುಂಟು ಮಾಡಿದರೂ ಪುಟ್ಟ ಮಗುವಿನಂತಹ ಅವರ ಅಮಾಯಕತನ, ಹಠ, ಮತ್ತು ಅಸಹನೆ ಕಂಡು ಅಕ್ಕರೆಯುಕ್ಕಿಬರುತ್ತಿತ್ತು. ಪಟ್ಟಾಭಿರಾಮನಿಗೂ ಈತನಿಗೂ ಇದ್ದ ಮೂಲ ಭಿನ್ನತೆ ಎಂದರೆ, ಈ ಪರಿಸ್ಥಿತಿಯಲ್ಲಿ ಪಟ್ಟಾಭಿರಾಮ ಹೇಗೆ ಪ್ರತಿಕ್ರಿಯಿಸಿಯಾನೆಂದು ಪ್ರತಿಭಾರು ಸರಳವಾಗಿ ಊಹಿಸಬಹುದಿತ್ತು. ಆದರೆ ರಾಯರದು ಅಷ್ಟು ಮುಕ್ತವಾದ ವರ್ತನೆಯಲ್ಲವಾದ್ದರಿಂದ ಆಕೆಗೆ ಒಂದಿಲ್ಲೊಂದು ಆಶ್ಚರ್ಯ ಕಾದಿರುತ್ತಿತ್ತು.

ಉದಾಹರಣೆಗೆ ರೆಸಾರ್ಟಿಗೆ ತಲುಪಿದ ಮೊದಲ ದಿನವೇ ಮಧ್ಯಾಹ್ನದ ಊಟಕ್ಕೆ ಕುಳಿತಾಗ ಪ್ರತಿಭಾರು "ಒಂದು ಬಿಯರ್ ಆರ್ಡರ್ ಮಾಡೋಣವೇ?" ಎಂದು ಕೇಳಿದ್ದರು. ಅದಕ್ಕೆ ರಾಯರು ಮುಖ ಗಂಟಿಕ್ಕಿ "ಇಲ್ಲ ನಾನು ಕುಡಿಯೋದಿಲ್ಲ" ಅಂದರು. "ಇದರಿಂದೇನೂ ಅಗೋದಿಲ್ಲ.. ಟ್ರೈ ಮಾಡಿ" ಎಂದು ಹೇಳಿದ್ದಕ್ಕೆ ಕಡಾಖಂಡಿತವಾಗಿ - ತುಸು ಸಿಟ್ಟಿನಿಂದಲೇ - "ನನಗೆ ಬೇಡವೆಂದರೆ ಕೇಳಿಸಿಕೊಳ್ಳಬೇಕು.. ಬೇಕಿದ್ದರೆ ನೀವು ಕುಡಿಯಿರಿ" ಅಂದು ಬಿಟ್ಟರು. ಪ್ರತಿಭಾರು ಯಾವ ಲಜ್ಜೆಯೂ ಇಲ್ಲದೇ ಬಿಯರನ್ನು ಆರ್ಡರ್ ಮಾಡಿದರು. ಮಾಣಿ ಬಿಯರಿನ ಬಾಟಲ್ ತಂದು ರಾಯರ ಮುಂದೆ ಪ್ರತಿಷ್ಠಾಪಿಸಿದಾಗ ಅವನ ಮೇಲೂ ಕೂಗಾಡಿದರು.. ಕಡೆಗೆ ಅವರಿಗಾಗಿ ಹೇಳಿದ್ದ ಟೊಮ್ಯಾಟೊ ಜ್ಯೂಸಿನ ಗ್ಲಾಸಿನಿಂದ ಮೇಜಿನ ಮೇಲೆ ಒಲಿಂಪಿಕ್ ಚಿನ್ಹೆ ಮಾಡುತ್ತಾ ಕೂತುಬಿಟ್ಟರು. ಪ್ರತಿಭಾ ಬಿಯರಿನ ವಿಷಯವಾಗಿ ಮತ್ತಷ್ಟು ಮಾತನಾಡಲು ಪ್ರಯತ್ನಿಸಿದರು. ಅವರಿಗೆ ಯಾಕೆ ಈ ಬಗ್ಗೆ ಅಷ್ಟು ಅಲರ್ಜಿ ಎನ್ನುವ ಕುತೂಹಲ ಆಕೆಗಿತ್ತು. ಆದರೆ ಭಾಸ್ಕರರಾಯರು ಆಕೆ ಕುಡಿಯುತ್ತಿದ್ದ ಬಿಯರಿನ ಬಾಟಲಿ ನೋಡುತ್ತಾ ಆಕೆಯ ಧೈರ್ಯಕ್ಕೆ ಆಕೆಯನ್ನು ಮೆಚ್ಚಿಕೊಳ್ಳುತ್ತಿದ್ದಂತೆ ಕೂತಿದ್ದರು...

ಎರಡನೆಯ ಗ್ಲಾಸನ್ನು ಬಾಯಬಳಿ ತರುವಷ್ಟರಲ್ಲಿ ಭಾಸ್ಕರರಾಯರು ಕೇಳಿದ ಪ್ರಶ್ನೆಯಿಂದ ಪ್ರತಿಭಾರಿಗೆ ತುಸು ಆಘಾತವೇ ಆಯಿತು. "ಅಲ್ಲಿ ನಿಮ್ಮ ಮಗ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರೆ ಇಲ್ಲಿ ನೀವು ಬಿಯರು ಕುಡಿಯುವುದು ಎಷ್ಟು ಸಮಂಜಸ?" ಪ್ರತಿಭಾರು "ಅದಕ್ಕೂ ಇದಕ್ಕೂ ಏನು ಸಂಬಂಧ? ನನ್ನ ಕಿಡ್ನಿ ಕೆಲಸ ಮಾಡುತ್ತಿದೆ, ನಾನು ನೀರು ಕುಡಿಯುತ್ತೇನೆ, ಸಾಮಾನ್ಯವಾದ ಆಹಾರ ಸೇವಿಸುತ್ತೇನೆ, ಅವನು ಆಸ್ಪತ್ರೆಯಲ್ಲಿದ್ದಾನೆಂದು ನಾನು ಪತ್ಯ ಮಾಡಬೇಕನ್ನುವ ಬಾದರಾಯಣ ತರ್ಕ ನನಗರ್ಥವಾಗುವುದಿಲ್ಲ" ಅಂದರೂ, ರಾಯರು ಮೊದಲ ಬಾರಿಗೆ ಈ ಯಾತ್ರೆಯಲ್ಲಿ ಈ ರೆಸಾರ್ಟಿನಾಚೆಯ ವಿಚಾರವನ್ನು ಎಳೆದು ತಂದದ್ದನ್ನು ಆಕೆ ಗಮನಿಸಿದರು. ಈ ಪ್ರಶ್ನೆ ಆಕೆಯಂತರಂಗಕ್ಕೆ ಗಾಯವುಂಟುಮಾಡಿತು. ಆ ದಿನದ ನಂತರ ಪ್ರತಿಭಾ ಬಿಯರಿನ ಮಾತೆತ್ತಲಿಲ್ಲ.

ಪ್ರತಿದಿನ ಬೆಳಿಗ್ಗೆ ಎದ್ದು ಇಬ್ಬರೂ ಒಂದು ವಾಕ್ ಹೋಗುತ್ತಿದ್ದರು. ಇದು ಹೈದರಾಬಾದಿನ ನೆನಪು ತರುತ್ತಿತ್ತು. ಆದರೆ ಲಾಫ್ಟರ್ ಕ್ಲಬ್ ಆಜುಬಾಜಿನಲ್ಲೆಲ್ಲೂ ಇರಲಿಲ್ಲ. ತಮ್ಮ ತಮ್ಮ ತುಮುಲಗಳನ್ನು ತೋಡಿಕೊಳ್ಳಲು, ತಮ್ಮ ಆತಂಕಗಳ ಬಗ್ಗೆ ಮಾತಾಡಿಕೊಳ್ಳಲು ಅದು ಉತ್ತಮ ಸಮಯವಾಗಿತ್ತು. ರಾಯರು ಮೈಸೂರಿನಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಹೇಳಿದರು. ತಮಗಿದ್ದ ಕ್ರೈಸ್ತ ಮಿತ್ರ ಹ್ಯಾರಿಯ ಕಥೆ ಅವನ ಜೊತೆ ಸಿನೇಮಾಕ್ಕೆ ಹೋಗುತ್ತಿದ್ದ ಕತೆಯನ್ನು ಹಂಚಿಕೊಂಡರು. ಪ್ರತಿಭಾರೂ ತಮ್ಮ ಬಾಲ್ಯದ ಬಗ್ಗೆ ಬೆಚ್ಚಗೆ ಮಾತನಾಡುವರು. ಹಾಗೆ ನೋಡಿದರೆ ಕಾಲೇಜಿನ ದಿನಗಳಲ್ಲಿ ಪ್ರತಿಭಾ ರಾಜೇಶ್ವರ ಚೌಧುರಿ ಅನ್ನುವವನನ್ನು ಪ್ರೀತಿಸಿದ್ದರಂತೆ. ಆದರೆ ಅವನು ಬೇರೆ ಜಾತಿಯವನು ಎಂದು ಮನೆಯವರು ಒಪ್ಪಿರಲಿಲ್ಲ. ಪ್ರತಿಭಾ ಆತನ ಜೊತೆ ಓಡಿಹೋಗಲು ತಯಾರಿದ್ದರೂ ಆತ ಹೆದರಿ ಅವರ ಅಪ್ಪ ಸೂಚಿಸಿದ ಚೌಧುರಿ ಹುಡುಗಿಯನ್ನ ಮದುವೆಯಾಗಿದ್ದ. ಆಗ ಪ್ರತಿಭಾರ ಅಪ್ಪ, ಮತ್ತೆ ಈಕೆ ಎಲ್ಲಾದರೂ ಈ ರೀತಿಯ ಸ್ಕ್ಯಾಂಡಲ್ ಮಾಡಿಕೊಂಡಾಳೋ ಎಂದು ಹೆದರಿ ಪಟ್ಟಾಭಿರಾಮನನ್ನು ಹುಡುಕಿದ್ದರು. ಹೀಗೆ ಅವರ ಮದುವೆ ತುರ್ತಿನಲ್ಲಾಯಿತಂತೆ. ಆದರೆ ಪ್ರತಿಭಾ ಆ ಮದುವೆಯನ್ನು ಬೇಗನೇ ಒಪ್ಪಿ ಪಟ್ಟಾಭಿರಾಮನ ಜೊತೆ ಚೆನ್ನಾಗಿಯೇ ಹೊಂದಿಕೊಂಡು ಜೀವಿಸಿಬಿಟ್ಟರು. ಪ್ರತಿಭಾರಿಗೆ ಮನೆಯಲ್ಲಿ ಕಿರಿಕಿರಿ ತರುತ್ತಿದ್ದ ವಿಷಯ ಸೋಮ್‌ನ ಹೆಂಡತಿಗೆ ಸಂಬಂಧಿಸಿದ್ದು. ಪ್ರತಿಭಾರನುಸಾರ ಆಕೆಯ ಹಿನ್ನೆಲೆ ಅಷ್ಟು ಎಲಿಟಿಸ್ಟ್ ಅಲ್ಲ. ಆಕೆ ಕರ್ನೂಲಿನವಳು. ಹೀಗಾಗಿ ಆಕೆಗೆ ಭಯ, ಭಕ್ತಿ, ಬಾಬಾ, ಭ್ರಮೆ, ಹೀಗೆ ಬಕಾರಗಳ ಬಾಲಿಶತ್ವ ಇತ್ತು. ಇದು ಅಪ್‌ಬ್ರಿಂಗಿಂಗ್‍ನ ಫಲ ಎಂದು ಆಕೆ ಹೇಳಿದ್ದರು.

ಒಂದು ಕ್ಷಣದ ಮಟ್ಟಿಗೆ ಪ್ರತಿಭಾರಿಗೆ ಭಾಸ್ಕರರಾಯರ ಬಗ್ಗೆಯೂ ಹಾಗೇ ಅನ್ನಿಸಿತು. ಅವರಿಗೆ ತಮ್ಮ ಸೊಸೆಗಿದ್ದ ಮೂಢ ನಂಬಿಕೆಗಳಿಲ್ಲ ಎನ್ನುವುದು ಬಿಟ್ಟರೆ ಮಿಕ್ಕಂತೆ ಆತನ ಎಲ್ಲ ಕೆಲಸಗಳೂ ಆ ಕೆಳ ಮಧ್ಯಮವರ್ಗದ ಇನ್‍ಸೆಕ್ಯೂರಿಟಿಗಳಿಂದ ಕೂಡಿದ್ದವು. ಆದರೆ ಆತ ಒಂದು ಥರದಲ್ಲಿ ವಿಚಿತ್ರ ಒಳ್ಳೆಯತನವನ್ನು ತೋರಿಸುತ್ತಿದ್ದರು. ಅವರಲ್ಲಿಲ್ಲದ ಮತಲಬಿತನವೇ ತಮ್ಮನ್ನು ಆತನತ್ತ ಆಕರ್ಷಿಸಿರಬಹುದು. ಆದರೂ ಹೆಂಗಸರು ಬಿಯರ್ ಕುಡಿದರೆ ಒಳಗಿನಿಂದಳೇ ಕಿರಿಕಿರಿಗೊಳ್ಳುವ ಆ ಷುವನಿಸ್ಟಿಕ್ ಛಾಯೆ ಆಕೆಗೆ ಹಿಡಿಸಲಿಲ್ಲ.

ಈಗ ಸೋಮ್ ತನಗೆ ತಿಳಿಸಿರುವ ಈ ಸುದ್ದಿಯನ್ನ ಭಾಸ್ಕರರಾಯರಿಗೆ ಹೇಳಬೇಕು. ಆದರೆ ಅವರಿಗೆ ಆಘಾತವಾಗದಂತೆ ಹೇಳುವುದು ಹೇಗೆ? ಆ ಯೋಚನೆಯಲ್ಲಿಯೇ ಪ್ರತಿಭಾರು ಸ್ವಲ್ಪ ಸಮಯವನ್ನು ಕಳೆದರು. ಆದರೂ ತಾವು ಇಲ್ಲಿಂದ ಹೊರಡುವ ಮುನ್ನ ಈ ವಿಷಯ ಹೇಳಲೇಬೇಕು ಅನ್ನಿಸಿ ಭಾಸ್ಕರರಾಯರನ್ನು ಕರೆದರು.


೧೩

ರಾಯರಿಗೆ ಇದು ಹೊಸ ಅನುಭವ. ಹಾಗೆ ನೋಡಿದರೆ ಅವರು ವಿಮಾನಯಾನ ಮಾಡುತ್ತಿರುವುದು ಇದೇ ಮೊದಲು. ಕಳೆದ ಮೂರು ವರ್ಷಗಳಿಂದಲೂ ಶ್ರಾವಣ ಈಗ ವಿಮಾನದ ದರಗಳು ಕಡಿಮೆಯಾಗಿದೆ. ಈ ಬಾರಿ ನೀನು ವಿಮಾನದಲ್ಲೇ ಬೆಂಗಳೂರಿಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಮೈಸೂರಿಗೆ ಹೋಗಬಹುದು ಎಂದು ಹೇಳಿದರೂ ಆ ಅವಕಾಶ ಅವರಿಗೆ ಬಂದೇ ಇರಲಿಲ್ಲ. ಅಕಬರಬಾಗಿನಲ್ಲಿದ್ದಷ್ಟು ದಿನವೂ ತಮಗೆ ಹೈದರಾಬಾದು ಬಿಟ್ಟು ಮೈಸೂರಿಗೆ ಹೋಗಬೇಕು ಅನ್ನಿಸುತ್ತಿದ್ದರೂ, ಈಗ ಪಂಜಾಗುಟ್ಟಾಕ್ಕೆ ಬಂದ ಮೇಲೆ ಒಂದು ವಿಚಿತ್ರ ಮನಶ್ಶಾಂತಿ ಬಂದು ರಾಯರು ಹೈದರಾಬಾದಿನ ವಾತಾವರಣವನ್ನು ಚಪ್ಪರಿಸ ತೊಡಗಿದ್ದರು. ಈಗ ಈ ಪ್ರತಿಭಾರ ವಿಚಿತ್ರ ಯೋಜನೆಯಿಂದಾಗಿ ತಮ್ಮ ಊರಿಗೇ ತಾವು ಪ್ರವಾಸಿಯಾಗಿ ಹೋಗಬೇಕಾಗಿ ಬಂದ ವಿಪರ್ಯಾಸವನ್ನು ರಾಯರು ಚಪ್ಪರಿಸಿದರು.

ಇದನ್ನೆಲ್ಲಾ ಕದ್ದು ಮಾಡುತ್ತಿರುವುದಕ್ಕೆ ಕಾರಣವೇನಿರಬಹುದು ಎಂದು ರಾಯರು ಯೋಚಿಸಿದರು. ಇದಕ್ಕೆ ಒಂದು ಸ್ಪಷ್ಟ ಕಾರಣ ರಾಯರಿಗೆ ಹೊಳೆಯಲಿಲ್ಲ. ಎಲ್ಲೋ ಒಂದು ಕಡೆ ತಾವು ಮಾಡುತ್ತಿರುವುದು ತಾವೇ ನಿರ್ಮಿಸಿಕೊಂಡಿರುವ ಸಂಸ್ಕೃತಿಯ ಸೀಮೋಲ್ಲಂಘನ ಅನ್ನಿಸಿತು. ಆದರೂ ಆಗಾಗ ಇಂಥ ಸೀಮೋಲ್ಲಂಘನವನ್ನು ಮಾಡದಿದ್ದರೆ ಜೀವನ ಒಂದು ಏಕತಾನತೆಯಾಗುತ್ತದೆ. ಈ ಏಕತಾನತೆಯನ್ನು ಅವರು ಮೂವತ್ತು ವರ್ಷಗಳಿಂದ - ಅಥವಾ ಅದಕ್ಕೂ ಹೆಚ್ಚಿನ ಕಾಲದಿಂದ - ಜೀವಿಸುತ್ತಿದ್ದಾರೆ. ಹೀಗಾಗಿ ಶೇಷ ಜೀವನಕ್ಕೆ ಮೆಲುಕು ಹಾಕಲು ಒಂದು ಒಳ್ಳೆಯ ಅನುಭವವನ್ನು ಸಂಪಾದಿಸಿ ಕಾಯ್ದಿಟ್ಟುಕೊಳ್ಳುವ ಆಸಕ್ತಿ ರಾಯರಿಗೆ ಬಂದಿತ್ತು.

ಜೀವನದುದ್ದಕ್ಕೂ ಸಂಪಾದಿಸಿ ಉಳಿಸಿಡುವ ಬೆವರಿನ ಸಂಪಾದನೆಯೊಂದು ಕಡೆ, ಅನಿರೀಕ್ಷಿತವಾಗಿ ಒದಗಿಬಂದ ಲಾಟರಿಯ ಸಂಪತ್ತು ಒಂದು ಕಡೆ. ಹೀಗಾಗಿ ಈ ಕಾಲವನ್ನು ಲಾಟರಿಯಂತೆಯೇ ಅಸ್ವಾದಿಸಬೇಕೆಂಬ, ಅದರಲ್ಲಿರಬಹುದಾದ ಅನ್ಯಾಯದ ಅಂಶವನ್ನೂ ಅರಗಿಸಿಕೊಳ್ಳಬೇಕೆಂಬ ವಿಚಾರ ಅವರನ್ನು ಈ ದಾರಿಗೆ ಒಯ್ದಿರಬಹುದು.

ಇದೂ ಸಾಲದೆಂಬಂತೆ, ತಾನು ನಿಜಕ್ಕೂ ಈ ಯೋಜನೆಯ ಬಗ್ಗೆ ಹೇಳಿದರೆ, ತನ್ನ ಯಾನವನ್ನು ಇನ್ನೂ ಸುಖಮಯ ಮಾಡಬೇಕೆಂಬ ಉದ್ದೇಶದಿಂದ ಶ್ರಾವಣ ಏನೇನೋ ಮಾಡಿಯಾನು. ಅವನು ಮಾಡಬಹುದಾದ ಏರ್ಪಾಟುಗಳಿಂದ "ಸೀಮೋಲ್ಲಂಘನ"ದ ಮಜವೇ ಹೋಗಿಬಿಡುತ್ತದೆ! ಹಾಗೂ ಈ ಎಲ್ಲವುಗಳಿಗಿಂತ ಮುಖ್ಯ ಕಾರಣವೆಂದರೆ ಈ ಯಾನದಲ್ಲಿ ಮೈಸೂರು - ಅಂದರೆ ರಾಯರ ಸ್ವಂತ ಊರು - ಒಂದು ಕೇಂದ್ರ ಬಿಂದುವಾಗಿತ್ತು. ಆದರೆ ತಮ್ಮ ಊರಿಗೆ ಒಳಗಿನವನಾಗಿ ಅಲ್ಲದೇ ಹೊರಗಿನವನಾಗಿ ಪ್ರವೇಶಿಸುವ ಸುಖವನ್ನು ಅವರು ಎದುರು ನೋಡುತ್ತಿದ್ದರು. ಆ ತುದಿಯ ರೈಲು ನಿಲ್ದಾಣದಲ್ಲಿ ಮಹೇಶ ಅವರನ್ನು ಭೇಟಿಮಾಡಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವುದು ಸಾಧ್ಯವಾದದ್ದೇ ಹೀಗೆ ಗುಪ್ತ ಕಾರ್ಯಾಚರಣೆ ಮಾಡುವುದರ ಮೂಲಕ.

ಹೀಗಾಗಿಯೇ ಮೊದಲ ದಿನ ಬೆಂಗಳೂರಿನಲ್ಲಿ ಕಾರು ಮಾಡಿ ಮೈಸೂರಿನತ್ತ ಹೊರಟಾಗ ರಾಯರು ಖಂಡಿತವಾಗಿ ಪ್ರತಿಭಾರಿಗೆ ಹೇಳಿದ್ದರು - ಮೈಸೂರು ದಾಟಿ ಹೋಗುತ್ತಿದ್ದೇವೆ. ಆದರೆ ಮೈಸೂರು ನಗರದಲ್ಲಿ ಎರಡು ಘಂಟೆಕಾಲದ ಸಮಯವನ್ನು ಕಾದಿರಿಸಬೇಕು. "ನಾನು ನಿಮಗೆ ನನ್ನ ಸ್ಕೂಲು ತೋರಿಸುತ್ತೇನೆ. ಚಿಕ್ಕ ಮಾರ್ಕೆಟ್ ಬಳಿ ರಾಜು ಹೋಟೇಲಿನಲ್ಲಿ ಸೆಟ್ ದೋಸೆ ಸಿಗುತ್ತದೆ, ಅಲ್ಲಿಯೇ ನಾಷ್ಟಾ ಮಾಡಿ ಹೋಗೋಣ, ಅಲ್ಲಿನ ಮಾಣಿ ಒಳ್ಳೆಯ ಉರ್ದು ಷಾಯರಿಗಳನ್ನು ಹೇಳುತ್ತಾನೆ, ನಿಮಗೆ ಇಷ್ಟವಾಗುತ್ತದೆ. ಜೊತೆಗೆ ಚಾಮುಂಡಿಬೆಟ್ಟವನ್ನು ನಡೆದು ಹತ್ತಬೇಕೆಂತಲೂ ಆಸಕ್ತಿ ಆದರೆ ಬಹುಶಃ ಈಗ ಕೈಲಾಗುವುದಿಲ್ಲವೇನೋ... ನಾನು ಚಿಕ್ಕವನಿದ್ದಾಗ ಪ್ರತೀವಾರವೂ ಎಲೆಬಳ್ಳಿತೋಟದ ಮೂಲಕ ಹೋಗೆ ಬೆಟ್ಟ ಹತ್ತುತ್ತಿದ್ದೆ...."

ರಾಯರು ತಮ್ಮ ಹಾರ್ಡ್ವಿಕ್ ಸ್ಕೂಲು, ಪಕ್ಕದ ಡಬಲ್ ಟ್ಯಾಂಕ್ ರಸ್ತೆ, ಆರ್.ಕೆ ನಾರಾಯಣರ ಮನೆ, ಹೀಗೆ ಏನೆಲ್ಲಾ ತೋರಿಸಿದರು. ರಾಜು ಹೋಟೇಲು ಮುಚ್ಚಿದೆ ಅನ್ನುವುದನ್ನು ತಿಳಿದಾಗ ರಾಯರ ಜಗತ್ತೇ ಮುಳುಗಿದಂತಾಯಿತು. ಆದರೆ ಅದರಿಂದ ಬೇಕನೇ ಚೇತರಿಸಿಕೊಂಡರು. ಹಾಗೆ ನೋಡಿದರೆ ಬಲ್ಲಾಳ್ ಹೋಟೆಲೂ, ಗಣೇಶ ಚಿತ್ರಮಂದಿರವೂ ಮುಚ್ಚಿಹೋಗಿತ್ತು.. ರಾಯರ ಬಾಲ್ಯವೂ ಯೌವ್ವನವೂ ಮಧ್ಯವಯಸ್ಸೂ ದಾಟಿಹೋಗಿದೆ ಎನ್ನುವುದನ್ನು ಮೈಸೂರು ನಿರೂಪಿಸಿಬಿಟ್ಟಿತ್ತು. ಒಂದು ಕ್ಷಣದ ಮಟ್ಟಿಗೆ ರಾಯರಿಗೆ ತಮ್ಮ ಅಡಿಪಾಯ ಬುಡಮೇಲಾದಂತೆ ಅನ್ನಿಸಿದರೂ, ಅದನ್ನು ಪ್ರತಿಭಾರ ಮುಂದೆ ತೋರಿಸಿಕೊಳ್ಳುವ ಇಷ್ಟವಿರಲಿಲ್ಲ. ಹೀಗಾಗಿಯೇ ಒಂದೆರಡು ಘಂಟೆಗಳ ಕಾಲ ತಮ್ಮ ನಾಸ್ಟಾಲ್ಜಿಯಾವನ್ನು ಜೀವಿಸುತ್ತಿದ್ದಂತೆ ಅವರು ಮುಂದಕ್ಕೆ ಹೊರಡೋಣ ಅನ್ನುವ ಸೂಚನೆಯನ್ನು ನೀಡಿದರು. ಹಾಗೆ ನೋಡಿದರೆ ಈ ನೆನಪುಗಳು ತಮ್ಮ ಬಾಲ್ಯದ್ದು. ಆ ಬಾಲ್ಯ ಯೌವನ ಮಧ್ಯವಯಸ್ಸನ್ನು ಆಕೆಯೂ ಯಾಕೆ ಜೀವಿಸಬೇಕು ಅನ್ನುವ ಪ್ರಶ್ನೆಯನ್ನು ರಾಯರು ತಮಗೇ ಹಾಕಿಕೊಂಡ ಮರುಕ್ಷಣ ಆಕೆಗೆ ಎಷ್ಟು ಬೋರಾಗಿರಬಹುದು ಎಂದು ಊಹಿಸಿ, ತಕ್ಷಣವೇ ಅಲ್ಲಿಂದ ಮುಂದಕ್ಕೆ ತಮ್ಮ ಗಮ್ಯದತ್ತ ಹೊರಡುವ ಸೂಚನೆಯನ್ನು ರಾಯರು ನೀಡಿದರು.

ಒಂದು ವಿಧದಲ್ಲಿ ರಿಸಾರ್ಟಿಗೆ ಹೋಗುವವರೆಗೂ ರಾಯರು ಉಲ್ಲಾಸದಿಂದಲೇ ಇದ್ದರು. ಆದರೆ ರಿಸಾರ್ಟಿಗೆ ಹೋದ ಕ್ಷಣದಿಂದ ಅವರಿಗೆ ಯಾಕೋ ಯಾವುದೂ ಸರಿ ಹೊಂದಿದಂತೆ ಕಾಣಲಿಲ್ಲ. ಒಂದು ರೀತಿಯಲ್ಲಿ ರಾಯರನ್ನು ಈ ಯಾನಕ್ಕೆ ತಂದ ವಿಚಾರಧಾರೆ ಭಿನ್ನವಾಗಿತ್ತು. ಆದರೆ ಆ ಭಿನ್ನತೆಯೇ ಅವರಿಗೆ ಒಂದು ಬಂಧನವಾಗತೊಡಗಿತು.

ಅವರಿಗೆ ಈ ಯಾನ ಬಂಧನದಿಂದ ಬಿಡುಗಡೆಯ ಹಾಗೆ ಭಾಸವಾಗಿತ್ತು. ಹೀಗಾಗಿಯೇ ಅವರು ಇಂಥ ಯಾನಕ್ಕಿರಬಹುದಾದ ಎಲ್ಲ ನಿಯಮಗಳನ್ನೂ ಮುರಿದು ಅದರಿಂದ ಮುಕ್ತಿ ಪಡೆವ, ಯಾವ ಬಂಧನವೂ ಇಲ್ಲದ ಮುಕ್ತ ಬದುಕನ್ನು ಒಂದು ವಾರಕಾಲ ಜೀವಿಸಬೇಕೆಂದು ಬಯಸಿದ್ದರು. ಹೀಗಾಗಿ ಅವರಿಗೆ ಹೈದರಾಬಾದಾಗಲೀ, ಮಗನಾಗಲೀ, ಮನೆಯ ನೆನೆಪಾಗಲೀ ಯಾವ ಭೂತವೂ ಬೇಕಿದ್ದಿರಲಿಲ್ಲ. ಜೊತೆಗೆ ವಾಪಸ್ಸು ಹೋದಾಗ ಏನಾಗಬಹುದೆಂಬ ಭವಿಷ್ಯದ ಆತಂಕವೂ ಬೇಕಿರಲಿಲ್ಲ. ಈ ಕ್ಷಣವನ್ನು ಅವರು ಆಸ್ವಾದಿಸಿ, ಈ ನೆನಪನ್ನು ಶೇಖರಿಸಿ ಮನ ತುಂಬಿ ಹೊರಡಬೇಕೆಂದಿದ್ದರು. ರಾಯರ ಮನಸ್ಸಿನಲ್ಲಿ ಈ ಅನುಭವ ನ ಭೂತೋ - ನ ಭವಿಷ್ಯತಿ.. ಆದ್ದರಿಂದ ಆಟಿಕೆಯಂಗಡಿಯಲ್ಲಿನ ಮಗುವಿನಂತೆ ತಮ್ಮ ಅನುಭವವನ್ನು ಸಂಪೂರ್ಣವಾಗಿ ಆಸ್ವಾದಿಸುವ ಉದ್ದೇಶವನ್ನು ಹೊತ್ತಿದ್ದರು. ಅದಕ್ಕೇ ಪ್ರತಿಭಾ ಮನೆಯ ಬಗ್ಗೆ ನೆನಪು ಮಾಡಿದಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಿದ್ದರು.

ಅದೇ ಸಮಯಕ್ಕೆ ಎಲ್ಲ ನೆನಪುಗಳನ್ನೂ ಮೀರಿದ ಈ ಉದ್ದೇಶರಹಿತ ರೆಸಾರ್ಟು ಅವರಿಗೆ ಉಸಿರುಗಟ್ಟಿಸಿತ್ತು. ಬೆಳಿಗ್ಗೆ ಏಳುವುದು, ಕಾಫಿ ತಿಂಡಿ ಆದನಂತರ ನಿಧಾನವಾಗಿ ಸಫಾರಿಗೆ ಹೋಗುವುದು, ಬೋಟಿಂಗು.. ಎಲ್ಲ ಪ್ರಕೃತಿಯ ಮಡಿಲಿಗೆ ಅವರನ್ನು ಒಯ್ದರೂ ಕೆಲ ಘಂಟೆಗಳ ನಂತರ ರಾಯರಿಗೆ ಈ ರಜೆಯ ಮೇಲೆ ಏಕೆ ಬಂದೆ, ಇದರಿಂದ ತಾನು ಸಾಧಿಸಿದ್ದು ಏನು ಅನ್ನುವ ಪ್ರಶ್ನೆಗಳು ಉದ್ಭವವಾಗಿಬಿಡುತ್ತಿದ್ದವು. ಹೀಗಾಗಿ ಆ ಎಲ್ಲ ಚಡಪಡಿಕೆಗಳೂ ಊಟದ ಸಮಯಕ್ಕೆ ಪರಾಕಾಷ್ಠೆಯನ್ನು ತಲುಪುತ್ತಿತ್ತು. ಪ್ರತಿದಿನ ಊಟದ ಸಮಯ ರಾಯರ ಮತ್ತು ಪ್ರತಿಭಾರ ಜಗಳದ ಸಮಯ ಎಂದು ಹೇಳಲೂಬಹುದು. ತಮ್ಮ ಚಡಪಡಿಕೆಯನ್ನು ಆಕೆಯ ಊಟದ ಆಯ್ಕೆಯ ಬಗ್ಗೆ ಕೊಂಕು ನುಡಿಯುವುದರ ಮೂಲಕ ಆತ ತೀರಿಸಿಕೊಳ್ಳುತ್ತಿದ್ದರು. ಮೊದಲ ದಿನ ಆಕೆ ಬಿಯರು ಕುಡಿಯುತ್ತೀರಾ ಎಂದು ಕೇಳಿದಾಗ ರಾಯರು ಆಡಿದ ಕೊಂಕು ನುಡಿಗೆ ಅವರು ತಮ್ಮನ್ನು ತಾವೇ ಕ್ಷಮಿಸಿಕೊಳ್ಳಲು ಆಗಿರಲಿಲ್ಲ. ದುರಾದೃಷ್ಟವೆಂಬಂತೆ ಡಯಾಲಿಸಿಸ್ ಮೇಲಿರುವ ಆಕೆಯ ಮಗನ ಪ್ರಸ್ತಾಪ ತಂದು ಊಟದ ಸಮಯವನ್ನು ಹಾಳುಮಾಡಿಕೊಂಡಿದ್ದರು. ಒಂದು ರೀತಿಯಲ್ಲಿ ಸೀಮೋಲ್ಲಂಘನ ಮಾಡಬೇಕಿದ್ದರೆ ಆವತ್ತು ಒಂದು ಗ್ಲಾಸು ಬಿಯರು ಕುಡಿದು ಸೀಮೋಲ್ಲಂಘನ ಮಾಡಬೇಕಿತ್ತು. ಆದರೆ ಅವರ ಏಳು ದಶಕಗಳಿಗೂ ಮಿಂಚಿದ ಜೀವನ ಶೈಲಿಯ ಹಿಂಭಾರ ಅವರನ್ನು ಆ ಸೀಮೊಲ್ಲಂಘನದಿಂದ ತಡೆ ಹಿಡಿಯಿತು. ರಾಯರು ಎಷ್ಟೇ ಮರೆಯಬೇಕೆನ್ನಿಸಿದರೂ ತಮ್ಮ ಮೂಲವನ್ನು ಮರೆಯಲು ಸಾಧ್ಯವಾಗಲಿಲ್ಲ. ಆ ನೆನಪೇ ಅವರಿಗೆ ಶೂಲವಾಗತೊಡಗಿತು. ಪ್ರತಿಭಾ ಉದಾರ ಮನಸ್ಸಿನವರಿರಬೇಕು. ಆದ್ದರಿಂದಲೆ ತನ್ನ ರಂಪಾಟವನ್ನೆಲ್ಲ ಸಹಿಸಿ ನಗುತ್ತ ಇರುತ್ತಾರೆ. ಇನ್ನೂ ಬೇಸರವಾದರೆ "ನಾನು ಫೋನ್ ಮಾಡಬೇಕು ಇಲ್ಲಿ ಸಿಗ್ನಲ್ ಇಲ್ಲ" ಎಂದು ಹೇಳಿ ಎಲ್ಲಿಗಾದರೂ ಮುಂದುವರೆದುಬಿಡುತ್ತಾರೆ.

ಮೂರನೆಯ ದಿನ ರಾಯರು ಪ್ರತಿಭಾ ಚಿಕನ್ ತಿನ್ನುವ ಪರಿಯನ್ನು ಕೆಣಕಿದ್ದರು. ಯಾಕೋ ನಾಜೂಕಾಗಿದ್ದಾರೆನ್ನಿಸಿದ್ದ ಪ್ರತಿಭಾ ಚಿಕನ್ ತಿನ್ನುವ ದೌರ್ಜನ್ಯಕಾರಿ ಕೆಲಸವನ್ನು ಮಾಡುತ್ತಿರುವುದು ರಾಯರಿಗೆ ಹಿಡಿಸಲಿಲ್ಲ. ಕಡೆಗೆ ಆತ - "ಏನಾದರೂ ಮಾಡಿ ಪರವಾಗಿಲ್ಲ.. ಬಿಯರೂ ಕುಡಿಯಿರಿ. ಆದರೆ ನನ್ನೆದುರು ಚಿಕನ್ ಮಾತ್ರ ತಿನ್ನಬೇಡಿ.. ಮೂಳೆಯನ್ನು ಚಪ್ಪರಿಸುವುದು ನನಗೆ ತಡೆಯಲು ಸಾಧ್ಯವಿಲ್ಲ " ಎಂದು ಕೇಳಿಕೊಂಡಿದ್ದರು. ಪ್ರತಿಭಾರಿಗೆ ಏನನ್ನಿಸಿತೋ ಬೇಕೆಂದೇ ದಿನವೂ ಮೀನು ಮಾಂಸಗಳನ್ನು ಆರ್ಡರ್‌ ಮಾಡ ತೊಡಗಿದ್ದರು. ಆದರೂ ಪ್ರತಿದಿನದ "ಕ್ವಾಲಿಟಿ ಟೈಮ್" ಆದ ಈ ಊಟದ ಸಮಯವನ್ನು ರಾಯರು ಹೀಗೆ ಪೋಲು ಮಾಡುತ್ತಿರುವುದು ತಮಗೇ ಬೇಸರವನ್ನುಂಟುಮಾಡಿತ್ತು. ಆದರೆ ಆ ಸಮಯಕ್ಕೆ ಯಾವ ಭೂತ ಅವರನ್ನು ಹೊಗುತ್ತಿತ್ತೋ ತಿಳಿಯದು. ಏನಾದರೊಂದು ಕೊಂಕನ್ನು ನುಡಿದು ತಮಗೂ ಬೇಸರ ಮಾಡಿಕೊಂಡು ಆಕೆಗೂ ಬೇಸರ ಮಾಡುತ್ತಿದ್ದರು. ಹಾಗೆ ನೋಡಿದರೆ ನಾಷ್ಟಾಗೆ ಹೈದರಾಬಾದಿನಲ್ಲಿ ಹೋದಾಗಲೂ ಈ ಕೊಂಕು ಇದ್ದೇ ಇತ್ತೆನ್ನುವುದನ್ನು ರಾಯರು ನೆನಪು ಮಾಡಿಕೊಂಡರು.

ಆದರೆ ತಮ್ಮಿಬ್ಬರ ಬಗ್ಗೆ ಹೈದರಾಬಾದಿನ ಒಂದು ಚಾನೆಲ್‌ನಲ್ಲಿ ಸುದ್ದಿ ಬಂದಿದೆ ಅಂದಾಗ ರಾಯರು ವಿಪರೀತವಾಗಿ ಭಯಭೀತಗೊಂಡು ಬೆವರತೊಡಗಿದರು. ಕೈಯಲ್ಲಿ ನೀರಿನ ಗ್ಲಾಸು ನಿಲ್ಲದಾಯಿತು. ಪ್ರತಿಭಾ ತಮ್ಮ ಮೊಬೈಲಿನಲ್ಲಿ ಮಗನ ಜೊತೆ ಮಾತನಾಡಿ ಈ ಮಾತನ್ನು ತಿಳಿದುಕೊಂಡಿದ್ದರಂತೆ. ತಾವು ಇಲ್ಲಿಗೆ ಬಂದದ್ದು ಯಾಕೆ ವಾರ್ತೆಯಲ್ಲಿ ಬರುವಂತಹ ಮುಖ್ಯ ವಿಷಯವಾಯಿತು ಇದಕ್ಕೆ ಶ್ರಾವಣನಾದರೂ ಹೇಗೆ ಒಪ್ಪಿದ ಎನ್ನುವುದು ರಾಯರಿಗೆ ತಿಳಿಯಲಿಲ್ಲ. ಪ್ರತಿಭಾರಿಗೂ ವಿಷಯ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಸೋಮ್ ಹೇಳಿದ್ದರ ಪ್ರಕಾರ ಈ ವಯಸ್ಸಿನಲ್ಲಿ ಹೀಗೆ ಓಡಿಹೋಗಿರುವುದು ಚಾನಲ್ಲಿನವರಿಗೆ "ಇಂಟರೆಸ್ಟಿಂಗ್ ಸ್ಟೋರಿ" ಯಾಗಿ ಕಂಡುಬಂತಂತೆ. ರಾಯರಿಗೆ ರೇಗಿತು. ಅವರು ಏನನ್ನು ಬಯಸಿರಲಿಲ್ಲವೋ ಅದೇ ಆಗಿತ್ತು. ಶ್ರಾವಣನಿಗೆ ಈ ವಿಷಯ ತಿಳಿಸುವುದೇ ಅವರಿಗೆ ಮುಜುಗರದ ವಿಷಯವಾಗಿರುವಾಗ ಹೀಗೆ ಸಾರಾಸಗಟಾಗಿ ಜಗತ್ತೇ ತಮ್ಮ ಈ ಸಣ್ಣ ವಿಷಯವನ್ನು ಚರ್ಚಿಸುತ್ತಿರುವುದು ಮುಜುಗರವನ್ನುಂಟು ಮಾಡುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.

ರಾಯರು ಈ ವಿಷಯದಲ್ಲಿ ಏನೂ ಅರಿತವರಲ್ಲ. ದೈನ್ಯದಿಂದ ಪ್ರತಿಭಾರತ್ತ ನೋಡಿದರು. ಪ್ರತಿಭಾರನ್ನು ಈ ವಿಷಯ ಕಲಕಿದಂತಿರಲಿಲ್ಲ. ಅವರು ರಾಯರನ್ನು ನೋಡಿ ಒಂದೇ ಪ್ರಶ್ನೆ ಕೇಳಿದರು: "ನೀವು ಮನೆಯಲ್ಲಿ ಯಾಕೆ ಹೇಳದೇ ಬಂದುಬಿಟ್ಟಿರಿ? ಬೇಕಿದ್ದರೆ ಫೋನ್ ಕೊಡುತ್ತೇನೆ ನಿಮ್ಮ ಮಗನ ಜೊತೆ ಮಾತಾಡಿ". ರಾಯರಿಗೆ ಮಾತಾಡಬೇಕು ಅನ್ನಿಸಲಿಲ್ಲ. ಎಂದಿಗಿಂತ ಹೆಚ್ಚಾಗಿ ಅಂತರ್ಮುಖಿಯಾಗಿ ರಾಯರು ಕೂತುಬಿಟ್ಟಿದ್ದರು. ಪ್ರತಿಭಾರಿಗೆ ಏನೊ ಮಾಡಬೇಕೋ ತೋಚಲಿಲ್ಲ.

ಕಡೆಗೆ "ಈ ವಿಷಯಕ್ಕೆ ನನಗೆ ಸಿಗುತ್ತಿರುವುದು ಒಂದೇ ಉಪಾಯ" ಅಂದರು. ರಾಯರು ಬಹಳ ಆಸಕ್ತಿಯಿಂದ "ಏನು?" ಎಂದು ಕೇಳಿದರು. "ಏನಿದೆ ನಾವಿಬ್ಬರೂ ಮದುವೆ ಮಾಡಿಕೊಳ್ಳುತ್ತಿದ್ದೇವೆಂದು ಅನೌನ್ಸ್ ಮಾಡುವಾ." ಎಂದಾಗ ರಾಯರು ನಿಜಕ್ಕೂ ಸ್ಥಂಭೀಭೂತರಾದರು. ರಾಯರಿಗೆ "ಏನು?" ಎಂದಷ್ಟೇ ಹೇಳಲು ಸಾಧ್ಯವಾಯಿತು. "ಈ ಎಲ್ಲ ನಾನ್ಸೆನ್ಸ್ ಮಧ್ಯದಲ್ಲಿ ನಾವೂ ನಮ್ಮದನ್ನು ಸೇರಿಸಿ ಮಜಾ ನೋಡಬಹುದು. ಪ್ರೆಸ್‍ನವರು ನಮ್ಮ ಜೊತೆ ಆಟ ಆಡಿದರೆ ನಾವೂ ಅವರ ಜೊತೆ ಆಟ ಆಡಬಹುದು.." ಎಂದು ಹೇಳಿ ಮುಂದುವರೆಸಿದರು "ನನಗೆ ಈ ವಿಷಯದಲ್ಲಿ ನಾವು ಏನೂ ಮಾಡಬೇಕಂತಲೂ ಅನ್ನಿಸಿವುದಿಲ್ಲ. ನಮ್ಮ ರಜೆಯನ್ನು ನಾವಂದುಕೊಂಡಂತೆ ಮುಂದುವರೆಸಿ ಸಹಜವಾಗಿ ಹೈದರಾಬಾದಿಗೆ ಹೋಗೋಣ. ಅಲ್ಲೇನಾಗುತ್ತೋ ಆಗ ನೋಡೋಣ. ನಾಳೆ ಏನಾಗುತ್ತೆ ಅಂತ ಹೆದರಿ ಈದಿನವನ್ನು ಹಾಳು ಮಾಡಿಕೊಳ್ಳುವುದರಲ್ಲಿ ನನಗೆ ಅರ್ಥ ಕಾಣಿಸುವುದಿಲ್ಲ".

ಹೀಗೆ ಯಾವುದನ್ನೂ ಹೆದರದೇ ಎದುರಿಸುವ ಛಾತಿ ತೋರಿಸುವ ಪ್ರತಿಭಾರನ್ನು ಕಂಡು ರಾಯರಿಗೆ ಒಳಗೊಳಗೆ ಆಕೆಯ ಬಗ್ಗೆ ಮೆಚ್ಚುಗೆ, ಗೌರವ ಉಂಟಾಯಿತು. ಒಂದು ಕ್ಷಣದ ಮಟ್ಟಿಗೆ ಆಕೆ ಮದುವೆಯ ಪ್ರಸ್ತಾಪ ಮಾಡಿದ್ದರೆ ಬಗ್ಗೆ ಯೋಚಿಸಿದರು. ಈಕೆಯ ಕಂಪನಿ ಹಿಡಿಸುತ್ತದೆಯಾದರೂ ಸಂಗಾತಿಯಾಗಿ ಈಕೆ ಹೇಗಿರಬಹುದು? ಅಕಸ್ಮಾತ್ ಆಕೆ ಹೇಳಿದ್ದನ್ನು ಸೀರಿಯಸ್ಸಾಗಿ ತೆಗೊಂಡೆ ಎಂದಾದರೆ ಆಕೆ ಹೇಗೆ ಪ್ರತಿಕ್ರಿಯಿಸಬಹುದು ಎಂದೆಲ್ಲಾ ಯೋಚಿಸಿದರು. ಇಲ್ಲ ಈಗ ತಮಾಷೆಗೂ ಈ ಮಾತುಕತೆಯನ್ನು ಆಡುವ ಧೈರ್ಯ ಅವರಿಗಿರಲಿಲ್ಲ. ಹಾಗೂ ತಾವು ತಮ್ಮ ಜೀವನದಲ್ಲಿ ಈಗ ಈ ವಾರದಲ್ಲಿ ಕಂಡ ಏರುಪೇರಿಗಿಂತ ಹೆಚ್ಚಿನ ಏರುಪೇರನ್ನು ಭರಿಸಲು ಅವರು ಸಿದ್ಧರಿರಲಿಲ್ಲ. ಹೀಗಾಗಿ ಈ ಮಾತನ್ನೂ ಆಲೋಚನೆಯನ್ನೂ ಅಲ್ಲಿಗೇ ಬಿಟ್ಟರು. ಅಂದು ಮಧ್ಯಾಹ್ನ ರಾಯರು ಧೈರ್ಯ ಮಾಡಿ "ನಾನು ಈ ದಿನ ಬಿಯರ್ ಟ್ರೈ ಮಾಡುತ್ತೇನೆ" ಅಂದರಾದರೂ, ಒಂದು ಗುಟುಕಿನ ನಂತರ ಅದನ್ನು ಮುಂದುವರೆಸುವ ಧೈರ್ಯವಾಗಲೀ, ಇಚ್ಛೆಯಾಗಲೀ ಅವರಿಗುಂಟಾಗಲಿಲ್ಲ. ಅಂದಿಗೆ ರಾಯರ ಸೀಮೋಲ್ಲಂಘನದ ಬಯಕೆ ಮುಗಿದಿತ್ತೆನ್ನಿಸುತ್ತದೆ. ಅವರು ಮತ್ತೆ ಹೈದರಾಬಾದಿಗೆ ವಾಪಸಾಗುವ ಕ್ಷಣವನ್ನು ಅರಸುತ್ತಾ ತಮ್ಮ ಸೂಟ್‍ಕೇಸಿನಲ್ಲಿ ಬಟ್ಟೆ ಮಡಿಸಿ ಇಟ್ಟರು.

೧೪

ರಾಯರು ವಾಪಸ್ಸಾಗುತ್ತಾರೆಂಬ ದಿನವನ್ನು ಅತ್ಯಂತ ಗೌಪ್ಯವಾಗಿ ಇಡಬೇಕೆಂದು ಶ್ರಾವಣ ಬಯಸಿದ್ದ. ಆದರೆ ಅದು ಎಷ್ಟು ಗೌಪ್ಯವಾಗಿತ್ತೆಂದರೆ ಅವನಿಗೆ ಬಿಟ್ಟು ಇಡೀ ಜಗತ್ತಿಗೇ ತಿಳಿದಿದ್ದಂತಿತ್ತು. ರಾಯರಂತೂ ತಾವು ವಾಪಸ್ಸಾಗುವ ತಾರೀಖನ್ನು ಶ್ರಾವಣನಿಗೆ ತಿಳಿಸಲಿಲ್ಲ. ಹಾಗೆ ನೋಡಿದರೆ ಏರ್‌ಪೋರ್ಟಿನಿಂದ ಪೋನ್ ಮಾಡಿದ್ದು ಬಿಟ್ಟರೆ ರಾಯರು ಅವನಿಗೆ ಫೋನನ್ನೂ ಮಾಡಲಿಲ್ಲ. ಶ್ರಾವಣನಿಗೆ ಇದರಿಂದ ಸ್ವಲ್ಪ ಕಿರಿಕಿರಿಯೇ ಆಯಿತು. ಅವರ ಬಗೆಗಿನ ಪ್ರತಿ ವಿವರವನ್ನೂ ಸೋಮ್‍ನಿಂದ ಪಡೆಯಬೇಕಾದ ಪರಿಸ್ಥಿತಿ ಅವನಿಗೆ ಏನೇನೂ ಹಿಡಿಸಲಿಲ್ಲ. ಆದರೆ ರಾಯರನ್ನು ಅಂದೂ ಉಪಯೋಗವಿಲ್ಲ. ಅವರು ತನಗೆ ಏನನ್ನಾದರೂ ಹೇಳಬಾರದೆಂದು ನಿರ್ಧರಿಸಿದರೆ ಅಷ್ಟೇ. ಈಗಿತ್ತಲಾಗಿ ಅವರು ಮಾತಾಡುತ್ತಿದ್ದದ್ದೂ ಕಡಿಮೆ. ಸೋಮ್‍ನಿಗೆ ಯಾವುದನ್ನೂ ಗುಟ್ಟಾಗಿ ಇಡುವ ಅಭ್ಯಾಸವಿದ್ದಂತಿರಲಿಲ್ಲ. ಅಥವಾ ಅವನಿಗೆ ಯಾರ ಜೊತೆ ಮಾತನಾಡುವುದರ ಫಲಿತ ಏನೆಂಬುದೂ ಗೊತ್ತಿರಲಿಲ್ಲ. ಹೀಗಾಗಿ ಶ್ರಾವಣನಿಗೆ ತಿಳಿಯುವ ಮೊದಲೇ ಟಿ.ವಿ.ಚಾನಲ್ಲಿಗೆ ಭಾಸ್ಕರರಾಯರು ಬರುವ ತಾರೀಖು ತಿಳಿದುಬಿಟ್ಟಿತ್ತು. ಅವರು ಅದಕ್ಕೆ ಚಾನಲ್ಲಿನಲ್ಲಿ ತಯಾರಿಯನ್ನೂ ನಡೆಸಿದ್ದರು. "ಅಂದು ನಾವು ತಂದಿದ್ದ ಭಾಸ್ಕರರಾಯರ ಕಥೆಯ ಎರಡನೆಯ ಭಾಗವನ್ನು ಇಂದು ಸಂಜೆ ನೇರಪ್ರಸಾರ ಮಾಡುತ್ತೇವೆ - ಭಾಸ್ಕರರಾಯರ-ಪ್ರತಿಭಾರ ಪುನರಾಗಮನ - ನೋಡಲು ಮರೆಯದಿರಿ" ಅನ್ನುವಂತಹ ತಯಾರಿಗಳನ್ನು ಮಾಡಿಬಿಟ್ಟಿದ್ದರು.

ಶ್ರಾವಣನ ಮನೆಯ ಮುಂದಿ ನೆರೆದಿದ್ದ ಒಬಿ ವ್ಯಾನು ಮತ್ತು ಮೊಬೈಲಿನಲ್ಲಿ ಮಾತಾಡುತ್ತಿದ್ದ ವರದಿಗಾರ ಹಾಗೂ ಕ್ಯಾಮರಾದ ಮುಂದೆ ತಮ್ಮ "ಎಕ್ಸ್‌ಪರ್ಟ್ ಕಾಮೆಂಟ್ಸ್" ಕೊಡುತ್ತಿದ್ದ ಅಕ್ಕಪಕ್ಕದ ಮನೆಯವರು, ಈ ಎಲ್ಲವೂ ಬೇರೊಂದು ಲೋಕದಿಂದ ಬಂದಂತೆ ಶ್ರಾವಣನಿಗನ್ನಿಸಿತ್ತು.

ಹೀಗಿರುತ್ತಾ ರಾಯರು ಆ ಸಂಜೆ ಏರ್‌ಪೋರ್ಟಿನಲ್ಲಿ ಇಳಿದರು. ಶ್ರಾವಣ ಸಿಟ್ಟಿನಿಂದ ಟಿವಿ ನೋಡುತ್ತಾ ಕುಳಿತಿದ್ದ. ಮೊದಲಿಗೆ ಏರ್‌ಪೋರ್ಟಿಗೆ ಹೋಗಬೇಕೋ ಹೇಗೆ ಎಂದು ಯೋಚಿಸಿದ್ದುಂಟಾದರೂ ಬೇಡವೆಂದು ನಿರ್ಧರಿಸಿದ. ರಾಯರು ಬರುವುದಾಗಿ ಏನೂ ಹೇಳಿರಲಿಲ್ಲವಲ್ಲ ಈಗ ತಾನು ಹೋಗಿ ಸಾಧಿಸುವುದಾದರೂ ಏನು? ಆತ ಇಳಿದು ಹೊರಬರುತ್ತಿದ್ದಂತೆಯೇ ಟಿವಿ ಚಾನಲ್ಲಿನವರು ರಾಯರ ಹಿಂದೆ ಬಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಪ್ರತಿಭಾರೇ ಉತ್ತರ ನೀಡಿದರು. ರಾಯರು ಯಾವುದನ್ನೂ ಅಂತರ್ಗತ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಮನೆಯಲ್ಲೇ ಹೊರಗಿನ ಜನ ಬಂದರೆ ರೂಮಿನಲ್ಲಿ ಅಡಗುವ ರಾಯರಿಗೆ ಈ ರೀತಿಯ ಅನುಭವ "ಸೀಮೊಲ್ಲಂಘನ"ದ್ದಾದರೂ ಅವರು ಬಯಸಿದ್ದಲ್ಲ.

ಟಿವಿ ನೋಡುತ್ತಿದ್ದಾಗ ಪ್ರತಿಭಾರು ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳನ್ನು ಕಂಡು ಶ್ರಾವಣನಿಗೆ ಖುಶಿಯಾಯಿತು. ಎಲ್ಲಿಯೂ ಗೌರವಕ್ಕೆ ಧಕ್ಕೆ ಬರದಂತೆ ಆಕೆ ನಡೆದುಕೊಂಡಿದ್ದರು. ಟಿವಿಯವರು ಕೆಟ್ಟ ಕೆಟ್ಟ ಪ್ರಶ್ನೆಗಳನ್ನು ಕೇಳಿದರೂ ಆಕೆ ಸಂಯಮದಿಂದ ಉತ್ತರಿಸಿದ್ದರು. ಅಲ್ಲಿ ಎಲ್ಲ ರೀತಿಯ ಪ್ರಶ್ನೆಗಳೂ ಉದ್ಭವ ವಾಗಿದ್ದವು.. ಕೆಲ ಪ್ರಶ್ನೋತ್ತರಗಳನ್ನು ನೋಡಿ ಶ್ರಾವಣ ದಂಗಾಗಿದ್ದ:

ಇದೇನು ಮುದುಕರ ಹೊಸ ಪ್ರೇಮ ಪ್ರಕರಣವೇ?
"ಇದ್ದರೆ ತಪ್ಪೇ?"

ಅಲ್ಲ ಯಾರಿಗೂ ಹೇಳದೇ ಯಾಕೆ ಇಬ್ಬರೂ ಓಡಿ ಹೋಗಿದ್ದಿರಿ?
"ನಾವೇನು ಸಣ್ಣ ಮಕ್ಕಳೇ, ನಿಮ್ಮೆಲ್ಲರ ಅನುಮತಿ ತೆಗೆದುಕೊಂಡು ಓಡಾಡಲು? ನಮಗಿಷ್ಟಬಂದ ಹಾಗೆ ಜೀವಿಸುತ್ತೇವೆ. ಹೇಳಬೇಕಾದವರಿಗೆ ಹೇಳುತ್ತೇವೆ"

ಈ ವಯಸ್ಸಿನಲ್ಲಿ ಹೀಗೆ ಪರಸ್ತ್ರೀಜೊತೆ ಹೋಗುವುದರಲ್ಲಿ ಅರ್ಥವೇನು? ನಿಮಗೆ ಅವರಲ್ಲಿ ಪ್ರೀತಿ ಉಂಟಾಗಿದೆಯೇ? [ಈ ಪ್ರಶ್ನೆಯನ್ನು ರಾಯರಿಗೆ ಕೇಳಿದ್ದರೂ ಉತ್ತರಿಸಿದ್ದವರು ಪ್ರತಿಭಾರೇ]
"ಈ ವಯಸ್ಸಿನಲ್ಲಿ ಗೆಳೆತನಕ್ಕೆ ಸ್ತ್ರೀ-ಪುರುಷ ಭಿನ್ನತೆಯಲ್ಲಿ ನಿಮಗೆ ಅರ್ಥ ಕಾಣಿಸುತ್ತದೆಯೇ? ಪ್ರೀತಿ ಉಂಟಾಗಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದು ಏನು?"

ನಿಮ್ಮ ಇಬ್ಬರ ಸಂಬಂಧವನ್ನು ಹೇಗೆ ವಿವರಿಸುತ್ತೀರಿ?
"ನಾವು ಗೆಳೆಯರಷ್ಟೇ!"

ಮದುವೆಯಾಗುತ್ತೀರಾ?
"ಆಗುವುದಾದರೆ, ನಿಮಗೆ ಖಂಡಿತಾ ತಿಳಿಸುತ್ತೇವೆ. ನಮ್ಮ ಜೀವನದಲ್ಲಿ ನಮ್ಮ ಮಕ್ಕಳು ಬಂಧುಗಳಿಗೇ ಆಸಕ್ತಿಯಿಲ್ಲವೆಂದುಕೊಂಡಿದ್ದೆವು ಆದರೆ ನಿಮ್ಮ ಪ್ರಕಾರ ಇಡೀ ನಗರಕ್ಕೇ ನಮ್ಮ ಬಗ್ಗೆ ವಿಚಿತ್ರ ಕುತೂಹಲವಿದೆ ಅನ್ನಿಸುತ್ತಿದೆ. ಹೀಗಾಗಿ, ಈ ಥರದ ವಿಚಾರವೇನಾದರೂ ಇದ್ದರೆ ಖಾಸಗಿಯಾಗಿ ಅಲ್ಲದೇ ಬಹಿರಂಗವಾಗಿ ನಿಮಗೆ ತಿಳಿಸಿಯೇ ಮಾಡಿಕೊಳ್ಳುತ್ತೇವೆ"

ರಾಯರು ಯಾಕೆ ಮಾತಾಡುತ್ತಿಲ್ಲ?
"ನಿಮ್ಮಿಂದಾಗಿ ಅವರು ನನ್ನ ಬಳಿಯೂ ಮಾತಾಡುತ್ತಿಲ್ಲ"

ಎಲ್ಲ ಸರಿಯಾಗಿಯೇ ಇತ್ತು. ಆದರೆ ವರದಿಗಾರ ಆಕೆ ಹೇಳಿದ್ದನ್ನು ತಿರುಚಿ, "ಮಕ್ಕಳಿಗೆ ತಮ್ಮ ತಂದೆ ತಾಯಿಗಳ ಮೇಲೆ ಆಸ್ಥೆಯಿಲ್ಲ ಎನ್ನುವ ಗಹನ ವಿಚಾರವನ್ನು ಪ್ರತಿಭಾರು ಹೇಳಿದ್ದಾರೆ. ಇದು ನಿಜಕ್ಕೂ ಚಿಂತಿಸಬೇಕಾದ ವಿಷಯವಾಗಿದೆ, ಹಾಗೂ ಇಂದಿನ ಎಸ್.ಎಂ.ಎಸ್. ಓಟಿಂಗಿನ ವಿಷಯವೂ ಇದೇ ಆಗಿದೆ. ಈಗಿನ ಮಕ್ಕಳು ತಮ್ಮ ಹಿರಿಯರನ್ನು ಕಡೆಗಣ್ಣಿನಿಂದ ನೋಡುತ್ತಿದ್ದಾರಾ? ದೊಡ್ಡ ಕುಟುಂಬಗಳಲ್ಲಿ ಹಿರಿಯರನ್ನು ಗೌರವಿಸುತ್ತಾ ಜೀವಿಸುತ್ತಿದ್ದ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ ಎನ್ನುವುದನ್ನು ನೀವು ಒಪ್ಪಿದರೆ "ವೈ" ಎಂದು ಇಲ್ಲವಾದರೆ "ಎನ್" ಎಂದೂ ಈ ನಂಬರಿಗೆ ಎಸ್.ಎಂ.ಎಸ್ ಮಾಡಿ" ಅನ್ನುತ್ತಿರುವಾಗಲೇ ಶ್ರಾವಣ ಟಿವಿಯನ್ನು ಮುಚ್ಚಿಬಿಟ್ಟ.

ರಾಯರು ಮನೆಗೆ ಬಂದಾಗ ಅವರ ನಡುವೆ ಹೆಚ್ಚಿನ ಮಾತುಕತೆ ನಡೆಯಲಿಲ್ಲ. ಮನೆಯಲ್ಲೂ ಟಿವಿಯವರ ಫೋನಿನ ಕಾಟ ಮುಂದುವರೆದಿತ್ತು. ಆದರೂ, ಅವರುಗಳ ನಡುವೆ ಈಗ ಮಾತನಾಡುವುದಕ್ಕೆ ಗಹನವಾದ ವಿಷಯ ಏನೂ ಇರಲಿಲ್ಲ. ಯಾಕೆ ಹೇಳದೇ ಹೋದೆ ಎನ್ನುವುದನ್ನು ಶ್ರಾವಣ ಕೇಳಬಹುದಿತ್ತು. ಅದಕ್ಕೆ ರಾಯರು ಸಮಜಾಯಿಷಿ ಕೊಡಬಹುದಿತ್ತು. ಆದರೆ ಇಬ್ಬರಿಗೂ ಅದರ ಅವಶ್ಯಕತೆ ಕಾಣಿಸಲಿಲ್ಲ ಅನ್ನಿಸುತ್ತದೆ.

ರಾಯರು ರೂಮಿಗೆ ಹೋಗಿ ಸೂಟ್‌ಕೇಸ್ ತೆರೆಯುತ್ತಿದ್ದಂತೆ ಶ್ರಾವಣ ಹೇಳಿದ: "ಅಪ್ಪ, ಇಲ್ಲಿ ಟಿವಿ ಅದೂ ಇದೂಂತ ಗಲಾಟೆಯಾಗಿದೆ. ಅದು ನಿಮಗೂ ಗೊತ್ತಿದೆ. ಅಕ್ಕಪಕ್ಕದ ಮನೆಯವರೆಲ್ಲಾ ಬಂದು ನಾಳೆಯಿಂದ ನಿಮಗೆ ತೊಂದರೆ ಕೊಡುತ್ತಾರೆ. ಹೀಗಾಗಿ ಸ್ವಲ್ಪ ದಿನದ ಮಟ್ಟಿಗೆ ನೀವು ಮೈಸೂರಿಗೆ ಹೋಗಿ ಅಲ್ಲಿ ಮಹೇಶನ ಜೊತೆ ಇರುವುದೇ ಒಳ್ಳೆಯದು ಅಂತ ನಮಗನ್ನಿಸುತ್ತದೆ. ನಾನು ಮಹೇಶನ ಜೊತೆ ಮಾತಾಡಿದ್ದೇನೆ. ನಾಡಿದ್ದು ಮುಂಜಾನೆಯ ಫ್ಲೈಟಿಗೆ ಟಿಕೇಟನ್ನೂ ತಂದಿದ್ದೇನೆ"

ರಾಯರು ತೆರೆಯುತ್ತಿದ್ದ ಸೂಟ್‌ಕೇಸನ್ನು ಮುಚ್ಚಿದರು. ಸರಿ ಅನ್ನುವಂತೆ ತಲೆ ಆಡಿಸಿದರು.

೧೫

ಮಾರನೆಯ ದಿನ ಏನೂ ಆಗಿಲ್ಲವೆಂಬಂತೆ ಪ್ರತಿಭಾರು ವಾಕಿಂಗಿಗೆ ಹೋದರು. ಅಲ್ಲಿ ರಾಯರು ಕಾಣಿಸದಿದ್ದದ್ದು ಆಕೆಗೆ ಆಶ್ಚರ್ಯ ತಂದರೂ, ಬಹುಶಃ ಹೀಗಾಗಬಹುದೆಂದು ಆಕೆ ನಿರೀಕ್ಷಿಸಿದ್ದರು ಅನ್ನಿಸುತ್ತದೆ. ಈ ಇಡೀ ಅನುಭವ ಆಕೆಗೂ ಹೊಸತಾಗಿತ್ತಾದರೂ ಇದರಲ್ಲಿ ಇಷ್ಟೊಂದು ರಾದ್ಧಾಂತ ಮಾಡುವುದು ಏನೂ ಇರಲಿಲ್ಲವೇನೋ. ಯಾಕೆ ಒಂದು ಸಹಜ ಸ್ನೇಹ, ಈ ಏಕತಾನತೆಯಿಂದ ಬಯಸಿದ ಬಿಡುಗಡೆಯಂತಹ ಸಹಜ ವಿಚಾರ ಹೀಗೆ ಬೆಳೆದು ಆಲದಮರವಾಯಿತೆಂದು ಆಕೆಗೆ ತಿಳಿಯಲಿಲ್ಲ. ದೇವರಿಲ್ಲದ್ದಿದ್ದರೂ ಸೈತಾನ ಮಾತ್ರ ಇದ್ದೇ ಇರಬೇಕೆಂದು ಆಕೆಗನ್ನಿಸಿತು.

ಏನೂ ಯೋಚನೆ ಮಾಡದೆಯೇ ಆಕೆ ಬ್ರಹ್ಮಾನಂದರೆಡ್ಡಿ ಪಾರ್ಕಿನಿಂದ ಭಾಸ್ಕರರಾಯರ ಮನೆಗೆ ಬಂದರು. ಶ್ರಾವಣ ಆಕೆಯನ್ನು ಬರಮಾಡಿಸಿಕೊಂಡ. ರಾಯರಿಗೆ ಆಕೆಯನ್ನು ನೋಡುವ ಮನಸ್ಸಾಗಲಿಲ್ಲ. ಅವರ ಮನಸ್ಸಿನಲ್ಲಿ ಪ್ರತಿಭಾ ತಮ್ಮ ಖಾಸಗೀ ಕ್ಷಣಗಳ ಲೋಕಕ್ಕೆ ಸಂದಿದವರು. ಅವರನ್ನು ಎಲ್ಲರ ನಡುವೆ ಭೇಟಿಯಾಗಲು ಆತ ಸಿದ್ಧರಿರಲಿಲ್ಲ. ಮೈಹುಷಾರಿಲ್ಲ ಎಂದು ಹೇಳಿ ಕಳಿಸಿ ಬಿಟ್ಟರು.

ಅವರನ್ನು ಮೈಸೂರಿಗೆ ಕಳಿಸಬೇಕೆನ್ನುವ ತಮ್ಮ ನಿರ್ಧಾರವನ್ನು ಶ್ರಾವಣ ಆಕೆಗೆ ಹೇಳಿದ. "ನೀವು ಮಾಡುತ್ತಿರುವುದು ಸರಿಯಲ್ಲ" ಎಂದಷ್ಟೇ ಆಕೆ ಹೇಳಿದರು. ಅಂದು ಸಂಜೆ ಮತ್ತೆ ಪ್ರತಿಭಾ ಬಂದು ರಾಯರಿಗೆಂದೇ ಒಂದು ಗಿಫ್ಟ್ ತಂದಿರುವುದಾಗಿ ಹೇಳಿದರು. ರಾಯರು ಮನಸ್ಸಿಲ್ಲದೆಯೇ ಹೊರಕ್ಕೆ ಬಂದು ಅದನ್ನು ಸ್ವೀಕರಿಸಿದರು. ಅದು ಒಂದು ಮೊಬೈಲಿನ ಹ್ಯಾಂಡ್‌ಸೆಟ್ ಆಗಿತ್ತು.

ಮನೆಗೆ ಹೋದಾಗ ಸೋಮ್ ಮತ್ತು ಅವನ ಸಂಸಾರ ಆಕೆಗಾಗಿ ಕಾಯುತ್ತಿದ್ದರು. "ಅಮ್ಮ ಬಾ ಈ ದಿನ ನಿನಗಾಗಿ ನಿನ್ನ ಸೊಸೆ ಅದ್ಭುತವಾದ ಚೆಟ್ಟಿನಾಡ್ ಚಿಕನ್ ಮಾಡಿದ್ದಾಳೆ" ಅಂದ ಸೋಮ್. "ಬೇಡ ಕಣೋ ಈ ದಿನ ಶನಿವಾರ. ನಾನು ನಾನ್ ವೆಜ್ ತಿನ್ನುವುದಿಲ್ಲ" ಎಂದರು ಪ್ರತಿಭಾ. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎಂದು ಅರಿಯದ ಸೋಮ್ ಸ್ಥಂಭೀಭೂತನಾದ. ಆಕೆ ಸೀದಾ ತಮ್ಮ ಕೋಣೆಗೆ ಹೋಗಿ ಒಂದು ಪುಸ್ತಕವನ್ನು ಹಿಡಿದರು.

೧೬

ರಾಯರು ತಮ್ಮ ಬಟ್ಟೆಗಳನ್ನು ಸೂಟ್‌ಕೇಸಿನಲ್ಲೇ ಅನೇಕ ವರ್ಷಗಳಿಂದ ಇಡುತ್ತಿದ್ದರು. ಹಾಗೂ ಅಭ್ಯಾಸಬಲದಿಂದ ಪ್ರತಿದಿನವೂ ಪ್ರಯಾಣಸಿದ್ಧರಾಗಿರುತ್ತಿದ್ದರು. ಪಂಜಾಗುಟ್ಟಾಕ್ಕೆ ಬರುವ ಮೊದಲು ದಿನವೂ ಮೈಸೂರಿಗೆ ಹೋಗುವ ಬಯಕೆಯಲ್ಲಿ ಸೂಟ್‌ಕೇಸ್ ಕಟ್ಟುತ್ತಿದ್ದರು. ಆದರೆ ಈಗ ಮಾನಸಿಕವಾಗಿ ಹೈದರಾಬಾದಿನವನಾಗಿ ಇಲ್ಲಿಗೆ ಹೊಂದಿಕೊಳ್ಳುತ್ತಿರುವ ಸಮಯಕ್ಕೆ ಹೀಗೆ ಮೈಸೂರಿಗೆ ಹೋಗಬೇಕಾಗಿಬಂದ ಪರಿಸ್ಥಿತಿ ವಿಡಂಬನಕಾರಿ ಅನ್ನಿಸಿತು. ಆ ದಿನ ಯಾಕೋ ರಾಯರಿಗೆ ತಮ್ಮ ತೀರಿಕೊಂಡ ಹೆಂಡತಿ ಕುಮುದಾಬಾಯಿಯ ನೆನಪು ವಿಪರೀತವಾಗಿ ಬಂತು. ಸೂಟ್‌ಕೇಸ್ ಪ್ಯಾಕ್ ಮಾಡಿಕೊಳ್ಳುತ್ತಾ ಪ್ರತಿಭಾ ಕೊಟ್ಟ ಮೊಬೈಲನ್ನು ಒಳಗಿಡುವುದನ್ನು ಮರೆಯಲಿಲ್ಲ. ಮೈಸೂರಿಗೆ ಹೋದ ನಂತರ ಅದಕ್ಕೊಂದು ಸಿಮ್ ಹಾಕಿಸಿ ಅದನ್ನು ಉಪಯೋಗಿಸಬೇಕು ಎಂದು ನಿರ್ಧರಿಸಿದರು. ಸಾಧ್ಯವಾದರೆ ಈ ಟಿವಿ ಚಾನಲ್ಲುಗಳ ದಿನದ ಪ್ರಶ್ನೆಗೆ ಓಟನ್ನು ಹಾಕಬೇಕು ಅಂದುಕೊಂಡರು.


೨೦೦೭





3 comments:

Keshav.Kulkarni said...

ಶ್ರೀರಾಮ,

ತುಂಬ ದಿನಗಳಾದ ಮೇಲೆ ಒಂದು ಒಳ್ಳೆಯ ಕತೆ ಓದಿದೆ. ಶುರುವಿನಲ್ಲಿ ಹಿಂದಿಯ "ಜಾಗರ್ಸ್ ಪಾರ್ಕ್" ನೆನಪಿಸಿದರೂ, ಓದುತ್ತ ಓದುತ್ತ ಹೋದಂತೆ ಹೊಸ ಜಗತ್ತಿನ ಒಂದೊಂದೇ ಮಗ್ಗಲುಗಳನ್ನು ಯಾವುದೇ ವ್ಯಾಖ್ಯಾನ್ಯದ ಪರಿಧಿಗೆ ಹಾಕದೇ ತುಂಬ ಸಂಕೀರ್ಣ ವಿಷಯದ ಕ್ಲಿಷ್ಟತೆಯನ್ನು ಸರಳೀಕರಿಸದೇ ಬಿಚ್ಚುತ್ತಾ ಸಾಗಿದ್ದೀರಿ.

ಥ್ಯಾಂಕ್ಸ್!

- ಕೇಶವ (www.kannada-nudi.blogspot.com)

ಗೌತಮ್ ಹೆಗಡೆ said...

chennagide ri kathe:)

klem said...

ನಾನು ಎಲ್ಲರಿಗೂ ಶುಭಾಶಯಗಳು ಶುಭಾಶಯಗಳು? ನಾನು ಕ್ಲೆಮ್ ಸಾಲದ ಕಂಪೆನಿಯಿಂದ ಒಂದು ತ್ವರಿತ ಸಾಲವನ್ನು ಪಡೆದುಕೊಂಡೆ ಮತ್ತು ಸಾಲ ನನ್ನ ಶಾಲಾ ಶುಲ್ಕಕ್ಕೆ ಬಹಳ ಸಂತೋಷವಾಗಿದೆ? ಕ್ಲೆಮ್ಲೋನ್ ನ becuses ನಾನು ಈಗ ಭೂಮಿಯ ಮೇಲೆ ಅತೀವ ವ್ಯಕ್ತಿಯಾಗಿದ್ದೇನೆ, ಮತ್ತು ನಿಮ್ಮಲ್ಲಿ ಯಾರಾದರೂ ತುರ್ತು ಸಾಲವನ್ನು ಬಯಸಿದರೆ ದಯವಿಟ್ಟು ಇನ್ನಷ್ಟು ತಿಳಿವಳಿಕೆಗಾಗಿ ಈ ಎಮಿಲ್ klemloan12@gmail.com ನಲ್ಲಿ ಅವರನ್ನು ಸಂಪರ್ಕಿಸಿ
          ನಿಮಗೆ ಎಲ್ಲವನ್ನೂ ಪರಿಗಣಿಸಿ